ವರ್ತಕರ-ಬೆಳೆಗಾರರ ಸೇತುವೆಯಾಗಿ ‘ಮ್ಯಾಮ್‌ಕೋಸ್’ ಅಡಿಕೆ ಖರೀದಿ ಕೇಂದ್ರಕ್ಕೆ ಚಾಲನೆ ನೀಡಿದ ಜಿಲ್ಲಾಧಿಕಾರಿ

ಶಿವಮೊಗ್ಗ : ಮ್ಯಾಮ್‌ಕೋಸ್‌ನಿಂದ ಅಡಿಕೆ ಖರೀದಿ ಮಾಡುತ್ತಿರುವುದು ಉತ್ತಮ ಬೆಳವಣಿಗೆಯಾಗಿದೆ. ಬೆಳೆಗಾರರ ಹಿತ ಕಾಯುತ್ತಾ ವರ್ತಕರ ಮತ್ತು ಬೆಳೆಗಾರರ ನಡುವಿನ ಸೇತುವೆಯಾಗಿ ಕಾರ್ಯನಿರ್ವ ಹಿಸುತ್ತಿರುವ ಮ್ಯಾಮ್‌ಕೋಸ್ ಈ ಮೂಲಕ ಮತ್ತೊಂದು ಹೆಜ್ಜೆ ಇಟ್ಟಿದೆ ಎಂದು ಮ್ಯಾಮ್‌ಕೋಸ್ ಅಧ್ಯಕ್ಷ ಹಾಗೂ ಜಿಲ್ಲಾಧಿಕಾರಿ ಡಾ|| ಎಂ.ಲೋಕೇಶ್ ಹೇಳಿದರು.
ಮ್ಯಾಮ್‌ಕೋಸ್ (ಮಲೆನಾಡು ಅಡಿಕೆ ಮಾರಾಟದ ಸಹಕಾರ ಸಂಘ)ದ ವತಿಯಿಂದ ಎಪಿಎಂಸಿ ಪ್ರಾಂಗಣದಲ್ಲಿರುವ ಸಂಘದ ಕಚೇರಿ ಆವರಣದಲ್ಲಿ ಇಂದು ಅಡಿಕೆ ಖರೀದಿ ಕೇಂದ್ರಕ್ಕೆ ಚಾಲನೆ ನೀಡಿ ಮಾತನಾಡಿದ ಅವರು, ಯಾವುದೇ ಕೆಲಸ ಕಾರ್ಯಗಳಿಗೆ ಪರಸ್ಪರ ಸಹಕಾರ, ಸಹಬಾಳ್ವೆ ಅಗತ್ಯವಾಗಿದೆ. ಈ ನಿಟ್ಟಿನಲ್ಲಿ ಅಡಿಕೆ ಮಾರಾಟ ಸಹಕಾರ ಸಂಘದ ಸದಸ್ಯರು ಸಹಕಾರದೊಂದಿಗೆ ಮುನ್ನಡೆದಿದ್ದಾರೆ. ಅಡಿಕೆ ಖರೀದಿ ಮಾಡುತ್ತಿ ರುವುದು ಉತ್ತಮ ಬೆಳವಣಿಗೆಯಾಗಿದೆ. ಮುಂದಿನ ದಿನಗಳಲ್ಲಿ ಖರೀ ಪ್ರಮಾಣ ಹೆಚ್ಚಾಗಲಿ ಎಂದು ಹೇಳಿದರು.
ರೈತರಿಂದ ಅಡಿಕೆ ಖರೀದಿಸಿ ಮಾರಾಟ ಮಾಡುವುದರಿಂದ ಹೆಚ್ಚಿನ ವಹಿವಾಟು ನಡೆಸಬಹುದು. ರೈತರಿಗೆ ಅನುಕೂಲ ವಾಗುವಂತೆ ಕ್ರಮ ಕೈಗೊಳ್ಳಬೇಕೆಂದು ಸಲಹೆ ನೀಡಿದರು.
ಕ್ಯಾಂಪ್ಕೋ ಅಧ್ಯಕ್ಷ ಎಸ್.ಆರ್. ಸತೀಶ್ ಚಂದ್ರ ಮಾತನಾಡಿ, ಹುಟ್ಟಿನಿಂದ ಹಿಡಿದು ಚಟ್ಟದವರೆಗೂ ಬೇಕಾದ ಸಾಂಪ್ರಾದಾಯಕ ವಸ್ತು ಅಡಿಕೆ. ಉದ್ಯಮದ ಸ್ವರೂಪವನ್ನು ಇತ್ತೀಚಿನ ವರ್ಷಗಳಲ್ಲಿ ಪಡೆದುಕೊಂಡಿದೆ. ಮ್ಯಾಮ್‌ಕೋಸ್ ಅಡಿಕೆ ಖರೀದಿಗೆ ಕ್ಯಾಂಪ್ಕೋ ದಿಂದ ಅಗತ್ಯ ಸಹಕಾರ ನೀಡಲಾಗುವುದು ಎಂದು ಹೇಳಿದರು.
ಬೆಳೆಗಾರರು ಸೋತಾಗ ಖರೀದಿದಾರರು ಕೂಡ ಸೋಲುತ್ತಾರೆ. ಎಲ್ಲರಿಗೂ ಉತ್ತಮ ಧಾರಣೆ ಸಿಗುವಂತಾಗಬೇಕು. ಲಾಭ, ನಷ್ಟಗಳಿಂದ ಹಿಗ್ಗುವುದು ಕುಗ್ಗುವುದು ಬೇಡ. ಅಡಿಕೆ ಖರೀದಿಯಿಂದ ಮ್ಯಾಮ್‌ಕೋಸ್ ಜವಾಬ್ದಾರಿ ಹೆಚ್ಚಾಗಿದೆ. ದೇಶದಲ್ಲಿ ಸುಮಾರು ೬ ಲಕ್ಷ ಸಹಕಾರ ಸಂಘಗಳಿದ್ದು ದೇಶದ ಅಭಿವೃದ್ದಿಗೆ ತಮ್ಮದೇ ಆದ ಕೊಡುಗೆ ನೀಡಿವೆ ಎಂದರು.
ಕಾರ್ಯಕ್ರಮದಲ್ಲಿ ಮ್ಯಾಮ್‌ಕೋಸ್ ಉಪಾಧ್ಯಕ್ಷ ವೈ.ಎಸ್.ಸುಬ್ರಮಣ್ಯ, ಕರ್ನಾ ಟಕ ರಾಜ್ಯ ಅಡಿಕೆ ಸಹಕಾರ ಸಂಘಗಳ ಸಹಕಾರ ಮಹಾಮಂಡಲ ಅಧ್ಯಕ್ಷ ಕೊಂಕೋಡಿ ಪದ್ಮನಾಭ, ಕರ್ನಾಟಕ ರಾಜ್ಯ ಅಡಿಕೆ ಮಾರಾಟ ಸಹಕಾರ ಮಹಾಮಂಡಲ ಅಧ್ಯಕ್ಷ ಹೆಚ್.ಎಸ್. ಮಂಜಪ್ಪ, ಚನ್ನಗಿರಿ ತುಮ್ಕೋಸ್ ಅಧ್ಯಕ್ಷ ಎಚ್.ಎಸ್.ಶಿವಕುಮಾರ್, ರಾಜ್ಯ ಅರೆಕಾ ಛೇಂಬರ್ ಅಧ್ಯಕ್ಷ ಮಧುಕರ ನರಸಿಂಹ ಹೆಗಡೆ, ಅಡಿಕೆ ವರ್ತಕರ ಸಂಘದ ಅಧ್ಯಕ್ಷ ಕಡಿದಾಳು ಗೋಪಾಲ್, ಎಪಿಎಂಸಿ ಅಧ್ಯಕ್ಷ ಜ್ಯೋತಿ ಪ್ರಕಾಶ್, ಕೃಷಿ ಮಾರಾಟ ಇಲಾಖೆ ಉಪನಿರ್ದೇಶಕ ರಾದ ವಿಜಯಲಕ್ಷ್ಮಿ, ಎಪಿಎಂಸಿ ಕಾರ್ಯದರ್ಶಿ ಆರ್.ಎಂ.ಪಾಟೀಲ್, ಸಹಕಾರ ಸಂಘಗಳ ಉಪನಿಬಂಧಕ ನಾಗೇಶ್ ಎಸ್. ಡೊಂಗ್ರೆ ಮೊದಲಾದವರು ಇದ್ದರು.