ಪರಿಸರ ಸಂರಕ್ಷಣೆ ನಮ್ಮೆಲ್ಲರ ಹೊಣೆ: ಧರ್ಮಸ್ಥಳ ಗ್ರಾಮೀಣಾಭಿವೃದ್ಧಿ ಯೋಜನಾಧಿಕಾರಿ ರವಿ

ಶಿವಮೊಗ್ಗ: ಪರಿಸರ ಸಂರಕ್ಷಣೆಯು ಅತ್ಯಂತ ಅವಶ್ಯಕತೆ ಇದ್ದು, ಪ್ರತಿಯೊಬ್ಬರೂ ಸಸಿಗಳನ್ನು ನೆಟ್ಟು ಪೋಷಿಸುವ ಸಂಕಲ್ಪ ಕೈಗೊಳ್ಳಬೇಕು ಎಂದು ಧರ್ಮಸ್ಥಳ ಗ್ರಾಮೀಣಾಭಿವೃದ್ಧಿ ಯೋಜನಾಧಿಕಾರಿ ರವಿ ಹೇಳಿದರು.

ವಿಶ್ವ ಪರಿಸರ ದಿನಾಚರಣೆಯ ಅಂಗವಾಗಿ ತಾಲೂಕಿನ ಹನಸವಾಡಿಯ ತುಂಗಾ ಪ್ರೌಢಶಾಲೆಯಲ್ಲಿ ಧರ್ಮಸ್ಥಳ ಗ್ರಾಮೀಣಾಭಿವೃದ್ಧಿ ಯೋಜನೆ ಸಹಯೋಗದಲ್ಲಿ ಏರ್ಪಡಿಸಿದ್ದ ಶಾಲಾ ಮೈದಾನದಲ್ಲಿ 100 ಸಸಿಗಳನ್ನು ನೆಡುವ ಕಾರ್ಯಕ್ರಮದಲ್ಲಿ ಮಾತನಾಡಿ, ಪರಿಸರ ನಾಶದಿಂದ ತಾಪಮಾನ ಹೆಚ್ಚಾಗುತ್ತಿದ್ದು, ಮಳೆ ಕೊರತೆ ಎದುರಿಸುತ್ತಿದ್ದೇವೆ. ಉತ್ತಮ ಪರಿಸರ ನಿರ್ಮಾಣ ನಮ್ಮೆಲ್ಲರ ಹೊಣೆ ಎಂದು ತಿಳಿಸಿದರು.

ಶಾಲಾ ಸ್ಥಳೀಯ ಸಲಹಾ ಸಮಿತಿ ಅಧ್ಯಕ್ಷ ಜಿ.ಇ.ರಮೇಶ್ ಅವರು ಪರಿಸರದ ಕಾಳಜಿಯ ಬಗ್ಗೆ ಮಾತನಾಡಿ, ಇಂದು ನೆಟ್ಟಿರುವ ಗಿಡಗಳನ್ನು ಯಾರು ಉತ್ತಮವಾಗಿ ನೀರೆರೆದು ಸಂರಕ್ಷಿಸುತ್ತಾರೋ ಅವರಿಗೆ ಮುಂದಿನ ಪರಿಸರ ದಿನಾಚರಣೆ ಸಮಯದಲ್ಲಿ ಪ್ರಥಮ, ದ್ವಿತೀಯ ಮತ್ತು ತೃತೀಯ ಬಹುಮಾನಗಳನ್ನು ನೀಡಲಾಗುತ್ತದೆ ಎಂದು ಹೇಳಿದರು.

ಪರಿಸರ ದಿನಾಚರಣೆಯು ಕೇವಲ ಒಂದು ದಿನದ ಕಾರ್ಯಕ್ರಮವಾಗದೇ ಅದು ನಿರಂತರ ನಡೆಯುವ ಪರಿಸರ ಕಾಳಜಿಯಾಗಬೇಕು ಎಂದರು.

ಶಾಲಾ ಸಲಹಾ ಸಮಿತಿ ಸದಸ್ಯ ಜಿ.ಎನ್.ರಮೇಶ್ ಮಾತನಾಡಿ, ಪರಿಸರ ದಿನಾಚರಣೆಯ ಅಂಗವಾಗಿ 8ನೇ ತರಗತಿಯಲ್ಲಿ ವ್ಯಾಸಂಗ ಮಾಡುತ್ತಿರುವ ವಿದ್ಯಾರ್ಥಿಗಳಿಗೆ ಉಚಿತ ಸಮವಸ್ತ್ರವನ್ನು ನೀಡುವುದಾಗಿ ತಿಳಿಸಿ, ಉತ್ತಮ ವ್ಯಾಸಂಗ ಮಾಡಿ ಭವಿಷ್ಯದಲ್ಲಿ ಸತ್ಪ್ರಜೆಗಳಾಗಿ ಬೆಳೆಯಲು ಆಶಿಸಿದರು.

ವರ್ಷಪೂರ್ತಿ ವನ ಮಹೋತ್ಸವ ಆಚರಿಸಲು ಸಂಕಲ್ಪ ಮಾಡಲಾಯಿತು. ಶಾಲಾ ಸ್ಥಳೀಯ ಸಲಹಾ ಸಮಿತಿ ಎಲ್ಲ ಸದಸ್ಯರು 8, 9 ಮತ್ತು 10ನೇ ತರಗತಿಯಲ್ಲಿ ಅಭ್ಯಾಸ ಮಾಡುತ್ತಿರುವ ವಿದ್ಯಾರ್ಥಿಗಳಿಗೆ ಉಚಿತ ನೋಟ್ ಪುಸ್ತಕಗಳನ್ನು ನೀಡಿದರು.

ಧರ್ಮಸ್ಥಳ ಗ್ರಾಮೀಣಾಭಿವೃದ್ಧಿ ಯೋಜನೆಯ ಸಿಬ್ಬಂದಿ ಅನ್ನಪೂರ್ಣ, ಸುಬ್ಬಲಕ್ಷ್ಮೀ, ಚೈತ್ರಾ ಹಾಗೂ ದಾಕ್ಷಾಯಿಣಿ ವಿದ್ಯಾರ್ಥಿಗಳಿಗೆ ಸಿಹಿ ವಿತರಣೆಮಾಡಿದರು. ಶಾಲೆಯ ಮುಖ್ಯ ಶಿಕ್ಷಕರು ಮತ್ತು ಸಿಬ್ಬಂದಿ ಭಾಗವಹಿಸಿದ್ದರು. ಶಾಲಾ ಆವರಣದ ಸುತ್ತಲು ಸಸಿ ನೆಡುವ ಮೂಲಕ ಕಾರ್ಯಕ್ರಮ ಯಶಸ್ವಿಗೊಳಿಸಲಾಯಿತು.