ಶಿವಮೊಗ್ಗ : ಶಿವಮೊಗ್ಗ ನಗರದಲ್ಲಿ ಮಟ್ಕಾ , ಗಾಂಜಾ ಹಾವಳಿ ಹೆಚ್ಚಾಗಿರುವುದಕ್ಕೆ ಅಧಿಕಾರಿಗಳೇ ಕಾರಣ. ಅವರು ಕೂಡ ದಂಧೆಯಲ್ಲಿ ಶಾಮೀಲು ಆಗಿರುವ ಕಾರಣಕ್ಕೆ ಅಕ್ರಮ ಚಟುವಟಿಕೆಗಳಿಗೆ ಕಡಿವಾಣವೇ ಇಲ್ಲದಂತಾಗಿದೆ ಎಂದು ಮಾಜಿ ಉಪಮುಖ್ಯಮಂತ್ರಿ ಕೆ. ಎಸ್. ಈಶ್ವರಪ್ಪ ಗಂಭೀರ ಆರೋಪ ಮಾಡಿದ್ದಾರೆ.
ಶುಕ್ರವಾರ ನಗರದ ಪತ್ರಿಕಾಭವನದಲ್ಲಿ ಕರೆದಿದ್ದ ಸುದ್ದಿಗೋಷ್ಠಿಯಲ್ಲಿ ಪತ್ರಕರ್ತರು ಕೇಳಿದ ಪ್ರಶ್ನೆಗೆ ಪ್ರತಿಕ್ರಿಯೆ ನೀಡಿದ ಅವರು, ಗಾಂಜಾ ದಂಧೆಯಲ್ಲಿ ಹಿರಿಯ ಪೊಲೀಸ್ ಅಧಿಕಾರಿಗಳೇ ಶಾಮೀಲು ಆಗಿದ್ದಾರೆ. ಅವರಿಗೆ ಷೇರು ಹೋಗುತ್ತಿದೆ. ಹಾಗಾಗಿಯೇ ಶಾಲಾ ಕಾಲೇಜು ಹತ್ತಿರವೇ ಇವುಗಳ ಮಾರಾಟಕ್ಕೆ ಮುಕ್ತ ಅವಕಾಶವಿದೆ. ಉನ್ನತ ಮಟ್ಟದ ಪೊಲೀಸ್ ಅಧಿಕಾರಿಗಳೇ ಇದರಲ್ಲಿ ಶಾಮೀಲಾಗಿದ್ದಾರೆಂದು ಕಿಡಿಕಾರಿದರು.
ಶಾಲೆಯ ಮಕ್ಕಳಿಗೆ ಇದರಿಂದ ಅನ್ಯಾಯವಾಗುತ್ತಿದೆ. ಅಧಿಕಾರಿಗಳು ತಿನ್ನುವುದಿದ್ದರೆ ಬೇರೆ ಕಡೆ ತಿನ್ನಲಿ. ಯಾರೂ ಏನೂ ಸಾಚಾರಲ್ಲ. ಆದರೆ ಶಿವಮೊಗ್ಗ ನಗರದ ನೆಮ್ಮದಿ ಹಾಳು ಮಾಡುವರ ಜತೆಗೆ ಇಂತಹ ಶಾಮೀಲು ಬೇಡ. ನಗರವನ್ನು ನೆಮ್ಮದಿ ಯಿಂದ ಇರುವಂತೆ ನೋಡಿಕೊಳ್ಳಬೇಕಿದೆ. ಇತ್ತ ಗಮನ ಹರಿಸಲಿ ಎಂದು ಎಚ್ಚರಿಸಿದರು.
ಪತ್ರಿಕಾಗೋಷ್ಠಿಯಲ್ಲಿ ರಾಷ್ಟ್ರಭಕ್ತ ಬಳಗ ಮುಖಂಡರಾದ ಶಂಕರ ಗನ್ನಿ, ಮಹಾಲಿಂಗ ಶಾಸ್ತ್ರಿ, ಭೂಪಾಲ್, ಬಾಲು, ಮೋಹನ್, ವಿಶ್ವಾಸ್ ಮುಂತಾದವರು ಉಪಸ್ಥಿತರಿದ್ದರು.