ಮೇರೆ ಮೀರಿರುವ ಗಾಂಜಾ, ಡ್ರಗ್ಸ್ ಹಾವಳಿ

ಶಿವಮೊಗ್ಗ : ನಗರದಲ್ಲಿ ಗಾಂಜಾ, ಅಫೀಮು, ಡ್ರಗ್ಸ್ ಮಾಫಿಯಾ ಜೊತೆಗೆ ಅಕ್ರಮ ಚಟುವಟಿಕೆಗಳು ಕಳೆದೊಂದು ವರ್ಷದಿಂದ ತೀವ್ರಗೊಂಡಿದ್ದು, ಒಂದೆಡೆ ನಗರದ ಹೊರ ವಲಯದಲ್ಲಿ ಮರಿ ರೌಡಿಗಳ ಕಾಟ ಮೇರೆ ಮೀರಿದ್ದರೆ, ಇನ್ನೊಂದೆಡೆ ಗಾಂಜಾ, ಡ್ರಗ್ಸ್ ಮಾಫಿಯಾ ಭಾವೀ ಪ್ರಜೆಗಳ ಭವಿಷ್ಯವನ್ನು ಕತ್ತಲೆಗೆ ದೂಡುತ್ತಿದೆ.
ಅಚ್ಚರಿಯ ಸಂಗತಿ ಎಂದರೆ, ಗಾಂಜಾ , ಅಫೀಮು, ನಗರದ ಶಾಲಾ-ಕಾಲೇಜುಗಳ ಆವರಣದಲ್ಲಿ ರಾಜಾರೋಷವಾಗಿ ವ್ಯಾಪಾರವಾಗುತ್ತಿದೆ. ಅಸಲಿ ಸಂಗತಿ ಪೊಲೀಸ್ ಇಲಾಖೆಗೆ ಗೊತ್ತಿದ್ದರೂ ಈ ಕುರಿತು ಗಂಭೀರವಾಗಿ ತಲೆಕೆಡಿಸಿಕೊಂಡಂತಿಲ್ಲ.
ಈಗಾಗಲೇ ನಗರದ ಪ್ರಮುಖ ಕಾಲೇಜುಗಳ ಬಳಿ ಗಾಂಜಾಮಾರಾಟ ಜೋರಾಗಿಯೇ ನಡೆಯುತ್ತಿದೆ. ಪೊಲೀಸರು ಅಲ್ಲೊಂದು ಇಲ್ಲೊಂದು ಪ್ರಕರಣ ಪತ್ತೆ ಹಚ್ಚಿದ್ದುಬಿಟ್ಟರೆ ತಿಪ್ಪೆ ಸಾರಿಸಿದ್ದೇ ಹೆಚ್ಚು.
ವಾಸ್ತವವಾಗಿ ಗಾಂಜಾ ಮಾರಾಟದ ಹಿಂದೆ ಬಹುದೊಡ್ಡ ಜಾಲವೇ ಇದೆ. ನೇರವಾಗಿ ವಿದ್ಯಾರ್ಥಿಗಳ ಮತ್ತು ಹದಿಹರೆಯದವರ ಕೈಗೆ ಗಾಂಜಾ ಸಲೀಸಾಗಿ ದೊರೆಯುತ್ತಿದೆ.
ಜೈಲುಗಳಲ್ಲಿ ಮಾತ್ರ ದೊರೆಯುತ್ತದೆ ಎಂದು ಕೇಳಿ ಬರುತ್ತಿದ್ದ ಗಾಂಜಾ ಈಗ ಯುವಕರ ಜೇಬು ಸೇರುತ್ತಿದೆ. ನಗರದ ಪ್ರತಿಷ್ಠಿತ ಶಿಕ್ಷಣ ಸಂಸ್ಥೆಗಳಿಗೆ ಸೇರಿದ ಕಾಲೇಜುಗಳಲ್ಲಿ ಹಾಡಹಗಲೇ ವಿದ್ಯಾರ್ಥಿಗಳು ಗಾಂಜಾ ಸೇವಿಸಿ, ಮತ್ತಿನಿಂದ ತೂರಾಡುತ್ತಲೇ ತರಗತಿಗಳಿಗೆ ಹಾಜರಾಗುತ್ತಿದ್ದಾರೆ.
ಇನ್ನೊಂದೆಡೆ ಡ್ರಗ್ಸ್ ಮಾಫಿಯಾ ಕೂಡಾ ತಲೆ ಎತ್ತಿ ನಿಂತಿದ್ದು, ನಗರದ ಇಂಜಿನಿಯರಿಂಗ್ ಮತ್ತು ಮೆಡಿಕಲ್ ಕಾಲೇಜುಗಳ ವಿದ್ಯಾರ್ಥಿಗಳ ಹಾಸ್ಟೆಲ್ ಬಳಿ ಹಗಲು ವೇಳೆಯೇ ಕೆಲವರು ಮಾರಾಟ ಮಾಡುತ್ತಿದ್ದಾರೆ. ಉಳಿದಂತೆ ಕೆ.ಆರ್.ಪುರಂ, ಬಿ.ಹೆಚ್. ರಸ್ತೆ, ಕೆಲವು ಮೆಡಿಕಲ್ ಶಾಪ್‌ಗಳಲ್ಲಿ ಡ್ರಗ್ಸ್ ಮಾರಾಟವಾಗುತ್ತಿದೆ. ಡ್ರಗ್ಸ್ ಸೇವಿಸುವ ಇಂಜಿನಿಯರಿಂಗ್ ವಿದ್ಯಾರ್ಥಿಗಳು ಸಮೀಪದ ತೋಪಿನ ಬಳಿ ಮರಗಳಿಗೆ ಒರಗಿಕೊಂಡು ಮತ್ತಿನಲ್ಲಿ ತೇಲಾಡುವುದು ಸಾಮಾನ್ಯ ಸಂಗತಿಯಾಗಿದೆ. ಗಾಂಜಾ ಹಾಗೂ ಡ್ರಗ್ಸ್ ದಂಧೆಗಳು ಸಲೀಸಾಗಿ ನಡೆಯಲು ಮುಖ್ಯ ಕಾರಣ, ವಹಿವಾಟನ್ನು ವಿದ್ಯಾರ್ಥಿಗಳ ಮೂಲಕವೇ ನಡೆಸುತ್ತಿರುವುದು ಇದರಿಂದ ಕಾಲೇಜು ಪರಿಸರದಲ್ಲಿ ದಂಧೆಕೋರರು ಪ್ರವೇಶಿಸುವ ಗೋಜಿಗೆ ಹೋಗುತ್ತಿಲ್ಲ.
ಖಚಿತ ಮೂಲಗಳ ಪ್ರಕಾರ ಚಿತ್ರದುರ್ಗ ಮೂಲದ ದಂಧೆಕೋರರು ನಗರದಲ್ಲಿ ಗಾಂಜಾ ಹಾಗೂ ಡ್ರಗ್ಸ್ ಮಾಫಿಯಾ ನಡೆಸುತ್ತಿದ್ದಾರೆನ್ನಲಾಗಿದೆ. ಹಾಗೆಯೇ ಸಾಗರ-ಹೊಸನಗರ ತಾಲ್ಲೂಕುಗಳಲ್ಲಿ ಗಾಂಜಾ ಬೆಳೆಯಲಾಗುತ್ತಿದ್ದು, ವಿದ್ಯಾರ್ಥಿಗಳಿಗೆ ಭಾರೀ ಹಣದ ಆಮಿಷವೊಡ್ಡಿ ದಂಧೆಯನ್ನು ಸಲೀಸಾಗಿ ನಿರ್ವಹಿಸಲಾಗುತ್ತಿದೆ.
ದಿನನಿತ್ಯ ಡ್ರಗ್ಸ್ ದಂಧೆ ನಡೆಯುತ್ತಿದೆ. ಇನ್ನು ನಗರದ ವೈದ್ಯಕೀಯ ಕಾಲೇಜಿನ ಡ್ರಗ್ಸ್ ಚಟ ಅಂಟಿಸಿಕೊಂಡಿ ರುವ ಕೆಲವು ವಿದ್ಯಾರ್ಥಿಗಳು ಡ್ರಗ್ಸ್ ಸೇವಿಸಿ ವಸತಿ ಕೋಣೆಯಲ್ಲೇ ಮಲಗುತ್ತಿರುವುದು ಬೆಳಕಿಗೆ ಬಂದಿದೆ.
ಆದರೂ ಸಂಬಂಧಿಸಿದವರು ಈ ಬಗ್ಗೆ ತಲೆ ಕೆಡಿಸಿಕೊಂಡಂತಿಲ್ಲ. ನಗರದಲ್ಲಿ ಚೈನ್ ಅಪಹರಣದಂತಹ ಪ್ರಕರಣಗಳು ನಡೆಯುತ್ತಿದ್ದು, ಇದರಲ್ಲಿ ಬಹುಪಾಲು ವಿದ್ಯಾರ್ಥಿಗಳೇ ಭಾಗಿಯಾಗುತ್ತಿರುವುದು ಅಸಲಿ ಸಂಗತಿ. ಗಾಂಜಾ, ಅಫೀಮು ದಾಸರಾಗಿರುವ ಕೆಲವು ವಿದ್ಯಾರ್ಥಿಗಳು ಹಣ ದೊರೆಯುದೇ ಇದ್ದಾಗ, ನಗರದ ಹೊರ ವಲಯದಲ್ಲಿ ಮಹಿಳೆಯರ ಚಿನ್ನದ ಸರ ಅಪಹರಿಸುವುದು, ಬೈಕ್ ಸವಾರರನ್ನು ಅಡ್ಡಗಟ್ಟಿ ಹಣ ದೋಚುವುದು ಮಾಮೂಲಿಯಾಗಿದೆ.
ಗಾಂಜಾ, ಡ್ರಗ್ಸ್‌ನಂತಹ ಮಾದಕ ವಸ್ತುಗಳ ದಾಸರಾಗುತ್ತಿರುವ ವಿದ್ಯಾರ್ಥಿಗಳು, ಕ್ರಮೇಣ ಸಾಮಾಜಿಕ ಅಪರಾಧಿಗಳಾಗಿ ಪರಿವರ್ತನೆಯಾಗುವುದರಲ್ಲಿ ಯಾವುದೇ ಸಂಶಯವಿಲ್ಲ.
ಪೊಲೀಸ್ ಇಲಾಖೆ ಕೂಡಲೇ ಜಾಗೃತರಾಗಿ ಗಾಂಜಾ ಹಾಗೂ ಡ್ರಗ್ಸ್ ಮಾಫಿಯಾವನ್ನು ಪತ್ತೆ ಹಚ್ಚದಿದ್ದಲ್ಲಿ ಶಿವಮೊಗ್ಗ ನಗರವು ಅಪರಾಧಗಳ ಪ್ರಮುಖ ಕೇಂದ್ರವಾಗಲಿದೆ.