ಬೆಂಗಳೂರು : ಬೆಂಗಳೂರಿನ ರಾಜರಾಜೇಶ್ವರಿ ನಗರ ಮನೆಯಲ್ಲಿ ಪತ್ರಕರ್ತೆ, ಸಾಹಿತಿ, ವಿಚಾರವಾದಿ ಗೌರಿ ಲಂಕೇಶ್ ಅವರನ್ನು ಗುಂಡಿಟ್ಟು ಹತ್ಯೆ ಮಾಡಲಾಗಿದೆ. ನಿನ್ನೆ ಸಂಜೆ ೭.೩೦ ರ ಸುಮಾರಿಗೆ ದುಷ್ಕರ್ಮಿಗಳು ಮೂರು ಸುತ್ತು ಗುಂಡು ಹಾರಿಸಿ ಹತ್ಯೆ ಮಾಡಿ ಪರಾರಿಯಾಗಿದ್ದಾರೆ.
ಇವರ ಹತ್ಯೆಯನ್ನು ಖಂಡಿಸಿ ನಗರದಲ್ಲಿ ಇಂದು ವಿವಿಧ ಸಂಘಟನೆಗಳು ಸರಣಿ ಪ್ರತಿಭಟನೆ ನಡೆಸಿದವು.
ಚಿಂತಕಿ, ವಿಚಾರವಾದಿ ಹಾಗೂ ಹೆಸ ರಾಂತ ಪತ್ರಕರ್ತೆಯ ಹತ್ಯೆ ನಡೆದಿರುವುದು ನಾಗರೀಕ ಸಮಾಜ ತಲೆತಗ್ಗಿಸುವಂತಾಗಿದೆ ಎಂದು ಪ್ರತಿಭಟನಾಕಾರರು ಹೇಳಿದರು.
ಜಿಲ್ಲಾ ಕಾರ್ಯನಿರತ ಪತ್ರಕರ್ತರ ಸಂಘ : ಗೌರಿ ಲಂಕೇಶ್ ಹತ್ಯೆ ಹೇಡಿತನದ ಕೃತ್ಯವಾ ಗಿದೆ.ಅಲ್ಲದೆ, ಅಭಿವ್ಯಕ್ತಿ ಸ್ವಾತಂತ್ರ್ಯದ ಕಗ್ಗೊಲೆ ಯಾಗಿದೆ. ಇದನ್ನು ಜಿಲ್ಲಾ ಕಾರ್ಯನಿರತ ಪತ್ರಕರ್ತರ ಸಂಘ ಉಗ್ರವಾಗಿ ಖಂಡಿಸುತ್ತದೆ. ಅಲ್ಲದೆ, ಕೃತ್ಯದಲ್ಲಿ ಭಾಗಿಯಾದವರನ್ನು ಕೂಡಲೇ ಬಂಧಿಸುವ ಮೂಲಕ ಸರ್ಕಾರ ನಿರ್ದಾಕ್ಷಿಣ್ಯ ಕ್ರಮಕೈಗೊಳ್ಳಬೇಕೆಂದು ಒತ್ತಾಯಿಸಿದರು.
ಇತ್ತೀಚಿನ ದಿನಗಳಲ್ಲಿ ದಮನಕಾರಿ ಮನೋ ವೃತ್ತಿಯನ್ನು ಬೆಳೆಯುತ್ತಿರುವುದು ನಿಜಕ್ಕೂ ಕೂಡಾ ಆತಂಕಕಾರಿ ವಿಷಯವಾಗಿದೆ. ಸಮಾಜ ದಲ್ಲಿ ಅಭಿಪ್ರಾಯಗಳನ್ನು ಹಂಚಿಕೊಳ್ಳುವುದೇ ತಪ್ಪು ಎಂಬಂತಹ ವಾತಾವರಣ ಸೃಷ್ಟಿಯಾ ಗಿರುವುದು ಪ್ರಜಾಪ್ರಭುತ್ವದ ಆಶಯ ತತ್ವಗಳಿಗೆ ವಿರುದ್ಧವಾದುದಾಗಿದೆ. ಈ ರೀತಿಯ ದಮನಕಾರಿ ಪ್ರವೃತ್ತಿ ಕೊನೆಯಾಗಬೇಕು ಎಂದು ಆಗ್ರಹಿಸಿದರು.
ಈ ಸಂದರ್ಭದಲ್ಲಿ ಸಂಘದ ಜಿಲ್ಲಾಧ್ಯಕ್ಷ ಎನ್.ರವಿಕುಮಾರ್, ಪ್ರಧಾನಕಾರ್ಯ ದರ್ಶಿ ವೈದ್ಯ, ಎಸ್.ಕೆ.ಗಜೇಂದ್ರಸ್ವಾಮಿ ಸೇರಿದಂತೆ ಹಲವರಿದ್ದರು.
ಯುವ ಜೆಡಿಎಸ್ : ವಿಚಾರವಾದಿ ಹಾಗೂ ಪತ್ರಕರ್ತೆ ಗೌರಿ ಲಂಕೇಶ್ ಹತ್ಯೆಯಿಂದ ಪತ್ರಿಕಾ ರಂಗಕ್ಕೆ ತೀವ್ರ ಹೊಡೆತ ಬಿದ್ದಂ ತಾಗಿದೆ ಎಂದು ಯುವ ಜೆಡಿಎಸ್ ಕಾರ್ಯ ಕರ್ತರು ಇಂದು ಖಂಡಿಸಿ ಪ್ರತಿಭಟಿಸಿದರು.
ಪ್ರಗತಿಪರ ಚಿಂತನೆಗಳ ಮೂಲಕ ಜ್ವಲಂತ ಸಮಸ್ಯೆಗಳ ವಿರುದ್ಧ ಸತತವಾಗಿ ಪತ್ರಿಕೆಯ ಮೂಲಕ ಸಾರ್ವಜನಿಕರನ್ನು ಜಾಗೃತಗೊಳಿಸಿ ಜಾತ್ಯಾತೀತ ನಾಡನ್ನು ಕಟ್ಟುವ ನಿಟ್ಟಿನಲ್ಲಿ ನಡೆಸಿದಂತಹ ಗೌರಿ ಲಂಕೇಶ್‌ರವರ ಹೋರಾಟ ಅವಿಸ್ಮರಣೀಯ. ರಾಜ್ಯ ಸರ್ಕಾರ ಕೂಡಲೇ ಇವರನ್ನು ಹತ್ಯೆ ಮಾಡಿದವರನ್ನು ಬಂಧಿಸಬೇಕು. ಆ ಮೂಲಕ ದುಷ್ಕರ್ಮಿಗಳಿಗೆ ಕಠಿಣ ಶಿಕ್ಷೆ ವಿಧಿಸಬೇಕೆಂದು ಒತ್ತಾಯಿಸಿ ದರು.
ಈ ಸಂದರ್ಭದಲ್ಲಿ ಜಿ.ಡಿ. ಮಂಜು ನಾಥ್, ಸಂತೆಕಡೂರು ವಾಸು ಸೇರಿದಂತೆ ಮೊದಲಾದವರಿದ್ದರು.
ಎನ್‌ಎಸ್‌ಯುಐ : ಪ್ರಗತಿಪರ ಚಿಂತನೆಯ ಮೂಲಕ ಸಮಾಜದ ಸುಧಾರಣೆಗೆ ತಮ್ಮ ಆದ ರೀತಿಯಲ್ಲಿ ಪ್ರಯತ್ನಿಸುತ್ತಿದ್ದ ಪತ್ರಕರ್ತೆ ಗೌರಿ ಲಂಕೇಶ್ ಹತ್ಯೆಯನ್ನು ಎನ್‌ಎಸ್‌ಯುಐ ತೀವ್ರವಾಗಿ ಖಂಡಿಸಿದೆ.
ನಕಲ್ಸರನ್ನು ಮುಖ್ಯವಾಹಿನಿಗೆ ತರುವ ನಿಟ್ಟಿನಲ್ಲಿ ತಮ್ಮದೇ ಆದ ರೀತಿಯಲ್ಲಿ ಪ್ರಯತ್ನ ನಡೆಸಿದ್ದರು. ಅಲ್ಲದೆ, ಪತ್ರಿಕೆಯ ಮೂಲಕ ಸಮಾಜದಲ್ಲಿನ ಮೌಢ್ಯತೆ ವಿರುದ್ಧ ಹೋರಾಟ ನಡೆಸಿದ್ದರು. ಇಂತಹ ಹತ್ಯೆಯಿಂದ ಪತ್ರಿಕಾ ಲೋಕಕ್ಕೆ ತೀವ್ರ ನಷ್ಟವುಂಟಾಗಿದೆ ಎಂದು ತಿಳಿಸಿದರು.
ಅಣ್ಣಾ ಹಜಾರೆ ಹೋರಾಟ ಸಮಿತಿ : ಸಾಹಿತಿ, ವಿಚಾರವಾದಿಯಾಗಿದ್ದ ಗೌರಿ ಲಂಕೇಶ್‌ರನ್ನು ಕೆಲ ದುಷ್ಕರ್ಮಿಗಳು ಗುಂಡಿಟ್ಟು ಭೀಕರವಾಗಿ ಹತ್ಯೆ ಮಾಡಿರುವುದು ಖಂಡನೀಯ ಎಂದು ಅಣ್ಣಾ ಹಜಾರೆ ಹೋರಾಟ ಸಮಿತಿ ಹೇಳಿದೆ.
ಕಳೆದ ಎರಡು ವರ್ಷಗಳ ಹಿಂದೆ ಎಂ.ಎಂ. ಕಲಬುರ್ಗಿಯವರನ್ನು ಹತ್ಯೆ ಮಾಡಿದ ಮಾದರಿಯಲ್ಲಿಯೇ ಇವರನ್ನೂ ಕೂಡಾ ಹತ್ಯೆ ಮಾಡಲಾಗಿದೆ. ಕೂಡಲೇ ರಾಜ್ಯ ಸರ್ಕಾರ ಹತ್ಯೆಕೋರರನ್ನು ಬಂಧಿಸಬೇಕು. ಆ ಮೂಲಕ ಗೌರಿ ಲಂಕೇಶ್ ಪ್ರಕರಣಕ್ಕೆ ನ್ಯಾಯ ಒದಗಿಸಬೇಕೆಂದು ಒತ್ತಾಯಿಸಿದೆ.
ಕನ್ನಡ ಸಾಹಿತ್ಯ ಪರಿಷತ್ : ಗೌರಿ ಲಂಕೇಶ್ ಹತ್ಯೆ ಮಾನವ ಜನಾಂಗದ ಮೇಲೆ ನಡೆದ ದಬ್ಬಾಳಿಕೆಯಾಗಿದೆ ಎಂದು ಜಿಲ್ಲಾ ಕಸಾಪ ಅಭಿಪ್ರಾಯ ಪಟ್ಟಿದೆ.
ಇವರ ಹತ್ಯೆಯನ್ನು ಸಾಹಿತ್ಯ ಪರಿಷತ್ ಬಲ ವಾಗಿ ಖಂಡಿಸುತ್ತದೆ. ಹತ್ಯೆಕೋರರ ವಿರುದ್ಧ ಕಠಿಣ ಕಾನೂನು ಕ್ರಮಕೈಗೊಳ್ಳಬೇಕು. ಇಂತಹ ಕೃತ್ಯಗಳು ನಡೆಯದಂತೆ ಎಚ್ಚರಿಕೆ ವಹಿಸಬೇಕೆಂದು ಕಸಾಪದ ಪದಾಧಿಕಾರಿಗಳು ಒತ್ತಾಯಿಸಿದ್ದಾರೆ.
ಪ್ರಗತಿಪರ ವಿದ್ಯಾರ್ಥಿಗಳ ಒಕ್ಕೂಟ : ಗೌರಿ ಲಂಕೇಶ್ ಹತ್ಯೆ ಪ್ರಕರಣವನ್ನು ನ್ಯಾಯಾಂಗ ತನಿಖೆಗೆ ಒಳಪಡಿಸಬೇಕು ಎಂದು ಪ್ರಗತಿಪರ ವಿದ್ಯಾರ್ಥಿಗಳ ಒಕ್ಕೂಟ ಒತ್ತಾಯಿಸಿದೆ.
ಪತ್ರಕರ್ತೆಯಾಗಿ, ಸಾಮಾಜಿಕ ಹೋರಾ ಟಗಾರ್ತಿಯಾಗಿ ತಮ್ಮದೇ ಆದ ರೀತಿಯಲ್ಲಿ ಕಾರ್ಯನಿರ್ವಹಿಸುತ್ತಿದ್ದ ಗೌರಿ ಲಂಕೇಶ್ ಹತ್ಯೆ ಖಂಡನೀಯ. ಕೂಡಲೇ ರಾಜ್ಯ ಸರ್ಕಾರ ಹಂತಕರನ್ನು ಬಂಧಿಸುವ ಮೂಲಕ ಪ್ರಕರಣಕ್ಕೆ ನ್ಯಾಯ ಒದಗಿಸಿಕೊಡಬೇಕೆಂದರು.
ಭಾರತ ಸಂವಿಧಾನ ರಕ್ಷಣಾ ವೇದಿಕೆ : ಅನೇಕ ಜನಪರ ಹೋರಾಟಗಳಲ್ಲಿ ತಮ್ಮನ್ನು ತಾವು ತೊಡಗಿಸಿಕೊಳ್ಳುವ ಮೂಲಕ ಸಮಾಜದಲ್ಲಿ ಗುರುತಿಸಿಕೊಂಡಿದ್ದ ಗೌರಿ ಲಂಕೇಶ್ ಹತ್ಯೆ ದುರಾದೃಷ್ಟಕರ. ಕೂಡಲೇ ರಾಜ್ಯ ಸರ್ಕಾರ ಹಂತಕರನ್ನು ಬಂಧಿಸಬೇಕು ಎಂದು ಭಾರತ ಸಂವಿಧಾನ ರಕ್ಷಣಾ ವೇದಿಕೆ ಒತ್ತಾಯಿಸಿದೆ.