ರಕ್ತಕ್ಕೆ ಪರ್ಯಾಯ ವಸ್ತುವಿಲ್ಲ : ಡಾ.ಎಂ.ಲೋಕೇಶ್

ಶಿವಮೊಗ್ಗ : ತಂತ್ರಜ್ಞಾನ ಬಳಕೆಯಲ್ಲಿ ಮನುಷ್ಯ ಎಷ್ಟೇ ಮುಂದುವರೆದಿದ್ದರೂ ರಕ್ತಕ್ಕೆ ಪರ್ಯಾಯವಾದ ವಸ್ತುವಿನ ಬಳಕೆ ಸಾಧ್ಯ ವಾಗಿಲ್ಲ ಎಂದು ಜಿಲ್ಲಾಧಿಕಾರಿ ಡಾ.ಎಂ. ಲೋಕೇಶ್ ಹೇಳಿದರು.
ಇಂದು ಜಿಲ್ಲಾ ಕಾನೂನು ಸೇವೆಗಳ ಪ್ರಾಧಿಕಾರ, ಜಿಲ್ಲಾ ನ್ಯಾಯವಾದಿಗಳ ಸಂಘ, ಜಿಲ್ಲಾಡಳಿತ, ಜಿಲ್ಲಾ ಪಂಚಾಯತ್, ಜಿಲ್ಲಾ ನ್ಯಾಯಾಂಗ ಇಲಾಖೆ, ಜಿಲ್ಲಾ ಆರೋಗ್ಯ ಮತ್ತು ಕುಟುಂಬ ಕಲ್ಯಾಣ ಇಲಾಖೆ, ಜಿಲ್ಲಾ ಏಯ್ಡ್ಸ್ ತಡೆಗಟ್ಟುವ ಮತ್ತು ನಿಯಂತ್ರಣ ಘಟಕ, ರಕ್ತನಿಧಿ ಕೇಂದ್ರ, ಜಿಲ್ಲಾ ಮೆಗ್ಗಾನ್ ಆಸ್ಪತ್ರೆ ಹಾಗೂ ವಾರ್ತಾ ಮತ್ತು ಸಾರ್ವಜನಿಕ ಸಂಪರ್ಕ ಇಲಾಖೆಯ ಸಂಯುಕ್ತಾಶ್ರಯದಲ್ಲಿ ಜಿಲ್ಲಾ ನ್ಯಾಯಾಲಯದ ಆವರಣದಲ್ಲಿರುವ ವಕೀಲರ ಭವನದಲ್ಲಿ ಏರ್ಪಡಿಸಲಾಗಿದ್ದ ರಾಷ್ಟ್ರೀಯ ಸ್ವಯಂಪ್ರೇರಿತ ರಕ್ತದಾನ ದಿನಾಚರಣೆ ಕಾರ್ಯಕ್ರಮ ಉದ್ಘಾಟಿಸಿ ಮಾತನಾಡಿದರು.
೧೮ ವರ್ಷ ಮೇಲ್ಪಟ್ಟ ಪ್ರತಿ ಆರೋಗ್ಯವಂತ ವ್ಯಕ್ತಿಯೂ ಮೂರು ತಿಂಗಳಿಗೊಮ್ಮೆ ನಿಯಮಿತ ವಾಗಿ ರಕ್ತದಾನ ಮಾಡುವುದರಿಂದ ಆರೋಗ್ಯ ವೃದ್ದಿಯಾಗಲಿದೆ. ರಕ್ತದ ಅವಶ್ಯಕತೆ ಇರುವ ರೋಗಿಯನ್ನು ಕಾಪಾಡಿದಂತಾಗುತ್ತದೆ. ದಾನ ಮಾಡಿದ ರಕ್ತವೂ ಕೂಡ ಅಲ್ಪಾವಧಿಯಲ್ಲಿ ಪುನರುತ್ಪತ್ತಿಯಾಗಲಿದೆ ಮಾತ್ರವಲ್ಲ ವ್ಯಕ್ತಿ ಸದಾ ಕ್ರಿಯಾಶೀಲನಾಗಿರುತ್ತಾನೆ ಎಂದರು.
ಆಧುನಿಕ ಜೀವನಶೈಲಿಯಿಂದಾಗಿ ಹಾಗೂ ಒಂದೇ ಕಡೆ ಕುಳಿತು ಕಾರ್ಯನಿರ್ವಹಿಸುತ್ತಿರು ವುದರಿಂದ ಮನುಷ್ಯನಿಗೆ ಆರೋಗ್ಯ ಸಮಸ್ಯೆಗಳು ಹೆಚ್ಚಾಗಿ ಗೋಚರಿಸುತ್ತಿವೆ. ದೇಹದಲ್ಲಿ ರಕ್ತಸಂಚಾರ ಸರಾಗವಾಗಿದ್ದಾಗ ದೇಹದಲ್ಲಿ ಯಾವುದೇ ರೀತಿಯ ಬಾಧೆ ಕಾಣದು ಎಂದ ಅವರು, ನಿಯಮಿತವಾಗಿ ಕ್ರೀಡೆ, ಯೋಗಾಸನ ಮುಂತಾದ ಚಟುವಟಿಕೆಗಳಲ್ಲಿ ದಿನದ ಅಲ್ಪ ಸಮಯವನ್ನು ಮೀಸಲಿರಿಸಬೇಕು ಜೊತೆಗೆ ಇಂದಿನ ಆಧುನಿಕ ವ್ಯವಸ್ಥೆಗೆ ಪೂರಕವಾಗಿ ಬದುಕುವ ಕಲೆಯನ್ನು ರೂಢಿಸಿಕೊಳ್ಳಬೇಕೆಂದು ಹೇಳಿದರು.
ಈ ಸಂದರ್ಭದಲ್ಲಿ ಜಿಲ್ಲಾ ಕಾನೂನು ಸೇವೆಗಳ ಪ್ರಾಧಿಕಾರದ ಸದಸ್ಯ ಕಾರ್ಯದರ್ಶಿ ಸೋಮಶೇಖರ ಸಿ.ಬಾದಾಮಿ, ಜಿಲ್ಲಾ ಆರೋಗ್ಯ ಮತ್ತು ಕುಟುಂಬ ಕಲ್ಯಾಣಾಧಿಕಾರಿ ಡಾ.ರಾಜೇಶ್ ಸುರಗೀಹಳ್ಳಿ, ಡಾ.ನಟರಾಜ್, ವಕೀಲರ ಸಂಘದ ಅಧ್ಯಕ್ಷ ಜಿ.ಮಧು ಮುಂತಾದವರು ಉಪಸ್ಥಿತರಿದ್ದರು.

LEAVE A REPLY

Please enter your comment!
Please enter your name here