Saturday, October 12, 2024
Google search engine
Homeಇ-ಪತ್ರಿಕೆಡೆಂಗ್ಯು ನಿಯಂತ್ರಿಸುವಲ್ಲಿ ಸರ್ಕಾರ ವಿಫಲ, ಮೂವರು ಸಚಿವರು ರಾಜೀನಾಮೆ ನೀಡಲಿ: ಬಿಜೆಪಿ

ಡೆಂಗ್ಯು ನಿಯಂತ್ರಿಸುವಲ್ಲಿ ಸರ್ಕಾರ ವಿಫಲ, ಮೂವರು ಸಚಿವರು ರಾಜೀನಾಮೆ ನೀಡಲಿ: ಬಿಜೆಪಿ

ಶಿವಮೊಗ್ಗ : ರಾಜ್ಯ ಸರ್ಕಾರ ಡೆಂಗ್ಯೂ ಮಹಾಮಾರಿಗೆ ಪೂರ್ವ ತಯಾರಿ ಮಾಡದೇ ಆಂತರಿಕ ಕಚ್ಚಾಟದಿಂದಾಗಿ ಜನರನ್ನು ನಿರ್ಲಕ್ಷಿಸಿ ಡೆಂಗ್ಯೂ ನಿಯಂತ್ರಿಸುವಲ್ಲಿ ವಿಫಲವಾಗಿದ್ದು, ರಾಜ್ಯ ಸರ್ಕಾರದ ಆರೋಗ್ಯ ಸಚಿವ ದಿನೇಶ್ ಗುಂಡೂರಾವ್, ನಗರಾಭಿವೃದ್ಧಿ ಸಚಿವ ಬೈರತಿ ಸುರೇಶ್, ಪೌರಾಡಳಿತ ಸಚಿವ ರಹೀಂ ಖಾನ್ ರಾಜೀನಾಮೆ ನೀಡಬೇಕೆಂದು ಬಿಜೆಪಿ ಪ್ರಕೋಷ್ಟಗಳ ಸಂಯೋಜಕ ಎಸ್.ದತ್ತಾತ್ರಿ ಆಗ್ರಹಿಸಿದರು.

ಶನಿವಾರ ಬಿಜೆಪಿ ಕಚೇರಿಯಲ್ಲಿ ಆಯೋಜಿಸಿದ್ದ ಪತ್ರಿಕಾಗೋಷ್ಟಿಯಲ್ಲಿ ಮಾತನಾಡಿದ ಅವರು, ಡೆಂಗ್ಯೂ ಮಹಾಮಾರಿ ರಾಜ್ಯದಾದ್ಯಂತ ಕಾಡುತ್ತಿದೆ. ಆರೋಗ್ಯ ಇಲಾಖೆಗೆ ಗೊತ್ತಿದೆ. ಆದರೂ, ಪೂರ್ವ ತಯಾರಿ ಮಾಡದ ಪರಿಣಾಮ ಹೆಚ್ಚಳವಾಗಿದ್ದು, 1.05 ಲಕ್ಷ ಶಂಕಿತ ಪ್ರಕರಣಗಳಿವೆ. 4,828 ಪ್ರಕರಣಗಳು ಪಾಸಿಟಿವ್ ಇದ್ದು, 07 ಮಂದಿ ಮೃತಪಟ್ಟಿದ್ದಾರೆ. ಸಾಗರದ ಆರೋಗ್ಯ ಇಲಾಖೆ ಡಿ ದರ್ಜೆ ನೌಕರ ನಾಗರಾಜ್ ಕೂಡ ಡೆಂಗ್ಯೂಗೆ ಬಲಿಯಾಗಿದ್ದಾರೆ. ಹಾಸನದಲ್ಲಿ ಐದು ಡೆಂಗ್ಯೂ ಪೀಡಿತರು ಮೃತಪಟ್ಟಿದ್ದಾರೆ. ಆದರೂ ರಾಜ್ಯ ಸರ್ಕಾರ ಮುನ್ನೆಚ್ಚರಿಕೆ ಕ್ರಮ ಕೈಗೊಳ್ಳದೇ ಆಂತರಿಕ ಕಚ್ಚಾಟದಲ್ಲಿ ತೊಡಗಿದೆ ಎಂದರು.

ನಗರದಲ್ಲಿ 10 ಫಾಗಿಂಗ್ ಮಷಿನ್‍ಗಳು ಕಾಣಿಸಿಕೊಳ್ಳಬೇಕಿತ್ತು. ಆದರೆ ಅಲ್ಲೊಂದು ಇಲ್ಲೊಂದು ಇವೆ. ಡೆಂಗ್ಯೂ ಬಂದರೆ ಎಲಿಸಾ ಪರೀಕ್ಷೆ ಮಾಡಬೇಕು. ಶಿವಮೊಗ್ಗದಲ್ಲಿ ಕೇವಲ ಒಂದು ಕಡೆ ಮಾತ್ರ ಸೌಲಭ್ಯ ಇದೆ. ಇದನ್ನು ತಾಲೂಕು ವ್ಯಾಪ್ತಿಗೆ ವಿಸ್ತರಿಸಬೇಕು. ಜಿಲ್ಲೆಯಲ್ಲಿ 592 ಶಂಕಿತ ಪ್ರಕರಣಗಳಿದ್ದು, ಝೀಕಾ ವೈರಸ್‍ಗೆ ಒಂದು ಬಲಿಯಾಗಿದ್ದು, ಎರಡು ಪ್ರಕರಣಗಳು ಪಾಸಿಟಿವ್ ಇದೆ ಎಂದರು.  

ಸೊಳ್ಳೆಗಳ ಉತ್ಪಾದನಾ ಕೇಂದ್ರ ನಿರ್ಮೂಲನೆ ಮಾಡಬೇಕು. ಸ್ಥಳೀಯ ಸಂಸ್ಥೆಗಳು ಫಾಗಿಂಗ್ ಮಾಡುತ್ತಿಲ್ಲ. ಮೆಗ್ಗಾನ್ ಆಸ್ಪತ್ರೆಯಲ್ಲಿ ಮಾತ್ರ ಎಲಿಸಾ ಪರೀಕ್ಷೆ ಅವಕಾಶ ಇದೆ. ಪ್ರತಿದಿನ 50 ಜನರಿಗೆ ಪರೀಕ್ಷೆ ಮಾಡಬಹುದು. ಮತ್ತೊಂದು ಪರೀಕ್ಷಾ ಕೇಂದ್ರ ಆರಂಭ ಮಾಡಬೇಕು. ಸರ್ಕಾರಿ ಆಸ್ಪತ್ರೆಯಲ್ಲೂ ರೂ.500 ಪರೀಕ್ಷೆ ಆಗುತ್ತಿದೆ. ಸರ್ಕಾರ ಬಿಪಿಎಲ್ ಕಾರ್ಡ್ ದಾರರಿಗೆ ಉಚಿತ ಪರೀಕ್ಷೆ ಮಾಡಬೇಕು. ಬಿಳಿ ರಕ್ತಕಣಗಳ ಪ್ರತ್ಯೇಕ ಮಾಡುವ ವ್ಯವಸ್ಥೆ ತಾಲೂಕು ಕೇಂದ್ರದಲ್ಲಿ ಇಲ್ಲ. ಮೆಗ್ಗಾನ್ ಆಸ್ಪತ್ರೆ ರೂ.600 ಹಣ ಕೊಡಬೇಕು. ಪುನಃ ರಕ್ತ ಕೊಡಬೇಕು. ಖಾಸಗಿ ಆಸ್ಪತ್ರೆ ರೂ.1000 ಶುಲ್ಕ ಕೊಡಬೇಕು. ಬಿಪಿಎಲ್ ಕಾರ್ಡ್ ಇದ್ದವರಿಗೆ ಖಾಸಗಿ ಆಸ್ಪತ್ರೆಗಳಲ್ಲೂ ಉಚಿತ ಪರೀಕ್ಷೆಗೆ ಸರ್ಕಾರ ಅವಕಾಶ ಮಾಡಿಕೊಡಬೇಕು ಎಂದರು.

ಪತ್ರಿಕಾಗೋಷ್ಠಿಯಲ್ಲಿ ಪ್ರಮುಖರಾದ ಕೆ.ವಿ.ಅಣ್ಣಪ್ಪ, ಚಂದ್ರಶೇಖರ್, ಶಿವರಾಜ್, ಡಾ. ಸುರೇಶ್, ಡಾ. ಹೇಮಂತ್, ಹೃಷಿಕೇಶ್ ಪೈ, ವಿನ್ಸೆಂಟ್, ಶ್ರೀನಿವಾಸ ರೆಡ್ಡಿ ಇದ್ದರು.

RELATED ARTICLES
- Advertisment -
Google search engine

Most Popular

Recent Comments