ನಿಧಾನವಾಗಿ ಕರಗುತ್ತಿರುವ ಕನ್ನಡ ಭಾಷೆ ಜಿಲ್ಲಾಸಾಹಿತ್ಯ ಸಮ್ಮೇಳನದಲ್ಲಿ ಡಾ. ಜಯಪ್ರಕಾಶ್ ವಿಷಾಧ

ಶಿವಮೊಗ್ಗ : ಕನ್ನಡ ಭಾಷೆ ನಿಧಾನವಾಗಿ ಕರಗುತ್ತಿದೆ ಎಂದು ಜಿಲ್ಲಾ ೧೩ನೇ ಕನ್ನಡ ಸಾಹಿತ್ಯ ಸಮ್ಮೇಳನದ ಸರ್ವಾಧ್ಯಕ್ಷ ಡಾ. ಜಯಪ್ರಕಾಶ್ ಮಾವಿನಕುಳಿ ವಿಷಾಧಿಸಿದರು.
ಇಂದು ನಗರದ ಕುವೆಂಪು ರಂಗಮಂದಿರದಲ್ಲಿ ೧೩ನೇ ಜಿಲ್ಲಾ ಕನ್ನಡ ಸಾಹಿತ್ಯ ಸಮ್ಮೇಳನದ ಅಧ್ಯಕ್ಷೀಯ ನುಡಿಗಳನ್ನಾಡಿದ ಅವರು, ಕನ್ನಡ ನಮ್ಮ ಅಸ್ಮಿತೆಗಳಲ್ಲಿ ಮುಖ್ಯವಾದುದ್ದು. ಆದರೆ, ಇಂತಹ ಭಾಷೆಯೊಂದು ನಿಧಾನವಾಗಿ ಕರಗುತ್ತಿರುವುದು ವಿಷಾದನೀಯ. ಇಂದು ಜಾಗತೀಕರಣ ಬೇಡುವುದು ಆಂಗ್ಲ ಭಾಷೆಯನ್ನ. ಬಿಡುವುದು ಕನ್ನಡ ಭಾಷೆಯನ್ನ. ಇದರ ಪರಿಣಾಮವಾಗಿ ಕನ್ನಡ ಭಾಷೆ ಕಂಟಕದಲ್ಲಿದೆ. ಸರ್ಕಾರಗಳೂ ಸೇರಿದಂತೆ ಇಚ್ಛಾಶಕ್ತಿಯ ಕೊರತೆಯಿದೆ ಎಂದರು.
ಶಿಕ್ಷಣವನ್ನೇ ತೆಗೆದುಕೊಂಡರೆ, ಯಾವ ಮಾಧ್ಯಮ ಬೇಕು ಎಂಬುದೇ ಇನ್ನೂ ತೀರ್ಮಾನವಾಗಿಲ್ಲ. ಹೃದಯದ ಭಾಷೆ ಕನ್ನಡದ ಬಗ್ಗೆ ಯಾರೂ ಮಾತನಾಡುತ್ತಿಲ್ಲ. ಉನ್ನತ ಶಿಕ್ಷಣದ ಪಠ್ಯಗಳು ಕನ್ನಡದಲ್ಲಿ ಭಾಷಾಂತರವಾಗುತ್ತಿಲ್ಲ. ಸರ್ಕಾರ ಸಂಕಲ್ಪ ಮಾಡಿದರೂ ಆ ತಜ್ಞರ ಪಡೆ ನಮ್ಮಲ್ಲಿ ಇಲ್ಲ. ಹೀಗಾಗಿ ನಮ್ಮ ಯುವ ಜನಾಂಗ ಕನ್ನಡವನ್ನೂ ಸರಿಯಾಗಿ ಕಲಿಯದೆ, ಇಂಗ್ಲೀಷನ್ನೂ ಸರಿಯಾಗಿ ಕಲಿಯದೇ ಎಡಬಿಡಂಗಿಗಳಾಗುತ್ತಿದೆ ಎಂದರು.
ಜಾಗತೀಕರಣ, ಖಾಸಗೀಕರಣ ಮತ್ತು ಉದಾರೀಕರಣ ಇದರ ಪರಿಣಾಮಗಳು ನಮ್ಮನ್ನು ಆವರಿಸಿದೆ. ಇದರಿಂದ ತಪ್ಪಿಸಿಕೊಳ್ಳಲು ಆಗುತ್ತಿಲ್ಲ. ಭಾಷೆಯ ಮೇಲೂ ಇದು ಪರಿಣಾಮ ಬೀರುತ್ತಿದೆ. ವಿಶ್ವಮಾನವ ಪ್ರಜ್ಞೆಗೆ ಇವೆಲ್ಲಾ ಅಡೆತಡೆಗಳಾಗಿವೆ. ನಮ್ಮ ಭಾಷೆ, ಉಡುಪು, ರೀತಿ, ನೀತಿ, ಆಹಾರ, ಸಂಸ್ಕೃತಿ, ಜಾನಪದ, ರಿವಾಜುಗಳು, ಮತ ಎಲ್ಲವನ್ನೂ ತ್ಯಜಿಸಿ ಅಥವಾ ಎಲ್ಲವನ್ನೂ ಏಕಮುಖವಾಗಿಸಿ ಐಕ್ಯವಾಗುವುದೇ ಕಷ್ಟವಾಗುತ್ತಿದೆ ಎಂದರು.
ಕನ್ನಡ ಭಾಷೆಯನ್ನು ಹೇಗೆ ಉಳಿಸಿಕೊಳ್ಳಲು ಸಾಧ್ಯ ಎಂಬುದನ್ನು ನಾವು ಯೋಚಿಸಬೇಕಾಗಿದೆ. ನಾವು ಬಳಸದೆ ಅದು ಬೆಳೆಯುವುದಿಲ್ಲ. ಶಾಲೆಯಲ್ಲೂ ಬಳಸದಿದ್ದರೆ ಮನೆಯಲ್ಲೂ ಕನ್ನಡ ವಾತಾವರಣ ಇಲ್ಲದಿದ್ದರೆ ಅದು ಹೇಗೆ ಉಳಿಯಬೇಕಾಗಿದೆ. ಮಕ್ಕಳು ಕನ್ನಡ ಭಾಷೆ ಯಿಂದ ದೂರವಾಗುತ್ತಿದ್ದಾರೆ. ಮಕ್ಕಳ ಸಾಹಿ ತ್ಯವೂ ಇಲ್ಲವಾಗಿದೆ. ಪತ್ರ ಸಂಸ್ಕೃತಿಯೂ ಮರೆಯಾಗಿದೆ. ಕನ್ನಡ ಭಾಷೆಯನ್ನು ಬೋಧಿಸುವ ಶಿಕ್ಷಕರೂ ಕೂಡ ನಿರ್ಲಿಪ್ತತೆ ವಹಿಸುತ್ತಿದ್ದಾರೆ. ಕನ್ನಡ ಅಂಕಿಗಳು ಕೂಡ ಮಾಯವಾಗುತ್ತಿವೆ ಎಂದರು.
ಭಾಷೆಯ ಬಗ್ಗೆ ಹೀಗಾದರೆ, ಇನ್ನು ಕನ್ನಡದ ಸಂಕಟಗಳು ಬೇರೆ ಬೇರೆ ರೀತಿಯಾಗಿ ನಮ್ಮನ್ನು ಕಾಡುತ್ತಿವೆ. ಒಂದು ಕಡೆ ಪರಿಸರವೇ ವಿನಾಶವಾಗುತ್ತಿದೆ. ಭ್ರಷ್ಟಾಚಾರ ಹೆಚ್ಚಾಗುತ್ತಿದೆ. ಕೃಷಿ ಮರೆಯಾಗುತ್ತಿದೆ. ಜಾನಪದ ಇಲ್ಲವಾ ಗಿದೆ. ಕಾಡಿನ ಪ್ರಾಣಿಗಳು ನಾಡಿಗೆ ಬರತೊಡಗಿವೆ. ಮಳೆಯೇ ಇಲ್ಲವಾಗಿದೆ. ಕಾರ್ಖಾನೆಗಳು ಮುಚ್ಚಿಹೋಗಿವೆ. ಅಷ್ಟೇಕೆ, ಕೃಷಿ ಆಧಾರಿತ ಯುವಕರನ್ನು ಮದುವೆಯಾಗಲು ಯಾವ ಯುವತಿಯೂ ಮುಂದೆ ಬಾರದಂತಹ ಸ್ಥಿತಿ ಉಂಟಾಗಿದೆ ಎಂದರು.
ಕೆರೆಗಳು ಮುಚ್ಚಿಹೋಗಿವೆ. ಶಿವಮೊಗ್ಗದಲ್ಲಿ ಅದೆಷ್ಟು ಕೆರೆಗಳು ಮುಚ್ಚಿದ್ದಾವೆಯೋ ನನಗೇ ಗೊತ್ತಿಲ್ಲ. ಹಿಂದೆ ಸಾಗರದಲ್ಲಿ ಸಾಲೇಕೊಪ್ಪ ಗುಡ್ಡವನ್ನು ಸರ್ಕಾರ ಅಗೆಯಲು ಹೊರಟಿತ್ತು. ಅದನ್ನು ಜನರು ಪ್ರತಿಭಟನೆ ಮಾಡಿ ನಿಲ್ಲಿಸಿದ್ದರು. ಲಿಂಗನಮಕ್ಕಿ ನೀರನ್ನು ಬೆಂಗಳೂರಿಗೆ ಸಾಗಿಸುವಂತಹ ಯೋಜನೆಗಳು ಬಂದರೂ ಆಶ್ಚರ್ಯವಿಲ್ಲ. ಮಲೆನಾಡು ಬಿಸಿಲ ಬೇಗೆಗೆ ಒಗ್ಗಿಕೊಂಡಿದೆ. ಈಗ ಇಪ್ಪತ್ತು ವರ್ಷದ ಹಿಂದಿನ ಸ್ಥಿತಿ ಇಲ್ಲ. ಸರ್ಕಾರಗಳಿಗೂ ಪರಿಜ್ಞಾನವಿಲ್ಲ. ಹಣ ದೋಚಿಕೊಳ್ಳಲೆಂದೇ ಯೋಜನೆಗಳನ್ನು ನಿರ್ಮಿಸ ಹೊರಟಿದ್ದಾರೆ. ಗೋಮಾಳಗಳು ನಿವೇಶನ ಗಳಾಗಿವೆ ಎಂದು ಕಳವಳ ವ್ಯಕ್ತಪಡಿಸಿದರು.
ಕನ್ನಡದ ಭಾಷೆಯ ಬಗ್ಗೆ, ಅದರ ಉಳಿಸುವಿಕೆಯ ಬಗ್ಗೆ ಸದನದಲ್ಲಿ ಎಂದಾದರೂ ಚರ್ಚೆಯಾಗಿದೆಯಾ? ಆ ಬಗ್ಗೆ ಕಾನೂನುಗಳು ರೂಪಿತವಾಗಿದೆಯಾ? ಭಾಷೆ ಬಿಡಿ, ಸರ್ಕಾರದ ಬೊಕ್ಕಸಕ್ಕೆ ಎಷ್ಟು ರಾಜಸ್ವ ಬಂದರೂ ಸಾಕಾಗು ತ್ತಿಲ್ಲ. ಆಡಳಿತ ನಡೆಸುವವರು, ಅಧಿಕಾರಿಗಳು ಅವರ ಸಭೆ, ಪ್ರವಾಸ ದುಂದುಗಳಿಗೆ ಮಿತಿ ಇದೆಯೇ? ಸರ್ಕಾರಿ ಬಂಗಲೆಯನ್ನು ಕೋಟ್ಯಂ ತರ ರೂ. ಖರ್ಚು ಮಾಡಿ ನವೀಕರಿಸುತ್ತಾರೆ ಎಂದರೆ ಏನಿದರ ಅರ್ಥ ಎಂದು ಪ್ರಶ್ನಿಸಿದರು.
ಗಟ್ಟಿ ಧ್ವನಿಯಿಂದ ನಾವು ಇವೆಲ್ಲವನ್ನೂ ಮೆಟ್ಟಿನಿಲ್ಲಬೇಕಾಗಿದೆ. ಕಾಲ ಬದಲಾಗಿದೆ. ಕನ್ನಡ ಭಾಷೆ ಬೆಳೆಯಬೇಕಾಗಿದೆ ಎಂದರು.

SHARE
Previous article12 DEC 2018
Next article13 DEC 2018

LEAVE A REPLY

Please enter your comment!
Please enter your name here