ಈ ಬಾರಿ ರಾಜ್ಯದಲ್ಲಿ ಬಿಜೆಪಿ ಸರ್ಕಾರ ಪತ್ರಿಕೆ: ನಮಸ್ಕಾರ, ಹೇಗಿದೆ ಸಾರ್, ಚುನಾವಣಾ ಕಾವು?

ಯಡಿಯೂರಪ್ಪ: ಜನರ ಉತ್ಸಾಹ-ಪ್ರತಿಕ್ರಿಯೆ ಮುಗಿಲು ಮುಟ್ಟಿದೆ. ನಿರೀಕ್ಷೆಗೂ ಮೀರಿ ಬೆಂಬಲ ವ್ಯಕ್ತವಾಗುತ್ತಿದೆ. ನಮ್ಮ ರಾಷ್ಟ್ರೀಯ ಅಧ್ಯಕ್ಷರಾದ ಅಮಿತ್ ಶಾರವರ ರೋಡ್ ಶೋ, ಸಾರ್ವಜನಿಕ ಕಾರ್ಯಕ್ರಮಗಳಿಗೆ ಹರಿದು ಬರುತ್ತಿರುವ ಜನಸಾಗರ ಬಿಜೆಪಿ ಅಲೆಯನ್ನೇ, ಸೃಷ್ಟಿಸಿದೆ. ಹೊಸಕೋಟೆಯಂತಾ ಕ್ಷೇತ್ರದಲ್ಲಿ ಉರಿ ಬಿಸಿಲಿನಲ್ಲಿ ಹತ್ತಿಪ್ಪತ್ತು ಸಾವಿರ ಜನರ ರೋಡ್ ಶೋ ಮೈ ಝುಮ್ ಎನಿಸುವಂತಿತ್ತು. ನಮ್ಮ ಕಾರ್ಯಕ್ರಮಗಳಿಗೆ ಹೆಚ್ಚಿನ ಸಂಖ್ಯೆಯಲ್ಲಿ ಉತ್ಸಾಹೀ ಯುವ ಜನಾಂಗ ಮತ್ತು ವಿಶೇಷವಾಗಿ ಮಹಿಳೆಯರು ಪಾಲ್ಗೊಳ್ಳುತ್ತಿದ್ದಾರೆ. ಪ್ರಧಾನಿ ನರೇಂದ್ರ ಮೋದಿಯವರ ಕಾರ್ಯಕ್ರಮ ನೀವೇ ನೋಡಿದ್ದೀರಿ. ಶಿವಮೊಗ್ಗದಲ್ಲಿ ಮೋದಿ ಇತಿಹಾಸ ಸೃಷ್ಟಿಸಿದ್ದಾರೆ.
ಪತ್ರಿಕೆ: ಪರಿವರ್ತನಾ ಯಾತ್ರೆಗೂ ಈಗಿಗೂ ಪರಿಸ್ಥಿತಿ ಬದಲಾಗಿದೆಯೆ?
ಯಡಿಯೂರಪ್ಪ: ನಿಶ್ಚಿತವಾಗಿ, ನಮ್ಮ ಪರಿವರ್ತನಾ ಯಾತ್ರೆಯೂ ಐತಿಹಾಸಿಕ. ಅದು ಅದ್ಭುತ ಯಶಸ್ಸು ಕಂಡಿದೆ. ರಾಜ್ಯದುದ್ದಗಲಕ್ಕೂ ಎಲ್ಲಾ ವಿಧಾನಸಭಾ ಕ್ಷೇತ್ರಗಳಿಗೂ ಯಾತ್ರೆ ತಲುಪಿದೆ. ಬಿಜೆಪಿ ಟೀಂ, ಒಗ್ಗಟಿನಿಂದ ಕಣಕ್ಕಿಳಿದಿದ್ದು, ನಮ್ಮ ಕಾರ್ಯಕರ್ತರಿಗೆ ಶಕ್ತಿ ತುಂಬಿತು. ಈಗಿನ ಚುನಾವಣಾ ಅಭಿಯಾನಕ್ಕೆ ಭದ್ರ ಬುನಾದಿ ಹಾಕಿಕೊಟ್ಟಿತು.
ಪತ್ರಿಕೆ: ಹಾಗಾದ್ರೆ, ಮಿಷನ್ ೧೫೦ರ ಗುರಿ ತಲುಪುತ್ತೀರಾ?
ಯಡಿಯೂರಪ್ಪ: ಅನುಮಾನವೇ ಬೇಡ. ಅಮಿತ್ ಶಾ ಅಲೆ ಜೊತೆಗೆ ಈಗ ನರೇಂದ್ರ ಮೋದಿಯವರ ಸುನಾಮಿ ಅಪ್ಪಳಿಸಿದೆ. ನಾವು ೧೫೦ ಸೀಟುಗಳನ್ನು ಪಡೆದು ಅಧಿಕಾರಕ್ಕೆ ಬರುವುದು ನೂರರಷ್ಟು ನಿಶ್ಚಿತ.
ಪತ್ರಿಕೆ: ಟಿಕೆಟ್ ಹಂಚಿಕೆಯಲ್ಲಿ ಆದ ಗೊಂದಲ, ವೈಯಕ್ತಿಕ ಪರಿಣಾಮ ಬೀರುವುದಿಲ್ಲವೆ?. ವರುಣಾದಂತಹ ಕ್ಷೇತ್ರದಲ್ಲಿ ಭಾರೀ ಗಲಾಟೆಯಾದದ್ದು ನಿಮಗೆ ಹಿನ್ನಡೆ ಎನ್ನುತ್ತಿದ್ದಾರೆ.
ಯಡಿಯೂರಪ್ಪ: ಸಣ್ಣ-ಪುಟ್ಟ ಗೊಂದಲಗಳಾಗಿದ್ದು ಸಹಜ, ಆದರೆ, ಈಗ ಎಲ್ಲವೂ ಬಗೆ ಹರಿದಿದೆ. ವರುಣಾ ಸೇರಿದಂತೆ ಎಲ್ಲಾ ಕ್ಷೇತ್ರಗಳಲ್ಲಿ ಕಾರ್ಯಕರ್ತರ ಪಡೆ ಸಮರೋತ್ಸಾಹದಿಂದ ಮನೆ-ಮನೆಗೆ ತೆರಳುತ್ತಿದ್ದಾರೆ.
ಪತ್ರಿಕೆ: ಗೆಲುವಿಗೆ ನಿಮ್ಮ ತಂತ್ರ ಏನು?
ಸಂಘಟನೆ-ಸಾಮೂಹಿಕ ಪರಿಶ್ರಮ ಇದೇ ನಮ್ಮ ಗುಟ್ಟು. ಅಮಿತ್‌ಶಾರವರು ಕೊಟ್ಟಿರುವ ೧೬ ಅಂಶಗಳ ಸೂತ್ರವನ್ನು ಕಟ್ಟುನಿಟ್ಟಾಗಿ ಜಾರಿಗೆ ತರುತ್ತಿದ್ದೇವೆ. ಜೊತೆಗೆ ಕೇಂದ್ರದ ಶ್ರೀ ಮೋದಿಯವರ ಜನಪರ ಯೋಜನೆಗಳು ನಮಗೆ ವರದಾನ ಆಗಿದೆ. ಈ ಬಾರಿ ಪೇಜ್ ಪ್ರಮುಖ್ ನಮ್ಮ ಗೆಲುವಿನ ರೂವಾರಿ ಆಗಲಿದ್ದಾನೆ.
ಪತ್ರಿಕೆ: ಏನದು ಪೇಜ್ ಪ್ರಮುಖ್?
ಯಡಿಯೂರಪ್ಪ: ಮತದಾರರ ಪಟ್ಟಿ ವೋಟರ್ ಲೀಸ್ಟ್‌ನ ಪ್ರತಿ ಪೇಜಿಗೆ ಒಬ್ಬ ಕಾರ‍್ಯಕರ್ತನನ್ನು ನಿಯೋಜನೆಗೊಳಿಸುತ್ತಿದ್ದೇವೆ. ೩೦ ಮತದಾರರರೊಂದಿಗೆ ನಿರಂತರ ಸಂಪರ್ಕ ಇಟ್ಟುಕೊಳ್ಳುವವನೇ ಪೇಜ್ ಪ್ರಮುಖ್. ಅವನ ಪೇಜಿನಲ್ಲಿರುವ ೩೦ ಮತದಾರರ ಮನವೊಲಿಸಿ, ಬಿಜೆಪಿಗೆ ಹೆಚ್ಚಿನ ಮತಚಲಾವಣೆ ಆಗುವಂತೆ ನೋಡಿಕೊಳ್ಳುತ್ತಾನೆ. ನನಗೂ ಸೇರಿದಂತೆ, ರಾಜ್ಯದ ಎಲ್ಲಾ ಕಾರ್ಯಕರ್ತರೂ ಪೇಜ್ ಪ್ರಮುಖ ಕೆಲಸ ಮಾಡುತ್ತಿದ್ದಾರೆ. ಪ್ರತಿ ಪೇಜಿನಲ್ಲಿ ಗೆಲುವಿನ ಕಾರ್ಯಕ್ರಮ ರೂಪಿಸಿದ್ದೇವೆ. ಬೇರೆ ಪಕ್ಷದವರು ಊಹಿಸಲೂ ಆಗದ ರಣನೀತಿ ನಮ್ಮದು.
ಪತ್ರಿಕೆ: ಯಾಕೆ, ಉಳಿದವರೂ ಮಾಡಬಹುದಲ್ಲ ಇದನ್ನು?
ಯಡಿಯೂರಪ್ಪ: ನಮ್ಮದು ಮಾತ್ರ ಕಾರ‍್ಯಕರ್ತರ ಆಧಾರಿತ ಪಕ್ಷ-ಇZbಛಿ ಆZoಛಿb PZಠಿqs. ೧೨ ಕೋಟಿ ಸದಸ್ಯತ್ವ ಮಾಡುವ ಶಕ್ತಿ ನಮಗೆ ಮಾತ್ರ ಇದೆ. ಶಿವಮೊಗ್ಗದ್ದೇ ಉದಾಹರಣೆ ತೆಗೆದುಕೊಂಡರೆ, ನಾವಿಲ್ಲಿ ೮೬೦೦ ಪೇಜ್ ಪ್ರಮುಖರನ್ನು ನಿಯುಕ್ತಿ ಮಾಡಿದ್ದೇವೆ. ಪ್ರತಿಯೊಬ್ಬ ಪೇಜ್ ಪ್ರಮುಖ್‌ನ ಹೆಸರು, ವಿಳಾಸ, ಪೋನ್ ನಂ ವೈಬ್ ಸೈಟ್‌ಲ್ಲಿ ಅಪ್‌ಲೋಡ್ ಆಗಿದೆ. ಪ್ರತಿನಿತ್ಯದ ಚಟುವಟಿಕೆಗಳ ವರದಿ ಕೂಡ ಪಡೆಯುತ್ತಿದ್ದಾರೆ. ಈ ಕೆಲಸ ಉಳಿದವರಿಂದ ಆಗದು. ನಿಃಸ್ವಾರ್ಥ, ದೇವ ದುರ್ಲಭ ಕಾರ‍್ಯಕರ್ತರೇ ನಮ್ಮ ಆಸ್ತಿ.
ಪತ್ರಿಕೆ: ಶಿಕಾರಿಪುರದಲ್ಲಿ ಹೇಗಿದೆ?
ಯಡಿಯೂರಪ್ಪ: ನಾನು ಗೆಲ್ಲುವುದು ನಿಶ್ಚಿತ. ಶಿಕಾರಿಪುರ ರಾಜ್ಯದ ಮುಖ್ಯಮಂತ್ರಿಯನ್ನು ಆರಿಸುತ್ತಿದೆ. ಹೀಗಾಗಿ, ಮುಖ್ಯಮಂತ್ರಿಗೆ ಗೌರವ ತರುವ ಅಂತರಕ್ಕಾಗಿ ನಮ್ಮ ಕಾರ‍್ಯಕರ್ತರು ಹಗಲಿರುಳು ಶ್ರಮ ಪಡುತ್ತಿದ್ದಾರೆ.
ಪತ್ರಿಕೆ: ರಾಜ್ಯದಲ್ಲಿ ಬಿಜೆಪಿಗೆ ಎದುರಾಳಿ ಯಾರು?
ಯಡಿಯೂರಪ್ಪ: ಬಹುತೇಕ ಕಡೆ ಕಾಂಗ್ರೆಸ್ ನಮ್ಮ ಎದುರಾಳಿ. ಕೆಲವು ಕ್ಷೇತ್ರಗಳಲ್ಲಿ ಜೆಡಿಎಸ್‌ನೊಂದಿಗೆ ಸೆಣಸಾಟ. ರಾಜ್ಯದ ಎಲ್ಲ ಕ್ಷೇತ್ರಗಳಿಗೂ ಸ್ಪರ್ಧಿಸುತ್ತಿರುವ ಏಕೈಕ ಪಕ್ಷ ಬಿಜೆಪಿ.
ಪತ್ರಿಕೆ: ತ್ರಿಕೋನ ಸ್ಪರ್ಧೆಯ ಲಾಭ ಯಾರಿಗೆ?
ಯಡಿಯೂರಪ್ಪ: ತ್ರೀಕೋನ ಸ್ಪರ್ಧೆಯ ಲಾಭ ನಿಶ್ಚಿತವಾಗಿ ಬಿಜೆಪಿಗೆ ಆಗಲಿದೆ. ಶೇ. ೪೦ರಷ್ಟು ಮತಗಳನ್ನು ನಿಶ್ಚಿತವಾಗಿ ಪಡೆಯುತ್ತಿದ್ದೇವೆ. ನಮ್ಮ ವಿರೋಧಿ ಮತಗಳು ಹರಿದು ಹಂಚಿಹೋಗುವುದರಿಂದ ನಾವು ೧೫೦ರ ಗುರಿ ತಲುಪುತ್ತೇವೆ.
ಪತ್ರಿಕೆ: ಜೆಡಿಎಸ್ ಕಿಂಗ್ ಮೇಕರ್ ಆಗಲು ಹೊರಟಿದೆಯಲ್ಲಾ.
ಯಡಿಯೂರಪ್ಪ: ಅದವರ ಭ್ರಮೆ, ಫಲಿತಾಂಶ ಬಂದ ನಂತರ ನರೇಂದ್ರ ಮೋದಿಯೇ ಕಿಂಗ್ ಎನ್ನುವುದು ಸಾಬೀತಾಗಲಿದೆ. ದೇವೆಗೌಡರ ಕನಸು ಹಾಗೇ ಮುಂದುವರೆಯಲಿದೆ.
ಪತ್ರಿಕೆ: ಈ ಚುನಾವಣೆಯ ಅಜೆಂಡಾ ಏನು?
ಯಡಿಯೂರಪ್ಪ: ರಾಜ್ಯಸರ್ಕಾರದ ವೈಫಲ್ಯ ಮತ್ತು ಭ್ರಷ್ಟಾಚಾರ ಹಾಗೂ ಕೇಂದ್ರದ ಬಿಜೆಪಿ ಸರ್ಕಾರದ ಸಾಧನೆ. ಇವೇ ಈ ಚುನಾವಣೆಯ ವಸ್ತುಗಳು.
ಪತ್ರಿಕೆ: ಲಿಂಗಾಯಿತರಿಗೆ ಪ್ರತ್ಯೇಕ ಧರ್ಮದಂತಹ ವಿಷಯವನ್ನು ರಾಜಕೀಯವಾಗಿ ಬಳಸಿಕೊಂಡು ಬಿಜೆಪಿಯನ್ನು ಕಟ್ಟಿಹಾಕಲಾಗುತ್ತಿದೆ ಎನ್ನಲಾಗುತ್ತಿದೆ? ನಿಜವೇ?
ಯಡಿಯೂರಪ್ಪ: ಜಾತಿ ಜಾತಿಗಳನ್ನು ಒಡೆದು ಎತ್ತಿಕಟ್ಟುವ ನೀಚಬುದ್ದಿಯೇ ಕಾಂಗ್ರೆಸ್‌ಗೆ ಮುಳುವಾಗಲಿದೆ. ಇವರ ಸ್ವಾರ್ಥವನ್ನು ಜನರು ಮನಗಂಡಿದ್ದಾರೆ. ವೀರಶೈವ-ಲಿಂಗಾಯತ-ಬಸವತತ್ವ ಹೀಗೆ ಎಲ್ಲರೂ ಒಂದಾಗಿ ಕಾಂಗ್ರೆಸ್‌ನ ಒಡೆದು ಆಳುವ ಕುತಂತ್ರಕ್ಕೆ ತಕ್ಕ ಪಾಠ ಕಲಿಸಲಿದ್ದಾರೆ.
ಪತ್ರಿಕೆ: ಜಿಲ್ಲೆಯಲ್ಲಿನ ಪರಿಸ್ಥಿತಿ ಹೇಗಿದೆ ?
ಯಡಿಯೂರಪ್ಪ: ಜಿಲ್ಲೆಯಲ್ಲಿ ನಾವು ಹಿಂದಿಗಿಂತ ಅತ್ಯುತ್ತಮ ಸಾಧನೆ ಮಾಡಲಿದ್ದೇವೆ. ಶಿಕಾರಿಪುರದಲ್ಲಿ ಹೇಗೆ ನನ್ನ ಗೆಲುವು ನಿಶ್ಚಿತವೋ ಹಾಗೇ ಶಿವಮೊಗ್ಗದಲ್ಲಿ ಶ್ರೀ ಈಶ್ವರಪ್ಪ ಗೆಲ್ಲಲಿದ್ದಾರೆ. ಹಾಗೇ ಶಿವಮೊಗ್ಗ ಗ್ರಾಮಾಂತರ, ತೀರ್ಥಹಳ್ಳಿಗಳಲ್ಲಿ ನಾವು ನೂರಕ್ಕೆ ನೂರಷ್ಟು ಗೆಲುವು ಹೊಂದಲಿದ್ದೇವೆ. ಸಾಗರ-ಸೊರಬಗಳ ಫಲಿತಾಂಶ ಬಂದ ಮೇಲೆ ಜನರಿಗೆ ನಮ್ಮ ಶಕ್ತಿ ತಂತ್ರ ಅರಿವಾಗಲಿದೆ. ಎಲ್ಲೆಡೆ ಪಕ್ಷದ ಪ್ರಚಾರ ಸಭೆಗಳಿಗೆ ಬಿರುಸಿನ ಪ್ರವಾಸ ನಡೆಸುತ್ತಿರುವೆ. ಫಲಿತಾಂಶ ಬಂದ ನಂತರ ರಾಜ್ಯದ ಎಲ್ಲಡೆಯಂತೆ ಶಿವಮೊಗ್ಗ ಜಿಲ್ಲೆಯಲ್ಲ್ಲೂ ನಾವು ನಮ್ಮ ಪ್ರಾಬಲ್ಯ ಹೊಂದಲಿದ್ದೇವೆ. ಅದು ಮೇ. ೧೫ ರಂದು ಗೊತ್ತಾಗಲಿದೆ.