Sunday, October 13, 2024
Google search engine
Homeಇ-ಪತ್ರಿಕೆಡಿಸಿಸಿ ಬ್ಯಾಂಕ್ ಚುನಾವಣಾ ವೇಳಾಪಟ್ಟಿ ಪ್ರಕಟ

ಡಿಸಿಸಿ ಬ್ಯಾಂಕ್ ಚುನಾವಣಾ ವೇಳಾಪಟ್ಟಿ ಪ್ರಕಟ

ಶಿವಮೊಗ್ಗ : ಡಿಸಿಸಿ ಬ್ಯಾಂಕ್ ನಿರ್ದೇಶಕರ ಆಯ್ಕೆಗೆ ಚುನಾವಣಾ ವೇಳಾಪಟ್ಟಿ ಪ್ರಕಟಿಸಲಾಗಿದ್ದು, ಜೂ.28 ರಂದು ಡಿಸಿಸಿ ಬ್ಯಾಂಕ್‍ನ ಜಿಲ್ಲಾ ಪ್ರಧಾನ ಕಚೇರಿಯಲ್ಲಿ ಮತದಾನ ನಡೆಯಲಿದೆ. ಇಂದಿನಿಂದ ನಾಮಪತ್ರ ಸಲ್ಲಿಕೆ ಆರಂಭ.

ಈ ಹಿಂದೆ ಏ.06 ರಂದು ಚುನಾವಣೆ ನಿಗದಿಯಾಗಿತ್ತು. ಆದರೆ ಲೋಕಸಭೆ ಚುನಾವಣೆಗೆ ಹೆಚ್ಚುವರಿ ಸಿಬ್ಬಂದಿ ನಿಯೋಜನೆ ಮಾಡಬೇಕಾಗಿದ್ದ ಕಾರಣ ರಾಜ್ಯ ಸರ್ಕಾರ ಡಿಸಿಸಿ ಬ್ಯಾಂಕ್ ಚುನಾವಣೆಯನ್ನು ಮುಂದೂಡಿತ್ತು. ಈಗ ಹೊಸದಾಗಿ ಅಧಿಸೂಚನೆ ಪ್ರಕಟಿಸಲಾಗಿದೆ. ಆ ಪ್ರಕಾರ ಜೂ.12 ರಿಂದ ನಾಮಪತ್ರ ಸಲ್ಲಿಕೆ ಆರಂಭವಾಗಲಿದ್ದು, ಜೂ.20 ನಾಮಪತ್ರ ಸಲ್ಲಿಕೆಗೆ ಕೊನೆಯ ದಿನಾಂಕ ಎಂದು ಶಿವಮೊಗ್ಗ ಉಪ ವಿಭಾಗಾಧಿಕಾರಿ ಮತ್ತು ಡಿಸಿಸಿ ಬ್ಯಾಂಕ್‍ನ ರಿಟರ್ನಿಂಗ್ ಆಫೀಸರ್ ಜಿ.ಹೆಚ್.ಸತ್ಯನಾರಾಯಣ ತಿಳಿಸಿದ್ದಾರೆ.  

ವಿವಿಧ ಕ್ಷೇತ್ರದಿಂದ 13 ನಿರ್ದೇಶಕರ ಆಯ್ಕೆ : ಶಿವಮೊಗ್ಗ ಡಿಸಿಸಿ ಬ್ಯಾಂಕ್‍ಗೆ ವಿವಿಧ ಕ್ಷೇತ್ರಗಳಿಂದ ಒಟ್ಟು 13 ನಿರ್ದೇಶಕರ ಆಯ್ಕೆ ನಡೆಯಲಿದೆ. ಪ್ರತಿ ತಾಲೂಕಿಗೆ ಒಬ್ಬರಂತೆ ವಿವಿಧ ಸಹಕಾರ ಸಂಘಗಳಿಂದ ಚುನಾಯಿಸಲ್ಪಡುವ ಪ್ರತಿನಿಧಿಗಳು, ಕೃಷಿ ಉತ್ಪನ್ನ ಮಾರಾಟ ಸಹಕಾರ ಸಂಘಗಳು, ಸಂಸ್ಕರಣ ಸಂಘಗಳ ವತಿಯಿಂದ ಇಬ್ಬರು ಸದಸ್ಯರು, ಪಟ್ಟಣ ಸಹಕಾರ ಸಂಘಗಳು ಮತ್ತು ವ್ಯವಸಾಯೇತರ ಸಹಕಾರ ಸಂಘಗಳ ವತಿಯಿಂದ ಇಬ್ಬರು, ಇನ್ನಿತರೆ ಸಹಕಾರ ಸಂಘಗಳ ವತಿಯಿಂದ ಇಬ್ಬರು ಸದಸ್ಯರ ಆಯ್ಕೆ ಪ್ರಕ್ರಿಯೆ ನಡೆಯಲಿದೆ.

ಚುನಾವಣೆ ವೇಳಾಪಟ್ಟಿ: ಡಿಸಿಸಿ ಬ್ಯಾಂಕ್ ನಿರ್ದೇಶಕರ ಸ್ಥಾನಕ್ಕೆ ಸ್ಪರ್ಧಿಸುವ ಅಭ್ಯರ್ಥಿಗಳು ನಾಮಪತ್ರ ಸಲ್ಲಿಸಲು ಜೂ.12 ರಿಂದ ಜೂ.20 ರವರೆಗೆ ಅವಕಾಶವಿದೆ. ಜೂ.21 ರಂದು ನಾಮಪತ್ರ ಪರಿಶೀಲನೆ ನಡೆಸಲಾಗುತ್ತದೆ. ಅದೇ ದಿನ ನಾಮಪತ್ರ ಸಲ್ಲಿಸಿದ ಅಭ್ಯರ್ಥಿಗಳ ಪಟ್ಟಿ ಪ್ರಕಟಿಸಲಾಗುತ್ತದೆ. ಜೂ.22 ರಂದು ಬೆಳಗ್ಗೆ 11.00 ಗಂಟೆಯಿಂದ ಮಧ್ಯಾಹ್ನ 3.00 ಗಂಟೆವರೆಗೆ ನಾಮಪತ್ರ ಹಿಂಪಡೆಯಲು ಅವಕಾಶವಿದೆ. ಅಂತಿಮವಾಗಿ ಸ್ಪರ್ಧೆಯಲ್ಲಿ ಉಳಿದ ಅಭ್ಯರ್ಥಿಗಳ ಪಟ್ಟಿಯನ್ನು ಅದೇ ದಿನ ಪ್ರಕಟಿಸಲಾಗುತ್ತದೆ. ಅಲ್ಲದೆ ಅವಶ್ಯವಿದ್ದಲ್ಲಿ ಚುನಾವಣೆ ಚಿಹ್ನೆಗಳನ್ನು ಹಂಚಿಕೆ ಮಾಡಲಾಗುತ್ತದೆ.

ಜೂ.24ರಂದು ಚುನಾವಣೆ ಚಿಹ್ನೆಯೊಂದಿಗೆ ಅಭ್ಯರ್ಥಿಗಳ ಪಟ್ಟಿಯನ್ನು ಪ್ರಕಟಿಸಲಾಗುತ್ತದೆ. ಜೂ.28 ರಂದು ಬೆಳಗ್ಗೆ 9.00 ಗಂಟೆಯಿಂದ ಸಂಜೆ 4.00 ಗಂಟೆವರೆಗೆ ಡಿಸಿಸಿ ಬ್ಯಾಂಕ್ ಪ್ರಧಾನ ಕಚೇರಿ ಕಟ್ಟಡದಲ್ಲಿ ಮತದಾನ ನಡೆಯಲಿದೆ. ಮತದಾನ ಮುಗಿಯುತ್ತಿದ್ದಂತೆ ಎಣಿಕೆ ಕಾರ್ಯ ನಡೆಯಲಿದ್ದು, ಪೂರ್ಣಗೊಳ್ಳುತ್ತಿದ್ದಂತೆ ಫಲಿತಾಂಶ ಪ್ರಕಟಿಸಲಾಗುತ್ತದೆ.

RELATED ARTICLES
- Advertisment -
Google search engine

Most Popular

Recent Comments