ಹಮಾರೆ ಬಾರಾ ನಿಷೇಧ: ಗುಡುಗಿದ ನಟ ಚೇತನ್‌

ಶಿವಮೊಗ್ಗ: ಕಮಲ್‌ ಚಂದ್ರ ನಿರ್ದೇಶನದ ಹಿಂದಿಯ ʼ ಹಮಾರೆ ಬಾರಾʼ ಚಿತ್ರದ ಬಿಡುಗಡೆಯ ಮೇಲೆ ರಾಜ್ಯ ಸರ್ಕಾರ ನಿಷೇಧ ಹೇರಿರುವ ಕ್ರಮವನ್ನು ನಟ ಹಾಗೂ ಸಾಮಾಜಿಕ ಚಿಂತಕ ಚೇತನ್‌ ಅಹಿಂಸಾ ತೀವ್ರವಾಗಿ ಆಕ್ಷೇಪಿಸಿದ್ದಾರೆ. ಸಿನಿಮಾ ನೋಡದೆ ಸಿನಿಮಾ ಬಿಡುಗಡೆಗೆ ನಿಷೇಧ ಹೇರುವ ಕ್ರಮವು ವಾಕ್‌ ಸ್ವಾತಂತ್ರ್ಯದ ಮೇಲಿನ ದಬ್ಬಾಳಿಕೆಯಾಗಿದೆ ಎಂದು ಕಿಡಿಕಾರಿದ್ದಾರೆ.

ನಗರದ ಪತ್ರಿಕಾ ಭವನದಲ್ಲಿ ಶನಿವಾರ ಸುದ್ದಿಗೋಷ್ಠಿಯಲ್ಲಿ ಮಾತನಾಡಿದ ಅವರು, ಒಂದು ಚಿತ್ರವನ್ನು ನೋಡದೇ ಅದನ್ನು ನಿಷೇಧ ಮಾಡುವುದು ಸರಿಯಲ್ಲ. ಇದು ವಾಕ್ ಸ್ವಾತಂತ್ರ್ಯಕ್ಕೆ ವಿರೋಧವಾಗಿದೆ. ಕೇವಲ ಟ್ರೈಲರ್‌ನ್ನು ನೋಡಿ ಚಿತ್ರ ನಿಷೇಧ ಮಾಡುವುದು, ಅಭಿವ್ಯಕ್ತಿ ಸ್ವಾತಂತ್ರ್ಯದ ಉಲ್ಲಂಘನೆಯಾಗಿದೆ ಮತ್ತು ಓಲೈಕೆಯ ತಂತ್ರವು ಆಗಿದೆ ಎಂದು ದೂರಿದರು.

ಟ್ರೈಲರ್‌ ನೋಡಿ ಚಿತ್ರ ನಿಷೇಧ ಮಾಡಬೇಕು ಎಂದರೆ ಇತ್ತೀಚಿಗೆ ಬರುವ ಎಲ್ಲಾ ಸಿನಿಮಾಗಳನ್ನು ನಿಷೇಧ ಮಾಡಬೇಕಾಗುತ್ತದೆ. ಸಿನಿಮಾಗಳಲ್ಲಿ ಕೊಲೆ, ಸುಲಿಗೆ ಅತ್ಯಾಚಾರ ಮುಂತಾದ ದೃಶ್ಯಗಳು ಇದ್ದೇ ಇರುತ್ತವೆ. ಊಹೆ ಮಾಡಿ ಚಿತ್ರ ನಿಷೇಧ ಮಾಡುವುದು ಸರಿಯಲ್ಲ. ಅಷ್ಟಕ್ಕೂ ಈ ಚಿತ್ರವನ್ನು ಸೆನ್ಸಾರ್‌ಮಂಡಳಿ ಒಪ್ಪಿಗೆ ನೀಡಿದೆ. ಅಷ್ಟೇ ಅಲ್ಲ ಬಾಂಬೆ ಹೈಕೋರ್ಟ್ ಕೂಡ ಸಮ್ಮಿತಿಸಿದೆ. ಹೀಗಿದ್ದೂ ಕರ್ನಾಟಕ ಸರ್ಕಾರ ಚಿತ್ರ ನಿಷೇಧ ಮಾಡಿರುವುದು ಸರಿಯಲ್ಲ ಎಂದರು.

ಪತ್ರಿಕಾಗೋಷ್ಠಿಯಲ್ಲಿ ದಲಿತ ಸಂಘರ್ಷ ಸಮಿತಿಯ ಹಾಲೇಶಪ್ಪ , ಶಿವುಕುಮಾರ್, ಹಾರೋಗುಳಿಗೆ ವಿಶ್ವನಾಥ್ ಇದ್ದರು.