ಶಿವಮೊಗ್ಗ : ಜಿಲ್ಲಾ ಯೋಜನಾ ಸಮಿತಿಗೆ ಸಂಬಂಧಿಸಿದಂತೆ ಗ್ರಾಮಪಂಚಾಯಿತಿ ಮಟ್ಟದಲ್ಲಿ ಜಾಗೃತಿ ಮೂಡಿಸುವಂತಹ ಕೆಲಸ ಮಾಡಬೇಕಾಗಿದೆ ಎಂದು ಜಿಲ್ಲಾ ಉಸ್ತುವಾರಿ ಸಚಿವ ಕಾಗೋಡು ತಿಮ್ಮಪ್ಪ ಹೇಳಿದರು.
ಇಂದು ನಗರದ ಜಿ.ಪಂ. ಸಭಾಂಗಣದಲ್ಲಿ ಜಿಲ್ಲಾ ಯೋಜನಾ ಸಮಿತಿ ಸದಸ್ಯರಿಗೆ ಮತ್ತು ಜಿಲ್ಲಾ ಮಟ್ಟದ ಅಧಿಕಾರಿಗಳಿಗೆ ಜಿಲ್ಲಾ ಅಭಿವೃದ್ಧಿ ಯೋಜನೆ ಮುನ್ನೋಟ ತಯಾರಿಸುವ ಕುರಿತು ಒಂದು ದಿನದ ತರಬೇತಿ ಕಾರ್ಯಾಗಾರದಲ್ಲಿ ಪಾಲ್ಗೊಂಡ ನಂತರ ಸುದ್ದಿಗಾರರೊಂದಿಗೆ ಮಾತನಾಡಿದ ಅವರು, ಇದು ಅತ್ಯಂತ ಉಪಯುಕ್ತ ಯೋಜನೆಯಾಗಿದೆ. ಆದರೆ ಇದನ್ನು ಗ್ರಾಮಪಂಚಾಯಿತಿ ಮಟ್ಟದಲ್ಲಿ ಜಾಗೃತಿ ಮೂಡಿಸದ ಹೊರತು, ಇದರ ಅನುಷ್ಠಾನ ಯಶಸ್ವಿಯಾಗಲು ಸಾಧ್ಯವಿಲ್ಲ ಎಂದರು.
ಇಂದು ತೆಗೆದುಕೊಂಡಿರುವ ತೀರ್ಮಾನದಂತೆ ಗ್ರಾಮಪಂಚಾಯಿತಿ ಮಟ್ಟದಲ್ಲಿ ಯೋಜನಾ ಸಮಿಠಿತಿ ಕುರಿತು ಜಾಗೃತಿಯನ್ನು ಮೂಡಿಸಲಾಗುವುದು. ಅಲ್ಲದೆ, ತಿಂಗಳ ಕೊನೆಯಲ್ಲಿ ತಾಲೂಕು ಮಟ್ಟದಲ್ಲಿಯೂ ಸಹ ಕಾರ್ಯಾಗಾರ ನಡೆಸಲಾಗುವುದು. ಆ ಮೂಲಕ ಯೋಜ ನೆಯ ಮೂಲ ಉದ್ದೇಶ ತಿಳಿಸಲಾಗುವುದು ಎಂದರು.
ಜನಪ್ರತಿನಿಧಿಗಳು, ಅಧಿಕಾರಿಗಳಿಂದ ಹಿಡಿದು, ಯೋಜನೆಯ ಕುರಿತು ಜಾಗೃತಿಯಾಗಬೇಕು. ಅಲ್ಲದೆ, ಯೋಜನೆಯನ್ನು ರೂಪಿಸುವಂತಹ ಸಂಸ್ಕೃತಿ ಮೂಡಬೇಕು. ಆಗ ಮಾತ್ರ ಇದು ಅತ್ಯಂತ ಉಪಯುಕ್ತ ರೀತಿಯಲ್ಲಿ ಅನುಷ್ಠಾನಗೊಳ್ಳಲು ಸಾಧ್ಯವಾಗುತ್ತದೆ ಎಂದ ಅವರು, ಈ ನಿಟ್ಟಿನಲ್ಲಿ ಗ್ರಾ.ಪಂ.ಮಟ್ಟದಲ್ಲಿ ರೂಪಿತವಾದ ಯೋಜನೆ ಸರ್ಕಾರದ ಮಟ್ಟದಲ್ಲಿ ಅನುಷ್ಠಾನವಾಗಲಿದ್ದು, ಈ ಬಗ್ಗೆ ಸರ್ಕಾರವೂ ಕೂಡಾ ಸ್ಪಂದಿಸಲಿದೆ ಎಂದರು.
ಗ್ರಾಮೀಣ ಅಭಿವೃದ್ಧಿ ಪಂಚಾಯತ್‌ರಾಜ್ ಯೋಜನೆಯ ಸಂಪನ್ಮೂಲ ವ್ಯಕ್ತಿ ಗಣೇಶ್ ಪ್ರಸಾದ್ ಮಾತನಾಡಿ, ಮಾನವ ಅಭಿವೃದ್ಧಿ ವಿಷಯದಲ್ಲಿ ರಾಜ್ಯದಲ್ಲಿಯೇ ಶಿವಮೊಗ್ಗ ೮ನೇ ಸ್ಥಾನದಲ್ಲಿದ್ದರೆ ಆಹಾರ ಭದ್ರತೆಯ ವಿಷಯದಲ್ಲಿ ೨೧ನೇ ಸ್ಥಾನದಲ್ಲಿದೆ. ಮಾನವ ಅಭಿವೃದ್ಧಿಯಲ್ಲಿ ತಾಲೂಕುವಾರು ವಿವರ. ಶಿವಮೊಗ್ಗ-೧೪, ಭದ್ರಾವತಿ-೧೭, ತೀರ್ಥಹಳ್ಳಿ -೨೨, ಹೊಸನಗರ-೧೦, ಸಾಗರ-೪೬, ಶಿಕಾರಿಪುರ-೧೦೪, ಸೊರಬ-೧೨೨ ಸ್ಥಾನಗಳನ್ನು ಪಡೆದುಕೊಂಡಿದೆ ಎಂದರು.
ಸಭೆಯಲ್ಲಿ ಜಿ.ಪಂ. ಅಧ್ಯಕ್ಷೆ ಜ್ಯೋತಿ ಎಸ್.ಕುಮಾರ್, ಸಿಇಓ ರಾಕೇಶ್‌ಕುಮಾರ್ ಸೇರಿದಂತೆ ಮೊದಲಾದವರಿದ್ದರು.