Sunday, October 13, 2024
Google search engine
Homeಇ-ಪತ್ರಿಕೆಶಿಕ್ಷಣ ಸಚಿವರಿದ್ದರೂ ಕೈಗೆಟುಕದ ಶಿಕ್ಷಕರ ಕ್ಷೇತ್ರ!

ಶಿಕ್ಷಣ ಸಚಿವರಿದ್ದರೂ ಕೈಗೆಟುಕದ ಶಿಕ್ಷಕರ ಕ್ಷೇತ್ರ!

ವಿಧಾನ ಪರಿಷತ್‌ ಅಖಾಡದಲ್ಲಿ ಕಾಂಗ್ರೆಸ್‌ ಸೋತಿದ್ದೇಕೆ?

ಶಿವಮೊಗ್ಗ : ಜಿಲ್ಲೆಯ  ಕಾಂಗ್ರೆಸ್‌ ಪಾಳಯಕ್ಕೆ ಚುನಾವಣೆಯ ಫಲಿತಾಂಶಗಳು ದೊಡ್ಡ ಆಘಾತ ನೀಡಿವೆ. ಲೋಕಸಭೆ ಚುನಾವಣೆಯಲ್ಲಿ ಹೀನಾಯ ಸೋಲು ಕಂಡ ಬೆನ್ನಲೇ ವಿಧಾನ ಪರಿಷತ್ತಿನ ನೈರುತ್ಯ ಪದವೀಧರ ಹಾಗೂ ಶಿಕ್ಷಕರ ಕ್ಷೇತ್ರಗಳೆರೆಡರಲ್ಲೂ ಕಾಂಗ್ರೆಸ್‌ ಸೋಲು ಕಂಡಿದೆ. ಕಾಂಗ್ರೆಸ್‌ ಪಾಲಿಗೆ ಅನಿರೀಕ್ಷಿತವಾಗಿ ಬಿದ್ದ ದೊಡ್ಡ ಹೊಡೆತವೇ ಆಗಿದೆ.  ವಿಶೇಷವಾಗಿ ಜಿಲ್ಲೆಯಲ್ಲಿಯೇ ಶಿಕ್ಷಣ ಸಚಿವರಿದ್ದರೂ, ಶಿಕ್ಷಕರ ಕ್ಷೇತ್ರವನ್ನು ಕಾಂಗ್ರೆಸ್‌ ಗೆಲ್ಲದೇ ಹೋಗಿದ್ದು, ಆ ಪಕ್ಷದ ಪಾಲಿಗೆ ದೊಡ್ಡ ದುರಂತ.

ಶಿಕ್ಷಕರ ಕ್ಷೇತ್ರದಲ್ಲಿ ಮೈತ್ರಿ ಅಭ್ಯರ್ಥಿಯಾಗಿದ್ದ ಜೆಡಿಎಸ್‌ ನ ಬೋಜೇಗೌಡರು ಪುನರಾಯ್ಕೆ ಆಗಿದ್ದರೆ, ನೈರುತ್ಯ ಪದವೀಧರ ಕ್ಷೇತ್ರದಲ್ಲಿ ಬಿಜೆಪಿ ಅಭ್ಯರ್ಥಿ ಡಾ, ಧನಂಜಯ್‌ ಸರ್ಜಿ ಅವರಿಗೆ ಗೆಲುವಾಗಿದೆ.  ಇದು  ಕಾಂಗ್ರೆಸ್‌ ಪಾಳಯದ ಮೇಲಿನ ಸರ್ಜಿಕಲ್‌ ಸ್ಟ್ರೈಕ್.‌  ರಾಜಕೀಯಕ್ಕೆ ಎಂಟ್ರಿಯಾದ ಮೊದಲ ಅಟ್ಮೆಂಟ್‌ ನಲ್ಲಿಯೇ ಡಾ. ಸರ್ಜಿ ಅವರು  ಅಭೂತ್‌ ಪೂರ್ವ ಸಕ್ಸಸ್‌ ಆಗಬಹುದೆಂದು ಯಾರು ಕೂಡ ಉಹಿಸಿರಲಿಲ್ಲ. ಕಾಂಗ್ರೆಸ್‌ ನವರಂತೂ ಇದನ್ನು ಎಣಿಸಿಯೂ ಇರಲಿಲ್ಲ. ಆದರೆ ಈಗ ಸರ್ಜಿ ಹೊಡೆತ ಮರ್ಮಘಾತವೇ ಆಗಿದೆ.

ಒಂದೆಡೆ ಲೋಕಸಭೆ ಚುನಾವಣೆ, ಆನಂತರ ಪರಿಷತ್ತಿನ ಈ ಎರಡು ಕ್ಷೇತ್ರಗಳ ಚುನಾವಣೆಗಳು ಜಿಲ್ಲಾ ಉಸ್ತುವಾರಿ ಸಚಿವ ಎಸ್.‌ ಮಧು ಬಂಗಾರಪ್ಪ ಅವರ ನೇತೃತ್ವದ ಲ್ಲಿಯೇ ನಡೆದವು. ಪಕ್ಷವು ತಮಗೆ ದೊಡ್ಡ ಜವಾಬ್ದಾರಿ ನೀಡಿದೆ, ಮುಖ್ಯಮಂತ್ರಿಗಳು ಚುನಾವಣೆ ಜವಾಬ್ದಾರಿಯನ್ನು ನೀನೆ ನಿಭಾಯಿಸು ಅಂತ ಸೂಚಿಸಿದ್ದಾರೆ ಎನ್ನುವ ಮಾತುಗಳ ಮೂಲಕವೇ ಚುನಾವಣೆ ಯಲ್ಲಿ ಓಡಾಡಿದ್ದ ಜಿಲ್ಲಾ ಉಸ್ತುವಾರಿ ಸಚಿವರು, ಶಿಕ್ಷಕರ ಕ್ಷೇತ್ರದಲ್ಲೂ ಗೆಲ್ಲದೆ ಹೋಗಿದ್ದು ವಿಪರ್ಯಾಸ ಎನ್ನುವ ಮಾತು ಕಾಂಗ್ರೆಸ್‌ ಕಾರ್ಯಕರ್ತರಿಂದಲೇ ಕೇಳಿ ಬರುತ್ತಿದೆ.ಜಿಲ್ಲಾ ಉಸ್ತುವಾರಿ ಎಸ್.‌ ಮಧು ಬಂಗಾರಪ್ಪ ಅವರು ಶಿಕ್ಷಣ ಸಚಿವರೂ ಆಗಿದ್ದರಿಂದ ಶಿಕ್ಷಕರ ಕ್ಷೇತ್ರದಲ್ಲಾದರೂ ಗೆಲ್ಲುವ ಸಾಧ್ಯತೆಗಳು ಹೆಚ್ಚಿದ್ದವು. ತಮ್ಮದೇ ಇಲಾಖೆಯ ಸಿಬ್ಬಂದಿಗಳನ್ನು ಸರಿಯಾಗಿ ಮನವೊಲಿಸುವ ಪ್ರಯತ್ನ ನಡೆಸಿದ್ದರೆ, ಇಲ್ಲಿ ಗೆಲ್ಲುವುದೇನು ಅಷ್ಟು ಕಷ್ಟಕರವೇ ಆಗುತ್ತಿರಲಿಲ್ಲ. ಆದರೆ ಸಚಿವರು ಈ ಗೆಲುವನ್ನು ಅಷ್ಟಾಗಿ ಗಂಬೀರವಾಗಿ ತೆಗೆದುಕೊಳ್ಳಲೇ ಎನ್ನುವ ದೂರು ಈಗ ಕಾಂಗ್ರೆಸ್‌ ಕಾರ್ಯಕರ್ತರಿಂದಲೇ ಕೇಳಿ ಬರತೊಡಗಿವೆ.

ʼ ಸಚಿವರು ಮನಸು ಮಾಡಿದ್ದರೆ, ಶಿಕ್ಷಕರ ಕ್ಷೇತ್ರದಲ್ಲಿ ಪಕ್ಷದ ಗೆಲುವು ಅಷ್ಟೇನು ಕಷ್ಟಕರವಾಗಿರಲಿಲ್ಲ. ಆದರೆ ಅವರು ಅದಕ್ಕೆ ಮನಸು ಮಾಡಲೇ ಇಲ್ಲ. ಚುನಾವಣೆ ಸಿದ್ದತೆ ಶುರುವಾದ ದಿನಗಳಲ್ಲಿ ಶಿಕ್ಷಕರ ಕ್ಷೇತ್ರದ ವ್ಯಾಪ್ತಿಯ ಡಿಡಿಪಿಐಗಳು, ಬಿಇಓ ಗಳು ಮೂಲಕ ಶಿಕ್ಷಕರ ಸಭೆಗಳನ್ನು ನಡೆಸಿ, ಅವರ ಬೇಡಿಕೆಗಳು, ಸಮಸ್ಯೆಗಳ ಕುರಿತು ಸಮಾಲೋಚಿಸಿ, ಅವರ ಬೇಡಿಕೆಗಳನ್ನು ಈಡೇರಿಸುವ ಬಗ್ಗೆ ಭರವಸೆ ನೀಡಿದ್ದರೆ, ಅವರೆಲ್ಲ ಕಾಂಗ್ರೆಸ್‌ ಅಭ್ಯರ್ಥಿಗೆ ಮತ ಹಾಕೇ ಹಾಕುತ್ತಿದ್ದರು. ಆದರೆ ಸಚಿವರು ಅಂತಹ ಪ್ರಯತ್ನವನ್ನೇ ನಡೆಸಲಿಲ್ಲ. ಇನ್ನು ಅಭ್ಯರ್ಥಿಯೂ ಕೂಡ ಇತ್ತ ಹೆಚ್ಚಾಗಿ ಪ್ರಚಾರಕ್ಕೆ ಬರಲಿಲ್ಲ. ಅದು ಶಿಕ್ಷಕರ ಕ್ಷೇತ್ರದಲ್ಲಿ ಕಾಂಗ್ರೆಸ್‌ ಪಕ್ಷದ ಸೋಲಿಗೆ ಪ್ರಮುಖ ಕಾರಣವಾಗಿದೆ ಎನ್ನುತ್ತಾರೆ ಜಿಲ್ಲಾ ಕಾಂಗ್ರೆಸ್‌ ನ ಪ್ರಮುಖರೊಬ್ಬರು.

ಇನ್ನು ಪದವೀಧರ ಕ್ಷೇತ್ರದಲ್ಲೂ ಅಷ್ಟೇ. ಈ ಸೋಲಿಗೆ ನೇರವಾಗಿ ಸಚಿವರು ಮತ್ತು ಪಕ್ಷದೊಳಗಡೆಯೇ ಇರುವ ಕೆಲವು ಪಕ್ಷದ್ರೋಹಿಗಳು ಕಾರಣ ಎನ್ನುವ ಮಾತನ್ನು ಅವರು ಇಲ್ಲಿ ಹೇಳಿದ್ದಾರೆ. ʼ ನೈರುತ್ಯ ಪದವೀಧರ ಕ್ಷೇತ್ರದಲ್ಲಿನ ಟಿಕೆಟ್‌ ವಿಚಾರದಲ್ಲಿಯೇ ಪಕ್ಷದೊಳಗಡೆ ಎರಡು ಅಭಿಪ್ರಾಯ ಇದ್ದವು. ಒಂದು ಬಣ ಎಸ್.ಪಿ. ದಿನೇಶ್‌ ಅವರಿಗೆ ಟಿಕೆಟ್‌ ಕೊಡಬೇಕು, ಅವರಿಗೆ ಸಾಧ್ಯವಿಲ್ಲ ಎನ್ನುವುದಾದರೆ ಇನ್ನಾರದರೂ ಪಕ್ಷಕ್ಕೆ ದುಡಿದವರಿಗೆ ಕೊಡಬೇಕೆಂದು ಪಕ್ಷದ ಹೈಕಮಾಂಡ್‌ ಗೆ ಒತ್ತಾಯಿಸುತ್ತಿದ್ದಾಗ, ಪಕ್ಷದಲ್ಲಿಯೇ ಇರುವ ಇನ್ನೋಂದು ಬಣ ರಾತ್ರೋರಾತ್ರಿ ಆಯನೂರು ಅವರನ್ನು ಕರೆದುಕೊಂಡು ಹೋಗಿ, ಅವರಿಗೆ ಟಿಕೆಟ್‌ ಕೊಡಿಸಿಕೊಂಡು ಬಂತು. ಈ ತಿಕ್ಕಾಟವೇ ಪಕ್ಷದವನ್ನು ಅರ್ಧ ಸೋಲಿಸಿತ್ತು. ಆನಂತರ ಮತದಾರರನ್ನು ಸರಿಯಾಗಿ ನೋಡಿಕೊಳ್ಳದಿರುವುದು ಕೂಡ ಇನ್ನಷ್ಟು ಪರಿಸ್ಥಿತಿ ಹದಗೆಡುವಂತೆ ಮಾಡಿತು. ಇಂತಹ ಪರಿಸ್ಥತಿಗಳೇ ಪರಿಷತ್ತಿನಲ್ಲೂ ಕಾಂಗ್ರೆಸ್‌ ಸೋಲುವುದಕ್ಕೆ ಕಾರಣವಾಯಿತು ಎನ್ನುವುದು ಅವರ ಆರೋಪ.

ಅದೇನಿದ್ದರೂ ಈಗ ಪರಿಷತ್ತಿನ ಎರಡು ಕ್ಷೇತ್ರಗಳಲ್ಲಿ ಸೋಲು ಕಾಂಗ್ರೆಸ್‌ ಪಾಲಿಗೆ ದೊಡ್ಡ ಹೊಡೆತವೇ ಆಗಿದೆ. ಪಕ್ಷ ಅಧಿಕಾರದಲ್ಲಿದ್ದರೂ, ಜಿಲ್ಲೆಯಲ್ಲೇ ಶಿಕ್ಷಣ ಸಚಿವರಿದ್ದರೂ ಕೊನೆ ಪಕ್ಷ ಶಿಕ್ಷಕರ ಕ್ಷೇತ್ರವನ್ನು ಗೆಲ್ಲುವುದಕ್ಕೆ ಕಾಂಗ್ರೆಸ್‌ ಪಕ್ಷಕ್ಕೆ ಆಗದಿರುವುದು ವಿಪರ್ಯಾಸವೇ ಹೌದು.

RELATED ARTICLES
- Advertisment -
Google search engine

Most Popular

Recent Comments