ಬೆಂಗಳೂರು: ತುಂಗಭದ್ರಾ ಜಲಾಶಯದ ಕ್ರೆಸ್ಟ್ ಗೇಟ್‌ಗಳ ಪೈಕಿ ಒಂದು ಕೊಚ್ಚಿಹೋಗಿರುವ ಹಿನ್ನೆಲೆಯಲ್ಲಿ, ರಾಜ್ಯ ಸರ್ಕಾರವು ರಾಜ್ಯದಲ್ಲಿನ ಎಲ್ಲಾ ಅಣೆಕಟ್ಟುಗಳ ಸ್ಥಿತಿಗತಿಯನ್ನು ಪರಿಶೀಲಿಸಲು ತಜ್ಞರ ಸಮಿತಿಯನ್ನು ರಚಿಸಲಿದೆ ಎಂದು ಉಪ ಮುಖ್ಯಮಂತ್ರಿ ಡಿ ಕೆ ಶಿವಕುಮಾರ್ ಸೋಮವಾರ ಹೇಳಿದ್ದಾರೆ.
ತುಂಗಭದ್ರಾ ಅಣೆಕಟ್ಟಿನ ಕ್ರೆಸ್ಟ್ ಗೇಟ್ ನ್ನು ಪುನಃಸ್ಥಾಪಿಸಲು ಪ್ರಯತ್ನಗಳು ನಡೆಯುತ್ತಿವೆ. ಈ ಬಗ್ಗೆ ಯಾರೂ ಆತಂಕಪಡುವ ಅಗತ್ಯವಿಲ್ಲ ಎಂದು ಜಲಸಂಪನ್ಮೂಲ ಸಚಿವರು ಕೂಡ ಆಗಿರುವ ಡಿ ಕೆ ಶಿವಕುಮಾರ್ ಹೇಳಿದರು.
ಬೆಂಗಳೂರಿನಲ್ಲಿ ಸೋಮವಾರ ಈ ಬಗ್ಗೆ ಸುದ್ದಿಗಾರರೊಂದಿಗೆ ಮಾತನಾಡಿದ ಅವರು, ಕಳೆದ 70 ವರ್ಷಗಳಲ್ಲಿ ಮೊದಲ ಬಾರಿಗೆ ಇಂತಹ ಘಟನೆ ಸಂಭವಿಸಿದೆ, ಆದರೆ ರೈತರು ಸೇರಿದಂತೆ ಯಾರೂ ಆತಂಕ ಪಡುವ ಅಗತ್ಯವಿಲ್ಲ ಎಂದು ಹೇಳಿದರು. ಒಂದೆರಡು ದಿನಗಳಲ್ಲಿ ತಜ್ಞರ ಸಮಿತಿ ರಚಿಸಿ ಎಲ್ಲ ಅಣೆಕಟ್ಟುಗಳಿಗೆ ಭೇಟಿ ನೀಡಿ ಪರಿಶೀಲನೆ ನಡೆಸಿ ವರದಿ ತರಿಸಿಕೊಳ್ಳಲಾಗುವುದು ಎಂದರು.
ಅಣೆಕಟ್ಟಿನ ರಚನೆಗೆ ಹಾನಿಯಾಗುವ ಸಾಧ್ಯತೆಯಿರುವುದರಿಂದ, ಎಲ್ಲಾ ಗೇಟ್‌ಗಳನ್ನು ತೆರೆಯಲಾಗಿದ್ದು, ಅಲ್ಲಿಂದ ನೆರೆಯ ಆಂಧ್ರಪ್ರದೇಶ ಮತ್ತು ತೆಲಂಗಾಣಕ್ಕೆ 38,000 ಕ್ಯೂಸೆಕ್ ನೀರು ಬಿಡಲಾಗುತ್ತಿದ್ದು, ಒಳಹರಿವು 28,000 ಕ್ಯೂಸೆಕ್ ಇದೆ. 38,000 ಕ್ಯೂಸೆಕ್ ನೀರು ಬಿಡಲಾಗುತ್ತಿದ್ದು, 35,000 ಕ್ಯೂಸೆಕ್ ನೀರು 19ನೇ ಗೇಟ್‌ನಿಂದಲೇ ಹರಿಯುತ್ತಿದೆ ಎಂದರು.
ಇತರ ಅಣೆಕಟ್ಟುಗಳಲ್ಲಿ ಡಬಲ್ ಚೈನ್ ಲಿಂಕ್‌ಗಳಿದ್ದವು, ಆದರೆ ತುಂಗಭದ್ರಾ ಅಣೆಕಟ್ಟಿನ ಒಂದು ಚೈನ್ ಲಿಂಕ್ ಕಡಿತಗೊಂಡಿದೆ. ನೀರಿನ ಒತ್ತಡ ಹೆಚ್ಚಾಗಿದೆ. ಸುಮಾರು 55-60 ಟಿಎಂಸಿ ಅಡಿ ನೀರು ಇದೆ. ನಾವು ಅದಕ್ಕೆ ಕ್ರಮಗಳನ್ನು ತೆಗೆದುಕೊಳ್ಳುತ್ತಿದ್ದೇವೆ ಎಂದರು.
ಕ್ರೆಸ್ಟ್ ಗೇಟ್‌ಗಾಗಿ ಬಲವಾದ ಕಬ್ಬಿಣ ಹಾಕಲು ಜೆಎಸ್‌ಡಬ್ಲ್ಯೂ ಜೊತೆ ಮಾತನಾಡಿದ್ದೇನೆ. ಗೇಟ್ ಮೊದಲ ಬಾರಿಗೆ ಮಾಡಿದವರಿಗೆ ವಿನ್ಯಾಸ ಕಳುಹಿಸಿದ್ದೇವೆ. ಕೆಲಸ ನಡೆಯುತ್ತಿದೆ ಮತ್ತು ನಾಲ್ಕೈದು ದಿನಗಳಲ್ಲಿ ಸಮಸ್ಯೆ ಬಗೆಹರಿಸಲು ಪ್ರಯತ್ನಿಸುತ್ತೇವೆ ಎಂದರು.
ಕಾವೇರಿ ನದಿಗೆ ಅಡ್ಡಲಾಗಿ ನಿರ್ಮಿಸಿರುವ ಕೆಆರ್ ಎಸ್ ಅಣೆಕಟ್ಟಿನ ವಿಚಾರದಲ್ಲಿ ತುಂಗಭದ್ರಾ ಅಣೆಕಟ್ಟಿಗೆ ನೀಡಲಾದ ಆದ್ಯತೆಯನ್ನು ಇತರರಿಗೆ ನೀಡಿಲ್ಲ ಎಂಬ ಆರೋಪದ ಕುರಿತು ಶಿವಕುಮಾರ್, ರಾಜಕೀಯ ಅಥವಾ ಆರೋಪ ಮಾಡುವವರು ಅದನ್ನು ಮಾಡಲಿ. ಅಣೆಕಟ್ಟು ಕರ್ನಾಟಕದಿಂದ ನಿಯಂತ್ರಿಸಲ್ಪಡುವುದಿಲ್ಲ, ಅದಕ್ಕೆ ಪ್ರತ್ಯೇಕ ಮಂಡಳಿ ಇದೆ, ಅದಕ್ಕೆ ನಾವು ಸದಸ್ಯರು. ಅಣೆಕಟ್ಟು ನಮ್ಮೊಂದಿಗಿದೆ, ಆದರೆ ಕೀಲಿಗಳು ಅವರ ಬಳಿ ಇವೆ, ಅಣೆಕಟ್ಟು ನಮ್ಮದಾಗಿರುವುದರಿಂದ ನಮಗೆ ಹೆಚ್ಚಿನ ಜವಾಬ್ದಾರಿ ಇದೆ ಎಂದರು.
ಗಾಜನೂರು ಜಲಾಶಯಕ್ಕೆ ನೀರಾವರಿ ನಿಗಮ ಅಧಿಕಾರಿಗಳ ಭೇಟಿ
ಶಿವಮೊಗ್ಗ : ತುಂಗಭದ್ರ ಜಲಾಶಯದಲ್ಲಿ ಕ್ರಸ್ಟ್ ಗೇಟು ಹಾನಿಗೊಳಗಾದ ಬೆನ್ನಲ್ಲೇ ನಿಗಮ ಸೋಮವಾರ ಕರ್ನಾಟಕ ನೀರಾವರಿ ನಿಗಮ ಅಧಿಕಾರಿಗಳು, ಶಿವಮೊಗ್ಗದ ಗಾಜನೂರಿನಲ್ಲಿರುವ ಜಲಾಶಯಕ್ಕೂ ಭೇಟಿ ನೀಡಿ ಪರಿಶೀಲನೆ ನಡೆಸಿದರು.
ಜಲಾಶಯದ 8 ನೇ ರೇಡಿಯಲ್ ಕ್ರಸ್ಟ್ ಗೇಟ್ ನ ರೋಪ್ ಹಾಳಾಗಿದ್ದು ಇದರಿಂದ ಈ ಬಾರಿ ಈ ಗೇಟನ್ನು ಮೇಲಕ್ಕೆತ್ತಿ ನೀರು ಹರಿಸಿರಲಿಲ್ಲ. ಈ ಬಗ್ಗೆ ಮಾಧ್ಯಮಗಳಲ್ಲೂ ಸುದ್ದಿಯಾಗಿತ್ತು. ಇದರ ಬೆನ್ನಲೇ ಅಧಿಕಾರಿಗಳು ಭೇಟಿ ನೀಡಿ ಪರಿಶೀಲನೆ ನಡೆಸಿದರು.
2009 ರಲ್ಲಿ ಆರಂಭವಾಗಿರುವ ಜಲಾಶಯಕ್ಕೆ ಇನ್ನೂ 15 ವರ್ಷ ಪ್ರಾಯ. ಆದರೆ ಜಲಾಶಯದ ಸಣ್ಣಪುಟ್ಟ ಸಮಸ್ಯೆಗಳು ಮಾಮೂಲಿಯಾಗಿದೆ. ಈ ಬಾರಿ ಜಲಾಶಯಕ್ಕೆ ಭರ್ಜರಿ ನೀರು ಹರಿದು ಬಂದಿತ್ತು. 85 ಸಾವಿರ ಕ್ಯೂಸೆಕ್ ನೀರು ಹರಿದು ಬಂದಿತ್ತು. ರೋಪ್ ವೇ ಮೂಲಕ ಗೇಟ್ ತೆಗೆದರೆ ಕಟ್ ಆಗುವ ಸಾಧ್ಯತೆಯಿದ್ದಿದ್ದರಿಂದ ಗೇಟ್ ಒಪನ್ ಮಾಡಿರಲಿಲ್ಲ.