Saturday, December 14, 2024
Google search engine
Homeಗುಡ್ಡ ಕುಸಿತದಿಂದ ಪರಿಸರದ ಪಾಠ ಕಲಿಯಬೇಕು: ಡಾ. ಎಚ್. ಕೆ. ಎಸ್. ಸ್ವಾಮಿ

ಗುಡ್ಡ ಕುಸಿತದಿಂದ ಪರಿಸರದ ಪಾಠ ಕಲಿಯಬೇಕು: ಡಾ. ಎಚ್. ಕೆ. ಎಸ್. ಸ್ವಾಮಿ

ಚಿತ್ರದುರ್ಗ: ಗುಡ್ಡ ಕೊರೆದು ಮನೆ ಕಟ್ಟುವವರು ಎಚ್ಚರಿಕೆವಹಿಸಿ, ಗುಡ್ಡ ಕುಸಿತದಿಂದ ತಪ್ಪಿಸಿಕೊಳ್ಳುವಂತಹ ಮುಂಜಾಗ್ರತೆ ಕ್ರಮಗಳನ್ನು ವಹಿಸಿಕೊಳ್ಳಬೇಕು ಎಂದು ಕರ್ನಾಟಕ ಜ್ಞಾನ ವಿಜ್ಞಾನ ಸಮಿತಿ ಮತ್ತು ಕರ್ನಾಟಕ ಸರ್ವೋದಯ ಮಂಡಳಿಯ ಡಾ. ಎಚ್. ಕೆ. ಎಸ್. ಸ್ವಾಮಿ ವಿನಂತಿಸಿಕೊಂಡಿದ್ದಾರೆ.

ಈ ಕುರಿತು ಪತ್ರಿಕಾ ಪ್ರಕಟಣೆಯಲ್ಲಿ ಹೊರಡಿಸಿರುವ ಅವರು, ಮಳೆಗಾಲದಲ್ಲಿ ಕರಾವಳಿ ತೀರದಲ್ಲಿ, ಸಹ್ಯಾದ್ರಿ ಬೆಟ್ಟದ ಸಾಲಿನಲ್ಲಿ, ಗುಡ್ಡ ಕುಸಿತ ಉಂಟಾಗಿ ನೂರಾರು ಜನ ನಿರಾಶ್ರಿತರಾಗುತ್ತಿದ್ದಾರೆ. ಹಾಗೆ ಪ್ರಾಣ ಹಾನಿಯೂ ಸಹ ಹೆಚ್ಚಾಗುತ್ತಿದ್ದು, ಇದರ ಬಗ್ಗೆ ಜನರಲ್ಲಿ ಜಾಗೃತಿ ಮೂಡಿಸಬೇಕಾಗಿದೆ. ಮನೆ ಕಟ್ಟುವವರು ಗುಡ್ಡದ ಸುತ್ತಮುತ್ತ, ಅದರ ತಳ ಭಾಗದಲ್ಲಿ ಸೈಟ್‌ಗಳನ್ನು ನಿರ್ಮಿಸಿಕೊಂಡು, ಮನೆ ಕಟ್ಟುವಾಗ ಮುನ್ನೆಚ್ಚರಿಕೆ ಕ್ರಮಗಳನ್ನು ವಹಿಸಿಕೊಳ್ಳಬೇಕು. ಎತ್ತರದ ಪ್ರದೇಶದಿಂದ ಕೆಳಗಿನ ಪ್ರದೇಶಕ್ಕೆ ಮಣ್ಣು ಯಾವಾಗ ಬೇಕಾದರೂ ಕುಸಿಯಬಹುದು, ಅದರಲ್ಲೂ ಮಳೆ ಬಂದು ಮಣ್ಣು ನೆಂದು, ಒಳಗಿಂದೊಳಗೆ ಮಣ್ಣು ಕುಸಿದು, ಕೆಸರಿನ ಲಾರ್ವ ತರಹ ಹರಿದು ಬರುವ ದೃಶ್ಯವನ್ನು ನಾವು ಮೊನ್ನೆ ಶಿರೂರುದಲ್ಲಿ ನಡೆದ ಗುಡ್ಡ ಕುಸಿತದಿಂದ ಅರಿತುಕೊಳ್ಳ ಬಹುದು ಎಂದಿದ್ದಾರೆ.

ಎಷ್ಟೇ ಇಂಜಿನಿಯರಿಂಗ್ ಮತ್ತು ತಂತ್ರಜ್ಞಾನವಿದ್ದರೂ ಸಹ, ಗುಡ್ಡ ಕುಸಿತದಿಂದ ಆಗುವ ಅನಾಹುತಗಳನ್ನ ತಪ್ಪಿಸಲು ಅಸಾಧ್ಯವಾಗುತ್ತಿದೆ. ಅಗಾಧ ಪ್ರಮಾಣದಲ್ಲಿ ಮಣ್ಣು ಕೊಚ್ಚಿಕೊಂಡು ಬಂದಾಗ ಯಾವ ತಡೆಗೋಡೆಗಳು, ಸಿಮೆಂಟ್ ಕಾಂಕ್ರೀಟ್ ಕಂಬಗಳು ತಡೆಯಲಾರದಂತ ಪರಿಸ್ಥಿತಿ ನಿರ್ಮಾಣವಾಗುತ್ತದೆ. ಆದ್ದರಿಂದ ನಾವು ಗುಡ್ಡಗಳ ಮೇಲೆ ಆಕ್ರಮಣ ಮಾಡಿ ಮನೆಗಳನ್ನು ನಿರ್ಮಿಸುವುದು, ಹೋಟೆಲ್‌ಗಳನ್ನ ನಿರ್ಮಿಸುವುದು, ದೇವಸ್ಥಾನಗಳನ್ನು ನಿರ್ಮಿಸುವುದು, ಅಪಾಯಕರ ಎಂದು ತಿಳಿಸಿದ್ದಾರೆ.

ಮನೆ ಕಟ್ಟುವವರು, ಸಿಮೆಂಟ್ ಮತ್ತು ಕಬ್ಬಿಣದ ರಾಡುಗಳನ್ನ ಬಳಸಿ, ಬಲಿಷ್ಠವಾದ ಕಟ್ಟಡ ಕಟ್ಟಿದ್ದರೆ ಮಾತ್ರ ಸ್ವಲ್ಪ ಮಟ್ಟಿಗೆ ಅನಾಹುತಗಳನ್ನು ತಡೆಯಬಹುದು. ಆದರೆ ಮಣ್ಣಿನಿಂದ ಕಟ್ಟಿದಂತ ಗೋಡೆಗಳನ್ನಂತು ಯಾವ ಸಂದರ್ಭದಲ್ಲಿ ರಕ್ಷಿಸಲು ಅಸಾಧ್ಯವಾಗುತ್ತದೆ. ತಗುಪ್ರದೇಶದಲ್ಲಿ ಮಣ್ಣಿನಿಂದ ಕಟ್ಟಿದ ಮನೆಗಳು, ನೀರನ್ನ ಹೀರಿಕೊಂಡು, ಗೊತ್ತಿಲ್ಲದಂತೆ, ಗೊತ್ತಿಲ್ಲದ ಸಮಯದಲ್ಲಿ, ರಾತ್ರೋರಾತ್ರಿ ಮಲಗಿರುವ ಜನರ ಮೇಲೆ ಕುಸಿದು ಬೀಳುವ ಸಂಭವಗಳಿವೆ. ಹಾಗಾಗಿ ತಗ್ಗಿನ ಪ್ರದೇಶದಲ್ಲಿರುವ ಮನೆಗಳಿಗೆ ಆದಷ್ಟು ಸಿಮೆಂಟ್ ನಿಂದ ತಳಪಾಯವನ್ನಾದರೂ ಕಟ್ಟಿಕೊಂಡಿರಬೇಕು. ನೀರು ತಳಪಾಯದಿಂದ ಹೀರಿಕೊಂಡು ಗೋಡೆಗಳನ್ನು ನೆನೆಸಬಾರದು. ಅಷ್ಟರಮಟ್ಟಿಗಾದರೂ ನಾವು ಸುಭದ್ರವಾದ ಮನೆ ಕಟ್ಟುವುದರ ಬಗ್ಗೆ ಕಾರ್ಯಕ್ರಮವನ್ನ ರೂಪಿಸಿಕೊಳ್ಳಬೇಕು ಎಂದಿದ್ದಾರೆ.

ತಾಂತ್ರಿಕತೆ, ಉತ್ತಮ ಆರ್ಥಿಕ ಸ್ಥಿತಿಯಲ್ಲಿ ಉತ್ತಮವಾದಂತವರು ಸಿಮೆಂಟ್ ನಿಂದ ಮನೆಗಳನ್ನು ಕಟ್ಟಿಕೊಳ್ಳುತ್ತಿದ್ದಾರೆ. ಆದರೆ ಇನ್ನೂ ಗ್ರಾಮೀಣ ಜನರಲ್ಲಿ, ಲಕ್ಷಾಂತರ ಮನೆಗಳು ಮಣ್ಣಿನಿಂದಲೇ ನಿರ್ಮಾಣವಾಗಿದ್ದು, ಮಳೆಗಾಲದಲ್ಲಿ ನೀರು ನಿಂತಾಗ ಅಪಾಯಕಾರಿಯಾಗುತ್ತದೆ, ಅಂಥವುಗಳನ್ನ ಸ್ಥಳಾಂತರ ಮಾಡುವುದು, ಇಲ್ಲ ಬದಲಿ ಮನೆಗಳನ್ನಾದರೂ ಸುರಕ್ಷಿತ ಜಾಗದಲ್ಲಿ ಕಟ್ಟಿ ಕೊಡಬೇಕಾಗಿದೆ. ಇದರ ಬಗ್ಗೆ ಸರ್ಕಾರ ಯೋಜನೆಗಳನ್ನು ರೂಪಿಸಿ, ಕಾರ್ಯೊನ್ಮುಖರಾಗಬೇಕು ಹೇಳಿದ್ದಾರೆ.

ಗುಡ್ಡ ಕುಸಿತದ ಬಗ್ಗೆ ಅಧ್ಯಯನಗಳಾಗಿದ್ದರು ಸಹ ಮನುಷ್ಯ ಅವುಗಳನ್ನ ಗಂಭೀರವಾಗಿ ಪರಿಗಣಿಸಿಲ್ಲ. ಗುಡ್ಡ ಕುಸಿತಕ್ಕೆ ಕಾರಣಗಳಾದ ಗುಡ್ಡದಮೇಲೆ ವ್ಯವಸಾಯ ಮಾಡುವುದು, ಮನೆ ಕಟ್ಟುವುದು, ರಸ್ತೆ ವಿಸ್ತೀರ್ಣ ಮಾಡುವುದು, ಅರಣ್ಯ ನಾಶ ಮಾಡುವುದು ಗಾಳಿ ಗೋಪುರ ಕಟ್ಟುವುದು ಮತ್ತು ಗಣಿ ಕೈಗಾರಿಕೆಗಳಿಗಾಗಿ ಮದ್ದು ಗುಂಡಿನಿಂದ ಬಂಡೆಗಳನ್ನ ಸಿಡಿಸುವುದು. ಇವೆಲ್ಲ ಕಾರಣಗಳನ್ನು ನಾವು ಕಡಿಮೆಗೊಳಿಸುತ್ತಾ, ಪರಿಸರ ಸ್ನೇಹ ಜೀವನ ಮಾಡಿದರೆ, ಅಪಘಾತಗಳನ್ನ ಕಡಿಮೆಗೊಳಿಸಬಹುದು. ಅದಕ್ಕಾಗಿ ಇಂತಹ ಅನಾಹುತಗಳ ಬಗ್ಗೆ ಜನರಲ್ಲಿ ಜಾಗೃತಿ ಮೂಡಿಸಿ, ಪರಿಸರ ರಕ್ಷಣೆ ಜೊತೆಗೆ, ಮಾನವನು ತನ್ನ ಬದುಕನ್ನು ರೂಪಿಸಿಕೊಳ್ಳಬೇಕು. ಇಲ್ಲದಿದ್ದರೆ ಮನುಷ್ಯ ತನ್ನ ಅಮೂಲ್ಯವಾದ ಜೀವನವನ್ನ ನಾಶಮಾಡಿಕೊಂಡು ಕೊರಗುವಂತಾಗುತ್ತದೆ ಎಂದಿದ್ದಾರೆ.

ಮಳೆಗಾಲದಲ್ಲಿ ಪ್ರತಿ ವರ್ಷ ಜೀವಹಾನಿಯಾಗುವುದನ್ನ ನೋಡಿದರೆ, ಮನುಷ್ಯ ಇನ್ನೂ ಸಹ ತನ್ನ ತಪ್ಪಿನ ಅರಿವು ಮೂಡಿಲ್ಲ ಎನಿಸುತ್ತದೆ. ಪ್ರಕೃತಿಯ ವಿರುದ್ಧ ಜೀವನ ಮಾಡುವುದರ ಜೊತೆ ಜೊತೆಗೆ, ಅದರ ಜೊತೆ ಹೊಂದಾಣಿಕೆಗೂ ಸಹ ಮುಂದಾಗಬೇಕಾಗಿದೆ ಎಂದು ತಿಳಿಸಿದ್ದಾರೆ.

RELATED ARTICLES
- Advertisment -
Google search engine

Most Popular

Recent Comments