ಶಿವಮೊಗ್ಗ : ಬೇರೆಯವರು ಮಾಡಲಿ ನಾನು ಆನಂತರ ಯೋಚಿಸುತ್ತೇನೆ ಎನ್ನುವ ಕನ್ನಡಿಗರ ಪ್ರವೃತ್ತಿ ಬದಲಾಗಬೇಕಿದೆ ಎಂದು ಜಿಲ್ಲಾ ಕನ್ನಡ ಸಾಹಿತ್ಯ ಸಮ್ಮೇಳನದ ಅಧ್ಯಕ್ಷ ಡಾ. ಶ್ರೀಕಂಠ ಕೂಡಿಗೆ ಕರೆ ನೀಡಿದರು.
ಇಂದು ನಗರದ ಕುವೆಂಪು ರಂಗಮಂದಿರದಲ್ಲಿ ಜಿಲ್ಲಾ ಕನ್ನಡ ಸಾಹಿತ್ಯ ಪರಿಷತ್ ವತಿಯಿಂದ ನಡೆಯುತ್ತಿರುವ ಎರಡು ದಿನಗಳ ಸಾಹಿತ್ಯ ಸಮ್ಮೇಳನದ ಅಧ್ಯಕ್ಷೀಯ ನುಡಿಗಳನ್ನಾಡಿದ ಅವರು, ಕನ್ನಡಿಗರು ಆತ್ಮವಿಮರ್ಶೆ ಮಾಡಿಕೊಳ್ಳುವಂತೆ ವಿನಂತಿಸಿದರು.
ಇಂಗ್ಲೀಷ್ ಭಾಷೆ ಇಂದು ಕನ್ನಡದೊಂದಿಗೆ ಹಾಸು ಹೊಕ್ಕಾಗಿರುವುದರಿಂದ ಕಲಬೆರಕೆ ಇಂಗ್ಲೀಷ್ ಕನ್ನಡದ ಸೊಗಸು ಹಾಳು ಮಾಡಿದೆ ಎಂದು ವಿಷಾಧಿಸಿದ ಅವರು, ಕನ್ನಡ ಭಾಷೆ ಎಂದಿಗೂ ನಿಂತ ನೀರಲ್ಲ. ನಿರಂತರವಾಗಿ ಬೆಳೆಯುತ್ತಿದೆ ಎಂಬುದನ್ನು ಉದಾಹರu ಯೊಂದಿಗೆ ವಿವರಿಸಿ ಆಂಗ್ಲಭಾಷೆಯೇ ಕನ್ನಡೀಕರಣಗೊಂಡಿದೆ ಎಂದರು.
ಅನ್ಯ ಸಂಸ್ಕೃತಿಯಿಂದ ಎರವಲು ಪಡೆದಿರುವ ‘ಆಂಟಿ, ಅಂಕಲ್’ ಎನ್ನುವ ಭಾವ ಶೂನ್ಯ. ಅನಿರ್ದಿಷ್ಟ ಸಂಬಂಧ ಸೂಚಕ ಪದಗಳನ್ನು ಬಳಸು ವುದಕ್ಕೂ ಇರುವ ವ್ಯತ್ಯಾಸ ಕೇವಲ ಸಾಂಸ್ಕೃತಿಕ ವಾಗಿದ್ದರೂ, ಅದರ ಪರಿಣಾಮ ದೂರಗಾಮಿ ಯಾದುದು. ಮುಂದೆಂದೂ ಸಾಂಸ್ಕೃತಿಕ ಅನಾಥ ಪ್ರಜ್ಞೆ ಕಾಡದಂತೆ ಕನ್ನಡ ಲಿಪಿ, ನುಡಿ, ರೂಢಿಗಳನ್ನು ಗ್ರಹಿಸಲು ಎಳೆಯರಿಗೆ ಕಲಿಸುವುದು ಹಿರಿಯರ ಕರ್ತವ್ಯವಾಗಿದೆ ಎಂದು ತಿಳಿಸಿದರು.
ಶ್ರವ್ಯ, ದೃಶ್ಯ, ಮುದ್ರಣ ಮಾಧ್ಯಮಗಳು ಒಂದು ಕಾಲಘಟ್ಟದಲ್ಲಿ ಕನ್ನಡ ಶಕ್ತಿ ಮತ್ತು ಸೌಂದರ್ಯ ವನ್ನು ಸಮೃದ್ಧಿಗೊಳಿಸಲು ಮುಖ್ಯ ಪಾತ್ರ ವಹಿಸಿವೆ. ಪ್ರಸ್ತುತ ಮಾಧ್ಯಮಗಳ ಮಾತು ಎಂಥ ಪರಿಣಾಮ ಬೀರುತ್ತಿವೆ ಅಂದರೆ ಅರ್ಥಾತ್ ಕನ್ನಡ ಭಾಷೆಯ ಅಂದ ಹಾಳುಗೆಡುತ್ತಿವೆ ಎಂದು ವಿಷಾಧಿಸಿದರು.
ಅಧುನಿಕ ಶಿಕ್ಷಣದಿಂದ ಅನಕ್ಷರಸ್ಥ ಮೂಢನಂಬಿಕಸ್ಥರು ಅಕ್ಷರಸ್ಥ ಮೂಢನಂಬಿ ಕಸ್ಥರಾಗಿ ಪರಿವರ್ತನೆ ಹೊಂದುತ್ತಿದ್ದಾರೆ.
ಉನ್ನತ ಶಿಕ್ಷಣ ಸಾಮಾಜಿಕ ಪರಿವರ್ತನೆಗೆ ದಾರಿ ಮಾಡಿಕೊಡಬೇಕು. ವ್ಯಕ್ತಿಗಳು, ಜಾತಿವಾದಿಗಳು, ಮೂಢನಂಬಿಕಸ್ಥರು, ಭ್ರಷ್ಟರು ಆಗುವುದಕ್ಕೆ ಉನ್ನತ ಶಿಕ್ಷಣ ಏಕೆ ಬೇಕು ? ಇದು ಶಿಕ್ಷಣದ ಸೋಲಲ್ಲವೇ? ಎಂದು ಪ್ರಶ್ನಿಸಿದರು.
ವಿದ್ಯೆ ವ್ಯಕ್ತಿಯ ವ್ಯಕ್ತಿತ್ವಕ್ಕೆ ಘನತೆ ತಂದುಕೊಡದಿದ್ದರೆ ಅಂತಹ ವಿದ್ಯೆ ನಿಷ್ಪ್ರಯೋಜಕ. ‘ನಿಜ್ಜವೆಲ್ಲಿತು ಅಲ್ಲಿಯ ಸುಖ’ ಎಂಬ ಶರಣರ ಮಾತು ಉಲ್ಲೇಖಿಸಿ ಸುಳ್ಳಿನ ಪರದೆಯಿಂದ ಹೊರಬರಲು ಕರೆ ನೀಡಿದರು.
ಕನ್ನಡ ನಾಡಿನಲ್ಲಿ ಕನ್ನಡ ಪ್ರಥಮ ಭಾಷೆಯಾಗಬೇಕು. ಎಲ್ಲಾ ಘಟ್ಟಗಳಲ್ಲೂ ಕನ್ನಡ ಶಿಕ್ಷಣ ಮಾಧ್ಯಮವಾಗಬೇಕಿದೆ. ಅದು ರಾಜ್ಯದ ಆಡಳಿತ ಭಾಷೆಯೂ ಆಗಬೇಕು ಎಂಬ ಕುವೆಂಪು ಅವರ ಕರೆಯನ್ನು ಪ್ರತಿಪಾದಿಸಿದರು.
ಇಂದು ಕನ್ನಡ ಶಾಲೆಗಳು ಶೋಚನೀಯ ಸ್ಥಿತಿಯಲ್ಲಿವೆ. ೨೦೧೬ರ ಶೈಕ್ಷಣಿಕ ಸಾಲಿನಲ್ಲಿ ೬೮೪ ಸರ್ಕಾರಿ ಶಾಲೆಗಳು ಮುಚ್ಚಿವೆ. ಇದಕ್ಕೆ ಕಾರಣ ತಾಯಿ-ತಂದೆಯರ ಇಂಗ್ಲೀಷ್ ವ್ಯಾಮೋಹ, ಇದರ ಹಿಂದೆ ಸರ್ಕಾರದ ವೈಫಲ್ಯವು ಕಾರಣವಾಗಿದೆ ಎಂದರು.
ರಾಜ್ಯ ಸರ್ಕಾರವು ೨೦೧೦ರ ಶಿಕ್ಷಣ ಹಕ್ಕು ಕಾಯ್ದೆ ಪ್ರಕಾರ ಭಾಷಾ ನೀತಿ ರೂಪಿಸಬೇಕು. ಕಾಯ್ದೆಯ ಪ್ರಕಾರ ೨೯(೨) (ಎಫ್) ಅನ್ವಯ ಸಾಧ್ಯವಾದಷ್ಟು ಮಾತೃಭಾಷೆ ಎನ್ನುವ ಬದಲು ಅದನ್ನು ಕಡ್ಡಾಯಗೊಳಿಸಬೇಕು ಎಂದರು.
ಜಿಲ್ಲೆಯಲ್ಲಿ ಮಳೆ ಕುಂಟಿತಗೊಂಡಿರುವುದರಿಂದ ಕೃಷಿ ಕ್ಷೇತ್ರ ಸೊರಗಿದ್ದು, ರೈತರು ಸಂಕಷ್ಟದಲ್ಲಿದ್ದಾರೆ. ರೈತರ ಬೆಳೆಗಳಿಗೆ ಸರ್ಕಾರ ವೈಜ್ಞಾನಿಕ ಬೆಲೆ ನಿಗದಿಗೊಳಿಸುವಂತೆ ಸಲಹೆ ನೀಡಿದರು.
ಭ್ರಷ್ಟಾಚಾರ ಈ ದೇಶದ ದೊಡ್ಡ ಪಿಡುಗು ಆಗಿದ್ದು, ಈ ಅನಿಷ್ಠವನ್ನು ಕೊನೆಗಾಣಿಸಿದರೆ ಭಾರತ ವಿಶ್ವದಲ್ಲಿ ಇನ್ನಷ್ಟು ಎತ್ತರಕ್ಕೆ ಬೆಳೆಯಲಿದೆ ಎಂದರು.