ಬೆಂಗಳೂರು: ಲೋಕಸಭೆ ಚುನಾವಣೆಯಲ್ಲಿ ಕಲ್ಯಾಣ ಕರ್ನಾಟಕ ಭಾಗದಲ್ಲಿ ಬಿಜೆಪಿ ಸೋಲಿಗೆ ಕಾಂಗ್ರೆಸ್ ಸರಕಾರದ ಪಂಚ ಗ್ಯಾರಂಟಿಗಳೇ ಕಾರಣವೆಂದು ಬಿಜೆಪಿ ಆತ್ಮಾವಲೋಕನ ಸಭೆ ಅಭಿಪ್ರಾಯಿಸಿದೆ.ಬಿಜೆಪಿ ಅಭ್ಯರ್ಥಿಗಳು ಸೋಲು ಕಂಡಿರುವ 8 ಕ್ಷೇತ್ರಗಳ ಸೋಲಿನ ಕುರಿತು ಶುಕ್ರವಾರ ರಾಜ್ಯಾಧ್ಯಕ್ಷ ಬಿ.ವೈ.ವಿಜಯೇಂದ್ರ ಮತ್ತು ಬಿಜೆಪಿಯ ನೂತನ ರಾಜ್ಯ ಉಸ್ತುವಾರಿ ರಾಧಾ ಮೋಹನ್ ದಾಸ್ ಅಗರ್‌ವಾಲ್ ನೇತೃತ್ವದಲ್ಲಿ ಆತ್ಮಾವಲೋಕನ ಸಭೆ ನಡೆಸಲಾಯಿತು.
ಬೆಂಗಳೂರಿನ ರಾಜ್ಯ ಬಿಜೆಪಿ ಕಾರ್ಯಾಲಯದಲ್ಲಿ ಈ ಸಭೆಯನ್ನು ಆಯೋಜಿಸಲಾಗಿತ್ತು. ಕಲ್ಯಾಣ ಕರ್ನಾಟಕದ ರಾಯಚೂರು, ಕೊಪ್ಪಳ, ಬಳ್ಳಾರಿ, ಕಲಬುರಗಿ ಈ ನಾಲ್ಕು ಲೋಕಸಭಾ ಕ್ಷೇತ್ರಗಳ ಪಕ್ಷದ ನಾಯಕರೊಂದಿಗೆ ಮಾತ್ರ ಈ ಸಭೆ ನಡೆಸಲಾಯಿತು.
ಮುಂಬರುವ ದಿನಗಳಲ್ಲಿ ಕೈಗೊಳ್ಳಬೇಕಿರುವ ಸಂಘಟನಾತ್ಮಕ ಕಾರ್ಯಕ್ರಮ ಹಾಗೂ ಹೋರಾಟಗಳ ಬಗ್ಗೆ ಚರ್ಚೆ ನಡೆಸಲಾಯಿತು. ಅಯಾ ಕ್ಷೇತ್ರದ ಕುರಿತು ಅಯಾ ಕ್ಷೇತ್ರದ ಜಿಲ್ಲಾಧ್ಯಕ್ಷರಿಂದ ವರದಿ ಪಡೆದು ಸುದೀರ್ಘ ಸಭೆಯನ್ನು ನಡೆಸಲಾಯಿತು. ಗ್ಯಾರಂಟಿ ಯೋಜನೆಗಳ ಕಾರಣದಿಂದ ಎಸ್ಸಿ, ಎಸ್ಟಿ, ಜನ ಕಾಂಗ್ರೆಸ್ ಬೆಂಬಲಿಸಿದ್ದಾರೆ. ಹಾಲಿ ಸಂಸದರಿಗೇ ಟಿಕೆಟ್ ನೀಡಿದ್ದು ಪಕ್ಷದ ಸೋಲಿಗೆ ಪ್ರಮುಖ ಕಾರಣ ಎಂದು ಕ್ಷೇತ್ರದ ನಾಯಕರು ಅಭಿಪ್ರಾಯ ತಿಳಿಸಿದರು.
ಸೋಲನ್ನೇ ಮೆಟ್ಟಿಲು ಮಾಡಿಕೊಳ್ಳುವಂತೆಯೂ ಕ್ಷೇತ್ರಗಳಲ್ಲಿ ಪಕ್ಷ ಸಂಘಟನೆಗೆ ಇನ್ನಷ್ಟು ಚುರುಕು ಕೊಡುವಂತೆಯೂ ಬಿಜೆಪಿ ಉಸ್ತುವಾರಿ ರಾಧಾ ಮೋಹನ್ ದಾಸ್ ಅಗರ್‌ವಾಲ್ ಸೂಚಿಸಿದರು.