ಸರ್ಕಾರದ ಸಾಧನೆಗಳನ್ನು ಜನರಿಗೆ ತಲುಪಿಸಿ : ವಿಜಯಲಕ್ಷ್ಮೀ ಪಾಟೀಲ್

ಶಿವಮೊಗ್ಗ: ರಾಜ್ಯ ಸರ್ಕಾರದ ಸಾಧನೆಗಳನ್ನು ಜನರಿಗೆ ತಲುಪಿಸುವ ಕೆಲಸಕ್ಕೆ ಕಾಂಗ್ರೆಸ್ ಮಹಿಳಾ ಘಟಕ ಕಾರ್ಯಕರ್ತೆಯರು ಮುಂದಾಗ ಬೇಕು ಎಂದು ಘಟಕದ ಜಿಲ್ಲಾಧ್ಯಕ್ಷ ವಿಜಯಲಕ್ಷ್ಮಿ ಸಿ ಪಾಟೀಲ್ ಹೇಳಿದರು.
ನಗರದ ಕಾಂಗ್ರೆಸ್ ಕಚೇರಿಯಲ್ಲಿ ಇಂದು ದಕ್ಷಿಣ ಬ್ಲಾಕ್ ಕಾಂಗ್ರೆಸ್ ಮಹಿಳಾ ಘಟಕದ ವತಿಯಿಂದ ಆಯೋಜಿಸಲಾಗಿದ್ದ ಸಮಾ ಲೋಚನಾ ಸಭೆಯಲ್ಲಿ ಪಾಲ್ಗೊಂಡು ಅವರು ಮಾತನಾಡಿದರು.
ವಿಧಾನಸಭೆ ಚುನಾವಣೆ ಹತ್ತಿರದಲ್ಲಿದೆ. ಪಕ್ಷದ ಕಾರ್ಯ ಕರ್ತರು ಮೈಮರೆಯುವಂತಿಲ್ಲ. ರಾಜ್ಯ ಸರ್ಕಾರ ನೀಡಿದಂತಹ ಜನಪರ ಕಾರ್ಯಕ್ರಮಗಳ ಕುರಿತು ಮನೆ ಮನೆಗೆ ತಲುಪಿಸುವ ಕೆಲಸ ಆಗಬೇಕಿದೆ. ಸರ್ಕಾರದ ಹಲವು ಜನಪ್ರಿಯ ಯೋಜನೆಗಳ ಕುರಿತು ತಿಳಿಸಿ ಹೇಳಬೇಕಿದೆ ಎಂದರು.
ಸಿದ್ದರಾಮಯ್ಯ ನೇತೃತ್ವದಲ್ಲಿ ಕಾಂಗ್ರೆಸ್ ಸರ್ಕಾರ ಅಧಿಕಾರಕ್ಕೆ ಬಂದ ನಂತರ ಹಲವು ಕಲ್ಯಾಣ ಕಾರ್ಯಕ್ರಮಗಳನ್ನು ಜಾರಿಗೊಳಿಸಿದೆ. ಅಧಿಕಾರಕ್ಕೆ ಬಂದ ಕೂಡಲೇ ಅನ್ನಭಾಗ್ಯ ಯೋಜನೆ ಜಾರಿಗೆ ತರುವ ಮೂಲಕ ಹಸಿವು ಮುಕ್ತ ರಾಜ್ಯವನ್ನಾಗಿ ಮಾಡಿದ ಸರ್ಕಾರ ಎಂಬ ಹೆಗ್ಗಳಿಕೆಗೆ ಪಾತ್ರವಾಗಿದೆ ಎಂದು ಹೇಳಿದರು.
ಎಲ್ಲ ವರ್ಗದ ಜನರಿಗೂ ಯೋಜನೆಗಳನ್ನು ನೀಡಿದ ಕೀರ್ತಿ ಕಾಂಗ್ರೆಸ್ ಸರ್ಕಾರಕ್ಕೆ ಸಲ್ಲುತ್ತದೆ. ಅಹಿಂದ ವರ್ಗಕ್ಕೆ ಸೌಕರ್ಯ ಒದಗಿಸಿದ ಸರ್ಕಾರ ನಮ್ಮದು. ಶಿಕ್ಷಣಕ್ಕೆ ಒತ್ತು ನೀಡಿದೆ. ಅಲ್ಲದೇ ರೈತರ ಸಾಲ ಮನ್ನಾ ಮಾಡುವ ಮೂಲಕ ಅನ್ನದಾತರ ಕಷ್ಟಕ್ಕೆ ಸ್ಪಂದನೆ ನೀಡಿದೆ ಎಂದರು.
ಕಾಂಗ್ರೆಸ್ ಜಿಲ್ಲಾಧ್ಯಕ್ಷ ತೀ.ನಾ. ಶ್ರೀನಿವಾಸ್ ಮಾತನಾಡಿ, ಜನಪರ ಕಾರ್ಯಕ್ರಮ ನೀಡಿದ ಸರ್ಕಾರ ಇದ್ದರೆ ಅದು ಕಾಂಗ್ರೆಸ್ ಮಾತ್ರ. ಅಲ್ಲದೇ ಮಹಿಳೆಯರ ಕಲ್ಯಾಣಕ್ಕೂ ಕಾಂಗ್ರೆಸ್ ಬದ್ದವಾಗಿದೆ. ಧೀರ್ಘಾ ವಧಿಯಲ್ಲಿ ದೇಶವನ್ನು ಮಹಿಳೆ ಯೊಬ್ಬರು ಮುನ್ನಡೆಸಲು ಅವಕಾಶ ನೀಡಿದಂತಹ ಪಕ್ಷ ಎಂದರೆ ಅದು ಕಾಂಗ್ರೆಸ್. ದೇಶದ ಸರ್ವಾಂಗೀಣ ಅಭಿವೃದ್ದಿಗೆ ಪಕ್ಷ ಹಲವು ಕಾರ್ಯಕ್ರಮಗಳನ್ನು ನೀಡಿದೆ ಎಂದರು.
ಕಾರ್ಯಕ್ರಮದಲ್ಲಿ ಸುನಿತಾರಾವ್, ಜಮೀರಾ ಖಾನಂ, ಫರಿದಾ ಖಾನಂ, ಮಮತಾ ಸಿಂಗ್, ಕವಿತ, ವನಮಾಲಮ್ಮ ಮತ್ತಿತರರು ಉಪಸ್ಥಿತರಿದ್ದರು.