ಶಿವಮೊಗ್ಗ : ನೀರಿನ ಮಹತ್ವವನ್ನು ಪ್ರತಿಯೊಬ್ಬರೂ ಅರಿಯಬೇಕು ಎಂದು ಜಿಲ್ಲಾ ರಕ್ಷಣಾಧಿಕಾರಿ ಅಭಿನವ್ ಖರೆ ಹೇಳಿದರು.
ಮರ ಬೆಳೆಸಿ, ಬರ ಅಳಿಸಿ ಎಂಬ ಘೋಷ ವಾಕ್ಯದೊಂದಿಗೆ ಸಾಹಸ ಅಕಾ ಡೆಮಿ ವತಿಯಿಂದ ಇಂದು ನಗರಕ್ಕೆ ಸಮೀಪದ ಮತ್ತೂರಿನಿಂದ ನಗರದ ಕೋರ್ಪಲಯ್ಯ ಛತ್ರದವರೆಗೆ ತುಂಬಿ ಹರಿಯುತ್ತಿರುವ ತುಂಗಾ ನದಿಯಲ್ಲಿ ಈಜುವ ಮೂಲಕ ಸಹಚರರೊಂದಿಗೆ ದಡ ಸೇರಿದ ನಂತರ ಸುದ್ದಿಗಾರರೊಂದಿಗೆ ಮಾತನಾಡಿದರು.
ಇದೊಂದು ಹೊಸ ಅನುಭವ, ತುಂಬಾ ಖುಷಿಯಾಯಿತು. ನೀರಿನ ಮಹತ್ವ ವನ್ನು ಪ್ರತಿಯೊಬ್ಬರೂ ಅರಿಯಬೇಕಿದೆ. ಕಳೆದ ಕೆಲ ದಿನಗಳಿಂದ ಮಳೆ ಬಾರದೇ ಇರುವುದರಿಂದ ಎಲ್ಲರೂ ಆತಂಕಕ್ಕೆ ಒಳಗಾಗಿದ್ದೆವು. ಇದೀಗ ಎರಡು ದಿನಗಳಿಂದ ಮಳೆ ಉತ್ತಮ ರೀತಿಯಲ್ಲಿ ಆಗುತ್ತಿದ್ದು, ತುಂಗಾ ನದಿ ತುಂಬಿ ಹರಿಯುತ್ತಿದೆ. ಈ ಸಂದರ್ಭದಲ್ಲಿ ನದಿಯಲ್ಲಿ ಈಜುವ ಮೂಲಕ ಜನತೆಗೆ ಹೊಸ ಸಂದೇಶ ನೀಡಲಾಗಿದೆ ಎಂದರು.
ನೀರು ಸಕಲ ಜೀವ ರಾಶಿಗಳಿಗೂ ಅವಶ್ಯಕವಾಗಿದೆ. ಆದ್ದರಿಂದ ಪ್ರತಿಯೊ ಬ್ಬರೂ ನೀರಿನ ಮಹತ್ವ ಅರಿಯಬೇಕು. ನೀರನ್ನು ಮಿತವಾಗಿ ಬಳಸಿ ಉಳಿಸುವ ಕಾರ್ಯ ಮಾಡಬೇಕು ಎಂದರು.
ನೀರಿನಲ್ಲಿ ಈಜುವುದು ಹೆಚ್ಚಿನ ವಿಷಯವಲ್ಲ. ಆದರೆ ನದಿಯಲ್ಲಿ ಈಜಬೇಕಾದರೆ ಸುರಕ್ಷಾ ಕವಚನಗಳನ್ನು ಪ್ರತಿಯೊಬ್ಬರೂ ಧರಿಸಲೇಬೇಕು. ಆಗ ಮಾತ್ರ ಯಾವುದೇ ಅನಾಹುತ ಸಂಭವಿಸುವುದಿಲ್ಲ ಎಂದ ಅವರು, ಕಳೆದ ವರ್ಷ ಗಣಪತಿ ವಿಸರ್ಜನೆ ಸಂದರ್ಭದಲ್ಲಿ ತಾಲೂಕಿನ ಹಾಡೋನಹಳ್ಳಿಯಲ್ಲಿ ೧೩ ಯುವಕರು ಮೃತಪಟ್ಟರು. ಇದರಲ್ಲಿ ಬಹುಪಾಲು ಯುವಕರಿಗೆ ಈಜು ಬರುತ್ತಿತ್ತು. ಆದರೆ ಅವರ‍್ಯಾರೂ ಕೂಡಾ ಸುರಕ್ಷಾ ವಿಧಾನಗಳನ್ನು ಅನುಸರಿಸಲಿಲ್ಲ. ಇದರಿಂದಾಗಿಯೇ ಅವರು ಸಾವನ್ನಪ್ಪುವಂತಾಯಿತು ಎಂದರು.
ಈ ಬಾರಿ ಗಣಪತಿ ವಿಸರ್ಜನೆ ಸಂದರ್ಭದಲ್ಲಿ ಸುರಕ್ಷಾ ಕವಚ ಧರಿಸಿದವರು ಮಾತ್ರ ತೆಪ್ಪ ಹತ್ತಲು ಅವಕಾಶ ಮಾಡಿಕೊಡಲಾಗುತ್ತದೆ. ಇದನ್ನು ಅನುಸರಿಸದವರಿಗೆ ಯಾವುದೇ ಕಾರಣಕ್ಕೂ ತೆಪ್ಪ ಏರಲು ಬಿಡುವುದಿಲ್ಲ ಎಂದು ಸೂಚನೆ ನೀಡಿದರು.
ಸತತ ಒಂದೂವರೆ ಗಂಟೆಗಳ ಕಾಲ ತುಂಬಿದ ತುಂಗಾ ನದಿಯಲ್ಲಿ ಮತ್ತೂರಿನಿಂದ ನಗರದವರೆಗೆ ಜಿಲ್ಲಾ ರಕ್ಷಣಾಧಿಕಾರಿಗಳು ಈಜಿದರೆ ಉಳಿದವರು ತೆಪ್ಪದಲ್ಲಿ ತೇಲಿ ಬಂದರು.
ಈ ಸಂದರ್ಭದಲ್ಲಿ ಸಾಹಸ ಅಕಾಡೆಮಿಯ ಆ.ನಾ. ವಿಜಯೇಂದ್ರ, ಗೋಪಿನಾಥ್, ಹರೀಶ್, ದೊರೆ ವದಲಾದವರಿದ್ದರು.