ಶಿವಮೊಗ್ಗ: ರಾಜ್ಯದ ಸರ್ಕಾರಿ ಮತ್ತು ಅನುದಾನಿತ ಶಾಲಾ ಕಾಲೇಜುಗಳಲ್ಲಿ ವ್ಯಾಸಂಗ ಮಾಡುತ್ತಿರುವ ಹದಿಹರೆಯದ ವಿದ್ಯಾರ್ಥಿನಿಯರಿಗೆ ಶುಚಿ ಯೋಜನೆಯಡಿಯಲ್ಲಿ ನೀಡುವ ಸ್ಯಾನಿಟರಿ ಪ್ಯಾಡ್ ಕಿಟ್‌ಗಳನ್ನು ಸ್ಥಗಿತಗೊಳಿಸಿರುವುದನ್ನು ವಿರೋಧಿಸಿ ಯೋಜನೆ ಜಾರಿಗೆ ಆಗ್ರಹಿಸಿ ಮಂಗಳವಾರ ಬೆಳಿಗ್ಗೆ ಶಾಂತವೇರಿ ಗೋಪಾಲಗೌಡ ಸಮಾಜವಾದಿ ಅಧ್ಯಯನ ಕೇಂದ್ರ ಟ್ರಸ್ಟ್ ಜಿಲ್ಲಾಧಿಕಾರಿಗಳ ಮೂಲಕ ಮುಖ್ಯಮಂತ್ರಿಗಳಿಗೆ ಮನವಿ ಸಲ್ಲಿಸಿತು.
ರಾಜ್ಯ ಸರ್ಕಾರ ವಿದ್ಯಾರ್ಥಿನಿಯರಿಗೆ ಜಾರಿಗೆ ತಂದಿದ್ದ ಶುಚಿ ಯೋಜನೆಯನ್ನು ಸ್ಥಗಿತಗೊಳಿಸುವುದು ಖಂಡನೀಯ ಕಳೆದ ಮಾರ್ಚ್ ತಿಂಗಳಿನಿಂದ ಈ ಯೋಜನೆ ರದ್ದಾಗಿದೆ. ಸುಮಾರು ೧೯ ಲಕ್ಷಕ್ಕೂ ಹೆಚ್ಚು ವಿದ್ಯಾರ್ಥಿನಿಯರಿಗೆ ಇದು ಅನುಕೂಲವಾಗುತ್ತಿತ್ತು ಎಂದು ಮನವಿದಾರರು ತಿಳಿಸಿದರು.
ಶುಚಿ ಯೋಜನೆಗಾಗಿ ೧,೩೯ ಕೋಟಿ ಯೂನಿಟ್‌ನ್ನು ಆರೋಗ್ಯ ಇಲಾಖೆಗೆ ಪೂರೈಕೆ ಮಾಡಲಾಗುವುದು. ಇದಕ್ಕಾಗಿ ವಾರ್ಷಿಕವಾಗಿ ಸುಮಾರು ೪೦.೫೦ಕೋಟಿ ಅನುದಾನ ಬಳಕೆಯಾಗುತ್ತಿತ್ತು. ಈ ಯೋಜನೆಯಿಂದ ಗ್ರಾಮೀಣ ಭಾಗದಲ್ಲಿ ಕುಗ್ರಾಮಗಳಲ್ಲಿ ವಿದ್ಯಾಭ್ಯಾಸ ಮಾಡುತ್ತಿರುವ ಹದಿಹರೆಯದ ಹೆಣ್ಣುಮಕ್ಕಳಿಗೆ ಉಪಯೋಗವಾಗುತ್ತಿತ್ತು. ಈಗ ಯೋಜನೆ ರದ್ದಾಗಿದೆ. ಆಗಾಗಿ ಬಡ ಮತ್ತು ಮಧ್ಯಮ ವಿದ್ಯಾರ್ಥಿನಿಯರಿಗೆ ತೊಂದರೆಯಾಗಿದೆ ಎಂದರು.
ಈ ಬಗ್ಗೆ ರಾಜ್ಯವೈದ್ಯಕಿಯ ಸರಬರಾಜು ನಿಗಮದ ವ್ಯವಸ್ಥಾಪಕ ನಿರ್ದೇಶಕರು ರಾಜ್ಯದಲ್ಲಿ ವಿಧಾನಪರಿಷತ್ ಚುನಾವಣೆ ನೀತಿ ಸಂಹಿತೆ ಜಾರಿಗೆ ಬಂದಿದ್ದರಿಂದ ಸ್ಯಾನಿಟರಿ ನ್ಯಾಪಕಿನ್ ಕಿಟ್‌ಗಳನ್ನು ವಿತರಿಸಲು ಸಾಧ್ಯವಾಗಿಲ್ಲ ಎಂದು ಕುಂಟು ನೆಪ ಹೇಳುತ್ತಿದ್ದಾರೆ. ಇದನ್ನು ನಮ್ಮ ಸಂಘಟನೆ ಖಂಡಿಸುತ್ತದೆ. ರಾಜ್ಯ ಸರ್ಕಾರ ತಕ್ಷಣವೇ ಶುಚಿ ಯೋಜನೆಯನ್ನು ಮತ್ತೆ ಜಾರಿಗೆ ತರಬೇಕು ಎಂದು ಮನವಿಯಲ್ಲಿ ಆಗ್ರಹಿಸಲಾಗಿದೆ.
ಈ ಸಂದರ್ಭದಲ್ಲಿ ಶಾಂತವೇರಿ ಗೋಪಾಲಗೌಡ ಸಮಾಜವಾದಿ ಅಧ್ಯಯನ ಕೇಂದ್ರ ಟ್ರಸ್ಟ್‌ನ ವ್ಯವಸ್ಥಾಪಕ ಟ್ರಸ್ಟಿ ಕಲ್ಲೂರು ಮೇಘರಾಜ್, ಪ್ರಮುಖರಾದ ಪ್ರೊ. ಕಲ್ಲನ, ಶಂಕ್ರಾನಾಯ್ಕ, ಟಿ.ಆರ್.ಕೃಷ್ಣಪ್ಪ, ಬಿ.ಜಗದೀಶ್, ಕೋಡ್ಲು ಶ್ರೀಧರ್, ಆದಿಶೇಷ, ಕೆ.ಆರ್. ಶಿವಣ್ಣ, ಮಂಜನಾಯ್ಕ, ಬಾಬು, ಬಿಪಿಎಲ್ ಬಾಬು ಮುಂತಾದವರು ಇದ್ದರು.