ಶಿವಮೊಗ್ಗ: ನಗರದಲ್ಲಿ ಜಲಾವೃತಗೊಳ್ಳುವ ಪ್ರದೇಶಗಳಲ್ಲಿ ಶೀಘ್ರ ಅಗತ್ಯ ಕ್ರಮ ಕೈಗೊಳ್ಳಬೇಕು, ಚರಂಡಿ ನೀರು ನುಗ್ಗಿ ಹಾನಿಯಾಗಿರುವ ಬಡಾವಣೆಗಳ ಸರ್ವೆ ನಡೆಸಿ ಸೂಕ್ತ ಪರಿಹಾರ ನೀಡಬೇಕೆಂದು ಒತ್ತಾಯಿಸಿ ಸೋಷಿಯಲ್ ಡೆಮಾಕ್ರೆಟಿಕ್ ಪಾರ್ಟಿ ಆಫ್ ಇಂಡಿಯಾ( ಎಸ್ ಡಿಪಿಐ) ಸಂಘಟನೆ ಯ ಪದಾಧಿಕಾರಿಗಳು ಮಂಗಳವಾರ ಶಿವಮೊಗ್ಗ ಮಹಾನಗರ ಪಾಲಿಕೆ ಆಯುಕ್ತರಿಗೆ ಮನವಿ ಸಲ್ಲಿಸಿದರು.
ಕಳೆದವಾರ ಸುರಿದ ಧಾರಾಕಾರ ಮಳೆಯಿಂದಾಗಿ ಶಿವಮೊಗ್ಗ ಮಹಾನಗರ ಪಾಲಿಕೆಯ ವ್ಯಾಪ್ತಿಯಲ್ಲಿನ ಬಹಳಷ್ಟು ಬಡಾವಣೆಗಳಲ್ಲಿ ಚರಂಡಿಯ ಕೊಳಚೆ ನೀರು ಮನೆಗಳಿಗೆ ನುಗ್ಗಿತು. ಇದರಿಂದ ಕೋಟ್ಯಾಂತರ ಮೌಲ್ಯದ ಮನೆ ಸಾಮಗ್ರಿಗಳು ಮತ್ತು ವಸ್ತುಗಳು ಹಾಳಾಗಿವೆ. ಬಹಳಷ್ಟು ವಾಹನಗಳು ಈ ನೀರಿನಲ್ಲಿ ಮುಳುಗಿ ಹಾಳಾಗಿವೆ. ಹಲವು ಮನೆಗಳ ಮನೆ ಸಾಮಗ್ರಿಗಳು ನೀರಿನಲ್ಲಿ ತೇಲಿ ಹೋಗಿವೆ, ಎಲೆಕ್ಟ್ರಾನಿಕ್ಸ್ ಸಾಮಗ್ರಿಗಳು ನೀರಿನಲ್ಲಿ ಕೊಚ್ಚಿಕೊಂಡು ಹೋಗಿವೆ. ಈ ಬಗ್ಗೆ ಮಹಾನಗರ ಪಾಲಿಕೆಯು ತಕ್ಷಣವೇ ಮಳೆ ಹಾನಿ ನಷ್ಟದ ಕುರಿತು ಸರ್ವೇ ನಡೆಸಿ, ಹಾನಿಗೀಡಾದವರಿಗೆ ಪರಿಹಾರ ನೀಡಬೇಕೆಂದು ಎಸ್ ಡಿಪಿಐ ಮುಖಂಡರು ಆಗ್ರಹಿಸಿದರು.
ವಾರ್ಡ್ ನಂ.೧೨ ಟ್ಯಾಂಕ್ ಮೊಹಲ್ಲಾ ಮತ್ತು ಬಾಪೂಜಿ ನಗರ, ವಾರ್ಡ್ ನಂ.೨೫ ಜೆಪಿನಗರ, ವಾರ್ಡ್ ನಂ.೨೭ ಆನಂದ ರಾಮ್ ಬಡಾವಣೆ ಮತ್ತು ಅಣ್ಣಾನಗರ ಮುಖ್ಯರಸ್ತೆ, ಲಕ್ಷ್ಮಿ ಕ್ಯಾಂಟೀನ್, ವಾರ್ಡ್ ನಂ.೨೮ ಆರ್.ಎಂ.ಎಲ್.ನಗರ, ವಾರ್ಡ್ ನಂ.೩೨ ಟಿಪ್ಪು ನಗರ ಕೆರೆ ಅಂಗಳ, ವಾರ್ಡ್ ನಂ.೩೩ ನ್ಯೂಮಂಡ್ಲಿ, ಎನ್.ಟಿ.ರಸ್ತೆ, ಹಳೆಮಂಡ್ಲಿ, ಸುಲ್ತಾನ್ ಮೊಹಲ್ಲಾ ಮತ್ತು ಇಮಾಮ್ ಬಾಡಾ, ವಾರ್ಡ್ ನಂ.೩೪ ವಾದಿ ಹುದಾ ಬಡಾವಣೆ, ಮೆಹಬೂಬ್ ನಗರಗಳು ಜಲಾವೃತ್ತ ಮತ್ತು ಚರಂಡಿ ನೀರು ನುಗ್ಗಿ ಹಾನಿಯಾಗಿರುವ ಪ್ರಮುಖ ಪ್ರದೇಶಗಳಾಗಿವೆ. ನಗರವು ಸ್ಮಾರ್ಟ್ ಸಿಟಿಯಾಗಿದೆ. ಆದರೆ, ಮಳೆಗಾಲದಲ್ಲಿ ಇದು ಎಷ್ಟು ಸ್ಮಾರ್ಟ್ ಆಗಿದೆ ಎಂದು ಗೊತ್ತಾಗುತ್ತಿದೆ. ಒಳಚರಂಡಿಯ ಕಳಪೆ ಕಾಮಗಾರಿ, ಸ್ಮಾರ್ಟ್ ಸಿಟಿ ವರ್ಕ್ ಎಂದು ಗುಂಡಿಗಲು ಅಗೆದು ಬಿಟ್ಟಿರುವುದು, ಮಳೆಗಾಲದ ಮುಂಚೆ ಮುಂಜಾಗ್ರತಾ ಕ್ರಮವಾಗಿ ರಾಜಕಾಲುವೆಗಳ ಸಂಪೂರ್ಣ ಕ್ಲೀನಿಂಗ್, ಚರಂಡಿಗಳ ಸ್ವಚ್ಚ ಕಾರ್ಯ ನಡೆಯದೇ ಇರುವುದು ಇದಕ್ಕೆ ಮುಖ್ಯ ಕಾರಣವಾದರೆ, ಕಳೆದ ೧೦ ವರ್ಷಗಳಿಂದ ಜನರ ಪರದಾಟವನ್ನು ನೋಡಿಯೂ ಕೂಡ ಇದಕ್ಕೆ ಕ್ರಮ ಕೈಗೊಳ್ಳದೇ ನಿರ್ಲಕ್ಷ್ಯ ವಹಿಸಿದ್ದು ಇದಕ್ಕೆ ನೇರ ಹೊಣೆಯಾಗಿದೆ ಎಂದು ಕಿಡಿಕಾರಿದರು.
ಎಸ್ ಡಿಪಿಐ ಮನವಿಗೆ ಆಯುಕ್ತ ಡಾ. ಮಾಯಣ್ಣ ಗೌಡ ಪ್ರತಿಕ್ರಿಯಿಸಿ, ರಸ್ತೆ ನಿರ್ಮಾಣದಂತಹ ಸಂದರ್ಭದಲ್ಲಿ ಕೆಲವು ಕಡೆ ಚರಂಡಿ ವ್ಯವಸ್ಥೆ ಅಸಮರ್ಪಕವಾಗಿರುವುದು. ಈ ಸಂಬಂಧ ನಮ್ಮ ಪಾಲಿಕೆಯ ವತಿಯಿಂದ ಸುಮಾರು ೨೦ ಲಕ್ಷದವರೆಗೆ ಚರಂಡಿ ದುರಸ್ತಿಗೆ ಹಣಕಾಸಿನ ವ್ಯವಸ್ಥೆ ಇದೆ. ಯಾರೇ ಬಂದು ದೂರು ನೀಡಿದರೂ ತಕ್ಷಣವೇ ಕ್ರಮಕೈಗೊಳ್ಳಲಾಗುವುದು ಎಂದು ಭರವಸೆ ನೀಡಿದರು. ಈ ಸಂದರ್ಭದಲ್ಲಿ ಪ್ರಧಾನ ಕಾರ್ಯದರ್ಶಿ ಇಸಾಕ್ ಅಹ್ಮದ್, ಕಾರ್ಯದರ್ಶಿ ಜಿಲಾನ್ ಖಾನ್, ಸಂಘಟನೆಯ ಸದಸ್ಯರಾದ ಪೈರೋಝ್ ಖಾನ್, ಮಜರ್ ಅಹ್ಮದ್ ಮುಂತಾದವರು ವಹಿಸಿದ್ದರು.
……………………………….
ಮಳೆ ನೀರು ನುಗ್ಗಿ, ಎಲ್ಲೆಲ್ಲಿ ಅನಾಹುತಗಳಾಗಿವೆಯೋ ಅಲ್ಲಿಂದ ವರದಿಯನ್ನು ತರಿಸಿಕೊಂಡು ಸೂಕ್ತ ಕ್ರಮಕೈಗೊಳ್ಳಲಾಗುತ್ತಿದೆ. ೨೦ ಲಕ್ಷಕ್ಕೂ ಹೆಚ್ಚಿನ ಮೊತ್ತದ ದುರಸ್ತಿಗೂ ಸಂಬಂಧ ಪಟ್ಟ ಯೋಜನೆಯಲ್ಲಿ ಪರಿಹಾರ ಸೂಚಿಸಲಾಗುವುದು. ಕೃತಕ ನೆರೆಯ ಕುರಿತು ಇಲ್ಲಿಯವರೆಗೆ ಸಾಕಷ್ಟು ಕ್ರಮಗಳನ್ನು ತಗೆದುಕೊಳ್ಳಲಾಗಿದ್ದು, ಇನ್ನು ಹೆಚ್ಚಿನ ರೀತಿಯ ಪ್ರಗತಿಯನ್ನು ಸಾಧಿಸಲು ಕ್ರಮಕೈಗೊಳ್ಳುತ್ತಿದ್ದೇವೆ.
– ಡಾ. ಮಾಯಣ್ಣ ಗೌಡ, ಪಾಲಿಕೆ ಆಯುಕ್ತ
…………………………………………….
ಮಳೆ ನೀರು ಮನಗಳಿಗೆ ನುಗ್ಗದವುದು ಶಿವಮೊಗ್ಗ ನಗರಕ್ಕೆ ಹೊಸದೇನಲ್ಲ. ನಗರ ಸಭೆಯಿಂದ ಮಹಾನಗರ ಪಾಲಿಕೆಯಾಗಿ ಪರಿವರ್ತನೆಯಾಗಿ ೧೦ ವರ್ಷಗಳಷ್ಟು ಸಮಯ ಕಳೆದರೂ, ಈ ಸಮಸ್ಯೆಗೆ ಸೂಕ್ತ ಪರಿಹಾರ ನೀಡಲು ಮಹಾನಗರ ಪಾಲಿಕೆ ವಿಫಲವಾಗಿದೆ. ಮಹಾನಗರ ಪಾಲಿಕೆ ವಾರ್ಡ್ ಇಂಜಿನಿಯರ್ ಮತ್ತು ಆರೋಗ್ಯ ಅಧಿಕಾರಿಗಳ ನಿರ್ಲಕ್ಷ್ಯದಿಂದಾಗಿ ಇಂತಹ ಪರಿಸ್ಥಿತಿಗೆ ಶಿವಮೊಗ್ಗದ ಜನತೆ ತುತ್ತಾಗಿದ್ದಾರೆ. ತಗ್ಗು ಪ್ರದೇಶಗಳಲ್ಲಿ ಬಡ ಕುಟುಂಬ ವಾಸಿಸುವ ಕಚ್ಚಾ ಮನೆಗಲು ಬೀಳುವ ಸ್ಥಿತಿ ಇದೆ
– ಇಮ್ರಾನ್ ಅಹ್ಮದ್ , ಎಸ್ ಡಿಪಿಐ ಜಿಲ್ಲಾಧ್ಯಕ್ಷ