ಎಂಪಿಎಂ ಪುನಾರಂಭವಾದೀತೆ ?

ಭದ್ರಾವತಿ : ಸರ್ ಎಂ. ವಿಶ್ವೇಶ್ವರಯ್ಯನವರ ಕನಸಿನ ಕೂಸುಗಳಲ್ಲೊಂದಾದ ಮೈಸೂರು ಕಾಗದ ಕಾರ್ಖಾನೆ (ಎಂಪಿಎಂ) ಬಾಗಿಲು ಮುಚ್ಚಿ ಸರಿ ಸುಮಾರು ಎರಡು ವರ್ಷಗಳು ಕಳೆಯುತ್ತಾ ಬಂದಿದ್ದರೂ, ಕಾರ್ಖಾನೆಯಲ್ಲಿ ದುಡಿದ ಕಾರ್ಮಿಕರಿಗೆ ಸರ್ಕಾರ ಇನ್ನೂ ಪರಿಹಾರದ ಹಣ ಬಿಡುಗಡೆ ಮಾಡಿಲ್ಲ. ಉಳಿದಂತೆ ಕಾರ್ಖಾನೆಯ ಪುನಾರಂಭದ ನಿರೀಕ್ಷೆಯಲ್ಲಿರುವ ಹಲವು ಕಾರ್ಮಿಕರು ಈಗಲೂ ಕಾತುರದಿಂದ ದಿನಗಳನ್ನು ಎಣಿಸುತ್ತಿದ್ದಾರೆ. ಆಳುವವರ ಇಚ್ಛಾಸಕ್ತಿಯ ಕೊರತೆಯಿಂದಾಗಿ ಕಾರ್ಖಾನೆ ತುಕ್ಕು ಹಿಡಿಯುತ್ತಿದೆ.
ಹಸಿರು ಪೀಠ ನ್ಯಾಯಾಧೀಕರಣದ ಆದೇಶ ದಿಂದಾಗಿ ಎಂಪಿಎಂ ಸಕ್ಕರೆ ಕಾರ್ಖಾನೆ ಕೊನೆಯುಸಿ ರೆಳೆದಿದ್ದು, ಈಗ ಇತಿಹಾಸ. ಉಳಿದಂತೆ ಉತ್ಕೃಷ್ಟ ದರ್ಜೆಯ ಮುದ್ರಣ ಕಾಗದದ ತಯಾರಿಕೆಗೆ ಹೆಸರಾಗಿದ್ದ ಕಾಗದ ಕಾರ್ಖಾನೆಗೆ ನಷ್ಟ ಸರಿದೂಗಿಸಲಾಗದೇ ಆಡಳಿತ ಮಂಡಳಿಯ ಶಿಫಾರಸ್ಸಿನಂತೆ ಬೀಗ ಮುದ್ರೆ ಜಡಿಯಲಾಗಿದೆ.
ಅಧಿಕಾರಿಗಳಿಗೆ ಇದರಿಂದ ನಷ್ಟವೇನೂ ಆಗಲಿಲ್ಲ. ನಿಜವಾದ ನಷ್ಟ ಅನುಭವಿಸಿದ್ದು, ಎಂಪಿಎಂ ಸಕ್ಕರೆ ಕಾರ್ಖಾನೆಯನ್ನೇ ನಂಬಿ ಲಕ್ಷಾಂತರ ಎಕರೆ ಪ್ರದೇಶದಲ್ಲಿ ಕಬ್ಬು ಬೆಳೆಯುತ್ತಿದ್ದ ರೈತರು, ಕಾರ್ಖಾನೆ ಅವಲಂಬಿಸಿ ಬದುಕು ಸವೆಸುತ್ತಿದ್ದ ಸಹಸ್ರಾರು ಕಾರ್ಮಿಕ ಕುಟುಂಬಗಳು ಬೀದಿ ಪಾಲಾದವು. ಎಂಪಿಎಂ ಸಕ್ಕರೆ ಕಾರ್ಖಾನೆಯ ಸ್ಥಗಿತದಿಂದಾಗಿ ಜಿಲ್ಲೆಯ ಹಲವು ತಾಲ್ಲೂಕುಗಳಲ್ಲಿ ರೈತರ ಬದುಕು ಅಕ್ಷರಶಃ ಬೀದಿಗೆ ಬಂದಿದೆ.
ಒಂದೆಡೆ ಮಳೆಯ ಕೊರತೆ. ಇನ್ನೊಂದೆಡೆ ಸಕ್ಕರೆ ಕಾರ್ಖಾನೆ ಸ್ಥಗಿತದಿಂದಾಗಿ ಭದ್ರಾವತಿ ಸೇರಿದಂತೆ ಹಲವು ತಾಲ್ಲೂಕಿನಲ್ಲಿ ಕೃಷಿಗೆ ಭಾರೀ ಹಿನ್ನಡೆಯಾಗಿದೆ. ಎಂಪಿಎಂ ಸಕ್ಕರೆ ಕಾರ್ಖಾನೆ ಮುಚ್ಚಿದ್ದರಿಂದ ಭದ್ರಾವತಿ ತಾಲ್ಲೂಕಿನಲ್ಲಿ ಶೇ.೮೦ರಷ್ಟು ಕಬ್ಬಿನ ಬೆಳೆ ಸ್ಥಗಿತಗೊಂಡಿದ್ದು, ಉಳಿದಿರುವ ಶೇ.೨೦ರಷ್ಟು ಕಬ್ಬು ಬೆಳೆಗಾರರು ಆಲೆಮನೆಗಳನ್ನು ಆಶ್ರಯಿಸ ಬೇಕಾದ ಅನಿವಾರ್ಯ ಸ್ಥಿತಿ ನಿರ್ಮಾಣವಾಗಿದೆ.
ಎಂಪಿಎಂ ಕಾರ್ಖಾನೆ ಮುಚ್ಚುವ ಮೊದಲು ಖಾಸಗೀಕರಣಕ್ಕೆ ವಿರೋಧಿಸುತ್ತಿದ್ದ ಕಾರ್ಮಿಕರು ಈಗ ಯಾರಾದರೇನು ಒಟ್ಟಾರೆ ಕಾರ್ಖಾನೆ ನಡೆದರೆ ಸಾಕು ಎಂಬ ಮನಃಸ್ಥಿತಿಗೆ ಬಂದು ನಿಂತಿದ್ದು, ಇಂದಲ್ಲ ನಾಳೆ ಕಾರ್ಖಾನೆ ಪುನಾರಂಭಗೊಳ್ಳಬಹುದೆಂಬ ನಿರೀಕ್ಷೆಯಲ್ಲಿದ್ದಾರೆ.
ಮೂರ‍್ನಾಲ್ಕು ವರ್ಷಗಳ ಹಿಂದೆಯೇ ಹರ್ಷಗುಪ್ತ ಆಡಳಿತ ನಿರ್ದೇಶಕರಾಗಿದ್ದಾಗ ಕಾರ್ಖಾನೆಯನ್ನು ಖಾಸಗಿಗೆ ವಹಿಸುವ ಪ್ರಕ್ರಿಯೆಗೆ ಚಾಲನೆ ದೊರೆತಿತ್ತು. ಆದರೆ ಅವರು ವರ್ಗಾವಣೆಗೊಂಡ ನಂತರ ಖಾಸಗೀಕರಣದ ಪ್ರಯತ್ನ ಅಷ್ಟಕ್ಕೇ ನಿಂತಿದೆ. ಈಗಿನ ಎಂ.ಡಿ. ನವೀನ್‌ರಾಜ್‌ಸಿಂಗ್ ಖಾಸಗಿಗೆ ವಹಿಸುವ ಬಗ್ಗೆ ಅಷ್ಟೇನೂ ಉತ್ಸುಕರಾಗಿಲ್ಲ ಎಂಬ ಮಾತು ಕಾರ್ಮಿಕ ವಲಯದಿಂದ ಕೇಳಿ ಬರುತ್ತಿದೆ.
ಈ ನಡುವೆ ಕಳೆದ ಎರಡು ವರ್ಷಗಳಿಂದಲೂ ತಮಗೆ ಬರಬೇಕಾದ ಪರಿಹಾರದ ಹಣಕ್ಕೆ ಕಾರ್ಮಿಕರು ಜಾತಕ ಪಕ್ಷಿಯಂತೆ ಕಾದು ಕುಳಿತಿದ್ದರೆ, ಇನ್ನೊಂದೆಡೆ ಕಾರ್ಖಾನೆ ವಹಿವಾಟು ನಡೆಸುತ್ತಿದ್ದ ಎಸ್‌ಬಿಐ ಇತರೆ ಬ್ಯಾಂಕ್‌ಗಳಿಗೆ ೨೪೦ ಕೋಟಿ ರೂ.ಗಳಿಗೂ ಅಧಿಕ ಸಾಲದ ಮೊತ್ತ ಸುಸ್ತಿಯಾಗಿದ್ದು, ಒಂದು ವೇಳೆ ಸರ್ಕಾರ ಪರಿಹಾರದ ಮೊತ್ತ ಬಿಡುಗಡೆ ಮಾಡಿದರೆ, ಸಾಲ ಅಥವಾ ಬಡ್ಡಿಯ ಹಣವನ್ನು ಕಠಾವು ಮಾಡಿಕೊಳ್ಳಲು ಬ್ಯಾಂಕ್‌ಗಳು ಕಾಯುತ್ತಿವೆ.
ಇದನ್ನು ಮನಗಂಡಿರುವ ಎಂಪಿಎಂ ಆಡಳಿತ ಮಂಡಳಿಯು ಕೆನರಾ ಬ್ಯಾಂಕ್‌ನಲ್ಲಿ ಖಾತೆ ತೆರೆದಿದ್ದು, ಪರಿಹಾರದ ಹಣವನ್ನು ವಿತರಿಸಲು ಸಿದ್ಧತೆಮಾಡಿಕೊಳ್ಳುತ್ತಿದೆ ಎನ್ನಲಾಗಿದೆ.
ಈ ನಡುವೆ ಕಾರ್ಖಾನೆಯನ್ನು ಖಾಸಗಿಗೆ ವಹಿಸಿದರೆ ಸಾವಿರಾರು ಕೋಟಿ ಸಾಲದ ಹೊರೆಯನ್ನು ಹೊರುವವರು ಯಾರು ಎಂಬ ಪ್ರಶ್ನೆ ಎದುರಾಗಿದ್ದು, ಸರ್ಕಾರ ಸಾಲದ ಜವಾಬ್ದಾರಿ ಹೊತ್ತರೆ ಮಾತ್ರ ಖಾಸಗಿಯವರು ಕಾರ್ಖಾನೆ ನಡೆಸಲು ಮುಂದೆ ಬರಬಹುದು. ಇಲ್ಲವಾದಲ್ಲಿ ಕಾರ್ಖಾನೆಯು ತುಕ್ಕು ಹಿಡಿಯುವುದು ಖಚಿತ ಎಂದು ಕಾರ್ಮಿಕರು ಆತಂಕಗೊಂಡಿದ್ದಾರೆ.

LEAVE A REPLY

Please enter your comment!
Please enter your name here