ದಾವಣಗೆರೆ: ರಾಜ್ಯ ಭೂಮಾಪನ ಇಲಾಖೆ ಸಾರ್ವಜನಿಕರ ಜಮೀನು ಮಾಪನ (ಸರ್ವೇ) ಮಾಡಲು ಬಳಸುತ್ತಿರುವ ಭೂಮಾಪನದ ಚೈನುಗಳು ಲೋಪದಿಂದ ಕೂಡಿದ್ದು, ಜಮೀನು ಅಳತೆಯಲ್ಲಿ ಸಾರ್ವಜನಿಕರಿಗೆ ಅನ್ಯಾಯವಾಗುತ್ತಿದೆ. ಇದರಿಂದಾಗಿ ಭೂವಿವಾದಗಳು ಸೃಷ್ಟಿಯಾಗಿ ನ್ಯಾಯಾಲಯದಲ್ಲಿ ಕೇಸುಗಳು ಹೆಚ್ಚಾಗಲು ಕಾರಣವಾಗಿದೆ. ಈ ಬಗ್ಗೆ ಭೂಮಾಪನ ಇಲಾಖೆಯ ಅದಿಕಾರಿಗಳು ಹಾಗೂ ಸರ್ಕಾರ ಕೂಡಲೆ ಗಮನಹರಿಸಿ ಬಗೆಹರಿಸಬೇಕು ಎಂದು ಕರ್ನಾಟಕ ರಾಜ್ಯ ಮಾಹಿತಿ ಹಕ್ಕು ವೇದಿಕೆ ಆಗ್ರಹಿಸಿದೆ.
ಈ ಕುರಿತು ಮಾಹಿತಿ ಹಕ್ಕು ಕಾರ್ಯಕರ್ತ ನಾಗರಾಜ್ ಸೂರ್ಲೆ ಸುದ್ದಿಗೋಷ್ಠಿಯಲ್ಲಿ ಮಾತನಾಡಿ, ಪ್ರತಿ ವರ್ಷ ಭೂಮಾಪನದ ಸರ್ವೇ ಚೈನು ಮುದ್ರಣ ಮಾಡಿಸಬೇಕೆಂಬ ಸರ್ಕಾರದ ಆದೇಶವಿದ್ದರೂ ಭೂಮಾಪನಾ ಇಲಾಖೆ ಅಧಿಕಾರಿಗಳು ಪಾಲಿಸುತ್ತಿಲ್ಲ. ಕಂಫೋರ್ಟ್ ಮುದ್ರೆ ಹಾಕಿಸಿ ನವೀಕರಿಸಿದೆ ಹಳೆ ಚೈನುಗಳನ್ನೇ ಬಳಸುತ್ತಿದ್ದಾರೆ. ಆರು ವರ್ಷಗಳಿಂದ ಇಲಾಖೆಯಿಂದ ಯಾವುದೇ ತರಹ ಮುದ್ರಣವನ್ನು ಮಾಡಿಸಿಲ್ಲವೆಂದು ನಿರ್ಲಜ್ಜವಾಗಿ ಇಲಾಖೆಯ ಅಧಿಕಾರಿಗಳೇ ಒಪ್ಪಿಕೊಂಡಿದ್ದಾರೆ ಎಂದು ಆರೋಪಿಸಿದರು. ಸುದ್ಧಿಗೋಷ್ಠಿಯಲ್ಲಿ ಪ್ರಧಾನ ಕಾರ್ಯದರ್ಶಿ ಎಸ್, ಶ್ರೇಯಸ್ ಇದ್ದರು.
ಮಾಹಿತಿ ಹಕ್ಕು ವೇದಿಕೆಯ ಯು. ಶ್ರೀನಿವಾಸ್ ಮಾತನಾಡಿ, ಸರ್ವೇ ಚೈನುಗಳಲ್ಲಿ 33 ಲಿಂಕ್ಸ್. 66 ಲಿಂಕ್ಸ್ ಎಂಬ ಎರಡು ವಿಧಗಳಿರುತ್ತವೆ. ಒಂದೊಂದು ಲಿಂಕ್ಸ್ 20.1 ಸೆ.ಮೀ ಇರಬೇಕು. ಎಕರೆ ಜಮೀನು 1,089 ಅಡಿ ಇರಬೇಕು. ಆದರೆ, ಈಗ ಭೂಮಾಪನ ಇಲಾಖೆ ಚೈನುಗಳಲ್ಲಿ ಭೂ ಸರ್ವೇ ಮಾಡಿದಾಗ ವ್ಯತ್ಯಾಸ ಕಂಡು ಬರುತ್ತಿದೆ ಎಂದು ತಿಳಿಸಿದರು.
……………………………………………..
ಇಲಾಖೆ ಈ ತರಹದ ಲೋಪಪೂರಿತ ಸರ್ವೇ ಚೈನುಗಳಿಂದ ಜಮೀನುಗಳನ್ನು ಆಳತೆ ಮಾಡಿದ್ದರಿಂದ ರೈತರ ನಡುವೆ ಗೊಂದಲ ಸೃಷ್ಟಿಯಾಗಿದೆ. ಜಮೀನುಗಳನ್ನು ಅಳತೆ ಮಾಡುವಾಗ ಒಂದು ಕಡೆ ಹೆಚ್ಚು ಮತ್ತೊಂದು ಕಡೆ ಕಡಿಮೆ ಬಂದಿವೆ. ಇದರಿಂದಾಗಿ ಅಕ್ಕಪಕ್ಕದ ಜಮೀನಿನ ರೈತರ ನಡುವೆ ವೈಷಮ್ಯಗಳಿಗೂ ಕಾರಣವಾಗಿವೆ. ಎಷ್ಟೋ ರೈತರು ಜಮೀನು ವಿವಾದ ಬಗೆಹರಿಸಲು ನ್ಯಾಯಾಲಯದ ಮೆಟ್ಟಿಲು ಏರಿದ್ದಾರೆ. ಸರ್ವೇ ಚೈನುಗಳಲ್ಲಿನ ಲೋಪವನ್ನು ಭೂಮಾಪನ ಇಲಾಖೆಯ ಅಧಿಕಾರಿಗಳು ಒಪ್ಪಿಕೊಳ್ಳಲು ತಯಾರಿಲ್ಲ. ಸಮಸ್ಯೆ ಬಗೆಹರಿಸುವಂತೆ ಭೂಮಾಪನಾ ಇಲಾಖೆ ಅಧಿಕಾರಿಗಳಲ್ಲಿ ಕೋರಿಕೊಂಡರು ನಿರ್ಲಕ್ಷ್ಯ ಧೋರಣೆಯಿಂದ ಅವರು ಬಗೆಹರಿಸಲು
ಮುಂದಾಗುತ್ತಿಲ್ಲ. ಸಂಬಂಧಪಟ್ಟ ಇಲಾಖೆ ಹಾಗೂ ಸರ್ಕಾರ ಕೂಡಲೆ ಭೂಮಾಪನಾ ಇಲಾಖೆಯ ಸರ್ವೇ
ಚೈನು ಮುದ್ರಣ ಮಾಡಿಸಿ ಸರ್ವೇ ಕಾರ್ಯ ಆರಂಭಿಸಬೇಕು.
–ಪಿ.ಜಿ. ಮುನಿಯಪ್ಪ ಗೌರವಾಧ್ಯಕ್ಷರು, ರಾಜ್ಯ ಮಾಹಿತಿ ಹಕ್ಕು ವೇದಿಕೆ ದಾವಣಗೆರೆ.