ಬಾಗಲಕೋಟೆ: ಬೆಳಗಾವಿಯಲ್ಲಿ ಮೂರು ನದಿಗಳ ಆರ್ಭಟಕ್ಕೆ ಅಡಿಬಟ್ಟಿ ಗ್ರಾಮದ 30ಕ್ಕೂ ಹೆಚ್ಚು ಮನೆಗಳು ಸಂಪೂರ್ಣ ಜಲಾವೃತವಾಗಿದೆ. ಇದೀಗ ಈ 30 ಮನೆಯವರು ಕಾಳಜಿ ಕೇಂದ್ರದಲ್ಲಿ ಆಶ್ರಯ ಪಡೆಯುತ್ತಿದ್ದಾರೆ.
ಮಾರ್ಕಂಡೇಯ, ಹಿರಣ್ಯಕೇಶಿ, ಕೃಷ್ಣಾ ನದಿಯ ಅಬ್ಬರಕ್ಕೆ ನದಿಪಾತ್ರದಲ್ಲಿ ಬೆಳೆದಿದ್ದ ಕಬ್ಬು, ಇತರೆ ಬೆಳೆಗಳು ಸಂಪೂರ್ಣ ನಾಶವಾಗಿವೆ. ಅಥಣಿ ತಾಲೂಕಿನ ಹುಲಗಬಾಳಿ ಗ್ರಾಮದಲ್ಲಿ 20 ಕುಟುಂಬಗಳು ಬೀದಿಗೆ ಬಂದಿವೆ.
ಘಟಪ್ರಭಾ ನದಿ ನೀರಿನ ಪ್ರವಾಹದಿಂದ ಜಿಲ್ಲೆಯ ಗೋಕಾಕ್ ತಾಲೂಕಿನ ಮೆಳವಂಕಿ ಒಂದೇ ಗ್ರಾಮದಲ್ಲಿ 800ಕ್ಕೂ ಹೆಚ್ಚು ಮನೆಗಳು ಜಲಾವೃತಗೊಂಡು ಅವಾಂತರ ಸೃಷ್ಟಿಯಾಗಿದೆ. ಮನೆಗಳ ಅರ್ಧದಷ್ಟು ಭಾಗ ನೀರಲ್ಲಿ ಮುಳುಗಿದೆ. ನಡು ರಸ್ತೆಯಲ್ಲಿಯೇ ಸೊಂಟದ ಮಟ್ಟದ ನೀರಲ್ಲಿ ಜನರು ಓಡಾಡುತ್ತಿದ್ದಾರೆ.
ಬಾಗಲಕೋಟೆಯಲ್ಲೂ ಘಟಪ್ರಭಾ ನದಿಯ ಅಬ್ಬರದಿಂದ ಮಿರ್ಜಿ ಗ್ರಾಮದ ಸುಮಾರು 70 ಮನೆಗಳು ಸಂಪೂರ್ಣ ಮುಳುಗಡೆಯಾಗಿವೆ.