ಶಿವಮೊಗ್ಗ : ಜಿಲ್ಲೆಯ ವಿವಿಧ ನಗರಸ್ಥಳೀಯ ಸಂಸ್ಥೆಗಳಲ್ಲಿ ಕಾರ್ಯ ನಿರ್ವಹಿಸುತ್ತಿರುವ ೨೭ಮಂದಿ ಖಾಯಂ ಪೌರಕಾರ್ಮಿಕರಿಗೆ ಸಿಂಗಾಪುರ ಪ್ರವಾಸ ಕೈಗೊಳ್ಳುವ ಭಾಗ್ಯ ಒದಗಿ ಬಂದಿದೆ.
ಇಂದು ಜಿಲ್ಲಾಧಿಕಾರಿ ಅವರ ಅಧ್ಯಕ್ಷತೆಯಲ್ಲಿ ಜಿಲ್ಲಾಧಿಕಾರಿ ಕಚೇರಿ ಸಭಾಂಗಣದಲ್ಲಿ ನಡೆದ ಜಿಲ್ಲಾಮಟ್ಟದ ಮ್ಯಾನ್ಯುವೆಲ್ ಸ್ಕಾವೆಂಜರ‍್ಸ್ ಜಾಗೃತಿ ಹಾಗೂ ಉಸ್ತುವಾರಿ ಸಮಿತಿ ಸಭೆಯಲ್ಲಿ ಈ ವಿಷಯ ಪ್ರಸ್ತಾಪಿಸಿದ ಜಿಲ್ಲಾಧಿಕಾರಿ ಡಾ.ಎಂ.ಲೋಕೇಶ್, ಸಿಂಗಾಪುರ ಪ್ರವಾಸ ಕೈಗೊಳ್ಳುವ ಖಾಯಂ ಪೌರಕಾರ್ಮಿಕರಿಗೆ ಪಾಸ್‌ಪೋರ್ಟ್ ಇತ್ಯಾದಿ ಅಗತ್ಯ ದಾಖಲೆಗಳನ್ನು ಪಡೆಯಲು ಸಹಕರಿಸುವಂತೆ ಸೂಚನೆ ನೀಡಿದರು.
ಸಿಂಗಾಪುರದಲ್ಲಿ ಪೌರಕಾರ್ಮಿಕರ ಕಾರ್ಯನಿರ್ವಹಣೆ, ಸ್ವಚ್ಚತೆ ಇತ್ಯಾದಿಗಳ ಕುರಿತು ನೇರವಾಗಿ ಕಂಡುಕೊಳ್ಳಲು ಸರ್ಕಾರ ಇದೇ ಮೊದಲ ಬಾರಿಗೆ ಪೌರಕಾರ್ಮಿಕರನ್ನು ಸಿಂಗಾಪುರ ಪ್ರವಾಸಕ್ಕೆ ಕಳುಹಿಸುತ್ತಿದ್ದು, ಈಗಾಗಲೇ ಪ್ರಥಮ ತಂಡ ಭೇಟಿ ನೀಡಿದೆ ಮರಳಿ ಬಂದಿದೆ. ಇಂತಹ ಪ್ರವಾಸಗಳ ಮೂಲಕ ಪೌರಕಾರ್ಮಿಕರಲ್ಲಿ ಹೊಸ ತಿಳುವಳಿಕೆ ಮತ್ತು ಅರಿವು ಮೂಡಲು ಸಾಧ್ಯವಾಗಲಿದೆ ಎಂದು ಹೇಳಿದರು.
ಮಹಾನಗರ ಪಾಲಿಕೆ ವ್ಯಾಪ್ತಿಯಿಂದ ೬ಮಂದಿ, ನಗರಸಭಾ ವ್ಯಾಪ್ತಿಯ ತಲಾ ೪ಮಂದಿ, ಪುರಸಭೆ ವ್ಯಾಪ್ತಿಯಿಂದ ೩ಮಂದಿ ಹಾಗೂ ಪಟ್ಟಣ ಪಂಚಾಯತ್ ವ್ಯಾಪ್ತಿಯ ತಲಾ ಇಬ್ಬರನ್ನು ಸಿಂಗಾಪುರ ಪ್ರವಾಸಕ್ಕಾಗಿ ಕಳುಹಿಸಲಾಗುವುದು. ಅವರಿಗೆ ತತ್ಕಾಲ್ ಮೂಲಕ ಪಾಸ್‌ಪೋರ್ಟ್ ಪಡೆಯಲು ಕ್ರಮಕೈಗೊಳ್ಳಲಾಗಿದೆ ಎಂದು ನಗರಾಭಿವೃದ್ದಿ ಕೋಶದ ಯೋಜನಾ ನಿರ್ದೇಶಕರು ಮಾಹಿತಿ ನೀಡಿದರು.
ಅಲೆಮಾರಿ ಜನಾಂಗದವರ ಆರೋಗ್ಯ ತಪಾಸಣೆ ಮಾಡಿಸುವ ನಿಟ್ಟಿನಲ್ಲಿ ಕ್ರಮಕೈಗೊಳ್ಳಬೇಕೆಂದು ಜಿಲ್ಲಾಧಿಕಾರಿಗಳು ಇದೇ ಸಂದರ್ಭದಲ್ಲಿ ತಿಳಿಸಿದರು. ಅಲ್ಲದೇ, ಅವರ ಮೂಲಭೂತ ಸೌಕರ್ಯಗಳನ್ನು ಒದಗಿಸುವ ನಿಟ್ಟಿನಲ್ಲಿ ಗಮನಹರಿಸಬೇಕೆಂದರು.
ಮೂಲಸೌಲಭ್ಯ ಒದಗಿಸಿ: ಪೌರಕಾರ್ಮಿಕರು ವಾಸಿಸುವ ವಾರ್ಡ್‌ಗಳಲ್ಲಿ ರಸ್ತೆ, ಶೌಚಾಲಯ, ಕುಡಿಯುವ ನೀರು ಪೂರೈಕೆಯಂತಹ ಮೂಲ ಸೌಲಭ್ಯ ಗಳನ್ನು ಒದಗಿಸಬೇಕು. ಗೃಹಭಾಗ್ಯ ಯೋಜನೆಯಡಿ ಖಾಯಂ ಪೌರಕಾಮಿ ಕರಿಗೆ ಮನೆ ಒದಗಿಸುವ ಕಾರ್ಯವನ್ನು ತ್ವರಿತಗೊಳಿಸಬೇಕು ಎಂದರು.
ಮಹಾನಗರ ಪಾಲಿಕೆ ಆಯುಕ್ತ ಮುಲೈ ಮುಹಿಲನ್ ಸೇರಿದಂತೆ ವಿವಿಧ ಅಧಿಕಾರಿಗಳು ಉಪಸ್ಥಿತರಿದ್ದರು.