ಶಿವಮೊಗ್ಗ: ಭವಿಷ್ಯನಿಧಿ ಪೆನ್‌ಶನ್ ಹೆಚ್ಚಿಸುವಂತೆ ಒತ್ತಾಯಿಸಿ ವಿಐಎಸ್‌ಎಲ್ ನಿವೃತ್ತ ಕಾರ್ಮಿಕರ ಕಲ್ಯಾಣ ಕೇಂದ್ರದ ನೇತೃತ್ವದಲ್ಲಿ ಎಂಪಿಎಂ, ಕೆಎಂಎಫ್, ಓಎನ್‌ಜಿಸಿ ಸೇರಿದಂತೆ ವಿವಿಧ ಸಂಘಟನೆಗಳ ಕಾರ್ಮಿಕರು ಇಲ್ಲಿನ ಭವಿಷ್ಯನಿಧಿ ಪ್ರಾದೇಶಿಕ ಕಚೇರಿ ಮುಂದೆ ಇಂದು ಪ್ರತಿಭಟನೆ ನಡೆಸಿದರು.
ಈ ಸಂದರ್ಭದಲ್ಲಿ ಸಂಘದ ಅಧ್ಯಕ್ಷ ನಾಗಭೂಷಣ್ ಮಾತನಾಡಿ, ಸರ್ವೋಚ್ಚ ನ್ಯಾಯಾಲಯವು ಮಹತ್ವದ ತೀರ್ಪು ನೀಡಿ, ಭವಿಷ್ಯನಿಧಿ ಪೆನ್‌ಶನ್‌ದಾರರಿಗೆ ಅವರ ಪೂರ್ಣ ವೇತನದ ಮೇಲೆ ಪೆನ್‌ಶನ್ ನಿಗದಿ ಮಾಡಿ ಹೆಚ್ಚುವರಿ ಪೆನ್‌ಶನ್ ಬಾಕಿಯನ್ನು ನೀಡಬೇಕೆಂದು ಆದೇಶಿಸಿದೆ.
ಈ ತೀರ್ಪಿನ ಬಹುಪಾಲು ಪೆನ್‌ಶನ್ ದಾರರಿಗೆ ಕನಿಷ್ಠ ೩ ರಿಂದ ೩೦ ಸಾವಿರದವರೆಗೂ ಪೆನ್‌ಶನ್ ನಿಗದಿಯಾಗುವ ಸಾಧ್ಯತೆ ಇದೆ. ಪೆನ್‌ಶನ್‌ದಾರರು ೧೯೯೫ರ ನ.೧೬ರಿಂದ ತಮ್ಮ ನಿವೃತ್ತಿ ದಿನಾಂಕದವರೆಗೆ ಹೆಚ್ಚುವರಿ ವಂತಿಕೆಯನ್ನು ಬಡ್ಡಿ ಸಮೇತ ಪೆನ್‌ಶನ್ ಫಂಡ್‌ಗೆ ಪಾವತಿ ಮಾಡಲು ಸಿದ್ಧರಿದ್ದಾರೆ. ಆದರೆ ಭವಿಷ್ಯ ನಿಧಿ ಕಮೀಷನರ್ ಇದಕ್ಕೆ ವಿರುದ್ಧವಾಗಿ ನಡೆದುಕೊಂಡಿದ್ದಾರೆ ಎಂದರು.
ನ್ಯಾಯಾಲಯದ ಈ ಆದೇಶ ಎಲ್ಲಾ ಪೆನ್‌ಶನ್‌ದಾರರಿಗೆ ಅನ್ವಯವಾಗುವುದೆಂದು ಭವಿಷ್ಯನಿಧಿ ಕೇಂದ್ರ ಕಚೇರಿಯು ಕಳೆದ ಮಾರ್ಚ್ ೨೩ರಂದು ಸುತ್ತೋಲೆಯಲ್ಲಿ ತಿಳಿಸಿದೆ. ಆದರೆ ಕಳೆದ ಮೇ ೩೧ರಂದು ಎಲ್ಲಾ ರೀಜನಲ್ ಕಚೇರಿಗೆ ಮತ್ತೊಂದು ಸತ್ತೋಲೆ ಕಳಿಸಿ ಇದು ವಿನಾಯತಿ ಹೊಂದಿದ ಕಾರ್ಖಾನೆಗಳಿಗೆ (ಎಕ್ಸಮ್‌ಟೆಡ್ ಎಸ್ಟಬ್ಲಿಷ್‌ಮೆಂಟ್) ಅನ್ವಯವಾಗುವುದಿಲ್ಲ ಎಂದು ತಿಳಿಸಿದೆ. ಆದರೆ ನ್ಯಾಯಾಲಯದ ಆದೇಶದಲ್ಲಿ ಈ ರೀತಿ ಯಾವುದೇ ಉಲ್ಲೇಖ ಇಲ್ಲ. ಇದರಿಂದ ದೇಶಾದ್ಯಂತ ಸೈಲ್ ಪೆನ್‌ಶನ್‌ದಾರರೂ ಸೇರಿದಂತೆ ೧೦ ಲಕ್ಷ ಪೆನ್‌ಶನ್‌ದಾರರಿಗೆ ಅನ್ಯಾಯವಾಗುತ್ತಿದೆ. ಕೂಡಲೇ ಇದನ್ನು ಸರಿಪಡಿಸಬೇಕು ಎಂದು ಒತ್ತಾಯಿಸಿದರು.
ನಗರಸಭೆ ಕಾರ್ಯಾಲಯದ ಮುಂಭಾಗ ದಿಂದ ದುರ್ಗಿಗುಡಿ ಮುಖ್ಯ ರಸ್ತೆಯ ಭವಿಷ್ಯ ನಿಧಿ ಕಚೇರಿವರೆಗೆ ಪ್ರತಿಭಟನಾ ಮೆರವಣಿಗೆ ನಡೆಸಿ ಬಳಿಕ ಮನವಿ ಸಲ್ಲಿಸಲಾಯಿತು.
ಈ ಸಂದರ್ಭದಲ್ಲಿ ಮಾಜಿ ಶಾಸಕ ಕೆ.ಜಿ.ಕುಮಾರಸ್ವಾಮಿ, ಸಂಘದ ಉಪಾಧ್ಯಕ್ಷ ನರಸಿಂಹಯ್ಯ, ಕೆಎಂಎಫ್‌ನ ಮಹೇಶ್ವರಪ್ಪ, ಚೂಡಾನಾಯ್ಕ್, ಕಾರ್ಮಿಕರ ಕಲ್ಯಾಣ ಕೇಂದ್ರದ ಪ್ರಮುಖರಾದ ಹನುಮಂತರಾವ್, ಬಸವರಾಜ, ನಂಜಪ್ಪ , ನರಸಿಂಹಾಚಾರ್, ರಾಮಲಿಂಗಯ್ಯ ಮತ್ತಿತರರು ನೇತೃತ್ವ ವಹಿಸಿದ್ದರು.