ಪಾಲಿಕೆ ಫಲಿತಾಂಶವೇ ಜನಾದೇಶ : ಈಶ್ವರ್ ಖಂಡ್ರೆ

ಶಿವಮೊಗ್ಗ: ಸ್ಥಳಿಯ ಸಂಸ್ಥೆಗಳಿಗೆ ಸಾವಿರಾರು ಕೋಟಿರೂ. ಅನುದಾನ ನೀಡುವ ಮೂಲಕ ನಗರ ಹಾಗೂ ಪಟ್ಟಣಗಳಿಗೆ ಮೂಲಭೂತ ಸೌಲಭ್ಯ ಕಲ್ಪಿಸಲು ಒತ್ತು ನೀಡುತ್ತಿರುವ ಕಾಂಗ್ರೆಸ್ ಪಕ್ಷಕ್ಕೆ ಮಹಾನಗರ ಪಾಲಿಕೆ ಚುನಾವಣೆಯಲ್ಲಿ ಹೆಚ್ಚು ಸ್ಥಾನ ಗೆಲ್ಲಿಸಬೇಕೆಂದು ಕೆಪಿಸಿಸಿ ಕಾರ್ಯಾಧ್ಯಕ್ಷ ಈಶ್ವರ ಖಂಡ್ರೆ ಮನವಿ ಮಾಡಿದರು.
ಸುದ್ದಿಗೋಷ್ಠಿಯಲ್ಲಿ ಮಾತನಾಡಿದ ಅವರು, ಮಹಾನಗರ ಪಾಲಿಕೆಯ ೩೫ ವಾರ್ಡ್‌ಗಳಲ್ಲಿ ಕಾಂಗ್ರೆಸ್ ಪಕ್ಷ ಅಭ್ಯರ್ಥಿಗಳನ್ನು ಹಾಕಿದ್ದು, ಈ ಫಲಿತಾಂಶ ರಾಜ್ಯದ ಮುಂದಿನ ಲೋಕಸಭಾ ಚುನಾವಣೆಗೆ ಅಡಿಪಾಯ ಆಗಬಲ್ಲದು ಎಂದು ಅಭಿಪ್ರಾಯಪಟ್ಟರು.
ಇತ್ತೀಚಿನ ವರ್ಷಗಳಲ್ಲಿ ಗ್ರಾಮೀಣ ಭಾಗದ ಹೆಚ್ಚಿನ ಜನರು ನಗರಗಳತ್ತ ವಲಸೆ ಬರುತ್ತಿರುವುದರಿಂದ ಒಟ್ಟು ಜನಸಂಖ್ಯೆಯ ಶೇ.೩೮ ನಗರದಲ್ಲಿದೆ. ಮುಂದಿನ ಕೆಲ ವರ್ಷಗಳಲ್ಲಿ ಇದು ಶೇ.೫೦ನ್ನು ದಾಟುವ ಸಾಧ್ಯತೆ ಇದ್ದು, ಇದಕ್ಕೆ ಪೂರಕವಾಗಿ ನಗರ, ಪಟ್ಟಣಗಳಿಗೆ ಸೂಕ್ತ ಮೂಲಭೂತ ಸೌಲಭ್ಯ ಒದಗಿಸಬೇಕಿದೆ. ಈ ನಿಟ್ಟಿನಲ್ಲಿ ಕಾಂಗ್ರೆಸ್ ಸರ್ಕಾರ ಪ್ರತಿ ವರ್ಷ ಸ್ಥಳಿಯ ಸಂಸ್ಥೆಗಳಿಗೆ ಹೆಚ್ಚೆಚ್ಚು ಅನುದಾನ ನೀಡಿ, ರಸ್ತೆ, ಚರಂಡಿ, ಕುಡಿಯುವ ನೀರು, ಬೀದಿದೀಪದ ಸೌಲಭ್ಯ ಕಲ್ಲಿಸಲು ಕ್ರಮ ಕೈಗೊಂಡಿದೆ ಎಂದರು.
ಕರ್ನಾಟಕವನ್ನು ಬಯಲು ಶೌಚ ಮುಕ್ತ ರಾಜ್ಯವನ್ನಾಗಿಸಲು ಈ ಹಿಂದೆ ಶೌಚಾಲಯ ಕಟ್ಟಿಕೊಳ್ಳಲು ನೀಡುತ್ತಿದ್ದ ಅನುದಾನವನ್ನು ೧೫ ಸಾವಿರಕ್ಕೆ ಹೆಚ್ಚಿಸಿ ಅನುಕೂಲ ಮಾಡಿಕೊಟ್ಟಿದೆ. ಇದರಲ್ಲಿ ರಾಜ್ಯ ೧೧ ಸಾವಿರ ರೂ, ಕೇಂದ್ರ ೪ ಸಾವಿರರೂ. ಅನುದಾನ ನೀಡುತ್ತಿದೆ. ನಗರ ಪ್ರದೇಶಗಳ ಕಸವನ್ನು ವೈeನಿಕವಾಗಿ ವಿಲೇವಾರಿ ಮಾಡಲು ವ್ಯವಸ್ಥೆ ಮಾಡಿದ್ದು, ಅನೇಕ ಕಡೆ ಕಾಮಗಾರಿಗಳು ನಡೆಯುತ್ತಿವೆ. ಒಟ್ಟಾರೆ ನಗರ ಹಾಗೂ ಪಟ್ಟಣಗಳ ಅಭಿವೃದ್ಧಿಗೆ ಕಾಂಗ್ರೆಸ್ ಒತ್ತು ನೀಡಿದೆ ಎಂದರು.
ಶಿವಮೊಗ್ಗ ನಗರವನ್ನು ಸುಂದರ ಹಾಗೂ ಪರಿಸರ ಸ್ನೇಹಿ ನಗರವಾಗಿ ಅಭಿವೃದ್ಧಿ ಪಡಿಸಲು ಕಾಂಗ್ರೆಸ್ ಅಭ್ಯರ್ಥಿಗಳನ್ನು ಗೆಲ್ಲಿಸಬೇಕೆಂದು ಮತದಾರರನ್ನು ಕೋರಿದರು.
ಅಶಿಸ್ತಿಗೆ ಕ್ರಮ: ಚುನಾವಣೆಗಳಲ್ಲಿ ಪಕ್ಷ ವಿರೋಧಿ ಚಟುವಟಿಕೆ ನಡೆಸುವ ಹಾಗೂ ಬಂಡಾಯ ಏಳುವವರ ವಿರುದ್ಧ ಪಕ್ಷ ಕಟ್ಟು ನಿಟ್ಟಿನ ಕ್ರಮ ಕೈಗೊಳ್ಳಲಿದೆ ಎಂದು ಈಶ್ವರ ಖಂಡ್ರೆ ಎಚ್ಚರಿಸಿದರು.
ಮುಂದಿನ ದಿನಗಳಲ್ಲಿ ಪಕ್ಷವನ್ನು ಬೇರು ಮಟ್ಟದಲ್ಲಿ ಸಂಘಟಿಸಿ ಚುನಾವಣೆಗಳಲ್ಲಿ ಗೆಲ್ಲಲು ಸಜ್ಜುಗೊಳಿಸುವುದಾಗಿ ತಿಳಿಸಿದರು.
ಸುದ್ದಿಗೋಷ್ಟಿಯಲ್ಲಿ ಜಿಲ್ಲಾ ಕಾಂಗ್ರೆಸ್ ಅಧ್ಯಕ್ಷ ತೀ.ನ. ಶ್ರೀನಿವಾಸ್, ವಿಧಾನಪರಿಷತ್ ಸದಸ್ಯ ಆರ್. ಪ್ರಸನ್ನ ಕುಮಾರ್, ಮಾಜಿ ಶಾಸಕರಾದ ಹೆಚ್.ಎಂ. ಚಂದ್ರಶೇಖ ರಪ್ಪ, ಕೆ.ಬಿ. ಪ್ರಸನ್ನಕುಮಾರ್, ಪ್ರಮುಖರಾದ ಸುಂದ ರೇಶ್, ಹೆಚ್.ಸಿ. ಯೋಗೀಶ್, ಇಸ್ಮಾಯಿಲ್‌ಖಾನ್, ಎಸ್.ಪಿ. ಶೇಷಾದ್ರಿ, ಎನ್. ರಮೇಶ್, ವಿಜಯಲಕ್ಷ್ಮಿ ಪಾಟೀಲ್, ಚಿನ್ನಪ್ಪ, ವೈ.ಹೆಚ್. ನಾಗರಾಜ್ ಮತ್ತಿತರ ರಿದ್ದರು.

ಕೊಡಗಿಗೆ ೧೦ ಕೋಟಿ ರೂ.ದೇಣಿಗೆ
ಶಿವಮೊಗ್ಗ:- ಕೊಡಗಿನ ನೆರೆ ಸಂತ್ರಸ್ತರ ಪರಿಹಾರಕ್ಕಾಗಿ ರಾಜ್ಯದ ಕಾಂಗ್ರೆಸ್ ಪಕ್ಷದಿಂದ ೧೦ ಕೋಟಿರೂ. ನೀಡಲು ನಿರ್ಧರಿಸಲಾಗಿದೆ ಎಂದು ಕೆಪಿಸಿಸಿ ಕಾರ್ಯಾಧ್ಯಕ್ಷ ಈಶ್ವರ ಖಂಡ್ರೆ ತಿಳಿಸಿದರು.
ಅವರು ಇಂದು ಸುದ್ದಿಗೋಷ್ಟಿಯಲ್ಲಿ ಮಾತ ನಾಡಿ, ಅತಿವೃಷ್ಠಿಯಿಂದ ಕೊಡಗು ಸಂಪೂರ್ಣ ಹಾನಿಗೊಳಗಾಗಿದೆ. ಅನೇಕ ಹಳ್ಳಿಗಳೇ ನಾಶವಾ ಗಿವೆ, ಹತ್ತಕ್ಕೂ ಹೆಚ್ಚು ಜನ ಸತ್ತಿದ್ದಾರೆ. ಇಂತಹ ಪರಿಸ್ಥಿತಿಯಲ್ಲಿ ಆ ಜನತೆಗೆ ಕಾಂಗ್ರೆಸ್ ಪಕ್ಷದ ಜನಪ್ರತಿನಿಧಿಗಳ ಮೂಲಕ ಪರಿಹಾರ ಒದಗಿಸಲಾಗುವುದು ಎಂದರು.
ಕಾಂಗ್ರೆಸ್‌ನ ಎಲ್ಲಾ ಶಾಸಕರು ೨ ತಿಂಗಳ ಸಂಬಳ ನೀಡುವರು, ಎಂಎಲ್‌ಸಿಗಳು ೫ ಲಕ್ಷರೂ. ಅನುದಾನ, ರಾಜ್ಯ ಸಭೆ ಸದಸ್ಯರು ೨೫ ಲಕ್ಷರೂ. ಅನುದಾನವನ್ನು ಕೊಡಗಿನ ಸಂತ್ರಸ್ತರ ಪರಿಹಾರಕ್ಕೆ ನೀಡಬೇಕೆಂದು ತೀರ್ಮಾನಿಸಲಾಗಿದೆ. ಇದರಂತೆ ಹಣ ಸಂಗ್ರಹಣೆ ಮಾಡಿ ಸಂತ್ರಸ್ತರಿಗೆ ಪುನರ್ವಸತಿ ಸೇರಿದಂತೆ ಯಾವುದೇ ಸೌಲಭ್ಯ ಕಲ್ಪಿಸಲು ನೀಡಲಾಗುವುದು ಎಂದರು.
ಈಗಾಗಲೇ ತಾವು ಸೇರಿದಂತೆ ಪಕ್ಷದ ನಾಯಕ ರಾದ ದಿನೇಶ್ ಗುಂಡೂರಾವ್, ಸಿದ್ದರಾಮಯ್ಯ ಮತ್ತಿತರರು ಕೊಡಗಿಗೆ ಭೇಟಿ ನೀಡಿ ಪರಿಶೀಲನೆ ಮಾಡಿದ್ದು, ಸಂತ್ರಸ್ತರ ಪರವಾಗಿ ರಾಜ್ಯ ಸರ್ಕಾರ ಕೆಲಸ ಮಾಡಲಿದೆ ಎಂದರು.
ಕೇಂದ್ರ ತಕ್ಷಣ ೧೦೦ಕೋಟಿ ನೀಡಲಿ:
ಕೇಂದ್ರ ಸರ್ಕಾರ ಕೇರಳ ರಾಜ್ಯದ ನೆರೆ ಹಾನಿಗೆ ನೀಡಿದಂತೆ ರಾಜ್ಯದ ಮಡಿಕೇರಿಯಲ್ಲಿ ಆಗಿರುವ ಹಾನಿಗೆ ಪರಿಹಾರ ನೀಡಲು ಮೀನಮೇಷ ಎಣಿಸದೆ ತಕ್ಷಣಕ್ಕೆ ಕನಿಷ್ಠ ೧೦೦ಕೋಟಿರೂ. ಬಿಡುಗಡೆ ಮಾಡಬೇಕು. ನಂತರ ಹಾನಿಯ ಅಧ್ಯಯನ ನಡೆಸಿ ಮುಂದಿನ ಪರಿಹಾರ ನೀಡಬೇಕೆಂದು ಖಂಡ್ರೆ ಒತ್ತಾಯಿಸಿದರು.