ಶಿವಮೊಗ್ಗ : ಸಾರ್ವಜನಿಕರ ಕೆಲಸ ಕಾರ್ಯಗಳನ್ನು ಅನಗತ್ಯವಾಗಿ ವಿಳಂಬವಾಗಿ ಮಾಡದೆ ನಿಗಧಿತ ಸಮಯದ ಒಳಗಾಗಿ ಪೂರ್ಣಗೊಳಿಸಬೇಕು ಎಂದು ನೂತನ ಜಿಲ್ಲಾಧಿಕಾರಿ ಕೆ.ಎ.ದಯಾನಂದ ಅವರು ಎಲ್ಲಾ ಇಲಾಖಾ ಅಧಿಕಾರಿಗಳಿಗೆ ಸೂಚನೆ ನೀಡಿದರು.
ಇಂದು ಜಿಲ್ಲಾಧಿಕಾರಿ ಕಚೇರಿ ಸಭಾಂಗಣದಲ್ಲಿ ಎಲ್ಲಾ ಇಲಾಖಾ ಅಧಿಕಾರಿಗಳ ಸಭೆ ನಡೆಸಿ ಪ್ರಗತಿ ಪರಿಶೀಲನೆ ನಡೆಸಿದರು.
ಕಾನೂನು ಚೌಕಟ್ಟಿನೊಳಗೆ ವಿಲೇವಾರಿ ಮಾಡಬಹುದಾದ ಅರ್ಜಿಗಳನ್ನು ತಕ್ಷಣ ವಿಲೇವಾರಿ ಮಾಡಬೇಕು, ಇಲ್ಲದಿದ್ದರೆ ಮಾಡಲು ಸಾಧ್ಯವಿಲ್ಲ ಎಂದು ಷರಾ ಬರೆದು ಕಡತವನ್ನು ಮುಕ್ತಾಯಗೊಳಿಸಬೇಕು. ಯಾವುದೇ ಕಾರಣಕ್ಕೂ ವಿಳಂಬ ನೀತಿಯನ್ನು ಅನುಸರಿಸಬಾರದು ಎಂದು ಎಚ್ಚರಿಕೆ ನೀಡಿದರು.
ಸಕಾಲ ಯೋಜನೆ ಅಡಿ ಜಿಲ್ಲೆಯ ರ‍್ಯಾಂಕಿಂಗ್ ಉತ್ತಮಪಡಿಸಬೇಕು. ಸಕಾಲ ಯೋಜನೆಯಡಿ ನಿಗದಿತ ಸಮಯದ ಒಳಗಾಗಿ ಅರ್ಜಿ ವಿಲೇವಾರಿ ಮಾಡಲು ವಿಫಲರಾಗುವ ಪ್ರಕರಣಗಳನ್ನು ಗಂಭೀರವಾಗಿ ಪರಿಗಣಿಸಲಾಗುವುದು ಎಂದು ಅವರು ಹೇಳಿದರು.
ಅತಿವೃಷ್ಟಿಯಿಂದ ಉಂಟಾಗಿರುವ ಬೆಳೆ ಹಾನಿ, ಪರಿಹಾರ ವಿತರಣೆ ಕಾರ್ಯ, ಬೆಳೆ ವಿಮೆ ವಿತರಣೆಯಲ್ಲಿನ ವಿಳಂಬವನ್ನು ಸರಿಪಡಿಸಬೇಕು. ಕಂದಾಯ ಅದಾಲತ್ ಇನ್ನೂ ೬ತಿಂಗಳ ಕಾಲ ವಿಸ್ತರಿಸಲಾಗಿದ್ದು, ಜಿಲ್ಲೆಯಲ್ಲಿ ಪ್ರಸ್ತುತ ೧೧ಸಾವಿರ ಪ್ರಕರಣಗಳು ಬಾಕಿಯಿವೆ. ಅವುಗಳನ್ನು ತಕ್ಷಣ ವಿಲೇವಾರಿ ಮಾಡಬೇಕು. ೯೪ಸಿ ಮತ್ತು ೯೪ಸಿಸಿ ಪ್ರಕರಣಗಳಲ್ಲಿ ಅರ್ಜಿಯನ್ನು ವಿಳಂಬ ಮಾಡದೆ ಅರ್ಹತೆ ಆಧಾರದಲ್ಲಿ ಇತ್ಯರ್ಥಗೊಳಿಸಬೇಕು ಎಂದು ತಿಳಿಸಿದರು.
ಜಿಲ್ಲೆಯ ೭೦೦ ಶಾಲೆ, ಅಂಗನವಾಡಿಗಳಲ್ಲಿ ತೆಂಗು, ನುಗ್ಗೆ, ಪಪ್ಪಾಯಿ, ಸಪೋಟ, ಬಾಳೆ ಗಿಡಗ ಳನ್ನು ಹಾಗೂ ತರಕಾರಿ ಬೀಜಗಳನ್ನು ವಿತರಿಸಲು ಯೋಜನೆ ರೂಪಿಸಲಾಗಿದೆ ಎಂದು ತೋಟಗಾರಿಕಾ ಇಲಾಖೆ ಉಪನಿರ್ದೇಶಕ ಯೋಗೀಶ್ ತಿಳಿಸಿದರು.
ಅಪರ ಜಿಲ್ಲಾಧಿಕಾರಿ ಕೆ.ಚನ್ನಬಸಪ್ಪ, ಉಪ ಅರಣ್ಯ ಸಂರಕ್ಷಣಾಧಿಕಾರಿ ಆಂಟನಿ ಮರಿಯಪ್ಪ ಸೇರಿದಂತೆ ಎಲ್ಲಾ ಇಲಾಖೆ ಹಿರಿಯ ಅಧಿಕಾರಿಗಳು ಸಭೆಯಲ್ಲಿ ಉಪಸ್ಥಿತರಿದ್ದರು.