ಸರ್ಕಾರ – ವೈದ್ಯರ ಹಗ್ಗ ಜಗ್ಗಾಟ : ನಲುಗಿದ ಜನಸಾಮಾನ್ಯ
ಕೆಪಿಎಂಇ ಕಾಯ್ದೆಗೆ ತಿದ್ದುಪಡಿ ವಿಧೇಯಕ ಮಂಡನೆಯನ್ನು ವಿರೋಧಿಸಿ ವೈದ್ಯರ ಮುಷ್ಕರ ತೀವ್ರ ಸ್ವರೂಪ ಪಡೆಯುತ್ತಿದ್ದು, ಇಂದು ಹೊರರೋಗಿ ಸೇವೆಯನ್ನೂ ನಿಲ್ಲಿಸಿರುವ ವೈದ್ಯರು ತಮ್ಮ ಖಾಸಗಿ ಆಸ್ಪತ್ರೆಯ ಆಂಬ್ಯುಲೆನ್ಸ್ ಸೇವೆ, ಲ್ಯಾಬೊರೇಟರಿ ಸೇವೆಗಳನ್ನೂ ಸ್ಥಗಿತಗೊಳಿಸಿದ್ದಾರೆ.
ವೈದ್ಯರು ಮತ್ತು ಸರ್ಕಾರದ ಈ ಹಗ್ಗಜಗ್ಗಾಟದಲ್ಲಿ ಬಲಿಯಾಗುತ್ತಿರುವುದು ಮಾತ್ರ ಜನಸಾಮಾನ್ಯರು. ಈಗಾಗಲೇ ೨೩ ಜನರ ಜೀವ ಬಲಿ ಪಡೆದಿರುವ ಈ ಮುಷ್ಕರ ಮುಟ್ಟುವುದಾದರೂ ಎಲ್ಲಿಗೆ ಎನ್ನುವುದು ಸಹಜ ಕಾಳಜಿಯಾಗಿದೆ. ವೈದ್ಯರ ಮುಷ್ಕರಕ್ಕೆ ಕಾರಣ, ತಿದ್ದುಪಡಿಯಲ್ಲಿರುವ ಸರ್ಕಾರದ ನಿಲುವು, ಜನಸಾಮಾನ್ಯರ ದೃಷ್ಟಿಕೋನ, ಸಾಧಕ ಬಾಧಕಗಳ ಒಂದು ಅವಲೋಕನ ಇಲ್ಲಿದೆ.
ಕೆಪಿಎಂಇ ತಿದ್ದುಪಡಿ- ಸರ್ಕಾರದ ವಾದ
ಕರ್ನಾಟಕ ಸರ್ಕಾರವು ಕೆಪಿಎಂಇ ವಿಧೇಯಕಕ್ಕೆ ತಿದ್ದುಪಡಿ ತರುವ ಮೂಲಕ ಖಾಸಗಿ ಆಸ್ಪತ್ರೆಗಳಿಗೆ ಕಡಿವಾಣ ಹಾಕಲು ಮುಂದಾಗಿದೆ. ಏಕರೂಪ ದರ ನಿಗದಿ, ಸರ್ಕಾರದ ವತಿಯಿಂದ ಮೇಲ್ವಿಚಾರಣೆ, ಪ್ರತಿ ಆಸ್ಪತ್ರೆಗೂ ಒಂದು ಸರ್ಕಾರಿ ಸಿಇಓ ನೇಮಕ, ಆಸ್ಪತ್ರೆಯಲ್ಲಿರುವ ಸೌಕರ್ಯದ ಆಧಾರವಾಗಿ ಒಂದೇ ರೀತಿಯ ದರ ಮತ್ತು ಆ ದರಪಟ್ಟಿಯನ್ನು ರೋಗಿಗಳಿಗೆ ಕಡ್ಡಾಯವಾಗಿ ನೀಡುವುದು ಮತ್ತು ಆ ದರವನ್ನು ಮೀರಿ ಖಾಸಗಿ ಅಸ್ಪತೆಗಳು ಹಣ ವಸೂಲಿ ಮಾಡುವಂತಿಲ್ಲ, ಅವ್ಯವಸ್ಥೆ ಮತ್ತು ಅಚಾತುರ್ಯಗಳಿಗೆ ಖಾಸಗಿ ಆಸ್ಪತ್ರೆ ಹಾಗೂ ವೈದ್ಯರಿಗೆ ಜೈಲು ಅಥವಾ ದಂಡ, ಹೀಗೆ ಹತ್ತು ಹಲವು ನಿಬಂಧನೆಗಳ ಮೂಲಕ ಖಾಸಗಿ ಆಸ್ಪತ್ರೆಗಳಿಗೆ ಅಂಕುಶ ಹಾಕುವ ಯೋಜನೆ ಸರ್ಕಾರದ್ದಾಗಿದೆ.
ತಿದ್ದುಪಡಿ ಜಾರಿಗೆ ಆಡಳಿತ ಪಕ್ಷದಲ್ಲೇ ಭಿನ್ನಮತ ಮೂಡಿದ್ದು, ವಿಧೇಯಕ ಮಂಡನೆಯಾಗುವುದೋ ಇಲ್ಲವೋ ಎನ್ನುವುದೂ ಕೂಡ ಖಚಿತವಾಗಿಲ್ಲ. ವಿಧೇಯಕ ಮಂಡನೆಯಾದರೂ ಅದು ತಕ್ಷಣಕ್ಕೆ ಜಾರಿಯಾಗುವುದಿಲ್ಲ, ಅದಕ್ಕೆ ತನ್ನದೇ ಆದ ಸಮಯ ಬೇಕಾಗುತ್ತದೆ ಎನ್ನುವುದು ಆರೋಗ್ಯ ಸಚಿವರಾದ ರಮೇಶ್ ಕುಮಾರ್‌ರ ಅಭಿಪ್ರಾಯ.
ವೈದ್ಯರ ವಿರೋಧವೇಕೆ?
ತಿನ್ನುವ ಇಡ್ಲಿ ಒಂದೇ ಆದರೆ ಬೀದಿ ಬದಿಯ ಕ್ಯಾಂಟೀನ್ ದರಕ್ಕೂ ೭ ಸ್ಟಾರ್ ಹೋಟೆಲ್‌ಗಳ ದರಕ್ಕೂ ವ್ಯತ್ಯಾಸವಿರುವುದಿಲ್ಲವೆ? ಎನ್ನುವ ಪ್ರಶ್ನೆಯಿಂದ ಪ್ರಾರಂಭವಾಗುವ ಅವರ ವಾದ ಕೋಟ್ಯಾಂತರ ರೂಪಾಯಿ ಬಂಡವಾಳ ಹೂಡಿ, ಅತ್ಯಾಧುನಿಕ ತಂತ್ರಜ್ಞಾನದ ಯಂತ್ರೋಪಕರಣ ಗಳನ್ನು ನಿಭಾಯಿಸಲು ಲಕ್ಷಾಂತರ ರೂಪಾಯಿ ಹಣ ವ್ಯಯವಾಗುತ್ತದೆ, ಇದರ ವೆಚ್ಚ ಭರಿಸುವವರಾರು. ಏಕರೂಪ ದರ ನಿಗದಿಯಿಂದ ನಿರ್ವಹಣೆ ಕಷ್ಟ ಸಾಧ್ಯ. ಈಗ ತಂತ್ರಜ್ಞಾನ ಮತ್ತು ಸೌಲಭ್ಯಕ್ಕೆ ತಕ್ಕಂತೆ ದರ ನಿಗದಿಯಾಗಿದೆ.
ಇಷ್ಟೇ ಅಲ್ಲದೆ ಜೈಲು ವಾಸ ಮತ್ತು ದಂಡ ಎಂಬ ತಿದ್ದುಪಡಿ ವೈದ್ಯ ರನ್ನು ಭಾದಿಸುತ್ತಿರುವ ಮತ್ತೊಂದು ವಿಷಯ. ರೋಗಿಗಳ ಚಿಕಿತ್ಸೆಗಿಂತ ಹೆಚ್ಚು ಕೋರ್ಟು, ಕಚೇರಿ ಅಲೆಯುವ ದಿನ ಬಂದರೂ ಅಚ್ಚರಿಯಿಲ್ಲ. ಇದರಿಂದ ನೊಂದು ನುರಿತ ವೈದ್ಯರು ರಾಜ್ಯವನ್ನು ಬಿಟ್ಟು ನಡೆಯುವ ಸಾಧ್ಯತೆ ಹೆಚ್ಚು. ವೈದ್ಯರು ಜೀವ ಉಳಿಸಲೆಂದೇ ಚಿಕಿತ್ಸೆ ನೀಡುತ್ತಾರೆ ಆದರೆ ಸಾವು, ನೋವು ಕೈಮೀರಿ ಆಗುವಂಥದ್ದು, ಹಾಗಾಗಿ ಅದರೆಡೆಗೆ ಕಾನೂನಾತ್ಮಕ ನಡೆ ಎಷ್ಟು ಸರಿ ಎನ್ನುವುದು ವೈದ್ಯರ ಪ್ರಶ್ನೆ. ಈ ಎಲ್ಲ ನಡೆಗಳಿಂದ ಕಿರಿಯ ವೈದ್ಯರು ವೃತ್ತಿಯನ್ನೇ ಬಿಡುವ ಸಾಧ್ಯತೆ ಕೂಡ ಇದೆ ಎನ್ನುತ್ತಾರೆ ಕೆಲವು ವೈದ್ಯರು.
ಜನಸಾಮಾನ್ಯನ ಅಭಿಪ್ರಾಯ : ವೈದ್ಯಕೀಯ ಸೇವೆಗಳ ದರಗಳು ನಿಲುಕದ ನಕ್ಷತ್ರಗಳು ಎನ್ನುವ ಭಾವನೆ ಹಿಂದಿನಿಂದಲೂ ಜನರ ಮನದಲ್ಲಿದೆ. ಒಂದೇ ರೀತಿಯ ದರ ನಿಗದಿ ನಿಜಕ್ಕೂ ಸ್ವಾಗತಾರ್ಹ. ಖಾಸಗಿ ಅಸ್ಪತ್ರೆಯ ಸೇವೆಗಳನ್ನು ಎಲ್ಲರೂ ಪಡೆಯಲು ಈ ತಿದ್ದುಪಡಿ ಬಹಳ ಪ್ರಯೋಜನಕಾರಿ. ಸರ್ಕಾರ ಮತ್ತು ವೈದ್ಯರು ಕುಳಿತು ಚರ್ಚಿಸಿ, ನಿರ್ಧರಿಸಿ ಒಂದು ಮಧ್ಯಂತರದ ಒಮ್ಮತಕ್ಕೆ ಬಂದು ಸಮಸ್ಯೆ ಬೇಗ ಹರಿಸಿದರೆ ಉತ್ತಮ. ಅದೇನೆ ಆದರೂ ಜೀವಕ್ಕಿಂತ ದೊಡ್ಡದು ಯಾವುದೂ ಇಲ್ಲ, ಇವರಿಬ್ಬರ ಜಗಳದಲ್ಲಿ ನಮ್ಮಂತಹ ಅಮಾಯಕರ ಬಲಿ ಏಕೆ ಎನ್ನುವುದು ಜನಸಾಮಾನ್ಯನ ಮಾತುಗಳು.
ಇದರ ಬಗ್ಗೆ ಚಿಂತಿಸಿಲ್ಲವೇಕೆ?
ಖಾಸಗಿ ಅಸ್ಪತ್ರೆಗಳ ನಿಯಂತ್ರಣಕ್ಕಿಂತ ಸರ್ಕಾರಿ ಅಸ್ಪತ್ರೆಯ ಸವಲತ್ತುಗಳನ್ನು ಉತ್ತಮಗೊಳಿ ಸಬಾರದೇಕೆ. ನಮ್ಮ ನಗರದ ಮೆಗ್ಗಾನ್ ಆಸ್ಪತ್ರೆ ಯನ್ನೇ ಉದಾಹರಣೆಯಾಗಿ ತೆಗೆದುಕೊಳ್ಳುವು ದಾರೆ, ಕಟ್ಟಡ ಭಾರಿ ಪ್ರಮಾಣದ್ದಿದ್ದರೂ ಹಲ ವಾರು ಸವಲತ್ತುಗಳ ಕೊರತೆ ಎದ್ದು ಕಾಣುತ್ತದೆ. ಅದೆಷ್ಟೋ ಬಾರಿ ಅಲ್ಲಿನ ಎಕ್ಸರೇ ಉಪಕರಣದಲ್ಲಿ ತೆಗೆಯಲಾದ ಎಕ್ಸರೇ ಚಿತ್ರಣ ಸ್ಪಷ್ಟವಿಲ್ಲವೆನ್ನುವ ಕಾರಣ ಖಾಸಗಿ ಲ್ಯಾಬ್‌ಗಳಲ್ಲಿ ತೆಗೆಸಲು ಸೂಚಿಸುವ ಘಟನೆಗಳಿವೆ. ಅಲ್ಟ್ರಾಸೌಂಡ್ ಇದ್ದರೆ ಸಿಟಿ ಇಲ್ಲ, ಸಿಟಿ ಸ್ಕಾನ್ ಇದ್ದರೆ ಎಂಆರ್‌ಐ ಇಲ್ಲ, ಹೀಗೆ ಹಲವು ಇಲ್ಲಗಳಿಂದ ಬಳಲುತ್ತಿರುವ ಸರ್ಕಾರಿ ಆಸ್ಪತ್ರೆಗಳನ್ನು ಸುಸಜ್ಜಿತಗೊಳಿಸುವತ್ತ ಸರ್ಕಾರ ಚಿತ್ತ ಹರಿಸಬೇಕಿದೆ.
ಸರ್ಕಾರದ ಇಎಸ್‌ಐ ಆಸ್ಪತ್ರೆಗಳು ಕೇವಲ ಔಷಧ ವಿತರಣಾ ಕೇಂದ್ರಗಳಾಗಿದ್ದು, ಉಳಿದೆಲ್ಲಾ ಸೇವೆ ಗಳಿಗೆ ಇಎಸ್‌ಐ ಹೊಂದಿರುವವರು ಖಾಸಗಿ ಆಸ್ಪತ್ರೆ ಯಲ್ಲಿ ಚಿಕಿತ್ಸೆ ಪಡೆಯುತ್ತಾರೆ ಮತ್ತು ಇಎಸ್‌ಐ ಒಂದರಿಂದಲೇ ಖಾಸಗಿ ಆಸ್ಪತ್ರೆಗಳಿಗೆ ಕೋಟ್ಯಾಂ ತರ ರೂಗಳ ಬಿಲ್ ಪ್ರತಿ ತಿಂಗಳು ಜಮೆ ಯಾಗು ತ್ತಿದೆ, ಈ ಕೋಟ್ಯಾಂತರ ರೂ.ಗಳಿಂದ ಸರ್ಕಾರಿ ಆಸ್ಪತ್ರೆಗಳ ಜೀರ್ಣೋದ್ಧಾರ ಮಾಡ ಬಾರದೇಕೆ?
ಇನ್ನು ತಿದ್ದುಪಡಿಯ ಪರಿಣಾಮವಾಗಿ ಕಠಿಣ ಕಾನೂನು ಕ್ರಮಗಳಿಗೆ ಹೆದರಿ ಇಳಿ ವಯಸ್ಸಿ ನವರನ್ನು ಮತ್ತು ಗಂಭೀರ ಸ್ಥಿತಿಯಲ್ಲಿರುವ ರೋಗಿ ಗಳನ್ನು ದಾಖಲಿಸಿಕೊಳ್ಳಲು ಖಾಸಗಿ ಆಸ್ಪತ್ರೆಗಳು ನಿರಾಕರಿಸಿದರೆ ಅವರಿಗೆ ಸೂಕ್ತ ಚಿಕಿತ್ಸೆ ಒದಗಿಸು ವುದಕ್ಕೆ ಸರ್ಕಾರ ತಯಾರಿ ನಡೆಸಿದೆಯೇ? ತಿದ್ದುಪಡಿಯಿಂದಾಗುವ ಹೊರೆ ತಡೆಯಲಾರದೆ ನುರಿತ ವೈದ್ಯರು ವಲಸೆ ಹೋದರೆ ರೋಗಿಗಳ ಪಾಡೇನು? ಸರ್ಕಾರದಿಂದ ಉಚಿತ ವೈದ್ಯ ಕೀಯ ಶಿಕ್ಷಣ ಮತ್ತು ಉಚಿತ ಪಿಜಿ ಮುಗಿಸುವ ವೈದ್ಯರು ಕಡ್ಡಾಯವಾಗಿ ೪ ವರ್ಷಗಳ ಸರ್ಕಾರಿ ಸೇವೆ ನೀಡಬೇಕು ಎನ್ನುವ ನಿಯಮ ಜಾರಿಯಾಗುವುದಿಲ್ಲವೆ?
ಮೂರು ದಿನದ ಮುಷ್ಕರದ ಬಿಸಿಯನ್ನೇ ನಿಯತ್ರಿಸಲಾಗದ ಸರ್ಕಾರವು ತಿದ್ದುಪಡಿಯಿಂದ ಉಂಟಾಗಬಹುದಾದ ಭಾದಕಗಳಿಗೆ ಏನು ಸಿದ್ಧತೆ ಮಾಡಿಕೊಂಡಿದೆ? ಜನಸಾಮಾನ್ಯನ ದೃಷ್ಟಿಯಲ್ಲಿ ಕಾಣುತ್ತಿರುವುದು ಏಕರೂಪ ಬೆಲೆ ಮಾತ್ರ ಆದರೆ ಇದರ ಸಾಧಕ ಭಾದಕಗಳು ಅನೇಕ. ಸರ್ಕಾರಕ್ಕೆ ಇದು ಅರಗಿಸಿಕೊಳ್ಳಲಾಗದ ತುತ್ತಾಗಿ ಪರಿಣಮಿಸಿದರೂ ಅಚ್ಚರಿಯಿಲ್ಲ. ವೈದ್ಯಕೀಯ ಶಿಕ್ಷಣವೇ ವ್ಯವಹಾರವಾಗಿರುವಾಗ ವೈದ್ಯಕೀಯ ಕ್ಷೇತ್ರ ವ್ಯವಹಾರವಾಗಿರುವುದರಲ್ಲಿ ಅಚ್ಚರಿ ಇಲ್ಲ.