ಶಿವಮೊಗ್ಗ: ಮಾಚೇನಹಳ್ಳಿಯಲ್ಲಿರುವ ಫ್ಯಾಕ್ಟರಿವೊಂದರ ಏರ್ ವೆಂಟಿಲೇಟರ್ ಮೂಲಕ ಒಳಗೆ ನುಗ್ಗಿ ಸ್ಟೀಲ್ ಕಾಸ್ಟಿಂಗ್ ನ್ನ ಕಳ್ಳತನ ಮಾಡಿಕೊಂಡು ಹೋಗಿದ್ದ ಘಟನೆಗೆ ಸಂಬಂಧಿಸಿದಂತೆ ನ್ಯೂಟೌನ್ ಪೊಲೀಸರು ನಾಲ್ವರು ಆರೋಪಿಗಳನ್ನ ಬಂಧಿಸಿ ಒಂದು ಟನ್ ಸ್ಟೀಲ್ ಕಾಸ್ಟಿಂಗ್ ಐಟಂಮ್ಸ್ ಮತ್ತು ಕೃತ್ಯಕ್ಕೆ ಬಳಸಿದ ವಾಹನವನ್ನು ವಶಪಡಿಸಿಕೊಂಡಿದ್ದಾರೆ.
ಈ ಪ್ರಕರಣದ ವಿಚಾರಣೆಗಾಗಿ ಎಸ್ಪಿ ಜಿ.ಕೆ.ಮಿಥುನ್‌ಕುಮಾರ್ ಪೊಲೀಸ್ ತಂಡವೊಂದನ್ನು ರಚಿಸಿದ್ದರು. ತನಿಖೆ ನಡೆಸಿದ ತಂಡ ಭದ್ರಾವತಿ ತಾಲೂಕು ಜೇಡಿಕಟ್ಟೆ ಹೊಸೂರಿನ ಎಸ್.ಗಂಗಾಧರ್(28), ಶಿವಮೊಗ್ಗ ಟ್ಯಾಂಕ್ ಮೊಹಲ್ಲಾದ ಮಹಮದ್ ಇಮ್ರಾನ್ ಖಾನ್ (35), ನಂಜಪ್ಪ ಲೇಔಟ್ ಮದಾರಿಪಾಳ್ಯದ ಮಹಮದ್ ಹಪೀಜುಲ್ಲಾ (33) ಹಾಗೂ ಭದ್ರಾವತಿ ತಾಲೂಕು ದೊಣಬಘಟ್ಟದ ಮುಸ್ತಾಕಿಂ ಮುಸ್ತು (22) ಬಂಧಿತ ಆರೋಪಿಗಳು. ಕಳ್ಳತನವಾದ ವಸ್ತುಗಳೊಂದಿಗೆ ಅದರ ಸಾಗಣೆಗೆ ಬಯಸಿದ 5 ಲಕ್ಷ ರೂ. ಮೌಲ್ಯದ ಗೂಡ್ಸ್ ವಾಹನವನ್ನು ವಶಕ್ಕೆ ಪಡೆಯಲಾಗಿದೆ.
ಈ ತನಿಖಾ ತಂಡದ ನೇತೃತ್ವವನ್ನು ಭದ್ರಾವತಿ ನಗರ ಸಿಪಿಐ ಶ್ರೀಶೈಲ ಕುಮಾರ ವಹಿಸಿದ್ದರು. ನ್ಯೂಟೌನ್ ಪಿಎಸ್‌ಐ ಟಿ.ರಮೇಶ್, ಎಎಸ್‌ಐ ಟಿ.ಪಿ.ಮಂಜಪ್ಪ. ಮುಖ್ಯಪೇದೆಗಳಾದ ನವೀನ್, ರಾಘವೆಂದ್ರ ಮತ್ತು ಪೇದೆ ಪ್ರಸನ್ನ ತಂಡದಲ್ಲಿದ್ದರು.
ಸದರಿ ತನಿಖಾ ತಂಡದ ಉತ್ತಮವಾದ ಕಾರ್ಯವನ್ನು ಮಾನ್ಯ ಪೊಲೀಸ್ ಅಧೀಕ್ಷಕರು ಶಿವಮೊಗ್ಗ ಜಿಲ್ಲೆ ರವರು ಪ್ರಶಂಸಿಸಿ ಅಭಿನಂದಿಸಿರುತ್ತಾರೆ.