ಲೇಖನ : ಜೆ. ಮಂಜೇಗೌಡ, ಹಾಸನ
ಭಾವ ಅಭಾವ : ಸೇತುವೆ ಕಟ್ಟುವ ಬಗೆ ಹೇಗೆ?
ಸಂಬಂಧಗಳು ಗಾಧಗೊಳ್ಳದೆ ಕರಗುವ ಕಾಲದಲ್ಲಿ ನಾವು ಬದುಕುತ್ತಿದ್ದೇವೆ. ನಾಲ್ಕು ದಿನದ ತೀವ್ರತೆ ಐದನೇ ದಿನ ಮಾಯವಾಗಿ ಬಿಡುತ್ತದೆ. ಆರು-ಏಳನೇ ದಿನ ಮತ್ತೆ ಅಪರಿಚಿತ ರಾಗಿಬಿಡುತ್ತೇವೆ. ಭಾವನೆಗಳು ಸ್ವಾರ್ಥ ಮತ್ತು ಅನಿವಾರ್ಯತೆಗಳ ನಡುವೆ ಮುದುಡಿ ಹೋಗುತ್ತದೆ ಅಥವಾ ಹಾಕಲ್ಪಡುತ್ತವೆ. ಈ ಕಳದುಕೊಳ್ಳುವಿಕೆ ಸ್ವಂತ ರಕ್ತ ಹಂಚಿ ಕೊಂಡವರಲ್ಲೂ ಸ್ವಭಾವವಾಗುತ್ತಿರುವುದು ಆತಂಕದ ಸಂಗತಿ.
ಮೊನ್ನೆ ದೂರದ ಸಂಬಂಧಿಯೊಬ್ಬರು ಒಂದು ಕತೆ ಹೇಳಿದರು. ಅದು ಕತೆಯಲ್ಲ, ಸತ್ಯ ಸಂಗತಿ. ಆದರೆ ಕತೆಯಲ್ಲೂ ನಡೆಯಲಾರದ ಸಂಗತಿ. ನನ್ನೊಳಗನ್ನು ಬೆಚ್ಚಿ ಬೀಳಿಸಿದೆ. ಕಾಸರ ಗೋಡು ಸಮೀಪದ ಹಿರಿಯರು, ಸಾತ್ವಿಕರು, ಹೆಂಡತಿ, ಮಗ, ಮಗಳು ಹೀಗೆ ನಾಲ್ವರನ್ನೊಳ ಗೊಂಡ ಚಿಕ್ಕ ಸಂಸಾರ. ಮಗನನ್ನು ಚೆನ್ನಾಗಿ ಓದಿಸಿದರು. ಸಾಫ್ಟ್‌ವೇರ್ ಎಂಜಿನಿಯರ್ ಆದ ಆತ ಅಮೆರಿಕಾದಲ್ಲಿ ಉದ್ಯೋಗಪಡೆದ. ಒಂದು ಬಾರಿ ಊರಿಗೆ ಬಂದು ಮತ್ತೆ ಅಮೆರಿಕಕ್ಕೆ ಹೋದ.
ತಿಂಗಳೊಳಗೆ ತಂದೆ ಜೀವನ್ಮರಣ ಹೋ ರಾಟದಲ್ಲಿ ಒದ್ದಾಡುತ್ತಿದ್ದಾರೆ. ಮನೆಯಲ್ಲಿ ಹೆಂಡತಿ ಮತ್ತು ಮಗಳು ನೋಡಿಕೊಳ್ಳುತ್ತಿದ್ದಾರೆ. ಮಗನಿಗೆ ತಕ್ಷಣ ಬಾ ಎಂದು ಕರೆ ಕಳುಹಿಸಿದರೆ ಅಲ್ಲಿಂದ ಉತ್ತರ ಇಲ್ಲಮ್ಮ, ತಿಂಗಳ ಹಿಂದೆ ಬಂದಿ ದ್ದೇನೆ. ಈಗ ಮತ್ತೆ ಬರುವುದಕ್ಕಾಗುವುದಿಲ್ಲ. ಈಗ ಬಾರದಿದ್ದರೆ ತಂದೆಯ ಕೊನೆಯ ದಿನ ಗಳಲ್ಲಿ ಅವರ ಜತೆಗಿರಲಾರದ ನೋವು ನಿನ್ನನ್ನು ಕಾಡಬಹುದು ಎಂದು ತಂಗಿ ಹೇಳಿದರೆ ಅವ ಕೂಲಾಗಿ “ನೋಡು ತಂಗಿ ನಾನು ಬರುವು ದರಿಂದ ತಂದೆಯನ್ನು ಬದುಕಿಸಲಾಗದಿದ್ದರೆ ಆ ನೋವು ಯಾಕೆ ಹೇಳು? ನನ್ನ ಅನಿ ವಾರ್ಯತೆ ಯನ್ನು ಸ್ವಲ್ಪ ಅರ್ಥ ಮಾಡಿಕೋ, ನಿನ್ನಲ್ಲಿ ನನ್ನದೊಂದು ಕೋರಿಕೆ, ತಂದೆಯ ಕೊನೆಯ ಕ್ಷಣಗಳನ್ನು ರೆಕಾರ್ಡ್ ಮಾಡಿ ಕಳುಹಿಸು. ಅದರ ಖರ್ಚು ಎಷ್ಟಾದರೂ ನಾನು ಭರಿಸುತ್ತೇನೆ” ಅಲ್ಲಿಗೆ ಫೋನ್ ಕಟ್ಟಾಯಿತು. ರೆಕಾರ್ಡ್ ಮಾಡಿದರೋ, ಕಳುಹಿಸಿದರೋ, ಆ ಮಗ ಅದನ್ನು ಸಿನಿಮಾದ ಭಾಗವೆಂಬಂತೆ ಅದನ್ನು ಅನುಭವಿಸಿದನೋ ಗೊತ್ತಿಲ್ಲ. ಅಂತೂ ತಂದೆ ತೀರಿಕೊಂಡರು. ಕೆಲವು ತಿಂಗಳ ಹಿಂದೆ ಇಲ್ಲಿ ರುವ ಆಸ್ತಿ ಮಾರಿ ತಾಯಿ-ಮಗಳು ಅಮೆ ರಿಕಾದ ಮಗನ ಜತೆ ಸೇರಿಕೊಂಡರು.
ಇದು ಒಂದು ಕತೆಯಾದರೆ ಆರು ತಿಂಗಳಿ ನಿಂದ ನನ್ನನ್ನು ಕಾಡುತ್ತಿರುವ ಇನ್ನೊಬ್ಬರ ಮಾತು ಮತ್ತೊಂದು ಚಿತ್ರವನ್ನು ನೆನಪಿಸುತ್ತದೆ. ಬಹಳ ಮೂಡ್ ಆಫ್ ಆದಂತೆ ಕುಳಿತಿದ್ದ ಆತನನ್ನು ಮಾತನಾಡಿಸಿದೆ. ಏನೋ ವಿಷಯ ಬಹಳ ತಲೆ ಬಿಸಿ ಇರುವಂತಿದೆ, ಆತ ಏನಿಲ್ಲಾ… ಎನ್ನುತ್ತಲೇ ಮಾತಿಗಾರಂಭಿಸಿದ. ನೋಡು ನನಗೆ ಬರುವ ಸಂಬಳ ನಿನಗೆ ಗೊತ್ತಿದೆ. ಹೇಗೋ ಸುಧಾರಿಸಿ ಕೊಂಡು ಅಲ್ಲಿದಲ್ಲಿಗೆ ಜೀವನ ಸಾಗುತ್ತಿದೆ. ಕಳೆದ ತಿಂಗಳು ನಿರೀಕ್ಷಿಸದ ಕೆಲವು ಖರ್ಚು ವೆಚ್ಚಗಳು ಬಂದು ಸಮಸ್ಥಿತಿ ತಪ್ಪಿಬಿಟ್ಟಿದೆ. ಎನ್ನುತ್ತಾ ತಂದೆ ಯ ಮರಣದಿಂದ ಆದ ಖರ್ಚು ವೆಚ್ಚವನ್ನು ಮುಂದಿಟ್ಟ. ತಾನು ಖರ್ಚು ಕಡಿಮೆ ಮಾಡುವು ದಕ್ಕಾಗಿ ವಿಧಿ ಕ್ರಿಯೆಗಳನ್ನು ನಡೆಸಿದ ಬಗೆಗೆ ಹೇಳಿ ಕೊಂಡು ತನಗೆ ತಾನೇ ಸಮಾಧಾನ ಹೇಳಿ ಕೊಂಡ.
ಇನ್ನೊಬ್ಬಳು ಮಗಳ ಕತೆ ಕೇಳಿ. ಮದುವೆ ಯಾಗಿ ನಾಲ್ಕು ವರ್ಷ ಕಳೆದಿದೆ, ಒಂದು ಹೆಣ್ಣು ಮಗು ಇದೆ. ಗಂಡನ ಒತ್ತಡವೋ ಏನೋ ಗೊತ್ತಿಲ್ಲ. ಅವಳು ತಂದೆಯಲ್ಲಿ ಬಂದು ನನ್ನ ಪಾಲು ಕೊಡಿ ಎಂದು ಕೇಳುತ್ತಿದ್ದಾಳೆ. ತಂದೆ ನಾನು ಬದುಕಿರುವವರೆಗೂ ಪಾಲು ಮಾಡುವು ದಿಲ್ಲ. ಸತ್ತ ಮೇಲೆ ಏನು ಬೇಕಾದರೂ ಮಾಡಿ ಕೊಳ್ಳಿ ಎಂದೇ ಬಿಟ್ಟರು. ನೀನು ಸತ್ತ ಮೇಲೆ ನಿಮ್ಮ ಮಗ ಅದನ್ನು ಕೊಡುವುದಿಲ್ಲ ಎನ್ನುವುದು ಅವಳ ವಾದ.
ಇವರಲ್ಲಿ ತಮ್ಮ ಅನಿವಾರ್ಯತೆಗಳನ್ನು ಮುಖ್ಯವಾಗಿಸಿಕೊಂಡು ತಮ್ಮ ಅಸ್ಥಿತ್ವಕ್ಕೆ ಕಾರಣ ರಾದವರನ್ನು ಎಂಥ ನೋವಿಗೆ ಈಡು ಮಾಡುತ್ತಿ ದ್ದಾರೆ. ಸಂಬಂಧಗಳ ತೀವ್ರತೆಯಿಂದ ಕಳಚಿ ಕೊಳ್ಳುತ್ತಾರೆ ಎನ್ನುವುದು ವೇದನೆಯ ನ್ನುಂಟು ಮಾಡುತ್ತದೆ. ಇವರು ಚಿಕ್ಕಂದಿನಲ್ಲಿ ತಂದೆ ತಾಯಿಯ ಮಡಿಲಲ್ಲಿ ಬೆಳೆದು, ಮಲ ಮೂತ್ರ ಮಾಡಿದ ನೆನಪುಗಳನ್ನು ಮರೆತಿದ್ದಾರೆ. ಅದೇ ತಂದೆಯ ಬಾಯಿಂದ ಕಲಿತದ್ದನ್ನು ಅವರ ಕೈ ಗಳಲ್ಲಿ ಕುಳಿತು ಆಸ್ಪತ್ರೆಗೆ, ಜಾತ್ರೆಗೆ, ಆಟಕ್ಕೆ ಹೋದದ್ದನ್ನು ಎಷ್ಟು ಬೇಗ ಮರೆತುಬಿಡುತ್ತಾರೆ. ಪರಂಪರೆಯಿಂದ ಪಡೆದು ಮತ್ತೆ ಮರೆತು ಬಿಡುವ ಸ್ವಭಾವ ಬಹುಶಃ ಆಧುನಿಕ ತಲೆಮಾರಿನ ಬದುಕಿನ ಭಾಗವಾಗುತ್ತಿದೆಯೋ.
ಕೆಲವು ದಿನಗಳ ಹಿಂದೆ ಪುತ್ತೂರಿನ ಸಮೀ ಪದ ಸೇವಾಶ್ರಮಕ್ಕೆ ಹೋಗುವ ಅವಕಾಶ ದೊರೆ ಯಿತು. ಅನೇಕ ವೃದ್ಧರನ್ನು ಅಲ್ಲಿ ನೋಡಿದೆ. ಕುಟುಂಬದ ಜನರ ಭಾವನಾಶೂನ್ಯತೆ ಅವರನ್ನು ಅಲ್ಲಿಗೆ ತಲುಪಿಸಿದೆ ಎಂಬ ಕಹಿ ಸತ್ಯದ ಅರಿವಿ ದ್ದರೂ ಅಲ್ಲಿರುವವರೆಲ್ಲಾ ಒಂದು ಕುಟುಂಬ ವೆಂಬಂತೆ ಪ್ರೀತಿಯಿಂದ ಇರುವುದನ್ನು ನೋಡಿ ಸಂತಸವಾಯಿತು. ಒಬ್ಬರನ್ನು ಕೇಳಿದೆ. ನಿಮ್ಮ ಒಟ್ಟು ಬದುಕಿನ ಬಗೆಗೆ ಏನನಿಸುತ್ತದೆ, ನಿಮ್ಮ ಈಗಿನ ಬಯಕೆ ಏನು. ಅವರು ದಾರ್ಶನಿಕರಂತೆ ಕಣ್ಣರಳಿಸಿ ಹಸನ್ಮುಖಿಯಾಗಿಯೇ ಉತ್ತರಿಸಿದರು. ಯಾವುದನ್ನು ಅಪೇಕ್ಷಿಸದೇ ಬದುಕಬೇಕು ಮತ್ತು ಯಾವ ಅಸೆಯೂ ನನಗಿಲ್ಲ. ಕೇವಲ ಸಾಯ ಬೇಕು, ಇದು ನಿರಾಸೆಯಲ್ಲ, ಪಕ್ವತೆ. ಈ ಸ್ಥಿತಿಗೆ ಬಂದರೆ ಮನುಷ್ಯ ಸಾಯುವುದಕ್ಕೂ ಸಿದ್ಧನಿರು ತ್ತಾನೆ. ಬಯಕೆಗಳ ಹಿಂದೆ ಓಡುತ್ತಾ ತಂದೆ ಯನ್ನು ಆಶ್ರಮ ಸೇರಿಸುವ ಮಗ, ಮಗಳು ಈ ಪಕ್ವತೆಯನ್ನು ಅರ್ಧ ಮಾಡಿಕೊಂಡರೆ ಸಾಕು.
ಬದುಕು ಸಾವಿನಲ್ಲಿ ಕೊನೆಯಾಗುವುದಿಲ್ಲ. ಸಾವಿನಾಚೆಗೆ ತೆರೆದುಕೊಳ್ಳುತ್ತದೆ ಎಂಬ ಹಿರಿಯರ ಮಾತು ಬಯಕೆ ಇಲ್ಲಿದೆ. ಸಾವಿನತ್ತ ಹೋಗಬೇಕು ಎಂಬ ಆಶ್ರಯವಾಸಿಯ ಮಾತು ನಮ್ಮ ಮನಸ್ಸಿಗೆ ನಾಟಬೇಡವೇ? ನಾಟಿದರೆ ಅದುವೇ ಮದ್ದು, ಮದ್ದು ಆರೋಗ್ಯವನ್ನು ಮತ್ತೆ ಒದಗಿಸುತ್ತದೆ. ಆರೋಗ್ಯ ಭಾವಕ್ಕೆ ಬಾಗಿಲು, ಭಾವ ಪ್ರೀತಿ ಸಂಬಂಧಗಳಿಗೆ ಸೇತುವೆ. ಈ ಸೇತುವೆ ಎರಡು ದಡವನ್ನು ಜೋಡಿಸುತ್ತದೆ. ನಮ್ಮೆಲ್ಲರ ಜೀವನ ಈ ಸೇತುವೆಯ ನಡುವೆ ಹರಿಯುತ್ತಿರಲಿ.