ಶಿವಮೊಗ್ಗ : ಅಂತರಾಜ್ಯ ಮತ್ತು ಜಿಲ್ಲಾ ಕುಖ್ಯಾತ ಮನೆ ಕಳ್ಳನಾದ ಮಹಮ್ಮದ್ ಸಾದಿಕ್ ಅಲಿಯಾಸ್ ಕಡೂರು ಸಾದಿಕ್ ಮತ್ತು ಆತನ ೧೦ ಸಹಚರರನ್ನು ದೊಡ್ಡಪೇಟೆ ಠಾಣೆ ಪೊಲೀಸರು ಬಂಧಿಸಿ ಸುಮಾರು ೧ ಕೋಟಿ ರೂ. ಮೌಲ್ಯದ ಚಿನ್ನ ಮತ್ತು ಬೆಳ್ಳಿ ಆಭರಣ, ಒಂದು ಕಾರು, ೨ ಬೈಕ್ ಇತರೇ ವಸ್ತುಗಳನ್ನು ವಶಪಡಿಸಿಕೊಂಡಿದ್ದಾರೆಂದು ಜಿಲ್ಲಾ ಪೊಲೀಸ್ ರಕ್ಷಣಾಧಿಕಾರಿ ಅಭಿನವ್ ಖರೆ ತಿಳಸಿದರು.
ಇಂದು ಸುದ್ದಿಗೋಷ್ಠಿಯಲ್ಲಿ ಮಾತನಾಡಿದ ಅವರು, ಬಂಧಿತರ ವಿರುದ್ಧ ಶಿವಮೊಗ್ಗ ನಗರದ ವಿವಿಧ ಠಾಣೆಗಳಲ್ಲಿ ೨೦೧೫, ೨೦೧೬ ಮತ್ತು ೨೦೧೭ರಲ್ಲಿ ಸುಮಾರು ೨೦ಕ್ಕೂ ಹೆಚ್ಚು ಘೋರ ಮನೆಗಳ್ಳತನ ಪ್ರಕರಣ ಹಾಗೂ ಹೊನ್ನಾಳಿ, ಕುಣಿಗಲ್, ಕೊಳ್ಳೆಗಾಲ, ತಿಪಟೂರು ಠಾಣಾ ವ್ಯಾಪ್ತಿಯಲ್ಲಿ ಕಳ್ಳತನ ಪ್ರಕರಣಗಳು ದಾಖಲಾಗಿದ್ದು, ಗೋವಾ, ಮಹಾರಾಷ್ಟ್ರ, ಆಂಧ್ರಪ್ರದೇಶ ಹಾಗೂ ಕೇರಳ ರಾಜ್ಯಗಳಲ್ಲಿ ಬೇಕಾಗಿರುವ ವಾರೆಂಟ್ ಹಾಗೂ ರಾಜ್ಯದ ೧೩ಕ್ಕೂ ಹೆಚ್ಚು ಜಿಲ್ಲೆಗಳಲ್ಲಿ ಮಹಮ್ಮದ್ ಸಾದಿಕ್ ಹಾಗೂ ಆತನ ಗ್ಯಾಂಗ್ ಪತ್ತೆಯ ಬಗ್ಗೆ ವಿಶೇಷ ತಂಡವನ್ನು ರಚಿಸಲಾಗಿತ್ತು ಎಂದರು.
ಆರೋಪಿ ಸಾದಿಕ್ ಮತ್ತು ಆತನ ತಂಡ ಶಿವಮೊಗ್ಗದ ರಾಜೇಂದ್ರನಗರದಲ್ಲಿ ಕಳ್ಳತನ ಮಾಡಲು ಪ್ರಯತ್ನ ಮಾಡಿ ತಲೆಮರೆಸಿಕೊಂಡಾಗ ವಿಶೇಷ ತಂಡವು ಆತನ ಇರುವಿಕೆ ಬಗ್ಗೆ ಆತನ ಕಾಲ್ ರೆಕಾರ್ಡ್ ಮುಖಾಂತರ ಬಾಂಬೆ, ಗುಜರಾತ್, ಕೇರಳದಲ್ಲಿ ಇರುವ ಬಗ್ಗೆ ಖಚಿತಪಡಿಸಿಕೊಂಡು ಹೋಗಿದ್ದಾಗಲೂ ಸಹ ಆತ ಅಲ್ಲಿಂದ ಪರಾರಿಯಾಗುತ್ತಿದ್ದನು. ತಮಿಳುನಾಡು ಹಾಗೂ ಬೆಂಗಳೂರಿನಲ್ಲಿ ಮನೆ ಮಾಡಿಕೊಂಡು ವಾಸವಿರುವ ಬಗ್ಗೆ ಮಾಹಿತಿ ಪಡೆದಾಗಲೂ ಸಹ ಅಲ್ಲಿ ಮನೆಯನ್ನು ಖಾಲಿ ಮಾಡಿಕೊಂಡು ಹೋಗುತ್ತಿದ್ದನು. ನಂತರ ಮಂಡ್ಯ ನಗರದಲ್ಲಿ ಮನೆ ಬಾಡಿಗೆ ಪಡೆದು ವಾಸವಿರುವ ಬಗ್ಗೆ ಖಚಿತ ಮಾಹಿತಿ ಪಡೆದು ತಂಡವು ಜ.೩೧ರಂದು ಆರೋಪಿಯು ತಪ್ಪಿಸಿಕೊಳ್ಳದ ಹಾಗೆ ಜಾಲ ಬೀಸಿ ಮಹಮ್ಮದ್ ಸಾದಿಕ್‌ನನ್ನು ಬಂಧಿಸಿತು ಎಂದರು.
ಆರೋಪಿ ಸಾದಿಕ್‌ನನ್ನು ಬಂಧಿಸಿದ ನಂತರ ಆತನ ಸಹಚರ ರಾದ ಮುಹಿಬುಲ್ಲಾ, ತಬರೇಜ್ ಅಹಮ್ಮದ್, ಅಹಮ್ಮದ್ ಕಬೀರ್, ಗುಲ್ನಾರ್ ಶಿರೀನ್(ಮಹಿಳೆ), ಅಬ್ದುಲ್ ಜಾವೀದ್, ಇಬ್ರಾರ್ ಅಹಮ್ಮದ್, ಮಹಮ್ಮದ್ ಮಜರ್‌ವುಲ್ಲಾ, ಸೈಯದ್ ಸಲೀಂ, ಬಾಬುಜಾನ್, ಚಾಂದ್ ಪಾಷಾ ಇವರನ್ನು ಬಂಧಿಸಲಾಯಿತು ಎಂದರು.
ಪ್ರಮುಖ ಆರೋಪಿ ಮಹಮ್ಮದ್ ಸಾದಿಕ್ ಪತ್ತೆ ಬಗ್ಗೆ ಕಳೆದ ಒಂದೂವರೆ ವರ್ಷಗಳಿಂದ ಜಾಲ ಬೀಸಿ ರಾಜ್ಯಾದ್ಯಂತ ಸಂಚರಿಸಿ ಈತನ ಚಲನವಲನದ ಬಗ್ಗೆ ಈತ ಉಪಯೋಗಿಸುತ್ತಿದ್ದ ೨೦ಕ್ಕೂ ಹೆಚ್ಚು ಮೊಬೈಲ್‌ಗಳು ಹಾಗೂ ೨೫ಕ್ಕೂ ಹೆಚ್ಚು ಸಿಮ್‌ಗಳ ಬಗ್ಗೆ ಕಾಲ್ ಡಿಟೈಲ್ ರೆಕಾರ್ಡ್ ಪಡೆದು ೫೨೦ಕ್ಕೂ ಹೆಚ್ಚು ಮೊಬೈಲ್ ನಂಬರ್‌ಗಳ ಒಳ ಮತ್ತು ಹೊರ ಹೋಗುವ ಕರೆಗಳ ಬಗ್ಗೆ ವಿಶ್ಲೇಷಿಸಿ ಅವುಗಳಿಗೆ ಸಂಪರ್ಕ ಹೊಂದಿದ ವ್ಯಕ್ತಿಗಳನ್ನು ವಿಚಾರಿಸಿ ಅವರಿಂದ ಗುಪ್ತವಾಗಿ ಮಾಹಿತಿ ಸಂಗ್ರಹಿಸಿ ಆರೋಪಿ ಗಳನ್ನು ಬಂಧಿಸಲಾಯಿತು ಎಂದರು.
ಸಾದಿಕ್ ೨೦೦೪ರಿಂದಲೇ ಮನೆ, ವಾಹನ ಹಾಗೂ ಶ್ರೀಗಂಧ ಕಳ್ಳತನಕ್ಕೆ ಭಾಗಿಯಾಗಿ ರಾಜ್ಯ ಹಾಗೂ ಬೇರೆ ರಾಜ್ಯಗಳ ವಿವಿಧ ಪೊಲೀಸ್ ಠಾಣೆಗಳಲ್ಲಿ ಈತನ ವಿರುದ್ಧ ಕಳ್ಳತನ ಪ್ರಕರಣಗಳು ದಾಖಲಾಗಿ ಉಡುಪಿ, ಚಿಕ್ಕಮಗಳೂರು, ಧಾರವಾಡ ಜೈಲುಗಳಲ್ಲಿ ಶಿಕ್ಷೆ ಅನುಭವಿಸಿ ಬಿಡುಗಡೆ ನಂತರ ಹಾಸನದ ಗಫಾರ್‌ನೊಂದಿಗೆ ಸೇರಿಕೊಂಡು ಶಿವಮೊಗ್ಗ ನಗರದಲ್ಲಿ ಸುಲಿಗೆ, ದರೋಡೆ ಪ್ರಕರಣಗಳಲ್ಲಿ ಭಾಗಿಯಾಗಿದ್ದನು. ಆ ನಂತರ ಪಡುಬಿದ್ರೆಯಲ್ಲಿ ಕಳ್ಳತನ ಮಾಡಲು ಹೋಗಿ ಪೊಲೀಸರಿಗೆ ಸಿಕ್ಕಿ ೨೦೧೫ರವರೆಗೂ ಕಾರಾಗೃಹದಲ್ಲಿದ್ದು, ಬಿಡುಗಡೆ ನಂತರ ತನ್ನ ಸಹಚರರೊಂದಿಗೆ ಸೇರಿಕೊಂಡು ಶಿವಮೊಗ್ಗ, ಹೊನ್ನಾಳಿ, ತಿಪಟೂರು, ಹೊಳಲ್ಕೆರೆ, ಕೊಳ್ಳೆಗಾಲ ಠಾಣಾ ವ್ಯಾಪ್ತಿಯಲ್ಲಿ ಮನೆ ಕಳ್ಳತನ ಮಾಡಿ ತಲೆಮರೆಸಿಕೊಂಡಿದ್ದನು ಎಂದರು.
ಸಾದಿಕ್ ಮೋಜು, ಮಸ್ತಿ, ಐಷರಾಮಿ ಜೀವನಕ್ಕೆ ಮಾರುಹೋಗಿ ಕಾರು ಕಳ್ಳತನ ಮಾಡಿ ನಂತರ ಕಾರಿನ ನಂಬರ್ ಪ್ಲೇಟ್ ಬದಲಾ ಯಿಸಿಕೊಂಡು ಸ್ವಂತಕ್ಕೆ ಹಾಗೂ ಕಳ್ಳತನಕ್ಕೆ ಉಪಯೋಗಿಸುತ್ತಿದ್ದನು. ಈತ ವಾಸಿಸುವ ಸ್ಥಳದಲ್ಲಿ ನೆರೆ ಹೊರೆಯವರಿಗೆ ತಾನು ಉದ್ಯಮಿ ಎಂದು ಹೇಳಿಕೊಂಡು ಒಂದು ಕಡೆಯಿಂದ ಇನ್ನೊಂದು ಕಡೆಗೆ ವಾಸ ಸ್ಥಾನವನ್ನು ಬದಲಾಯಿಸುವ ಪ್ರವೃತ್ತಿ ಬೆಳೆಸಿಕೊಂಡಿದ್ದನು ಹಾಗೂ ಈತನ ಒಂದು ಮನೆಯ ಕಳ್ಳತನಕ್ಕೆ ಒಂದೇ ಮೊಬೈಲ್ ಮತ್ತು ಒಂದೇ ಸಿಮ್ ಬಳಸಿ ನಂತರ ಅದನ್ನು ನಾಶಪಡಿಸುತ್ತಿದ್ದನು. ಹೀಗಾಗಿ ಆತನ ಚಲನವಲನ ಬಗ್ಗೆ ತಿಳಿದುಕೊಳ್ಳಲು ಹೆಚ್ಚು ಸಮಯ ಬೇಕಾಯಿತು ಎಂದರು.
ಸಾದಿಕ್ ಹಾಗೂ ಈತನ ತಂಡದ ಪತ್ತೆಗಾಗಿ ದೊಡ್ಡಪೇಟೆ ಠಾಣೆ ಸಿಪಿಐ ಹರೀಶ್ ಕೆ.ಪಾಟೀಲ್, ಪಿಎಸ್‌ಐ ಅಭಯ್ ಪ್ರಕಾಶ್ ಸೋಮನಾಳ್, ಎಎಸ್‌ಐಗಳಾದ ನವೀನ್‌ಕುಮಾರ್, ಮಂಜುನಾಥ್, ಹೆಚ್‌ಸಿಗಳಾದ ಅಂತೋಣಿ, ವಿಜಯ್, ಶೇಖರ್, ಸುರೇಶ್, ಉಮೇಶ್, ಇಂದ್ರೇಶ್, ಪಿಸಿಗಳಾದ ಕಿರಣ್ ಮೋರೆ, ವಿಜಯ್ ಕುಮಾರ್, ವೀಣಾ ಇವರನ್ನೊಳಗೊಂಡ ತಂಡವನ್ನು ರಚಿಸಲಾಗಿತ್ತು. ಆರೋಪಿ ಗಳನ್ನು ಬೇಧಿಸಿ ಪತ್ತೆಹಚ್ಚಲು ಶ್ರಮಿಸಿದ ಈ ತಂಡಕ್ಕೆ ಅಭಿನಂದಿಸಿದ ಜಿಲ್ಲಾ ರಕ್ಷಣಾಧಿಕಾರಿ ಅಭಿನವ್ ಖರೆ ಅವರು ಅಭಿನಂದಿಸಿ ವೈಯಕ್ತಿಕ ವಾಗಿ ೫೦ ಸಾವಿರ ರೂ. ನಗದನ್ನು ನೀಡಿದರು.
ಸುದ್ದಿಗೋಷ್ಠಿಯಲ್ಲಿ ಎಎಸ್‌ಪಿ ಮುತ್ತುರಾಜ್, ಡಿವೈಎಸ್ಪಿ ಪಿ.ಎಸ್.ಸುದರ್ಶನ್ ಹಾಗೂ ವಿಶೇಷ ತಂಡದವರು ಉಪಸ್ಥಿತರಿದ್ದರು.