ಶಿವಮೊಗ್ಗ : ಪ್ರತಿಯೊಬ್ಬರೂ ತಮ್ಮ ಕುಟುಂಬದ ಅನುಕೂಲಕ್ಕಾಗಿ ಕಟ್ಟಿಸಿಕೊಂಡಿರುವ ಶೌಚಾಲಯಗಳನ್ನು ಬಳಸುವ ಮೂಲಕ ಸ್ವಚ್ಚ ಹಾಗೂ ಆರೋಗ್ಯವಂತ ಸಮಾಜ ನಿರ್ಮಾಣಕ್ಕೆ ಸಂಕಲ್ಪ ಮಾಡುವಂತೆ ಜಿಲ್ಲಾಧಿಕಾರಿ ಡಾ.ಎಂ.ಲೋಕೇಶ್ ಕರೆ ನೀಡಿದರು.
ಇಂದು ಜಿಲ್ಲಾಡಳಿತ, ಜಿಲ್ಲಾ ಪಂಚಾಯತ್ ಮತ್ತು ತಾಲೂಕು ಪಂಚಾಯತ್ ಶಿವಮೊಗ್ಗ ಇವರ ಸಂಯುಕ್ತಾಶ್ರಯದಲ್ಲಿ ನಗರದ ಬಿ.ಆರ್.ಅಂಬೇಡ್ಕರ್ ಭವನದಲ್ಲಿ ೭೧ನೇ ಸ್ವಾತಂತ್ರ್ಯ ದಿನೋತ್ಸವದ ಅಂಗವಾಗಿ ಏರ್ಪಡಿಸಲಾಗಿದ್ದ ಬಯಲು ಬಹಿರ್ದೆಸೆ ಮುಕ್ತ-ಸ್ವಾತಂತ್ರ್ಯ ಸಪ್ತಾಹ ಕಾರ್ಯಕ್ರಮ ಉದ್ಘಾಟಿಸಿ ಮಾತನಾಡಿದರು.
ಕೆಲವೇ ವರ್ಷಗಳಿಂದೀಚೆಗೆ ಪರಿಚಿತವಾದ ಮೊಬೈಲ್ ನಗರ ಮತ್ತು ಗ್ರಾಮೀಣ ಪ್ರದೇಶದಲ್ಲಿ ವಾಸಿಸುವ ಪ್ರತಿಯೊಬ್ಬರ ಕೈಯಲ್ಲೂ ಇದೆ. ಅವರಲ್ಲಿ ಕೆಲವರು ಎರೆಡೆರೆಡು ಮೊಬೈಲ್‌ಗಳನ್ನು ಹೊಂದಿದ್ದಾರೆ. ಆದರೆ, ತಮ್ಮ ಆರೋಗ್ಯದ ಬಗ್ಗೆ ಕಾಳಜಿವಹಿಸಬೇಕಾದ ಬಹುತೇಕ ಜನ ತಮ್ಮ ಕುಟುಂಬದ ಹಿತಕ್ಕಾಗಿ ಶೌಚಾಲಯ ಕಟ್ಟಿಸಿಕೊಂಡು ಬಳಸುವುದನ್ನು ಮರೆತಿರುವುದು ಸೋಜಿಗದ ಸಂಗತಿ ಎಂದರು.
ಶೌಚಾಲಯ ನಿರ್ಮಿಸಿಕೊಂಡ ಬಹುತೇಕರು ಅದನ್ನು ಸಮರ್ಪಕವಾಗಿ ಬಳಸುತ್ತಿಲ್ಲ. ಬದಲಾಗಿ ಬಯಲು ಶೌಚಪದ್ದತಿಯನ್ನೇ ಮುಂದುವರೆಸಿದ್ದಾರೆ. ಅಂತಹವರು ಶೌಚಾ ಲಯ ಬಳಸಲು ಮುಂದಾಗಬೇಕು ಹಾಗೂ ಗ್ರಾಮೀಣ ಸ್ವಯಂ ಸೇವಕರು ಅವರಿಗೆ ಶೌಚಾಲಯ ಬಳಸಲು ಪ್ರೇರೇಪಿಸಬೇಕೆಂದರು.
ಜಿ.ಪಂ. ಸಿಇಓ ಡಾ.ಕೆ.ರಾಕೇಶ್‌ಕುಮಾರ್ ಮಾತನಾಡಿ, ಗಾಂಧೀಜಿಯವರ ೧೫೦ನೇ ಜನ್ಮ ವರ್ಷಾಚರಣೆಯ ಅಂಗವಾಗಿ ೨೦೧೯ರ ಅಕ್ಟೋಬರ್ ೦೨ರಂದು ಬಯಲು ಶೌಚಮುಕ್ತ ಜಿಲ್ಲೆ ಎಂದು ಘೋಷಿಸಲು ಸರ್ಕಾರ ಆದೇಶ ಹೊರಡಿಸಿದೆ ಎಂದರು.
ಜಿ.ಪಂ. ಅಧ್ಯಕ್ಷೆ ಜ್ಯೊತಿ ಎಸ್.ಕುಮಾರ್ ಅಧ್ಯಕ್ಷತೆ ವಹಿಸಿದ್ದರು. ಉಪಾಧ್ಯಕ್ಷೆ ವೇದಾವಿಜಯ ಕುಮಾರ್, ಜಿ.ಪಂ. ಉಪಕಾರ್ಯದರ್ಶಿ ರಂಗನಾಥ್ ಅವರು ಉಪಸ್ಥಿತರಿದ್ದರು.