ಸುದ್ದಿಗೋಷ್ಠಿಯಲ್ಲಿ ಕರ್ನಾಟಕ ರಾಜ್ಯ ರೈತ ಸಂಘದ ರಾಜ್ಯಾಧ್ಯಕ್ಷ ಹೆಚ್.ಆರ್.ಬಸವರಾಜಪ್ಪ ಹೇಳಿಕೆ
ಶಿವಮೊಗ್ಗ: ಭೀಕರ ಬರಗಾಲದ ಸಮಯದಲ್ಲಿ ರಾಜ್ಯ ಸರಕಾರವು ಕೇಂದ್ರ ನೀಡಿದ ಬರಪರಿಹಾರವನ್ನು ನೀಡಿ ಕೈತೊಳೆದುಕೊಂಡಿದೆ. ಹೆಕ್ಟೇರ್ ಒಂದಕ್ಕೆ ೨೫ ಸಾವಿರ ರೂ. ವರೆಗೂ ಪರಿಹಾರ ನೀಡಬೇಕೆಂದು ಮುಖ್ಯಮಂತ್ರಿ ಸಿದ್ದರಾಮಯ್ಯನವರಿಗೆ ಬಹಿರಂಗ ಪತ್ರ ಬರೆದು ಒತ್ತಾಯಿಸಿದ್ದೇವೆ ಎಂದು ಕರ್ನಾಟಕ ರಾಜ್ಯ ರೈತ ಸಂಘದ ರಾಜ್ಯಾಧ್ಯಕ್ಷ ಹೆಚ್.ಆರ್.ಬಸವರಾಜಪ್ಪ ಹೇಳಿದರು.
ಶುಕ್ರವಾರ ಪತ್ರಿಕಾಗೋಷ್ಠಿಯನ್ನುದ್ದೇಶಿಸಿ ಮಾತನಾಡಿದ ಅವರು, ರಾಜ್ಯದಲ್ಲಿ ೨೨೪ ತಾಲ್ಲೂಕುಗಳನ್ನು ಬರ ಪೀಡಿತವೆಂದು ಘೋಷಣೆ ಮಾಡಲಾಗಿದೆ. ಹಿಂದೆಂದೂ ಕಂಡರಿಯದ ಬರಗಾಲ ಈ ವರ್ಷ ಕಂಡಿದೆ. ರೈತರಿಗೆ ಬಿತ್ತನೆ ಸಮಯವಾದ್ದರಿಂದ ಬೀಳು ಬಿಟ್ಟ ಮತ್ತು ಪಸಲು ಹಾಕಿ ತೆಗೆದ ಭೂಮಿಗೂ ಸೇರಿದಂತೆ ಬೀಜ, ರಸಗೊಬ್ಬರ ಖರೀದಿಸಲು ತಕ್ಷಣವೇ ಪರಿಹಾರ ಹಣವನ್ನು ರೈತರ ಖಾತೆಗೆ ಜಮಾ ಮಾಡಬೇಕು ಎಂದು ಈ ಪತ್ರದಲ್ಲಿ ಒತ್ತಾಯಿಸಿದ್ದೇವೆ ಎಂದರು.
ಕೆಲವು ರೈತರಿಗೆ ಬೆಳೆ ವಿಮೆ ಹಣ ಕೂಡ ಇನ್ನೂ ಸಿಕ್ಕಿಲ್ಲ. ಆದ್ದರಿಂದ ಪ್ರತಿಯೊಬ್ಬರಿಗೂ ಬೆಳೆ ವಿಮೆ ಹಣ ತಲುಪುವಂತಾಗಬೇಕು ಮತ್ತು ಜಿಲ್ಲಾಧಿಕಾರಿ ಕಂಪನಿಯವರೊಂದಿಗೆ ಮಾತನಾಡಿ ರೈತರಿಗೆ ಹಣ ತಲುಪುವಂತೆ ಮಾಡಲು ಕ್ರಮ ಕೈಗೊಳ್ಳಬೇಕು. ಐ.ಪಿ.ಸೆಟ್‌ಗಳಿಗೆ ರೈತರೇ ಸ್ವಯಂ ವೆಚ್ಚ ಯೋಜನೆಯಡಿ ವಿದ್ಯುತ್ ಸಂಪರ್ಕ ಪಡೆಯುವ ಆದೇಶವನ್ನು ರದ್ದುಮಾಡಬೇಕು. ಬಿತ್ತನೆ ಬೀಜ ಮತ್ತು ರಸಗೊಬ್ಬರವನ್ನು ಹೆಚ್ಚುವರಿ ದರಕ್ಕೆ ಮಾರಾಟ ಮಾಡುತ್ತಿರುವುದು ಕಂಡುಬರುತ್ತಿದೆ. ಪ್ರತಿಯೊಂದು ಅಂಗಡಿಯ ಮುಂಭಾಗದಲ್ಲಿ ದರಪಟ್ಟಿ, ದಾಸ್ತಾನು ವಿವರದ ನಾಮಪಲಕ ಹಾಕಿಸಬೇಕು ಮತ್ತು ಬೀಜ ರಸಗೊಬ್ಬರ ಕೊರತೆಯಾಗದಂತೆ ಕ್ರಮ ವಹಿಸಬೇಕು. ಬಗರ್ ಹುಕ್ಕುಂ ರೈತರಿಗೆ ಹಕ್ಕುಂ ಸಾಗುವಾಳಿ ಮಾಡಿರುವ ರೈತರನ್ನು ಯಾವುದೇ ಕಾರಣಕ್ಕೂ ಒಕ್ಕಲೆಬ್ಬಿಸಬಾರದು ಎಂದು ಮುಖ್ಯಮಂತ್ರಿಯವರಿಗೆ ಬರೆದ ಪತ್ರದಲ್ಲಿ ಒತ್ತಾಯಿಸಿದ್ದೇವೆ ಎಂದು ಮಾಹಿತಿ ನೀಡಿದರು.
ಮೇಲಿನ ನಮ್ಮ ಎಲ್ಲಾ ಬೇಡಿಕೆಗಳ ಈಡೇರಿಕೆಗೆ ತಿಂಗಳ ಗಡುವನ್ನು ನೀಡುತ್ತೇವೆ. ಸ್ಪಂದಿಸದಿದ್ದಲ್ಲಿ ರಾಜ್ಯಾದ್ಯಂತ ತೀವ್ರತರದ ಹೋರಾಟವನ್ನು ಹಮ್ಮಿಕೊಳ್ಳುತ್ತೇವೆ ಎಂದು ತಿಳಿಸಿದರು.
ಪತ್ರಿಕಾಗೋಷ್ಠಿಯಲ್ಲಿ ನಗರ ಅಧ್ಯಕ್ಷ ಕಸಟ್ಟಿ ರುದ್ರೇಶ್, ಜಿಲ್ಲಾ ಪ್ರಧಾನ ಕಾರ್ಯದರ್ಶಿ ಇ.ಬಿ.ಜಗದೀಶ್, ಜಿಲ್ಲಾಧ್ಯಕ್ಷ ಕೆ.ರಾಘವೇಂದ್ರ, ತಾಲ್ಲೂಕು ಪ್ರಧಾನ ಕಾರ್ಯದರ್ಶಿ ಜ್ಞಾನೇಶ್, ತಾಲ್ಲೂಕು ಅಧ್ಯಕ್ಷರಾದ ಜಿ.ಎನ್.ಪಂಚಾಕ್ಷರಿ ಮತ್ತು ಸಿ.ಚಂದ್ರಪ್ಪ ಉಪಸ್ಥಿತರಿದ್ದರು.