೧೫ನೇ ವಿಧಾನಸಭಾ ಚುನಾವಣೆ ಹಿನ್ನೆಲೆಯಲ್ಲಿ ಶಿವಮೊಗ್ಗನಗರ ವಿಧಾನಸಭಾ ಕ್ಷೇತ್ರಕ್ಕೆ ಸಂಬಂಧಪಟ್ಟಂತೆ ಕೆ.ಎಸ್.ಈಶ್ವರಪ್ಪನವರ ಪರಿಸ್ಥಿತಿ ಹೇಗಿದೆ? ಮತ್ತು ಅವರ ಗೆಲುವು ಹೇಗೆ? ಎಂಬುದರ ಬಗ್ಗೆ ನಮ್ಮನಾಡು ಪತ್ರಿಕೆ ನಗರಸಭೆ ಮಾಜಿ ಅಧ್ಯಕ್ಷ ಹಾಗೂ ಬಿಜೆಪಿ ಹಿರಿಯ ಮುಖಂಡ ಎಂ.ಶಂಕರ್‌ರವರನ್ನು ಮಾತನಾಡಿಸಿದಾಗ…
ಪ್ರಶ್ನೆ : ಸಾಮಾಜಿಕ ಐಕ್ಯತೆಯನ್ನು ಈಶ್ವರಪ್ಪನವರು ಹೇಗೆ ಸಾಧಿಸಿದ್ದಾರೆ?
ಶಂಕರ್ : ಈಶ್ವರಪ್ಪನವರು ಬಾಲ್ಯದಿಂದಲೂ ಆರ್‌ಎಸ್‌ಎಸ್‌ನ ಸಂಪರ್ಕದಲ್ಲಿ ಬೆಳೆದವರು. ಹಿಂದೂ ಧರ್ಮದ ಬಗ್ಗೆ ಅವರಿಗೆ ಅಪಾರ ಅಭಿಮಾನ ಮತ್ತು ಪ್ರೀತಿ ಇದೆ. ಅವರು ಎಲ್ಲ ಜಾತಿಯವರನ್ನು ಸಮಾನವಾಗಿ ಪ್ರೀತಿಯಿಂದ ಕಾಣುತ್ತಾರೆ. ಅವರ ಮನೆಗೆ ನೆರವನ್ನು ಕೋರಿ ಬಂದ ಎಲ್ಲಾ ಜನರಿಗೂ ಸ್ವಾಗತವಿದೆ. ಅವರ ಕಷ್ಟಗಳಿಗೆ ಸ್ಪಂದಿಸುತ್ತಾರೆ. ಹಬ್ಬ-ಹರಿದಿನ, ಶುಭ ಕಾರ್ಯಗಳಿಗೆ ಎಲ್ಲ ಅಭಿಮಾನಿಗಳ ಮನೆಗೆ ಹೋಗಿ ಅವರ ಅಭಿಮಾನಗಳಿಸಿದ್ದಾರೆ. ಈಶ್ವರಪ್ಪನವರು ಆರ್‌ಎಸ್‌ಎಸ್, ಹಿಂದುವಾದರೂ ಸಮಸ್ಯೆಗಳನ್ನು ತಂದ ಇತರ ಧರ್ಮಿಯರನ್ನು ಆತ್ಮೀಯತೆಯಿಂದ ಕಂಡು ಸ್ಪಂದಿಸಿ ಸಾಮಾಜಿಕ ಐಕ್ಯತೆಯನ್ನು ಸಾಧಿಸಿದ್ದಾರೆ.
ಪ್ರಶ್ನೆ : ಸಾಮಾನ್ಯ ಜನರು ಏಕೆ ಈಶ್ವರಪ್ಪನವರನ್ನು ಮೆಚ್ಚುತ್ತಾರೆ? ಹತ್ತಿರದಿಂದ ನೋಡಿರುವ ನೀವು ಹೇಳಬಲ್ಲಿರಾ?
ಶಂಕರ್ : ಈಶ್ವರಪ್ಪನವರು ಬಡತನದಲ್ಲಿ ಬೆಳೆದು ಬಂದವರು. ಬಡವರ ಕಷ್ಟ ಅವರಿಗೆ ಅರಿವಿದೆ. ಹಾಗಾಗಿ ಜನರ ಕಷ್ಟಗಳಿಗೆ ಸ್ಪಂದಿಸುವ ಗುಣ ಸ್ನೇಹ, ಮಮತೆ, ಸರಳತೆ, ಸಜ್ಜನಿಕೆ, ಗರ್ವ ಇಲ್ಲದಿರುವುದು, ಪರೋಪಕಾರ ಗುಣ, ಅನ್ಯಾಯ ಪ್ರತಿಭಟಿಸುವ ದಿಟ್ಟತನ, ಮಹಿಳೆಯರ ಬಗ್ಗೆ ಗೌರವ, ಗುರು-ಹಿರಿಯರ ಬಗ್ಗೆ ಆದರ. ಧರ್ಮ-ಆಚಾರ-ವಿಚಾರ, ಸಂಪ್ರದಾಯಗಳ ಬಗೆಗಿನ ಗೌರವ ಇವೆಲ್ಲವೂ ಈಶ್ವರಪ್ಪನವರಲ್ಲಿ ಹಾಸುಹೊಕ್ಕಾಗಿವೆ. ಈ ಎಲ್ಲಾ ಸದ್ಗುಣಗಳನ್ನು ಸಾಮಾನ್ಯ ಜನ ಮೆಚ್ಚಿ ಅವರನ್ನು ಇಂದು ರಾಜ್ಯಮಟ್ಟದ ನಾಯಕನ್ನಾಗಿ ಬೆಳೆಸಿದ್ದಾರೆ.
ಪ್ರಶ್ನೆ : ಬ್ರಾಹ್ಮಣ ಮಹಾಸಭಾದ ರಾಜ್ಯಾಧ್ಯಕ್ಷ ವೆಂಕಟನಾರಾಯಣ್ ಕೆ.ಬಿ.ಪಿ.ಯವರನ್ನು ಬೆಂಬಲಿಸಬೇಕೆಂದು ಹೇಳಿದ್ದಾರಲ್ಲ?
ಶಂಕರ್ : ರಾಜ್ಯದಲ್ಲಿ ಬಿಜೆಪಿ ಬ್ರಾಹ್ಮಣ ಸಮುದಾಯದ ೧೧ ಅಭ್ಯರ್ಥಿಗಳಿಗೆ ಟಿಕೆಟ್ ನೀಡಿದೆ. ಕಾಂಗ್ರೆಸ್ ೮ ಅಭ್ಯರ್ಥಿಗಳನ್ನು ಕಣಕ್ಕಿಳಿಸಿದೆ. ಜೆಡಿಎಸ್ ಮೂವರಿಗೆ ಟಿಕೆಟ್ ನೀಡಿದೆ ಎಂದು ವೆಂಕಟ್ ನಾರಾಯಣ್‌ರವರೇ ಹೇಳಿದ್ದಾರೆ. ಹಾಗಾದರೆ ಅತಿ ಹೆಚ್ಚು ಟಿಕೆಟ್ ನೀಡಿರುವ ಬಿಜೆಪಿಗೆ ಬ್ರಾಹ್ಮಣ ಸಮುದಾಯದವರು ಬೆಂಬಲಿಸುತ್ತಾರೆ. ಇದರಲ್ಲಿ ಯಾವುದೇ ಅನುಮಾನವಿಲ್ಲ. ಮಹಾಸಭಾದ ರಾಜ್ಯಾಧ್ಯಕ್ಷರ ಹೇಳಿಕೆಯನ್ನು ಬ್ರಾಹ್ಮಣ ಸಮಾಜದವರು ಬೆಂಬಲಿಸುವುದಿಲ್ಲ ಎಂಬ ನಂಬಿಕೆ ಇದೆ.
ಪ್ರಶ್ನೆ : ಶಿವಮೊಗ್ಗ ನಗರ ಅಭಿವೃದ್ಧಿಯ ಬಗ್ಗೆ ಈಶ್ವರಪ್ಪನವರ ಕನಸುಗಳೇನು?
ಶಂಕರ್ : ನಗರದ ಯಾವ ಮಹಿಳೆಯರೂ ಕುಡಿಯುವ ನೀರಿಗೆ ಪರದಾಡಬಾರದು. ನಗರದ ಮೂಲೆ ಮೂಲೆಗೂ ಸಮೃದ್ಧವಾಗಿ ಕುಡಿಯುವ ನೀರನ್ನು ಒದಗಿಸುವುದು. ವಿಶಾಲವಾದ ಸಮರ್ಥ ರಸ್ತೆಗಳು ನಿರ್ಮಾಣವಾಗಿ ವಾಹನ ಚಾಲಕರು ನೆಮ್ಮದಿಯಿಂದ ಓಡಾಡಬೇಕು. ಅಪಘಾತದ ಪ್ರಮಾಣ ಇಳಿಮುಖವಾಗಬೇಕು. ನಗರ ನೈರ್ಮಲ್ಯವನ್ನು ಸಾಧಿಸಿ ರೋಗ ರುಜಿನಗಳನ್ನು ಓಡಿಸಬೇಕು. ರಾಜ್ಯ ಮತ್ತು ಕೇಂದ್ರ ಸರ್ಕಾರದ ಮೇಲೆ ಒತ್ತಡ ತಂದು ಹೊಸ ಹೊಸ ಉನ್ನತ ಶಿಕ್ಷಣ ಕೇಂದ್ರಗಳನ್ನು ಶಿವಮೊಗ್ಗೆಗೆ ತಂದು ಪ್ರಮುಖ ಶೈಕ್ಷಣಿಕ ಕೇಂದ್ರವನ್ನಾಗಿಸುವುದು. ನಿಂತಿರುವ ವಿಮಾನ ನಿಲ್ದಾಣ ನಿರ್ಮಾಣ ಕಾರ್ಯಕ್ಕೆ ಚಾಲನೆ ನೀಡಿ ಶೀಘ್ರವಾಗಿ ವಿಮಾನಯಾನ ಆರಂಭವಾಗುವಂತೆ ಮಾಡುವುದು. ಶಿವಮೊಗ್ಗ -ಬೆಂಗಳೂರು ನಡುವೆ ಇನ್ನೂ ಎರಡು ಹೊಸ ರೈಲು ಸಂಚಾರ ಆರಂಭವಾಗುವಂತೆ ಮಾಡಿ ಪ್ರಯಾಣಿಕರಿಗೆ ಅನುಕೂಲ ಮಾಡುವುದು. ಕಚೇರಿಗಳಲ್ಲಿ ಕೆಲಸಕ್ಕಾಗಿ ಹಲವು ಬಾರಿ ಜನ ಅಲೆದಾಡದೆ ಆನ್‌ಲೈನ್ ವ್ಯವಸ್ಥೆಯಲ್ಲೇ ದಾಖಲೆಗಳು ಜನರ ಕೈ ಸೇರುವಂತೆ ಮಾಡುವುದು. ಹೀಗೆ ಹತ್ತಾರು ಕನಸುಗಳು ಈಶ್ವರಪ್ಪನವರದ್ದಾಗಿದೆ.
ಪ್ರಶ್ನೆ : ಧಾರ್ಮಿಕ ಆಚರಣೆಯನ್ನು ರಕ್ಷಿಸುವಲ್ಲಿ ಈಶ್ವರಪ್ಪನವರು ಹೇಗೆ ಸದಾ ಮುಂದಿರುತ್ತಾರೆ?
ಶಂಕರ್ : ಧರ್ಮ-ಧಾರ್ಮಿಕ ಆಚರಣೆಯ ಬಗ್ಗೆ ಈಶ್ವರಪ್ಪನವರಿಗೆ ಅಪಾರ ಶ್ರದ್ಧೆ. ಪ್ರತೀ ಧರ್ಮದವರಿಗೂ ತಮ್ಮ ಧಾರ್ಮಿಕ ಆಚರಣೆಯ ಸ್ವಾತಂತ್ರ್ಯ ಇರುತ್ತದೆ. ಸರ್ಕಾರ ಅದರಲ್ಲಿ ಕೈ ಹಾಕಬಾರದು ಎಂದು ನಂಬಿದವರು. ನಮ್ಮ ಈಗಿನ ಸರ್ಕಾರ ಮೂಢನಂಬಿಕೆ ನಿಷೇಧದ ಹೆಸರಿನಲ್ಲಿ ಹಿಂದೂ ಧಾರ್ಮಿಕ ಆಚರಣೆಯನ್ನು ತಡೆಯಲು ಹೊರಟಾಗ ಸದನದ ಒಳಗೆ ಮತ್ತೆ ಹೊರಗೆ ಅದರ ವಿರುದ್ಧ ಉಗ್ರ ಹೋರಾಟ ಮಾಡಿ ಜಯ ಸಾಧಿಸಿದವರು ಈಶ್ವರಪ್ಪನವರು.
ಪ್ರಶ್ನೆ : ಪ್ರಧಾನಿ ಮೋದಿಯವರ ಸಬ್ ಕಾ ಸಾತ್ ಸಬ್ ಕಾ ವಿಕಾಸ್ ಮಂತ್ರದಂತೆ ಈಶ್ವರಪ್ಪನವರ ನಡೆ ಇದೆಯೇ?
ಶಂಕರ್ : ಈಶ್ವರಪ್ಪನವರು ಪಕ್ಷದಲ್ಲಿ ಸಾಮಾನ್ಯ ಕಾರ್ಯಕರ್ತರಾಗಿ, ಪಕ್ಷದ ಪದಾಧಿಕಾರಿಯಾಗಿ ಶ್ರಮಿಸಿ ಬೆಳೆದವರು. ಜಿಲ್ಲೆಯಲ್ಲಿ, ರಾಜ್ಯದಲ್ಲಿ ಪಕ್ಷದ ಬೆಳವಣಿಗೆಗೆ ಎಲ್ಲರೊಂದಿಗೆ ಬೆರೆತು ಬೆವರು ಹರಿಸಿದವರು. ಈಗ ಶಾಸಕರಾದ ಮೇಲೆ ಕ್ಷೇತ್ರದ ಎಲ್ಲ ಜನರೊಂದಿಗೆ ಬೆರೆತು ಅವರೊಂದಿಗೆ ಜನಹಿತ ಸಾಧನೆಯ ಕಾರ್ಯ ಮಾಡುತ್ತಿದ್ದಾರೆ. ಚುನಾವಣೆಯಲ್ಲಿ ಗೆಲ್ಲುವ ತವಕ ಅವರು ಬಿಜೆಪಿಯಲ್ಲಿ ಶಾಸಕರು. ಆನಂತರ ಅವರು ಶಿವಮೊಗ್ಗ ವಿಧಾನಸಭಾ ಕ್ಷೇತ್ರದ ಜನರ ಪ್ರತಿನಿಧಿಯಾಗಿ ಪಕ್ಷ, ಜಾತಿ, ಧರ್ಮದ ಭೇದವಿಲ್ಲದೆ ಎಲ್ಲರೊಂದಿಗೆ ಬೆರೆತು ಕ್ಷೇತ್ರದ ಜನರ ವಿಕಾಸಕ್ಕಾಗಿ ಶ್ರಮಿಸುತ್ತಿದ್ದಾರೆ. ಆದ್ದರಿಂದ ಖಂಡಿತವಾಗಿಯೂ ಇವರ ನಡೆ ಸಬ್ ಕಾ ಸಾತ್ ಸಬ್ ಕಾ ವಿಕಾಸ್ ಮಂತ್ರದಂತೆ.
ಪ್ರಶ್ನೆ : ಸಣ್ಣಸಣ್ಣ ಸಮುದಾಯಗಳು ಶಿವಮೊಗ್ಗ ನಗರದಲ್ಲಿ ಮುಖ್ಯವಾಹಿನಿಗೆ ಹೇಗೆ ಬಂದವು?
ಶಂಕರ್ : ಈಶ್ವರಪ್ಪನವರು ಸಣ್ಣ-ಸಣ್ಣ ಸಮುದಾಯದ ಜನರನ್ನು ಸಂಪರ್ಕ ಮಾಡಿ ಅವರು ಸಂಘಟಿತರಾಗಿ ಸಂಘಗಳನ್ನು ಸ್ಥಾಪಿಸಿಕೊಳ್ಳಲು ಪ್ರೋತ್ಸಾಹಿಸಿದರು. ಸಣ್ಣ ಸಮುದಾಯಗಳು ಪ್ರೋತ್ಸಾಹ ನೆರವಿನಿಂದ ತಮ್ಮದೇ ಆದ ಸಹಕಾರಿ ಸಂಘಗಳನ್ನು, ದೇವಾಲಯಗಳನ್ನು ಸಮುದಾಯ ಭವನಗಳನ್ನು ನಿರ್ಮಿಸಿಕೊಂಡು ತಲೆ ಎತ್ತಿ ನಿಂತು ಶಿವಮೊಗ್ಗ ನಗರದಲ್ಲಿ ಮುಖ್ಯ ವಾಹಿನಿಗೆ ಬಂದಿದೆ.
ಪ್ರಶ್ನೆ : ೮ ಈ ಬಾರಿಯ ಚುನಾವಣೆಯಲ್ಲಿ ಫಲಿತಾಂಶ ಈಶ್ವರಪ್ಪನವರ ಪರವಾಗಿ ಬರುತ್ತದೆಯೇ?
ಶಂಕರ್ : ಖಂಡಿತವಾಗಿಯೂ. ಈ ಬಾರಿಯ ಗೆಲುವು ಈಶ್ವರಪ್ಪನವರದ್ದೆ. ಇದು ಉತ್ಪ್ರೇಕ್ಷೆಯ ಮಾತಲ್ಲ. ಈ ಚುನಾವಣೆಯು ಸೇರಿದರೆ ಇದು ಈಶ್ವರಪ್ಪನವರದು ೬ನೇ ವಿಧಾನಸಭಾ ಚುನಾವಣೆ. ನಾಲ್ಕು ಬಾರಿ ಗೆದ್ದು ಎರಡು ಬಾರಿ ಪರಾಜಿತರಾದರೂ ಈಶ್ವರಪ್ಪ ಶಿವಮೊಗ್ಗ ಜನರ ನಡುವೆಯೇ ಇದ್ದು ಅವರ ಮನದಲ್ಲಿಯೂ ಇದ್ದಾರೆ. ಈಬಾರಿ ಎಲ್ಲಾ ದೊಡ್ಡ ಹಾಗೂ ಸಣ್ಣ ಸಮುದಾಯಗಳು ಅವರೊಂದಿಗೆ ಇದ್ದು ಅವರ ಗೆಲುವಿಗೆ ಶ್ರಮಿಸುತ್ತದೆ. ಈಶ್ವರಪ್ಪನವರ ದಕ್ಷ ನಾಯಕತ್ವ ಗುಣ, ಜನಸ್ಪಂದನೆ, ಜನೋಪಕಾರಿ ಕಾರ್ಯಗಳು, ಬಿಜೆಪಿ ಸರ್ಕಾರದ ಸಾಧನೆಗಳು, ಪ್ರಧಾನಿ ಮೋದಿಯವರ ನಾಯಕತ್ವ ಇವುಗಳು ಖಂಡಿತವಾಗಿಯೂ ಈಶ್ವರಪ್ಪನವರನ್ನು ಚುನಾವಣೆಯಲ್ಲಿ ಜಯಶಾಲಿಯನ್ನಾಗಿಸುತ್ತದೆ.