Sunday, September 8, 2024
Google search engine
Homeಅಂಕಣಗಳುಗ್ಲಾಕೋಮಾದ ಕುರಿತು ಸರಳ ಮಾಹಿತಿ

ಗ್ಲಾಕೋಮಾದ ಕುರಿತು ಸರಳ ಮಾಹಿತಿ

ಶಾಶ್ವತ ಅಂಧತ್ವಕ್ಕೆ ದೂಡಬಲ್ಲ ವಿಶ್ವದ ಎರಡನೇ ದೊಡ್ಡ ಖಾಯಿಲೆ ಗ್ಲಾಕೋಮಾ. ಕಣ್ಣಿನಲ್ಲಿರುವ ದೃಷ್ಟಿನರವು ಮೆದುಳಿಗೆ ಸಂದೇಶಕಳಿಸುವ ನರವಾಗಿದ್ದು, ಇದರಲ್ಲಿ ಅತೀಯಾದ ಒತ್ತಡ ಉಂಟಾದಾಗ ಸಂದೇಶ ರವಾನೆಗೆ ಕಷ್ಟವಾಗಿ ರೋಗಿಯು ಕ್ರಮೇಣ ವಸ್ತುಗಳನ್ನು ಗುರುತಿಸುವ ಕ್ಷಮತೆಯನ್ನು ಕಳೆದುಕೊಳ್ಳುತ್ತಾ ಹೊಗುತ್ತಾನೆ ಇಂತಹ ಶಾಶ್ವತ ಅಂಧತ್ವಕ್ಕೆ ದೂಡಬಲ್ಲ ಖಾಯಿಲೆ ಗ್ಲಾಕೋಮಾವನ್ನು ಆಂಗ್ಲಭಾಷೆಯಲ್ಲಿ ‘Sneak Thief of Sight” (ದೃಷ್ಟಿ ಚೊರ ರೋಗ) ಎಂದು ಹೇಳುತ್ತಾರೆ. ವಿಶ್ವದಾದ್ಯಂತ ಶೇ.50 ರಷ್ಟು ಗುರುತಿಸಲ್ಪಟ್ಟಿರುವ ಸಂಖ್ಯೆಯನ್ನು ೨೦೨೦ರ ವೇಳೆಗೆ ಶೇ.20ಕ್ಕೆ ಇಳಿಸುವ ಧ್ಯೇಯದಿಂದ ‘ವರ್ಲ್ಡ್ ಗ್ಲಾಕೋಮಾ ಅಸೋಸಿಯೇಷನ್’ ಮಾರ್ಚ್ 11 ರಿಂದ 17ರವರೆಗೆ ವಿಶ್ವಾ ಗ್ಲಾಕೋಮಾ ಸಪ್ತಾಹ  ವನ್ನು ಆಚರಿಸುತ್ತಿದೆ. ಹೀಗಾಗಿ ಈ ಸಂದರ್ಭದಲ್ಲಿ ಗ್ಲಾಕಾಮಾದ ಕುರಿತು ಜಾಗೃತಿ ಮೂಡಿಸುವುದು ನಮ್ಮ ಉದ್ದೇಶವಾಗಿದೆ. 

ಗ್ಲಾಕೋಮಾ – ವೈಜ್ಞಾನಿಕ ಕಾರಣ

ಕಣ್ಣಿನ ಒಳಭಾಗದಲ್ಲಿ “ಅಕ್ವಿಯಸ್ ಹ್ಯೂಮರ್” ಎಂಬ ದ್ರಾವಣವಿರುತ್ತದೆ. ಇದು ಕಣ್ಣಿನ ಹೊರಗೆ ಮತ್ತು ಒಳಭಾಗಕ್ಕೆ ಹರಿದಾಡುತ್ತಿರುತ್ತದೆ.ಇದು ಕಣ್ಣೀರಿಗಿಂತ ಭಿನ್ನವಾಗಿದ್ದು, ಈ ದ್ರವವು ನೇತ್ರನಾಳಗಳ ಸಹಾಯದಿಂದ ಹರಿದಾಡುತ್ತದೆ. ದ್ರವಸಂಚಾರದಲ್ಲಿ ಏನಾದರೂ ಅಡಚಣೆ ಉಂಟಾದಲ್ಲಿ ನೇತ್ರನಾಳಗಳು ಮುಚ್ಚಿಕೊಂಡಿದ್ದು, ಪರಿಣಾಮವಾಗಿ ಕಣ್ಣಿನಲ್ಲಿ ಒತ್ತಡ ಹೆಚ್ಚಲು ಪ್ರಾರಂಭಿಸುತ್ತದೆ. ಕ್ರಮೇಣ ದೃಷ್ಟಿನರಗಳಿಗೆ ಹಾನಿಯಾಗಿ ರೋಗಿಯು ತನ್ನ ದೃಷ್ಟಿಯನ್ನು ಕಳೆದುಕೊಂಡು ಗ್ಲಾಕೋಮಾ ಎಂಬ ಖಾಯಿಲೆಗೆ ತುತ್ತಾಗುತ್ತಾನೆ.

ಗ್ಲಾಕೋಮಾದ ಲಕ್ಷಣಗಳು:

ಗ್ಲಾಕೋಮ ರೋಗದಿಂದ ಬಳಲುತ್ತಿರುವ ರೋಗಿಗೆ ಮೊದಲನೆಯ ಹಂತದಲ್ಲಿ ಯಾವುದೇ ರೋಗ ಲಕ್ಷಣಗಳು ಕಾಣಿಸುವುದಿಲ್ಲ. ಕ್ರಮೇಣ ಖಾಯಿಲೆ ಒಂದು ಹಂತವನ್ನು ತಲುಪಿದ ಕೂಡಲೇ ರೋಗಿಗೆ ಅತೀಯಾದ ತಲೆನೋವು, ವಾಂತಿ ಬರುವಂತ ಲಕ್ಷಣ, ಪದೇಪದೇ ಕನ್ನಡಕವನ್ನು ಬದಲಿಸಬೇಕು ಎಂದು ಅನಿಸುವುದು. ಕಣ್ಣಿನ ಸುತ್ತಲೂ ನೋವು, ಕಣ್ಣುಗಳು ಉರಿದಂತಾಗುವುದು, ವಸ್ತುಗಳು ಅಸ್ಪಷ್ಟವಾಗಿ ಕಾಣಿಸುವುದು, ಕಣ್ಣಿನ ಮುಂದೆ ಬಣ್ಣಗಳು ಸರಿದಂತಹ ಅನುಭವ ಮತ್ತು ರೋಗಿಯ ಎಡ ಮತ್ತು ಬಲ ಭಾಗದಲ್ಲಿನ ದೃಷ್ಟಿಮಂದವಾಗಿ ರೋಗಿ ವಸ್ತುಗಳನ್ನು ಗುರುತಿಸುವುದಿಲ್ಲ. ರಾತ್ರಿ ದೀಪದ ಸುತ್ತಲೂ ಪ್ರಭಾವಳಿ ಕಾಣಿಸುವುದು, ದೃಷ್ಟಿಯ ಸುತ್ತಳತೆ ಕಡಿಮೆಯಾಗುವುದು ಅಥವಾ ರಾತ್ರಿ ನೋಡಲು ಕಷ್ಟವಾಗುವುದು, ದೂರದರ್ಶನವನ್ನು ನೋಡಿದ ನಂತರ ಕಣ್ಣಿನ ಸುತ್ತಲೂ ನೋವು ಉಂಟಾಗುವುದು.

ಗ್ಲಾಕೋಮಾ – ಕಾರಣಗಳು, ಅಧ್ಯಯನ

ಈ ಖಾಯಿಲೆಯಿಂದ ಅಂಧತ್ವ ಸಂಭವಿಸಲು ಬಹಳಷ್ಟು ಕಾರಣಗಳಿರಬಹುದು. ಅದರಲ್ಲಿ ಮುಖ್ಯವಾಗಿ ಸಮರ್ಪಕ ಉಪಕರಣಗಳ ಕೊರತೆ, ಜನರಲ್ಲಿನ ಅಜ್ಞಾನ ಮತ್ತು ಮೂಢನಂಬಿಕೆಗಳು. ಈ ಖಾಯಿಲೆಯಿಂದ ಜಗತ್ತಿನಾದ್ಯಂತ ಹಲವಾರು ಮಂದಿ ತಮಗೆ ಅರಿವಿಲ್ಲದಂತೆ ತಮ್ಮ ದೃಷ್ಟಿಯನ್ನು ಕಳೆದುಕೊಳ್ಳುತ್ತಿದ್ದಾರೆ. ವಿಜ್ಞಾನಿಗಳ ಪ್ರಯತ್ನದಿಂದ ಇತ್ತೀಚಿನ ದಿನಗಳಲ್ಲಿ ಈ ಖಾಯಿಲೆಯ ಬಗ್ಗೆ ಅಧ್ಯಯನಗಳು ನಡೆದಿದ್ದು, ಈ ಖಾಯಿಲೆಯನ್ನು ಗುರುತಿಸಿ ಮತ್ತು ಅದನ್ನು ಹತೋಟಿಯಲ್ಲಿಡುವ ಔಷಧಿಗಳನ್ನು ಕಂಡುಹಿಡಿಯಲಾಗಿದೆ.

ಸಾಧ್ಯತೆ ಯಾರಲ್ಲಿ?

ಇದು ಅನುವಂಶೀಯವೂ ಆಗಿದ್ದು, ತಂದೆ-ತಾಯಿಗೆ ಗ್ಲಾಕೋಮಾ ಇದ್ದರೆ ಶೇ.೫ರಷ್ಟು ಮಕ್ಕಳಿಗೆ ಇದು ಬರುವ ಸಾಧ್ಯತೆ ಇರುತ್ತದೆ. 40 ವರ್ಷಕ್ಕಿಂತ ಮೇಲ್ಪಟ್ಟು ಮತ್ತು ನಿಯಮಿತವಾದ ಕಣ್ಣಿನ ಪರೀಕ್ಷೆ ಮಾಡಿಸಿಕೊಳ್ಳದವರಲ್ಲಿ,ಮಧುಮೇಹ, ಮಯೋಪಿಯಾ ಅಥವಾ ಹೆಚ್ಚಿನ ರಕ್ತದೊತ್ತಡ, ತಲೆನೋವು ಅಥವಾ ತೀವ್ರ ತಲೆಶೂಲೆ (migrane) ಹಾಗೂ ತುಂಬಾ ದಿನಗಳವರೆಗೆ ಸ್ಟಿರಾಯ್ಡ್ ಔಷಧಿಗಳನ್ನು ಉಪಯೋಗಿಸುತ್ತಿದ್ದರೆ ಗ್ಲಾಕೋಮಾ ಬರುವ ಸಾಧ್ಯತೆ ಇರುತ್ತದೆ.

ಗ್ಲಾಕೋಮವನ್ನು ಹೇಗೆ ಪತ್ತೆಹಚ್ಚಬಹುದು?

ನೇತ್ರತಜ್ಞರಿಂದ ನಿಯಮಿತವಾದ ಕಣ್ಣಿನ ತಪಾಸಣೆಯಿಂದ ಗ್ಲಾಕೋಮವನ್ನು ಪತ್ತೆಹಚ್ಚಬಹುದು. ವಿಧಾನಗಳೆಂದರೆ ಸಂಪೂರ್ಣ ನೇತ್ರ ಪರೀಕ್ಷೆ, ದೃಷ್ಟಿನರದ ಪರೀಕ್ಷೆ, ಕಣ್ಣಿನ ಒತ್ತಡ ಪರೀಕ್ಷೆ, “ವಿಷ್ಯುಯಲ್ ಫೀಲ್ಡ್” ಪರೀಕ್ಷೆಯಿಂದ ಕಣ್ಣಿನ ಸುತ್ತಲಿನ ದೃಷ್ಟಿ ಮತ್ತು ಆ ಭಾಗದಲ್ಲಿ ಎಷ್ಟು ದೃಷ್ಟಿ ಕಡಿಮೆಯಾಗಿದೆ ಎಂದು ತಿಳಿಯುತ್ತಾರೆ, “ಆಪ್ಟಿಕಲ್ ಕೊಹರೆನ್ಸ್ ಟೋಮೊಗ್ರಫಿ”ಯಿಂದ ದೃಷ್ಟಿನರದ ದಪ್ಪವನ್ನು ತಿಳಿಯುತ್ತಾರೆ. ಪ್ರಾರಂಭದ ಹಂತದಲ್ಲಿನ ಗ್ಲಾಕೋಮಾವನ್ನು ಒ.ಸಿ.ಟಿ ಮತ್ತು ಹೆಚ್.ಆರ್.ಟಿ ಯಿಂದ ಪರೀಕ್ಷಿಸುತ್ತಾರೆ.

ಗ್ಲಾಕೋಮಾ – ಅರಿವು ಮತ್ತು ಚಿಕಿತ್ಸೆ

1. ಸೂಕ್ತ ಚಿಕಿತ್ಸೆ ಇಲ್ಲದಿದ್ದರೆ ಶಾಶ್ವತ ಅಂಧತ್ವ.
2. ಇದುವರೆಗೆ ಗ್ಲಾಕೋಮಾಗೆ ಸಂಪೂರ್ಣ ಚಿಕಿತ್ಸೆ ಇಲ್ಲ. ಔಷಧಿ ಮತ್ತು ಚಿಕಿತ್ಸೆಯ ಸಹಾಯದಿಂದ ರೋಗಿಯು ಸಂಪೂರ್ಣ ದೃಷ್ಟಿಯನ್ನು ಕಳೆದುಕೊಳ್ಳುವುದನ್ನು ಹಂತಹಂತವಾಗಿ ತಡೆಯಬಹುದು. ಆದರೆ ದೃಷ್ಟಿಯನ್ನು ಮತ್ತಷ್ಟ್ಟು ಹಾಳಾಗದಂತೆ ಕಾಪಾಡಬಹುದೇ ಹೊರತು, ಸಂಪೂರ್ಣ ದೃಷ್ಟಿ ಲಭಿಸುವುದು ಸಾಧ್ಯವಿಲ್ಲ.
3. ಖಾಯಿಲೆಗೆ ವಯಸ್ಸಿನ ಮಿತಿಯಿಲ್ಲ. ಮಕ್ಕಳಿಂದ ವಯೋವೃದ್ಧರವರೆಗೆ, ಮಕ್ಕಳು ಜನನದಿಂದಲೇ ಈ ಖಾಯಿಲೆಯಿಂದ ಬಳಲುತ್ತಿರಬಹುದು. ವೃದ್ಧರು ಬಹಳ ಬೇಗ ಈ ಖಾಯಿಲೆಗೆ ತುತ್ತಾಗುವ ಸಾಧ್ಯತೆ ಹೆಚ್ಚು. ಈ ಖಾಯಿಲೆ ವಯಸ್ಕರಿಗೂ ಕಾಡುವ ಉದಾಹರಣೆಗಳು ಕಂಡು ಬಂದಿದೆ.
4. ಔಷಧಿ ಮತ್ತು ಮಾತ್ರೆಗಳನ್ನು ಬಳಸುವುದರಿಂದ ಕಣ್ಣಿನ ದ್ರವವು ಹೆಚ್ಚು ಉತ್ಪತ್ತಿಯಾಗುವುದನ್ನು ನಿಯಂತ್ರಿಸಬಹುದು.
5. ಕೆಲವು ಹಂತದಲ್ಲಿ “ಲೇಸರ್ ಶಸ್ತ್ರಚಿಕಿತ್ಸೆ” ಮತ್ತು ‘Trabeculectomy‘ ಎಂಬ ಶಸ್ತ್ರಚಿಕಿತ್ಸೆಯಿಂದ ನೇತ್ರನಾಳಗಳು ಮುಚ್ಚಿಕೊಳ್ಳುವುದನ್ನು ಸರಿಪಡಿಸಬಹುದು. ನೇತ್ರನಾಳದಲ್ಲಿ ಹರಿಯುವ ದ್ರವವನ್ನು ಬೇರೆ ನಾಳಗಳ ಮೂಲಕ ಹರಿಯುವಂತೆ ಮಾಡಿ ಕಣ್ಣಿನ ಒತ್ತಡವನ್ನು ಕಡಿಮೆ ಮಾಡಬಹುದು.

 

 

ಡಾ|| ಕಮಲಾ ಎಸ್.

ಗ್ಲಾಕೋಮ ತಜ್ಞರು

ಶಂಕರ ಕಣ್ಣಿನ ಆಸ್ಪತ್ರೆ, ಶಿವಮೊಗ್ಗ

RELATED ARTICLES
- Advertisment -
Google search engine

Most Popular

Recent Comments