ಸಂಪರ್ಕ ಕಲ್ಪಿಸುವ ರಸ್ತೆ ಅಭಿವೃದ್ಧಿಪಡಿಸಿ

ಶಿವಮೊಗ್ಗ : ಮುಂದಿನ ಹತ್ತು ವರ್ಷಗಳನ್ನು ದೃಷ್ಟಿಯಲ್ಲಿಟ್ಟುಕೊಂಡು ನಗರಕ್ಕೆ ಸಂಪರ್ಕ ಕಲ್ಪಿಸುವ ಆರೂ ರಸ್ತೆಗಳನ್ನು ಸ್ಮಾರ್ಟ್ ಸಿಟಿ ಯೋಜನೆಗಳನ್ನು ಅಭಿವೃದ್ಧಿಪಡಿಸಬೇಕೆಂದು ನಗರಾಭಿವೃದ್ಧಿ ಸಚಿವ ಯು.ಟಿ.ಖಾದರ್ ಅಧಿಕಾರಿಗಳಿಗೆ ಸೂಚನೆ ನೀಡಿದರು.
ಇಂದು ನಗರದ ಮಹಾನಗರಪಾಲಿಕೆ ಸಭಾಂಗಣದಲ್ಲಿ ನಡೆದ ಸ್ಮಾರ್ಟ್ ಸಿಟಿ ಕುರಿತ ಅಧಿಕಾರಿಗಳ ಮತ್ತು ಪಾಲಿಕೆ ಸದಸ್ಯರುಗಳ ಜೊತೆಯಲ್ಲಿನ ಸಭೆಯಲ್ಲಿ ಮಾತನಾಡಿದ ಅವರು, ಶಿವಮೊಗ್ಗ ನಗರ ಪ್ರವಾಸಿ ಕೇಂದ್ರಕ್ಕೆ ಉತ್ತಮವಾಗಿದೆ. ಈ ಹಿನ್ನೆಲೆಯಲ್ಲಿ ಶಿವಮೊಗ್ಗ ನಗರಕ್ಕೆ ಸಂಪರ್ಕ ಕಲ್ಪಿಸುವ ಆರೂ ರಸ್ತೆಗಳನ್ನು ಸ್ಮಾರ್ಟ್ ಸಿಟಿ ಯೋಜನೆಯಡಿಯಲ್ಲಿ ಅಭಿವೃದ್ಧಿ ಪಡಿಸಬೇಕೆಂದರು.
ಇಲ್ಲಿನ ಶಾಸಕ ಕೆ.ಎಸ್.ಈಶ್ವರಪ್ಪ ಮತ್ತು ಮಹಾನಗರಪಾಲಿಕೆಯ ಕೋರಿಕೆ ಮೇರೆಗೆ ಹಳೇ ಜೈಲು ಜಾಗವನ್ನು ನಗರದ ಸಾಂಸ್ಕೃತಿಕ ಚಟುವಟಿಕೆಗಳು ಮತ್ತು ಸಾರ್ವಜನಿಕ ಕಾರ್ಯಕ್ರಮಗಳಿಗೆ ಮೀಸಲಿರಿಸುವ ಬಗ್ಗೆ ಗೃಹ ಇಲಾಖೆಯ ಸಚಿವರೊಂದಿಗೆ ಮಾತುಕತೆ ನಡೆಸಿ, ಕ್ರಮಕೈಗೊಳ್ಳಲಾಗುವುದು. ಅಲ್ಲದೆ, ಈ ವರ್ಷ ಅಥವಾ ಮುಂದಿನ ವರ್ಷ ತಾತ್ಕಾಲಿಕವಾಗಿ ದಸರಾ ಹಬ್ಬವನ್ನು ಅಲ್ಲಿಯೇ ಆಚರಿಸುವ ಮೂಲಕ ಈ ಜಾಗವನ್ನು ಸಾರ್ವಜನಿಕ ಬಳಕೆಗೆ ಉದ್ಘಾಟಿಸುವಂತಹ ಕಾರ್ಯ ಮಾಡಲಾಗುವುದು ಎಂದರು.
೬೪ ಎಕರೆಯಲ್ಲಿ ಬಡವರಿಗೆ ಮನೆ ನಿರ್ಮಿಸುವ ಕಾರ್ಯಕ್ಕೆ ಸಂಬಂಧಿಸಿದಂತೆ ಈಗಾಗಲೇ ೪೮೦೦ ಅರ್ಜಿಗಳನ್ನು ಪರಿಶೀಲಿಸಲಾಗಿದ್ದು,ಪಟ್ಟಿ ಅಂತಿಮಗೊಂಡಿದೆ. ಶೇ.೯೦ರಷ್ಟು ಹಣವನ್ನು ಸರ್ಕಾರಗಳು ಭರಿಸಲಿವೆ. ಉಳಿದ ೧೦% ಹಣವನ್ನು ಫಲಾನುಭವಿ ಭರಿಸಬೇಕೆಂಬುದು ನಮ್ಮ ಅಭಿಪ್ರಾಯವಾಗಿದೆ. ಇದರಿಂದ ಫಲಾನುಭವಿಗೆ ನಾನೂ ಸಹ ಒಂದಿಷ್ಟು ಹಣವನ್ನು ಈ ಮನೆಗಾಗಿ ವಿನಿಯೋಗಿಸಿದ್ದೇನೆ ಎಂಬ ಭಾವನೆ ಬರುತ್ತದೆ. ಆ ಉದ್ದೇಶದಿಂದ ಇದನ್ನು ಮಾಡಲಾಗಿದೆ ಎಂದರು.
ಇಷ್ಟು ಪ್ರಮಾಣದ ಹಣವನ್ನು ಕಟ್ಟಲಾಗದಂತಹ ಸ್ಥಿತಿಯಲ್ಲಿ ಕೆಲವರಿದ್ದಾರೆ. ಇದನ್ನೂ ಸಹ ಸರ್ಕಾರ ಮನಗಂಡಿದೆ. ಆ ಹಿನ್ನೆಲೆಯಲ್ಲಿ ಮೂರು ಕಂತುಗಳಲ್ಲಿ ಹಣವನ್ನು ಕಟ್ಟುವಂತಹ ಅಥವಾ ಮನೆಯನ್ನು ಸಂಪೂರ್ಣ ನಿರ್ಮಿಸಿ, ನೆಲ ಹಾಸನ್ನು ಮಾಡದೇ ಫಲಾನುಭವಿಯ ಇಚ್ಚೆಗೆ ಅನುಗುಣವಾಗಿ ಬಿಟ್ಟುಕೊಡುವ ಉದ್ದೇಶವೂ ಸಹ ನಮ್ಮ ಮಟ್ಟದಲ್ಲಿ ಚರ್ಚೆ ನಡೆಯುತ್ತಿದೆ. ಇದರಲ್ಲಿ ಯಾವುದು ಸೂಕ್ತವೋ ಅದನ್ನು ಅಂತಿಮಗೊಳಿಸಲಾಗುವುದು ಎಂದರು.
ಈಗಾಗಲೇ ಶಿವಮೊಗ್ಗ ನಗರದಲ್ಲಿ ಶೇ.೮೫ರಷ್ಟು ಯುಜಿಡಿ ಕಾಮಗಾರಿ ಪೂರ್ಣಗೊಂಡಿದೆ. ಉಳಿದ ೧೫% ಬಾಕಿ ಉಳಿದಿದ್ದು, ಇದು ಶೀಘ್ರಗತಿಯಲ್ಲಿ ಪೂರ್ಣಗೊಳ್ಳಬೇಕಾಗಿದೆ ಎಂದ ಅವರು, ಮುಂದಿನ ಆರರಿಂದ ಎಂಟು ತಿಂಗಳ ಒಳಗಾಗಿ ಸ್ಮಾರ್ಟ್ ಸಿಟಿ ಯೋಜನೆಯ ವೇಗವನ್ನು ಹೆಚ್ಚಿಸುವ ಮೂಲಕ ನಗರದ ಜನತೆಗೆ ಯೋಜನೆಯ ಪರಿಕಲ್ಪನೆಯನ್ನು ಮೂಡಿಸಿ ಎಂದು ಹೇಳಿದರು.
ಸಭೆಯಲ್ಲಿ ಶಾಸಕ ಕೆ.ಎಸ್.ಈಶ್ವರಪ್ಪ, ಮೇಯರ್ ನಾಗರಾಜ್ ಕಂಕಾರಿ, ಉಪಮೇಯರ್ ವಿಜಯಲಕ್ಷ್ಮೀ ಸಿ. ಪಾಟೀಲ್, ಜಿಲ್ಲಾಧಿಕಾರಿ ಎಂ. ಲೋಕೇಶ್ ಸೇರಿದಂತೆ ಮೊದಲಾದವರಿದ್ದರು.