ದಾವಣಗೆರೆ: ಸಾಲ ತೀರಿಸಲಾಗದೆ ಮನನೊಂದು ತನ್ನ ಜಮೀನಿನಲ್ಲಿ ಅಳವಡಿಸಿದ್ದ ಹೈಟೆನ್ಷೆನ್ ವಿದ್ಯುತ್ ಕಂಬಕ್ಕೆ ನೇಣು ಬಿಗಿದುಕೊಂಡು ರೈತನೊಬ್ಬ ಆತ್ಮಹತ್ಯೆ ಮಾಡಿಕೊಂಡಿದ್ದಾನೆ. ಹನುಮಂತಪ್ಪ (40) ಮೃತ ರೈತ ದಾವಣಗೆರೆ ತಾಲೂಕಿನ ಗುಡಾಳು ಗೊಲ್ಲರಹಟ್ಟಿ
ಗ್ರಾಮದವರಾಗಿದ್ದು, ಪತ್ನಿ, ಇಬ್ಬರು ಮಕ್ಕಳನ್ನು ಆಗಲಿದ್ದಾರೆ.
ಬ್ಯಾಂಕ್ ನಲ್ಲಿ 4 ಲಕ್ಷ ರೂ. ಮನೆ ಸಾಲ ಹಾಗೂ 3.5 ಲಕ್ಷ ರೂ.ಗಳ ಕುರಿ ಸಾಲ ಪಡೆದಿದ್ದರು. ಇದರ ಜತೆಗೆ ಬೆಳೆ ಸಾಲ ಮಾಡಿದ್ದರು. ಬ್ಯಾಂಕ್ ಅಧಿಕಾರಿಗಳ ಒತ್ತಡದಿಂದಾಗಿ ಆತ್ಮಹತ್ಯೆಗೆ ಶರಣಾಗಿದ್ದಾರೆ.
ಮನೆ ಸಾಲವನ್ನು ಹನುಮಂತಪ್ಪ ಕಂತು ರೂಪದಲ್ಲಿ ಕಟ್ಟುತ್ತಿದ್ದು, ಏಕ ಅವಧಿಯಲ್ಲಿ ಸಾಲ ತೀರುವಳಿಗೆ ಮನವಿ ಮಾಡಿದ್ದರು. ಅದರಂತೆ ನಿಗದಿಪಡಿಸಿದ್ದ 2.10 ಲಕ್ಷ ರೂ. ತುಂಬಲು ಹೋದಾಗ ಮನೆ ಮೇಲಿನ ಸಾಲ ತೀರಿಸಿದಲ್ಲಿ ಮಾತ್ರವೇ ಕುರಿ ಸಾಲದ ಕಂತು
ಕಟ್ಟಿಸಿಕೊಳ್ಳುವುದಾಗಿ ಬ್ಯಾಂಕ್ ಅಧಿಕಾರಿಗಳು ತಿಳಿಸಿದ್ದರು. ಈ ನಡುವೆಯೇ ಮನೆ ಜಪ್ತಿಗೆ ಬಾಗಿಲಿಗೆ ನೋಟಿಸ್ ಅಂಟಿಸಿ ಹೋಗಿದ್ದರು. ಬ್ಯಾಂಕ್ ಅಧಿಕಾರಿಗಳ ಒತ್ತಡ ಹೆಚ್ಚಾದ ಹಿನ್ನೆಲೆಯಲ್ಲಿ ಹನುಮಂತಪ್ಪ ಭಾನುವಾರ ನೇಣಿಗೆ ಶರಣಾಗಿದ್ದಾರೆ. ಬ್ಯಾಂಕಿನವರ ಕಿರುಕುಳದಿಂದಲೇ ಹುನುಮಂತಪ್ಪ ನೇಟಿಗೆ ಶರಣಾಗಿದ್ದಾರೆ ಎಂದು ಆರೋಪಿಸಿ ಶವಾಗಾರದ ಬಳಿ ರೈತರು ಪ್ರತಿಭಟನೆ ನಡೆಸಿದರು.