ಶಿವಮೊಗ್ಗ : ನಾಡಿನ ಹೆಸರಾಂತ ಸಾಹಿತಿಗಳು, ಉಪನ್ಯಾಸಕರು, ಶೈಕ್ಷಣಿಕ ತಜ್ಞರು, ಜಾನಪದ ವಿದ್ವಾಂಸರಾದ ದಾವಣಗೆರೆಯ ಡಾ. ಎಂ. ಜಿ. ಈಶ್ವರಪ್ಪ ಅವರ ಅಗಲಿಕೆಗೆ ಭಾವಪೂರ್ಣ ಶ್ರದ್ಧಾಂಜಲಿ ಸಲ್ಲಿಸುತ್ತೇವೆ ಎಂದು ಜಿಲ್ಲಾ ಕನ್ನಡ ಸಾಹಿತ್ಯ ಪರಿಷತ್ತು ಅಧ್ಯಕ್ಷರಾದ ಡಿ. ಮಂಜುನಾಥ ಸಂತಾಪ ಸೂಚಕ ಸಭೆಯಲ್ಲಿ ಮಾತನಾಡಿದರು.
ಜೂನ್ 2 ರಂದು ಭಾನುವಾರ ಸಂಜೆ ಶಿವಮೊಗ್ಗ ಸಾಹಿತ್ಯ ಗ್ರಾಮದಲ್ಲಿ ನಡೆದ ಶ್ರದ್ಧಾಂಜಲಿ ಸಭೆಯ ಅಧ್ಯಕ್ಷತೆ ವಹಿಸಿ ಮಾತನಾಡಿದರು.
ಶಿವಮೊಗ್ಗ ತಾಲ್ಲೂಕು ಹಾಡೋನಹಳ್ಳಿ ಅವರ ಜನ್ಮಭೂಮಿ. ಸಹ್ಯಾದ್ರಿ ಕಾಲೇಜಿನಲ್ಲಿ ಪದವಿ ಪಡೆದರು. ನಂತರ ಮೈಸೂರು ವಿಶ್ವವಿದ್ಯಾನಿಲಯದಲ್ಲಿ ಉನ್ನತ ಶಿಕ್ಷಣ ಪಡೆದರು. ಶಿವಮೊಗ್ಗ ತಾಲ್ಲೂಕು ಕನ್ನಡ ಸಾಹಿತ್ಯ ಸಮ್ಮೇಳನ ಹೊಳಲೂರಿನಲ್ಲಿ ನಮ್ಮ ನೇತೃತ್ವದಲ್ಲಿ ನಡೆದಾಗ ಅವರು ಸಮ್ಮೇಳನ ಸರ್ವಾಧ್ಯಕ್ಷರಾಗಿದ್ದ ಸಂದರ್ಭ ನೆನಪು ಮಾಡಿಕೊಂಡು ಅವರ ಸಂಪರ್ಕ, ಒಡನಾಟವನ್ನು ಮೆಲುಕು ಹಾಕಿದರು.
ಸಾಹಿತಿಗಳಾದ ಬಿ. ಚಂದ್ರೇಗೌಡರು ಮಾತನಾಡಿ, ಅವರ ಸಾಮಾಜಿಕ ನಡೆವಳಿಕೆ, ಸಾಹಿತ್ಯ, ನಡೆ, ನುಡಿ ಗೌರವಯುತ ವಾಗಿತ್ತು ಎಂದರು. ಆರ್. ರತ್ನಯ್ಯ ಅವರು ಉತ್ತಮ ಗೆಳೆಯರನ್ನು ಕಳೆದುಕೊಂಡ ದುಃಖವಾಗುತ್ತಿದೆ ಎಂದರು. ಜಿಲ್ಲಾ ಕನ್ನಡ ಸಾಹಿತ್ಯ ಸಾಂಸ್ಕೃತಿಕ ವೇದಿಕೆ ಕೋಶಾಧ್ಯಕ್ಷರಾದ ಯು. ಮಧುಸೂದನ್ ಐತಾಳ್ ಅವರ ಸರಳತೆ, ಹೃದಯವಂತಿಕೆ, ನೈಜತೆಯನ್ನು ಮೆಚ್ಚಿ ಮಾತನಾಡಿದರು.
ಎಲ್ಲರೂ ಎದ್ದುನಿಂತು ಮೌನ ಆಚರಿಸಿ ಸಂತಾಪ ಸೂಚಿಸಲಾಯಿತು. ವೇದಿಕೆಯಲ್ಲಿ ಕಸಾಪ ಜಿಲ್ಲಾ ಕೋಶಾಧ್ಯಕ್ಷರಾದ ಎಂ. ನವೀನ್ ಕುಮಾರ್, ತಾಲ್ಲೂಕು ಕಸಾಪ ಅಧ್ಯಕ್ಷರಾದ ಮಹಾದೇವಿ, ಶಿಕಾರಿಪುರ ಎಚ್. ಎಸ್. ರಘು, ಸಾಗರ ವಿ. ಟಿ. ಸ್ವಾಮಿ ಸೇರಿದಂತೆ ಹಲವರು ಭಾಗವಹಿಸಿದ್ದರು.