ಶಿವಮೊಗ್ಗ : ಸರ್ಕಾರಿ ಯೋಜನೆಗಳ ಬಗ್ಗೆ ತಮಗೆ ಅಧಿಕಾರಿಗಳು ಮಾಹಿತಿ ನೀಡದಿರುವ ಬಗ್ಗೆ ತಾಪಂ ಸದಸ್ಯರು ಆಕ್ರೋಶ ವ್ಯಕ್ತಪಡಿಸಿದ ಘಟನೆ ಇಂದಿನ ತಾಪಂ ಸಭೆಯಲ್ಲಿ ನಡೆಯಿತು.
ಪಶುಸಂಗೋಪನಾ ಇಲಾಖೆಯ ಸಹಾಯಕ ನಿರ್ದೇಶಕ ಡಾ. ರವಿಕುಮಾರ್ ತಮ್ಮ ಇಲಾಖೆ ಯಿಂದ ಇರುವ ವಿವಿಧ ಯೋಜನೆಗಳ ಬಗ್ಗೆ ವಿವರಣೆ ನೀಡಲು ಆರಂಭಿಸಿದಾಗ ಸದಸ್ಯರಾದ ಕುಂಸಿಯ ಮಂಜುನಾಥ್, ಸುಧಾ ನಾಗರಾಜ್, ಶಕುಂತಲಾ ಮಹೇಶ್ವರಪ್ಪ, ಆಯನೂರು ಗ್ರಾಪಂ ಅಧ್ಯಕ್ಷ ಪ್ರಭಾಕರ ಮೊದಲಾದವರು ತಮಗೆ ಮಾಹಿತಿ ನೀಡದೆ ಫಲಾನುಭವಿಗಳನ್ನು ಆಯ್ಕೆಮಾಡಿ ರುವ ಬಗ್ಗೆ ಅಸಮಾಧಾನ ವ್ಯಕ್ತಪಡಿಸಿದರು.
ಈ ಸಂದರ್ಭದಲ್ಲಿ ಮಾತನಾಡಿದ ಡಾ. ರವಿಕುಮಾರ್, ಯೋಜನೆಯ ವಿವರವನ್ನು ಪ್ರತಿ ಗ್ರಾಪಂಗೆ ಕಳುಹಿಸಲಾಗುತ್ತಿದೆ. ಆದರೆ ಪ್ರತಿ ಸದಸ್ಯರಿಗೆ ಕಳುಹಿಸುವ ಪದ್ಧತಿ ಇಲ್ಲ. ಪತ್ರಿಕಾ ಪ್ರಕಟಣೆ ಮೂಲಕ ಯೋಜನೆಯ ವಿವರ ನೀಡಲಾಗುತ್ತಿದೆ. ಇದನ್ನು ಎಲ್ಲಾ ಸದಸ್ಯರೂ ಗಮನಿಸಿ ಸಹಕರಿಸಬೇಕೆಂದು ಮನವಿಮಾಡಿದರು.
ಆಯನೂರು ಆಸ್ಪತ್ರೆಯಲ್ಲಿ ಪ್ರಯೋಗಾಲಯ ಮತ್ತು ಔಷಧಿಗಳನ್ನು ನೀಡಲು ಸಿಬ್ಬಂದಿಗಳ ಕೊರತೆ ಇದೆ ಎಂದು ಅಲ್ಲಿನ ಗ್ರಾಪಂ ಅಧ್ಯಕ್ಷ ಪ್ರಭಾಕರ್ ಪ್ರಸ್ತಾಪಿಸಿದರು. ಜೊತೆಗೆ ಸಕಾಲದಲ್ಲಿ ವೈದ್ಯರು ಲಭ್ಯವಿಲ್ಲದ ಕಾರಣ, ರಾತ್ರಿ ಸಂದರ್ಭದಲ್ಲಿ ರೋಗಿಗಳನ್ನು ಶಿವಮೊಗ್ಗಕ್ಕೆ ಕಳುಹಿಸುವ ಅನಿವಾರ್ಯತೆ ಎದುರಾಗಿದೆ ಎಂದರು.
ಇದಕ್ಕೆ ಉತ್ತರಿಸಿದ ತಾಲೂಕು ವೈದ್ಯಾಧಿಕಾರಿ ಡಾ. ದಿನೇಶ್, ಆಯನೂರು ಮತ್ತು ಹಾರ‍್ನಹಳ್ಳಿ ಆಸ್ಪತ್ರೆಗೆ ವೈದ್ಯರನ್ನು ನೇಮಕಮಾಡಲಾಗಿದೆ. ರಾತ್ರಿ ಪಾಳಿಯಲ್ಲೂ ಸಹಾ ಕೆಲಸ ನಿರ್ವಹಿಸುತ್ತಿದ್ದಾರೆ. ಅವರು ಸಕಾಲದಲ್ಲಿ ಕೆಲಸ ನಿರ್ವಹಿಸದಿದ್ದಲ್ಲಿ ಆರೋಗ್ಯ ಇಲಾಖೆಗೆ ದೂರು ನೀಡಬಹುದು ಎಂದರು.
ಆಸ್ಪತ್ರೆಯಲ್ಲಿ ಯಾವುದೇ ರೀತಿಯ ಸಮಸ್ಯೆಇದ್ದರೂ ತನ್ನ ಗಮನಕ್ಕೆ ತರಬಹುದು. ಅದನ್ನು ಪರಿಹರಿಸುವ ಕೆಲಸವನ್ನು ಶೀಘ್ರದಲ್ಲಿ ಮಾಡಲಾಗುವುದು ಎಂದಾಗ, ಸದಸ್ಯೆ ಸುಧಾ ನಾಗರಾಜ್, ಆಯನೂರಲ್ಲಿ ಸಾರ್ವಜನಿಕ ಸಭೆ ಕರೆದು, ಆಸ್ಪತ್ರೆ ಸಂಬಂಧಿತ ವಿಚಾರಗಳ ಅವಲೋಕನ ಮಾಡಬೇಕೆಂದರು.
ಅಧ್ಯಕ್ಷತೆಯನ್ನು ಉಪಾಧ್ಯಕ್ಷೆ ನಿರ್ಮಲಾ ಮೋಹನ್ ವಹಿಸಿದ್ದರು. ಪ್ರಭಾರ ಕಾರ್ಯದರ್ಶಿ ಸದಾಶಿವ, ಸ್ಥಾಯಿ ಸಮಿತಿ ಅಧ್ಯಕ್ಷ ಮುನಿರತ್ನ ಉಪಸ್ಥಿತರಿದ್ದರು.