Wednesday, September 18, 2024
Google search engine
Homeಇ-ಪತ್ರಿಕೆಪದವೀಧರ ಕ್ಷೇತ್ರವನ್ನು ಹಣ, ಹೆಂಡದಿಂದ ಕುಲಗೆಡಿಸಿದವರಿಗೆ ಸೋಲು: ಅಯನೂರು ಮಂಜುನಾಥ್

ಪದವೀಧರ ಕ್ಷೇತ್ರವನ್ನು ಹಣ, ಹೆಂಡದಿಂದ ಕುಲಗೆಡಿಸಿದವರಿಗೆ ಸೋಲು: ಅಯನೂರು ಮಂಜುನಾಥ್

ಶಿವಮೊಗ್ಗ: ಜೂನ್ ೩ರಂದು ನಡೆಯುವ ನೈರುತ್ಯ ಚುನಾವಣಾ ಪ್ರಚಾರದ ಕಾರ್ಯ ಅಂತಿಮ ಘಟ್ಟ ತಲುಪಿದೆ. ವಾತಾವರಣ ನನ್ನ ಪರವಾಗಿದೆ. ೧೦ ದಿನ ೫ ಜಿಲ್ಲೆಗಳಲ್ಲಿ ಪ್ರವಾಸ ಮಾಡಿದ್ದೇನೆ. ಎಲ್ಲ ಕಡೆಯಿಂದ ಬೆಂಬಲ ವ್ಯಕ್ತವಾಗಿದೆ. ವಿಶೇಷವಾಗಿ ಅಡ್ವೊಕೇಟ್, ಶಿಕ್ಷಕರ ವಲಯದಲ್ಲಿರುವ ಖಾಸಗಿ ಮತ್ತು ಸರಕಾರಿ ನೌಕರ ವರ್ಗವು ಆಡಳಿತ ಪಕ್ಷದ ಅಭ್ಯರ್ಥಿಯನ್ನು ಗೆಲ್ಲಿಸಿದರೆ ನಮ್ಮ ಸಮಸ್ಯೆಗಳು ಈಡೇರುತ್ತವೆ ಎಂಬ ಆಶಾಭಾವನೆ ಹೊಂದಿದ್ದಾರೆ ಎಂದು ನೈರುತ್ಯ ಪದವೀಧರ ಕ್ಷೇತ್ರದ ಕಾಂಗ್ರೆಸ್ ಅಭ್ಯರ್ಥಿ ಅಯನೂರು ಮಂಜುನಾಥ್ ಅವರು ತಿಳಿಸಿದ್ದಾರೆ.

ಶನಿವಾರ ಪತ್ರಿಕಾಭವನದಲ್ಲಿ ಪತ್ರಿಕಾಗೋಷ್ಠಿಯನ್ನುದ್ದೇಶಿಸಿ ಮಾತನಾಡಿದ ಅವರು, ನೌಕರರು ನಾನು ಇಲ್ಲಿಯವರೆಗೆ ತಮ್ಮ ಪರವಾಗಿ ಮಾಡಿದ ಹೋರಾಟವನ್ನು ಗಮನಿಸಿದ್ದರಿಂದ ಅವರು ನನ್ನನ್ನು ಬೆಂಬಲಿಸುವ ತೀರ್ಮಾನ ಕೈಗೊಂಡಿದ್ದಾರೆ. ನಾನು ಸರಕಾರದ ಸಮೀಪ ಇದ್ದು, ಅವರ ಸಮಸ್ಯೆಗಳ ಗಮನ ಸೆಳೆಯುತ್ತೇನೆ ಎಂಬ ವಿಶ್ವಾಸ ಅವರಲ್ಲಿ ಮೂಡಿದೆ. ಸರಕಾರ ಯಾವುದೇ ಇದ್ದರೂ ಸಹ ನೌಕರರ ಪರ ನಾನು ಇರುತ್ತೇನೆ. ಪಕ್ಷಾತೀತವಾಗಿ ಈ ಮೊದಲು ಹೋರಾಡಿದ್ದೇನೆ ಮತ್ತು ಮುಂದೆ ಸಹ ಮುಂದುವರಿಸುತ್ತೇನೆ. ನಿವೃತ್ತಿ ಹೊಂದುತ್ತಿರುವ ನೌಕರ ಸಮೂಹ ನನ್ನ ಮೇಲೆ ಸಾಕಷ್ಟು ಭರವಸೆಯನ್ನಿಟ್ಟುಕೊಂಡಿದೆ. ಸೇವಾ ಭದ್ರತೆಯಿಲ್ಲದ ನೌಕರ ಸಮೂಹವಾದ ಅತಿಥಿ ಶಿಕ್ಷಕರು ಮತ್ತು ಅತಿಥಿ ಉಪನ್ಯಾಸಕರು ಸಹ ತಮ್ಮ ಸಮಸ್ಯೆಗಳಿಗೆ ನಾನು ತಾರ್ಕಿಕ ಉತ್ತರ ನೀಡುವಲ್ಲಿ ಯಶಸ್ವಿಯಾಗುತ್ತೇನೆ ಎಂಬ ಭರವಸೆ ಹೊಂದಿದ್ದಾರೆ. ಹೀಗಾಗಿ ಇವರೆಲ್ಲರು ನನಗೆ ಮತ ನೀಡಿ ಬೆಂಬಲಿಸುತ್ತಾರೆ ಎಂದು ಅವರು ಭರವಸೆ ವ್ಯಕ್ತಪಡಿಸಿದರು.

ಎದುರಾಳಿ ಬಿಜೆಪಿ ಅಭ್ಯರ್ಥಿಗೆ ಹೋರಾಟದ ಹಿನ್ನಲೆಯಿಲ್ಲ. ಈ ವ್ಯಕ್ತಿಯು ಪದವೀಧರ ಸಮೂಹಕ್ಕೆ ಗುಂಡು-ತುಂಡು ಪಾರ್ಟಿಯ ಜೊತೆಗೆ ಹಣ ವಿತರಣೆ ಮಾಡುತ್ತಿದ್ದಾರೆ. ಈ ಮೂಲಕ ವಿದ್ಯಾವಂತ ಸಮೂಹವನ್ನು ಖರೀದಿ ಮಾಡುತ್ತಿದ್ದಾರೆ. ಬೇರೆ ಕ್ಷೇತ್ರಗಳ ಚುನಾವಣೆಗಳು ಈ ಹಣ, ಹೆಂಡದ ಅಮಿಷಗಳಿಗೆ ಈ ಹಿಂದೆಯ ಕುಲಗೆಟ್ಟಿರುವುದು ಜಗಜ್ಜಾಹಿರಾಗಿತ್ತು. ಇದೇ ಪ್ರಥಮ ಬಾರಿ ಈ ವಿದ್ಯಾವಂತ ಕ್ಷೇತ್ರವನ್ನು ಈ ರೀತಿ ಅದಃಪತನಕ್ಕೆ ತಳ್ಳಲಾಗಿದೆ. ನನ್ನ ೩೦ ವರ್ಷಗಳ ರಾಜಕೀಯ ಜೀವನದಲ್ಲಿ ಈ ರೀತಿಯ ಹಣ-ಹೆಂಡ ಚುನಾವಣೆಯನ್ನು ಕಂಡಿರಲಿಲ್ಲ. ಸಮಾಜದ ಭವಿಷ್ಯ ಕಣ್ಣ ಮುಂದೆ ಹಾದು ಹೋಗುತ್ತಿದೆ. ಪದವೀಧರ ಕ್ಷೇತ್ರ ಅಸಹ್ಯಪಡುವ ಉದ್ಯಮವಾಗಿ ಪರಿವರ್ತನೆಯಾಗಿರುವುದು ನೋವಿನ ಸಂಗತಿ. ಇಲ್ಲಿ ಮತದಾರರ ಅರ್ಥಿಕ ಅಸಹಾಯಕತೆ ದುರುಪಯೋಗವಾಗುತ್ತಿದೆ ಎಂದು ಖೇದ ವ್ಯಕ್ತಪಡಿಸಿದರು.

ಸಂಸ್ಕೃತಿ, ದೇಶಭಕ್ತಿಗೆ ಹೆಸರಾಗಿದ್ದ ಪಕ್ಷವೊಂದಕ್ಕೆ ಈಗ ರಾಷ್ಟ್ರಪ್ರೇಮದ ಪಾಠ ಮಾಡುವ ಯಾವುದೇ ನೈತಿಕತೆಯಿಲ್ಲವಾಗಿದೆ. ಮತದಾರರನ್ನು ಮನಸೆಳೆಯುವ ಕಾರ್ಯ ಮಾಡುವುದನ್ನು ಬಿಟ್ಟು, ಹಣ, ಮಾಂಸದ ತುಂಡಿನ ಹಿಂದೆ ಹೋಗಿರುವುದು ಅಸಹ್ಯ ಹುಟ್ಟಿಸುತ್ತಿದೆ. ಇದು ಸಮಾಜವನ್ನು ಅಧಃಪತನಕ್ಕೆ ತಳ್ಳುತ್ತದೆ. ಭಾರತೀಯ ಸಂಸ್ಕೃತಿ, ಧರ್ಮದ ಕುರಿತು ಮಾತನಾಡುವ ಬಿಜೆಪಿಯ ಹಿರಿಯ ನಾಯಕ ಡಿ.ಎಚ್.ಶಂಕರ ಮೂರ್ತಿ, ಯಡಿಯೂರಪ್ಪನಂತಹವರು ಇವರನ್ನು ಬೆಂಬಲಿಸುತ್ತಿರುವುದು ಸಮಾಜ ಅದೋಗತಿಯತ್ತ ಹೋಗುತ್ತಿರುವ ಸೂಚನೆಯಾಗಿದೆ ಎಂದು ಅಭಿಪ್ರಾಯಿಸಿದರು.

ಈ ಪದವೀಧರ ಕ್ಷೇತ್ರ ನನಗೆ ನೊಂದವರ ಪರ ಧ್ವನಿಯೆತ್ತುವ ವೇದಿಕೆಯಾಗಿದೆಯೇ ಹೊರತು ರಾಜಕೀಯ ಅಲಂಕಾರದ ಗರಿಯಲ್ಲ. ವಿದ್ಯಾವಂತರ ಮಧ್ಯೆ ಕೆಲಸ ಮಾಡಿದ ನನಗೆ ಅವರ ನೋವು ಮನವರಿಕೆಯಾಗಿದೆ. ವಾಮಮಾರ್ಗ ಹಿಡಿದ ವ್ಯಕ್ತಿಗಳಿಗೆ ಜನರು ತಕ್ಕ ಪಾಠ ಕಲಿಸಿ, ಹೋರಾಟಕ್ಕೆ ಮಾನ್ಯತೆ ಕೊಡುತ್ತಾರೆ. ಎಲ್ಲ ಮತಗಳು ಹಣಕ್ಕಾಗಿ ಮಾರಾಟವಾಗುವುದಿಲ್ಲ. ಖರೀದಿಸಲು ಸಾಧ್ಯವಿಲ್ಲ. ಅವರ ಹತ್ತಿರ ಹಣ ಇದ್ದರೆ, ನನ್ನ ಹತ್ತಿರ ಹೋರಾಟದ ಛಲವಿದೆ. ನಾನು ಇಲ್ಲಿಯವರೆಗೆ ಯಾವುದೇ ಭ್ರಷ್ಟಾಚಾರ ಮಾಡಿಲ್ಲ. ಈ ಎಲ್ಲ ಅಂಶಗಳಿಂದ ನಾನು ಗೆಲ್ಲುತ್ತೇನೆ ಎಂಬ ವಿಶ್ವಾಸ ವ್ಯಕ್ತಪಡಿಸಿದರು.

ಬಿಜೆಪಿ ಅಭ್ಯರ್ಥಿಯ ಹಣ, ಹೆಂಡ ಅಮಿಷದ ಪರಂಪರೆ ಕಮಲವನ್ನು ಕೇಸರಿನಲ್ಲಿ ಮುಳುಗಿಸುವ ದ್ಯೋತಕವಾಗಿದೆ. ಅಡ್ಡದಾರಿ ಹಿಡಿದ ಅಡ್ನಾಡಿಗಳು ಸೋಲುತ್ತಾರೆ. ಜನರ ರಕ್ತ ಸುರಿಸುವ ಬದಲು ಬೆವರು ಹೊರೆಸುವುದರಲ್ಲಿ ನೆಮ್ಮದಿ ಇದೆ. ಜನರ ಕಣ್ಣೀರು ಹರಿಸುವ ಬದಲು, ಒರೆಸುತ್ತೇನೆ. ಸೇವಾ ವಲಯವಾಗಿರುವ ವೈದ್ಯಕೀಯ ಕ್ಷೇತ್ರವನ್ನು ಉದ್ಯಮವನ್ನಾಗಿ ಮಾಡಿರುವ ವ್ಯಕ್ತಿಯ ಕುರಿತು ಬಿಜೆಪಿ ಕಾರ್ಯಕರ್ತರಿಗೆ ಬೇಸರವಿದೆ. ಈ ಬಿಜೆಪಿ ಕಾರ್ಯಕರ್ತರೇ ನನಗೆ ಮತ ಚಲಾಯಿಸಲಿದ್ದಾರೆ ಎಂದರು.

ಪತ್ರಿಕಾಗೋಷ್ಠಿಯಲ್ಲಿ ಶ್ರೀನಿವಾಸ್ ಕರಿಯಣ್ಣ, ಅರುಣ್, ನೇತ್ರಾವತಿ, ಸಿ.ಜು.ಪಾಶಾ, ಸುರೇಶ್ ಮುಂತಾದವರು ಉಪಸ್ಥಿತರಿದ್ದರು.

RELATED ARTICLES
- Advertisment -
Google search engine

Most Popular

Recent Comments