ಶಿವಮೊಗ್ಗ : ಕೊರೋನಾ 2ನೇ ಅಲೆಯು ಅತಿ ತೀವ್ರವಾಗಿ ಹರಡುತ್ತಿರುವ ಹಿನ್ನಲೆಯಲ್ಲಿ ಸ್ಥಳೀಯ ಸಂಸ್ಥೆಗಳು 2021-22 ನೇ ಸಾಲಿನ ಆರ್ಥಿಕ ವರ್ಷದ ಏಪ್ರಿಲ್ ತಿಂಗಳಲ್ಲಿ ಆಸ್ತಿ ತೆರಿಗೆ ಪಾವತಿಗೆ ನೀಡಲಾಗುತ್ತಿರುವ ಶೇ. 5 ರಷ್ಟು ರಿಯಾಯಿತಿಯನ್ನು ಜೂನ್.30 ರವರೆಗೆ ವಿಸ್ತರಿಸಲಾಗಿದೆ.
ರಾಜ್ಯದ ನಗರ ಸ್ಥಳೀಯ ಸಂಸ್ಥೆಗಳಲ್ಲಿ ಆಸ್ತಿ ತೆರಿಗೆಯ ಪಾವತಿಗೆ ನೀಡಲಾಗುತ್ತಿರುವ ಶೇ.5 ರಷ್ಟು ರಿಯಾಯಿತಿ ಅವಧಿಯನ್ನು ವಿಸ್ತರಿಸುವಂತೆ ಜನಪ್ರತಿನಿಧಿಗಳು ಮತ್ತು ನಗರ ಸ್ಥಳೀಯ ಸಂಸ್ಥೆಗಳು ಮನವಿ ಸಲ್ಲಿಸಿದ ಹಿನ್ನಲೆಯಲ್ಲಿ ನಗರಾಭಿವೃದ್ಧಿ ಇಲಾಖೆಯು ಜೂನ್ 30 ರವರೆಗೆ ವಿಸ್ತರಿಸಿ ಆದೇಶ ಹೊರಡಿಸಿದೆ.
ಆರ್ಥಿಕ ವರ್ಷದ ಏಪ್ರಿಲ್ ತಿಂಗಳಲ್ಲಿ ಪಾವತಿಸಿದಲ್ಲಿ ಆಸ್ತಿ ತೆರಿಗೆ ಮೊತ್ತದಲ್ಲಿ ಶೇ.5 ರಷ್ಟು ರಿಯಾಯಿತಿಯನ್ನು ನೀಡಲು ಅವಕಾಶವಿತ್ತು. ಕೊರೋನಾ ವೈರಸ್ ಹರಡುತ್ತಿರುವುದರಿಂದ ಸಾರ್ವಜನಿಕರು ಸಾಮಾಜಿಕ ಅಂತರ ಮತ್ತು ಪ್ರತ್ಯೇಕತೆಗೆ ಹೆಚ್ಚಿನ ಗಮನಹರಿಸಬೇಕಾಗಿರುತ್ತದೆ. ಈ ನಿಟ್ಟಿನಲ್ಲಿ ಸರ್ಕಾರವು ಅಗತ್ಯ ಸೇವೆಗಳು ಹೊರತು ಪಡಿಸಿ ಉಳಿದ ವ್ಯಾಪಾರ ವಹಿವಾಟುಗಳನ್ನು ಸ್ಥಗಿತಗೊಳಿಸಿರುತ್ತದೆ. ಆದ್ದರಿಂದ ಸಾರ್ವಜನಿಕರ ಆರೋಗ್ಯ ಮತ್ತು ಆರ್ಥಿಕ ಹಿತದೃಷ್ಟಿಯಿಂದ ರಿಯಾಯಿತಿಯ ಅವಧಿಯನ್ನು ವಿಸ್ತರಿಸಲಾಗಿದೆ ಎಂದು ನಗರಾಭಿವೃದ್ಧಿ ಇಲಾಖೆ ಪ್ರಕಟಣೆಯಲ್ಲಿ ತಿಳಿಸಿದೆ.