ಸೋಲು ಅನಾಥವಲ್ಲ, ನನ್ನ ಸೋಲಿಗೆ ನಾನೇ ಹೊಣೆಗಾರ

ನೈರುತ್ಯ ಪದವೀಧರ ಕ್ಷೇತ್ರಕ್ಕೆ ಕಾಂಗ್ರೆಸ್‌ ಅಭ್ಯರ್ಥಿಯಾಗಿದ್ದ ಕೆಪಿಸಿಸಿ ವಕ್ತಾರ ಆಯನೂರು ಮಂಜುನಾಥ್‌ ಸ್ಪಷ್ಟನೆ

ಶಿವಮೊಗ್ಗ: ಸೋಲು ಅನಾಥ ವಲ್ಲ, ನನ್ನ ಸೋಲಿಗೆ ನಾನೇ ಹೋಣೆಗಾರ, ಆದರೆ ಈ ಸೋಲಿಗೆ ನನ್ನಲ್ಲೇನೋ ತಪ್ಪುಗಳಿವೆ ಎಂದು ಭಾವಿಸಿಕೊಳ್ಳಬೇಕೋ ಅಥವಾ ಸಮರ್ಥ ವ್ಯಕ್ತಿಯನ್ನು ಆಯ್ಕೆ ಮಾಡಿಕೊಳ್ಳುವಲ್ಲಿ ಪ್ರಜ್ಞಾವಂತ ನೌಕರ  ಮತದಾರರು ಸೋತಿದ್ದಾರೆಂದು ಭಾವಿಸಿಕೊಳ್ಳಬೇಕೋ ಎನ್ನುವ ಗೊಂದಲಿದ್ದೇನೆಂದು ಹೇಳುವ ಮೂಲಕ ಕೆಪಿಸಿಸಿ ವಕ್ತಾರ ಆಯನೂರು ಮಂಜುನಾಥ್‌, ನೌಕರರ ನಿಲುವಿನ ಬಗ್ಗೆ ತೀವ್ರ ಅಸಮಾಧಾನ ಹೊರ ಹಾಕಿದ್ದಾರೆ.

ನೈರುತ್ಯ ಪದವೀಧರ ಕ್ಷೇತ್ರದ ಫಲಿತಾಂಶ ಹೊರ ಬಿದ್ದ ನಂತರ ಮೊದಲ ಬಾರಿಗೆ  ಶನಿವಾರ ನಗರದ ಪತ್ರಿಕಾ ಭವನದಲ್ಲಿ ಸುದ್ದಿಗೋಷ್ಠಿಯಲ್ಲಿ ಮಾತನಾಡಿದ ಅವರು,   ತಮ್ಮ ಸೋಲಿಗೆ ಕಾರಣಗಳಿಗೇನಿರಬಹುದೆಂದು ಅವರದೇ ಶೈಲಿಯಲ್ಲಿ ವಿಶ್ಲೇಷಣೆ ಮಾಡಿದರು.

ಇದೇ ಮೊದಲ ಬಾರಿಗೆ ನೈರುತ್ಯ ಪದವೀಧರ ಕ್ಷೇತ್ರದ ಚುನಾವಣೆ ತುಂಬಾ ವಿಶಿಷ್ಟವಾಗಿ ನಡೆದಿದೆ. ಪೂರ್ಣ ಪ್ರಮಾಣದಲ್ಲಿ  ವಾಮ ಮಾರ್ಗದಲ್ಲಿಯೇ ನಡೆಯಿತು. ಹಣದ ಹೆಂಡದ ಹೊಳೆಯನ್ನೇ ಕೆಲವರು ಹರಿಸಿದರು. ಗುಂಡಿನ ಪಾರ್ಟಿಗಳು ಎಲ್ಲಿಬೇಕಂದರಲ್ಲಿ ನಡೆದವು. ಜಾತಿ-ಒಳಜಾತಿಗಳು ಕೆಲಸ ಮಾಡಿದವು. ಎಲ್ಲಾ ರೀತಿಯ ಅನಿಷ್ಟಗಳು ಇಲ್ಲಿ ನಡೆದು ಈ ಚುನಾವಣೆಯನ್ನು ಒಂದು ಸಾಮಾಜಿಕ ಅನಿಷ್ಟವನ್ನಾಗಿ ಬದಲಾವಣೆ ಮಾಡಲಾಯಿತು. ಹಣ ಹೆಂಡ ಹಂಚಿದರೆ ಅಸಮರ್ಥರು ಗೆಲ್ಲಬಹುದು ಎಂಬುವುದನ್ನು ನೈರುತ್ಯ ಪದವೀಧರ ಶಿಕ್ಷಕರ ಕ್ಷೇತ್ರದ ಚುನಾವಣೆ ಸಾಕ್ಷಿಯಾಗಿದೆ ವಿಷಾಧ ವ್ಕಕ್ತಪಡಿಸಿದರು.

ನನ್ನ ೩೦ ವರ್ಷದ ರಾಜಕಾರಣದಲ್ಲಿ ಇಂತಹ ಚುನಾವಣೆಯನ್ನು ನಿರೀಕ್ಷೆ ಮಾಡಿರಲಿಲ್ಲ. ಇದು ನನಗೆ ಅಘಾತ ತಂದಿದೆ. ವಿದ್ಯಾವಂತ ಸಮೂಹವೇ ಹಣಕ್ಕೆ ಹೆಂಡಕ್ಕೆ ಕೈ ಚಾಚುತ್ತಾರೆ. ತಮ್ಮನ್ನು ತಾವು ಮಾರಿಕೊಳ್ಳುತ್ತಾರೆ ಎಂದರೆ, ಅಲ್ಪಸ್ವಲ್ಪ ಉಳಿದಿರುವ ನೈತಿಕತೆ ಎಲ್ಲಿದೆ. ಇದು ನನ್ನ ಬದ್ಧತೆಯನ್ನೇ ಪ್ರಶ್ನೆ ಮಾಡಿದಂತಿದೆ ಎಂದರು.

ಪದವೀಧರರ ಸಮಸ್ಯೆಗಳಿಗೆ, ಅತಿಥಿ ಉಪನ್ಯಾಸಕರ ಸಮಸ್ಯೆಗಳಿಗೆ, ಕಾರ್ಮಿಕರ ಸಮಸ್ಯೆಗಳಿಗೆ ಹೋರಾಡಿದೆ. ನನ್ನ ಹೋರಾಟವೇ ಇವರ ಒಳಿತಿಗಾಗಿ ಇತ್ತು. ಆದರೂ ಕೂಡ ಕೊನೆಯ ಕ್ಷಣಗಳಲ್ಲಿ ನನ್ನ ಪರವಾಗಿದ್ದವರು ನನ್ನ ಹೋರಾಟಕ್ಕೆ ಬೆಂಬಲ ನೀಡಿದವರು, ನನ್ನ ಜೊತೆ ತಮ್ಮ ದುಃಖಗಳನ್ನು ಹಂಚಿಕೊಂಡವರು ಹಣ, ಹೆಂಡಕ್ಕೆ ಏಕೆ ರಾಜೀಯಾದರೋ ಇದು ನನ್ನ ಸೋಲೋ ಅಥವಾ ಮತದಾರರ ಸೋಲೋ ಎಂಬುವುದು ಪ್ರಶ್ನೆಯಾಗಿಯೇ ಉಳಿದುಕೊಂಡಿದೆ ಎಂದರು.

ಸೋಲಿನ ಬಗ್ಗೆ ನನಗೆ ನಿರಾಸೆ ಇಲ್ಲ, ಬೇಸರವೂ ಇಲ್ಲ, ಆದರೆ ಪದವೀಧರರ, ಅತಿಥಿ ಉಪನ್ಯಾಸಕರ ಬಗ್ಗೆ ಯಾವುದೇ ಕೆಲಸವನ್ನು ಮಾಡದ ಒಬ್ಬ ಅಸಮರ್ಥ ಅಭ್ಯರ್ಥಿಯನ್ನು ಅದು ಅಷ್ಟು ದೊಡ್ಡ ಅಂತರದಿಂದ ಗೆಲ್ಲಿಸುತ್ತಾರೆ ಎಂದರೆ ಈ ರಾಜಕೀಯದಲ್ಲಿ ರಾಜೀ ಮಾಡಿಕೊಳ್ಳಬಾರದು ಎಂಬ ಸಂದೇಶ ಹೋಗುತ್ತದೆ. ಇದು ತಪ್ಪು, ಒಪ್ಪು ಗೊತ್ತಿಲ್ಲ ಆದರೆ ವಿರೋಧ ಪಕ್ಷದ ಅಭ್ಯರ್ಥಿ ಈ ರೀತಿಯ ಕೆಟ್ಟ ವಾತಾವರಣವನ್ನು ದುಷ್ಟ ರೀತಿಯಲ್ಲಿ ತಂದಿದ್ದು ಮಾತ್ರ ಮನಸ್ಸಿಗೆ ನೋವು ತಂದಿದೆ. ಇದು ನನ್ನ ಸೋಲಿಗಿಂತಲೂ ಹೆಚ್ಚು ಅಘಾತವಾಗಿದ್ದು ಎಂದರು.

ಹೊನ್ನಾಳಿಯಲ್ಲಿ ಅತಿಥಿ ಉಪನ್ಯಾಸಕಿಯೊಬ್ಬರು ತನ್ನ ವ್ಯಾನಟಿ ಬ್ಯಾಗ್‌ನಲ್ಲಿ ಲಕ್ಷಾಂತರ ರೂ. ಇಟ್ಟುಕೊಂಡು ಮತದಾರರಿಗೆ ಹಣ ಹಂಚಿ ಸಿಕ್ಕಿಬಿದ್ದಿದ್ದಾರೆ. ಈಗ ಅವಳ ಮೇಲೆ ಕೇಸು ಕೂಡ ದಾಖಲಾಗಿದೆ. ಹಾಕೇ ಬೀದಿಪಾಲಾಗುತ್ತಾಳೆ, ನೌಕರಿ ಕಳೆದುಕೊಳ್ಳುತ್ತಾಳೆ, ಈಗ ಅವಳ ರಕ್ಷಣೆಗೆ ಯಾರು ಬರುತ್ತಾರೆ. ಅವಳಿಗೆ ಹಣ ಕೊಟ್ಟ ಅಭ್ಯರ್ಥಿ ಅವಳ ಕುಟುಂಬವನ್ನು ಸಾಕುತ್ತಾನೆಯೇ ಎಂದು ಆಯನೂರು ಪ್ರಶ್ನೆ ಮಾಡಿದರು.

ಚುನಾವಣೆ ಮುಗಿದಿದೆ. ಅತಿಥಿ ಉಪನ್ಯಾಸಕರ, ಶಿಕ್ಷಕರ ಕಾರ್ಮಿಕರ ಸಮಸ್ಯೆಗಳು ಉಳಿದುಕೊಂಡಿವೆ. ಮುಖ್ಯವಾಗಿ ಹಳೆ ಪಿಂಚಣಿ ವ್ಯವಸ್ಥೆ ಜಾರಿಯಾಗಬೇಕಾಗಿದೆ ಅದಕ್ಕಾಗಿ ಹೋರಾಟ ಮುಂದುವರೆಸಬೇಕಾಗಿದೆ. ೩-೪ ಸಾವಿರ ಪಡೆದು ನನ್ನ ವಿರುದ್ಧ ವೋಟು ಹಾಕಿದವರ ಪರವಾಗಿಯೂ ನಾನು ಕೆಲಸ ಮಾಡಬೇಕಾಗಿದೆ. ೧೩ಸಾವಿರಕ್ಕೂ ಹೆಚ್ಚು ಜನ ನನಗೆ ಮತಹಾಕಿದ್ದಾರೆ. ಅವರನ್ನು ಗೌರವಿಸಬೇಕಾಗಿದೆ ಎಂದರು.ನನ್ನ ಪರವಾಗಿ ಪ್ರಚಾರ ಮಾಡಿದ ಕಾರ್ಯಕರ್ತರು, ನನ್ನ ಗೆಲುವನ್ನು ಬಯಸಿದ್ದ ಅಭಿಮಾನಿಗಳಿಗೆ, ಮುಖ್ಯವಾಗಿ ಮುಖ್ಯಮಂತ್ರಿ ಹಾಗೂ ಉಪಮುಖ್ಯಮಂತ್ರಿ ಮತ್ತು ಜಿಲ್ಲಾ ಉಸ್ತುವಾರಿ ಸಚಿವರಿಗೆ ಕೊನೆಗೆ ನನ್ನ ಸೋಲಿಗೆ ಕಾರಣರರಾದ ಮತದಾರರಿಗೂ ನನ್ನ ಕೃತಜ್ಞತೆಗಳು ಎಂದರು.ಪತ್ರಿಕಾಗೋಷ್ಠಿಯಲ್ಲಿ ಪ್ರಮುಖರಾದ ಡಾ.ಟಿ.ನೇತ್ರಾವತಿ, ಸೈಯ್ಯದ್ ಅಡ್ಡು, ವೈ. ಎಚ್.‌ ನಾಗರಾಜ್‌, ಧೀರರಾಜ್ ಹೊನ್ನವಿಲೆ, ಶಿ.ಜು. ಪಾಶಾ, ಜಿ.ಪದ್ಮನಾಬ್, ಚನ್ನೇಶ್, ಚಾಮರಾಜು, ಲಕ್ಷ್ಮಣಪ್ಪ ಸೇರಿದಂತೆ ಹಲವರಿದ್ದರು.

………………………………
ನನ್ನ ಸೋಲು ಗೆಲುವು ಇದ್ದುದ್ದೇ ಸೋಲಲು ಮತ ಕೊಟ್ಟವರನ್ನು ನಾನು ಅಭಿನಂದಿಸುತ್ತೇನೆ. ಸೋತೆ ಎಂದು ಖಂಡಿತ ಮನೆಗೆ ಕುಳಿತುಕೊಳ್ಳುವುದಿಲ್ಲ. ಹೋರಾಟವೇ ನನ್ನ ಬದುಕು, ಹೋರಾಟದಿಂದಲೇ ನಾನು ಮೇಲೆ ಬಂದವನು, ನನ್ನೋಳಗಿನ ಹೋರಾಟ ಯಾವಾಗ ಕೊನೆಯಾಗುತ್ತದೆಯೋ ಆಗ ಚುನಾವಣೆಯಿಂದ ನಿವೃತ್ತನಾಗುತ್ತೇನೆ. ಅಲ್ಲಿಯವರೆಗೂ ನಾನು ಚೈತನ್ಯಶೀಲನಾಗಿಯೇ ಇರುತ್ತೇನೆ. ವ್ಯವಸ್ಥೆಯ ಸರಿ ಮಾಡಲು ಪ್ರಯತ್ನಿಸುತ್ತೇನೆ.

-ಆಯನೂರು ಮಂಜುನಾಥ್‌, ಕೆಪಿಸಿಸಿ ವಕ್ತಾರ