ಪತ್ರಿಕಾಗೋಷ್ಟಿಯಲ್ಲಿ ಕೆಪಿಸಿಸಿ ಪ್ರಧಾನ ಕಾರ್ಯದರ್ಶಿ ಎನ್.ರಮೇಶ್ ಅಭಿಪ್ರಾಯ
ಶಿವಮೊಗ್ಗ : ರಾಹುಲ್ ಗಾಂಧಿಯವರ ನೇತೃತ್ವದಲ್ಲಿ ಉತ್ತಮ ಸಾಧನೆ ಮಾಡಲಾಗಿದೆ. ಜನರು ಬಿಜೆಪಿಯ ದ್ವೇಷದ ರಾಜಕಾರಣವನ್ನು ತಿರಸ್ಕರಿಸಿ, ಪ್ರೀತಿ ವಿಶ್ವಾಸದ ಕಾಂಗ್ರೆಸ್ ಪಕ್ಷವನ್ನು ಬೆಂಬಲಿಸಿದ್ದಾರೆ ಎಂದು ಕೆಪಿಸಿಸಿ ಪ್ರಧಾನ ಕಾರ್ಯದರ್ಶಿ ಎನ್.ರಮೇಶ್ ಹೇಳಿದರು.
ಬುಧವಾರ ಪತ್ರಿಕಾಭವನದಲ್ಲಿ ನಡೆದ ಪತ್ರಿಕಾಗೋಷ್ಠಿಯಲ್ಲಿ ಮಾತನಾಡಿದ ಅವರು, ರಾಹುಲ್ ಗಾಂಧಿಯವರು ಜೊಡೋ ಯಾತ್ರೆಯ ಮೂಲಕ ಸುಮಾರು 4800 ಕಿ.ಮೀ ಪಾದಯಾತ್ರೆ ಮಾಡಿ ಜನರ ಪ್ರೀತಿ, ವಿಶ್ವಾಸವನ್ನು ಗಳಿಸಿದ್ದಾರೆ. ಜನರಿಗೆ ದೇಶದಲ್ಲಿ ಧರ್ಮ, ಜಾತಿ, ದೇವರ ಹೆಸರಿನಲ್ಲಿ ನಡೆಯುತ್ತಿರುವ ರಾಜಕಾರಣದ ಬಗ್ಗೆ ಮನವರಿಕೆ ಮಾಡಿಕೊಟ್ಟಿದ್ದಾರೆ ಎಂದರು.
ದೇಶದ ಜನತೆ ಬಿಜೆಪಿಯನ್ನು ತಾತ್ವಿಕವಾಗಿ ತಿರಸ್ಕರಿಸಿದ್ದು, ಬಿಜೆಪಿ ಹಿನ್ನಡೆ ಸ್ಪಷ್ಟವಾಗಿದೆ. ಲೋಕಸಭೆ ಚುನಾವಣೆಯಲ್ಲಿ ಜಿಲ್ಲೆಯ ಜನತೆ ನೀಡಿದ ತೀರ್ಪಿಗೆ ತಲೆಬಾಗುತ್ತೇವೆ. ಪಕ್ಷದ ಮೇಲೆ ಅಭಿಮಾನವಿಟ್ಟು ಐದು ಲಕ್ಷಕ್ಕೂ ಹೆಚ್ಚು ಮತ ನೀಡಿದ ಮತದಾರರಿಗೆ ಅಭಿನಂದಿಸಿದ ಅವರು, ಮತದಾರರು ಈ ಬಾರಿಯೂ ಬಿಜೆಪಿ ಪರವಾಗಿ ಒಲವು ತೋರಿದ್ದಾರೆ. ಸಂಸದ ರಾಘವೇಂದ್ರ ಅವರಿಗೂ ಅಭಿನಂದಿಸುವುದಾಗಿ ಹೇಳಿದರು.
ಶಿಕಾರಿಪುರದ ನಾಗರಾಜ ಗೌಡ ಮಾತನಾಡಿ, ಐದು ಲಕ್ಷ ಮತ ಕಡಿಮೆ ಅಲ್ಲ. ಜನರು ಕಾಂಗ್ರೆಸ್‍ಗೆ ಹೆಚ್ಚಿನ ಮತ ನೀಡಿದ್ದಾರೆ. ಜಾತಿ ಅಭಿಮಾನದಿಂದ ಜನ ಹೊರ ಬಂದಿಲ್ಲ ಎನಿಸುತ್ತಿದೆ.
ಕಳೆದ ವಿಧಾನಸಭಾ ಚುನಾವಣೆ ಬಗ್ಗೆಯ ಪತ್ರಕರ್ತರ ಪ್ರಶ್ನೆಗೆ ಉತ್ತರಿಸಿದ ಅವರು, ಯಡಿಯೂರಪ್ಪನವರ ವಿರುದ್ಧ ಗೋಣಿ ಮಾಲತೇಶ್ ಹೆಚ್ಚಿನ ವೋಟ್ ಪಡೆದಿದ್ದರು. ಹಾಗಾಗಿ ಕಳೆದ ವಿಧಾನ ಸಭಾ ಚುನಾವಣೆಯಲ್ಲಿ ಅವರು ಗೆಲ್ಲುವ ನಿರೀಕ್ಷೆಯಲ್ಲಿ ಟಿಕೆಟ್ ನೀಡಲಾಗಿತ್ತು. ನನಗೆ ಟಿಕೆಟ್ ಕೈತಪ್ಪಿದ್ದರಿಂದಾಗಿ ಸ್ವತಂತ್ರ ಸ್ಪರ್ಧೆ ಮಾಡಬೇಕಾಯಿತು. ಆದರೆ ಈಗ ಕಾಂಗ್ರೆಸ್‍ನಲ್ಲಿಯೇ ಇದ್ದು ಕೆಲಸ ಮಾಡುತ್ತಿರುವುದಾಗಿ ಸ್ಪಷ್ಟವಾಗಿ ತಿಳಿಸಿದರು.
ಪತ್ರಿಕಾಗೋಷ್ಠಿಯಲ್ಲಿ ಸಿ.ಎಸ್.ಚಂದ್ರಭೂಪಾಲ್, ಮೂರ್ತಿ, ಶಿ.ಜು.ಪಾಶ, ಜಿ.ಪದ್ಮನಾಭ್, ಎಸ್.ಎ.ಬಾಬು, ಮುನ್ನಾ, ಧೀರರಾಜ್ ಹೊನ್ನವಿಲೆ, ಆಸೀಸ್ ಮಸೂರ್, ಮೂರ್ತಿ ಇದ್ದರು.