ಉಮೇಶ್ ಮನೆ ಬಿಟ್ಟು ಅಂದಿಗೆ ೨೯ ದಿನಗಳಾ ಗಿದ್ದವು. ವಾರಣಾಸಿಯತ್ತ ಹೊರಟಿದ್ದ ರೈಲು ಚಲಿಸುತ್ತಿತ್ತು. ನೆನಪಿನಾಳದಿಂದ ಒಂದೊಂದೇ ಘಟನೆ ಹಾದು ಹೋಗುವ ಮೂಲಕ ಉಮೇಶನನ್ನು ಮತ್ತಷ್ಟು ಘಾಸಿಗೊಳಿಸುತ್ತಿದ್ದವು.
ಎಷ್ಟೇ ಬಲವಂತವಾಗಿ ಮನಸ್ಸಿನಿಂದ ಕಿತ್ತು ಹಾಕಿದರೂ, ಪತ್ನಿ ಹೇಮಾಳ ಅಂದಿನ ಲಜ್ಜೆಗೆಟ್ಟ, ಶೀಲಗೆಟ್ಟ ನಡವಳಿಕೆ, ಮತ್ತೆಮತ್ತೆ ನೆನಪಾಗುತ್ತಿತ್ತು. ‘ಛೀ ಹೊಲಸು ಹೆಂಗಸು. ಅವಳನ್ನೂ ಮನೆಯನ್ನೂ ಬಿಟ್ಟು ಬಂದ ಮೇಲೆ ಹೊಲಸು ಹೆಂಗಸಿನ ನೆನಪೇಕೆ ಅಂದುಕೊಳ್ಳುತ್ತಿದ್ದ.
ಆಗ ತಕ್ಷಣ ಮುದ್ದು ಮಗಳು ರಶ್ಮಿಯ ನೆನಪಾಗುತ್ತಿತ್ತು. ರಶ್ಮಿ ತನ್ನನ್ನು ಎಷ್ಟೊಂದು ಪ್ರೀತಿಸುತ್ತಿದ್ದಳು. ಅಪ್ಪನನ್ನು ಒಂದು ದಿನವೂ ಬಿಟ್ಟಿರದ ಮಗಳು ಈಗ ಹೇಗಿದ್ದಾಳೋ ಎಂದು ನೆನಪಾಗುತ್ತಿದ್ದಂತೆ ಕಣ್ಣಂಚಿನಲ್ಲಿ ಧಾರಕಾರವಾಗಿ ನೀರು ಹರಿಯುತ್ತಿದ್ದವು.
ಉಮೇಶ ಮನೆ ಬಿಟ್ಟ ದಿನವೇ ಮಗಳು ರಶ್ಮಿಗೆ ದ್ವಿತೀಯ ಪಿಯುಸಿ ಪರೀಕ್ಷೆ ಮುಗಿದಿತ್ತು. ಓದಿನಲ್ಲಿ ಅಪ್ಪನಷ್ಟೇ ಜಾಣೆಯಾದ ರಶ್ಮಿ ಡಾಕ್ಟರ್ ಆಗಬೇಕೆಂಬ ಅಪ್ಪನ ಆಸೆಯಂತೆ ಪಿಯುಸಿಯಲ್ಲಿ ಸೈನ್ಸ್ ವಿಭಾಗಕ್ಕೆ ಸೇರಿದ್ದಳು.
‘ಅಪ್ಪಾ’ ಪರೀಕ್ಷೆ ಚೆನ್ನಾಗಿ ಮಾಡಿದ್ದೇನೆ. ಡಿಸ್ಟಿಂಕ್ಷನ್ ಬರು ವುದು ಖಚಿತ. ಸಿಇಟಿಯಲ್ಲಿ ಚೆನ್ನಾಗಿ ಬರೆದರೆ , ವೈದ್ಯಕೀಯ ಸೀಟು ಸಿಗುತ್ತದೆ ಅಲ್ವಾ’ ಎಂದು ಅಪ್ಪನನ್ನು ಪ್ರಶ್ನಿಸುತ್ತಿದ್ದಳು. ಅಷ್ಟರಲ್ಲಿ ಈ ಘಟನೆ ನಡೆದು ಉಮೇಶ ಎಲ್ಲವನ್ನೂ ಎಲ್ಲರನ್ನೂ ತೊರೆದು ಹೊರಟಿದ್ದ.
ಮಗಳ ನೆನಪು ಸದಾ ಕಾಡುತ್ತಿತ್ತು. ಸಹಜವಾಗಿ ಉಮೇಶ ನಿಗೆ ತನ್ನ ಶಾಲಾ ಕಾಲೇಜು ದಿನಗಳು ನೆನಪಾದವು.
೧೯೮೪ರಲ್ಲಿ ಎಸ್‌ಎಸ್‌ಎಲ್‌ಸಿ ಪರೀಕ್ಷೆಯಲ್ಲಿ ರಾಜ್ಯದಲ್ಲೇ ಪ್ರಥಮ ಸ್ಥಾನ ಗಳಿಸಿದ್ದ. ಶಾಲಾ ಸಮಿತಿ, ಗ್ರಾಮ ಪಂಚಾಯ್ತಿ, ತಾಲ್ಲೂಕು ಮಟ್ಟದಲ್ಲಿ ಉಮೇಶನಿಗೆ ಸನ್ಮಾನಗಳ ಸುರಿಮಳೆಯಾಗಿತ್ತು.
ಮನೆಯಲ್ಲಿ ಕಿತ್ತು ತಿನ್ನುವ ಬಡತನವಿದ್ದರೂ ಸ್ಕಾಲರ್‌ಶಿಪ್ ನೆರವಿನಿಂದ ಓದು ಮುಂದುವರೆಸಿದ್ದ , ಪಿಯುಸಿಯಲ್ಲೂ ಡಿಸ್ಟಿಂಕ್ಷನ್ ಪಡೆದು ಬಿ.ಕಾಂ ಸೇರಿ ೧೯೮೯ರಲ್ಲಿ ಅಂತಿಮ ಬಿ.ಕಾಂ.ನಲ್ಲಿ ರ‍್ಯಾಂಕ್ ಬಂದಿದ್ದ.
ದಿನವೂ ಲೈಬ್ರರಿಯಲ್ಲಿ ಪತ್ರಿಕೆಯನ್ನು ಓದುತ್ತಿದ್ದ. ಉಮೇಶನಿಗೆ ಒಂದು ದಿನ ಮಿಲಿಟರಿಯಿಂದ ಕೆಲಸಕ್ಕೆ ಅರ್ಜಿ ಕರೆದಿರುವುದನ್ನು ಗಮನಿಸಿ ಅರ್ಜಿ ಹಾಕಿದ್ದ. ಮೆರಿಟ್ ಆಧಾರದಲ್ಲಿ ಅವನಿಗೆ ಇಂಟರ್ ವ್ಯೂ ಬಂದಿತ್ತು. ಲಿಖಿತ ಪರೀಕ್ಷೆಯಲ್ಲಿ ಪಾಸಾಗಿದ್ದ. ಬಡತನವಿದ್ದರೂ ಆರು ಅಡಿ ಎತ್ತರವಿದ್ದ. ಮೈ , ಕೈ ತುಂಬಿಕೊಂಡು ದಷ್ಟ ಪುಷ್ಟವಾಗಿದ್ದ ಅವನಿಗೆ ದೈಹಿಕ ಪರೀಕ್ಷೆಯು ಸವಾಲಾಗಲಿಲ್ಲ. ಹೀಗಾಗಿ ಬಿ.ಎಸ್.ಎಫ್.ನಲ್ಲಿ ಉದ್ಯೋಗ ಲಭಿಸಿತ್ತು.
ಹೆತ್ತವರಿಗೆ ಮಗ ದೂರ ಹೋಗುತ್ತಾನೆಂಬ ಸಂಕಟವಿದ್ದರೂ ತಮ್ಮ ಬಡತನ ದೂರವಾಗುತ್ತದೆಂಬ ಮಹದಾಸೆಯೊಂದಿಗೆ ಮಗನನ್ನು ಬೀಳ್ಕೊಟ್ಟರು.
ಜಮ್ಮು ರೆಜಿಮೆಂಟಿನಲ್ಲಿ ನಿಯೋಜಿತನಾಗಿದ್ದ ಉಮೇಶ ವರ್ಷಕ್ಕೊಮ್ಮೆ ತಿಂಗಳ ರಜೆ ಮೇಲೆ ಊರಿಗೆ ಬರುತ್ತಿದ್ದ. ಬೆಳೆದು ನಿಂತಿದ್ದ ತಂಗಿ ಶಾಂತಿಯ ಮದುವೆಗೆ ಹಣ ಕೂಡಿಡುತ್ತಿದ್ದ. ಅಣ್ಣ ಈಶಣ್ಣನಿಗೂ ಶಾಮಿಯಾನ ಅಂಗಡಿ ಇಟ್ಟುಕೊಟ್ಟಿದ್ದ. ಅವನ ದುಡಿಮೆಯೂ ಚೆನ್ನಾಗಿದ್ದರಿಂದ ಮನೆಯ ಆರ್ಥಿಕ ಪರಿಸ್ಥಿತಿ ಸುಧಾರಿಸಿತ್ತು. ತಂಗಿಗೊಂದು ಯೋಗ್ಯ ವರನನ್ನು ಹುಡುಕಲು ಅಣ್ಣನಿಗೆ ಹೇಳಿದ್ದ. ತಮ್ಮನ ಆಣತಿಯಂತೆಯೇ ಈಶಣ್ಣ ತಂಗಿಗೊಬ್ಬ ಯೋಗ್ಯ ವರನನ್ನು ಹುಡುಕಿ ತಂದಿದ್ದ.
ಮಾರ್ಚಿಯಲ್ಲಿ ತಂಗಿಯ ಮದುವೆ ಗಟ್ಟಿಯಾಗಿತ್ತು. ಒಂದು ತಿಂಗಳ ರಜೆ ಮೇಲೆ ಬಂದಿದ್ದ ಉಮೇಶ ಅದ್ಧೂರಿಯಾಗಿಯೇ ತಂಗಿಯ ಮದುವೆ ಮಾಡಿ ಮುಗಿಸಿದ್ದ. ಹತ್ತಿರದ ದೂರದ ಸಂಬಂಧಿಗಳೆಲ್ಲ ಮದುವೆಗೆ ಬಂದಿದ್ದರು. ಈ ಪೈಕಿ ಪಾಪಕ್ಕ ಎಂಬ ದೂರದ ಸಂಬಂಧಿ ಕೂಡಾ ಮಗಳು ಹೇಮಾ ಳೊಂದಿಗೆ ಮದುವೆಗೆ ಬಂದಿದ್ದರು.
ಪಾಪಕ್ಕನಿಗೆ ಉಮೇಶನನ್ನು ನೋಡುತ್ತಿದ್ದ ಹಾಗೆಯೇ ‘ಮಗಳಿಗೆ ತಕ್ಕ ವರ’ ಎಂದು ನಿರ್ಧರಿಸಿ ಬಿಟ್ಟಳು. ಹೇಮಾ ಕೂಡಾ ಉಮೇಶನ ಸೌಂದ ರ್ಯಕ್ಕೆ ಮಾರು ಹೋಗಿದ್ದಳು. ಹೀಗಾಗಿ ಏನಾದರೂ ನೆಪ ತೆಗೆದು ಅವನನ್ನು ಮಾತಾಡಿಸಲು ಪ್ರಯತ್ನಿಸುತ್ತಿದ್ದಳು.
ಇದನ್ನು ಗಮನಿಸಿದ್ದ ಶಾಂತಿ, ‘ಅಣ್ಣಾ ಹೇಗಿದ್ದಾಳೆ, ಹುಡುಗಿ, ನೀನೂ ಮದುವೆ ಮಾಡಿಕೋ’ ಒಂಟಿಯಾಗಿ ಎಷ್ಟು ದಿನ ಇರುತ್ತೀಯಾ’ ಎಂದಿದ್ದಳು.
ಅಣ್ಣ-ತಂಗಿ ಮಾತನಾಡುವುದನ್ನು ಕೇಳಿಸಿಕೊಂಡಿದ್ದ ಹೇಮಾ ಹಿರಿ ಹಿರಿ ಹಿಗ್ಗಿದ್ದಳು.
ಪಾಪಕ್ಕ, ಮಗಳೊಂದಿಗೆ ಹೊರಟು ನಿಂತಾಗ, ಉಮೇಶನ ತಾಯಿ ಪಾರ್ವತಮ್ಮನೊಂದಿಗೆ ‘ನನ್ನ ಮಗಳನ್ನು ನೋಡಿದ್ದೀ ರಲ್ಲ. ನಿಮ್ಮ ಮಗ ಒಪ್ಪುವುದಾದರೆ ನಾವು ಹೆಣ್ಣು ಕೊಡಲು ಸಿದ್ಧ.‘ಈಡು ಜೋಡಿ’ಚೆನ್ನಾಗಿದೆ ಎಂದು ಪ್ರಸ್ತಾಪಿಸಿದ್ದರು.
ಊರಿಗೆ ಹೋದ ಮೇಲೂ ಹೇಮಾಳಿಗೆ ಉಮೇಶನದೇ ನೆನಪು. ‘ಅಮ್ಮಾ, ನಾನು ಮದುವೆಯಾಗುವುದಾದರೆ ಅವನನ್ನೇ. ಬೇರೆಯವರನ್ನು ಆಗುವುದಿಲ್ಲ’ಎಂದು ಹಠಹಿಡಿದಳು.
ವಿಷಯ ಉಮೇಶನಿಗೂ ತಿಳಿಯಿತು. ಸ್ನೇಹಿತನೊಂದಿಗೆ ಹೇಮಾಳ ಮನೆಗೆ ಬಂದ. ನಾನು ಹೇಳಿ-ಕೇಳಿ ಸೈನಿಕ. ಯಾವಾಗ ಕರೆ ಬಂದರೂ ಹೊರಡಲು ಸಿದ್ಧನಿರಬೇಕು. ಸೈನಿಕರಿಗೆ ಹೆಂಡತಿ ಮಕ್ಕಳು, ಕುಟುಂಬಕ್ಕಿಂತ ದೇಶವೇ ಮುಖ್ಯ. ಮುಂದೆ ನನ್ನನ್ನು ಆಕ್ಷೇಪಿಸಬಾರದೆಂದು ನೇರವಾಗಿ ಎಲ್ಲ ವಿಷಯ ವಿವರಿಸಿದ್ದ.
‘ನಾನು ಬದುಕುವುದಾದರೆ, ನಿಮ್ಮೊಂದಿಗೆ ಮಾತ್ರ ಬೇರೆ ಯವರನ್ನು ಮದುವೆಯಾಗಿ ನೂರು ವರ್ಷ ಬಾಳುವುದಕ್ಕಿಂತ, ನಿಮ್ಮೊಂದಿಗೆ ಒಂದು ದಿನ ಬಾಳಿದರೆ ಸಾಕು’ ಎಂದು ಹೇಮಾ ಅಂಗಲಾಚಿದ್ದಳು.
ಹೇಮಾಳ ಒತ್ತಾಯಕ್ಕೆ ಮಣಿದು ಸರಳವಾಗಿ ನಡೆದ ವಿವಾಹ ಕಾರ್ಯದಲ್ಲಿ ಹೇಮಾಳನ್ನು ಬಾಳ ಸಂಗಾತಿಯಾಗಿ ಸ್ವೀಕರಿಸಿದ್ದ.
ಹೇಮಾ ಸ್ವರ್ಗದಲ್ಲಿ ತೇಲಾಡುತ್ತಿದ್ದಳು. ಅವಳ ಸಂತಸಕ್ಕೆ ಪಾರವೇ ಇರಲಿಲ್ಲ. ಆದರೆ ಒಂದು ವಾರ ಒಂದು ದಿನದಂತೆ ಕಳೆದು ಉಮೇಶ ಕರ್ತವ್ಯದ ಕರೆಗೆ ಓಗೊಟ್ಟು ನಿಂತಾಗ, ಹೇಮಾ ನಿರಾಸೆಯ ಮಡುವಿನಲ್ಲಿ ಮುಳುಗಿದಳು. ‘ನೀವು ಹೋಗಲೇಬೇಕೇ ?ಇಲ್ಲೇ ಎಲ್ಲಾದರೂ ಕೆಲಸ ಹುಡುಕಿ. ಸಾಯುವವರೆಗೆ ಒಟ್ಟಿಗೆ ಬಾಳೋಣ’ ಎಂದು ಗೋಗರೆದಳು.
ಉಮೇಶನ ಮನಸ್ಸು ಕರಗಲಿಲ್ಲ. ಆದರೂ ಹೆಂಡತಿಯ ಸಂಕಟ ನೋಡಲಾರದೆ, ಬೇಸರದಿಂದಲೇ ಸೈನ್ಯಕ್ಕೆ ವಾಪಾಸ್ ನಿರ್ಗಮಿಸಿದ್ದ.
ಹೇಮಾ ದಿನಕ್ಕೊಂದು ಪತ್ರಬರೆಯುತ್ತಿದ್ದಳು. ಪತ್ರದ ತುಂಬೆಲ್ಲಾ ‘ವಿರಹ ವೇದನೆಯ ನಿವೇದನೆ’ ‘ನಿಮ್ಮನ್ನು ಬಿಟ್ಟಿರಲಾರೆ ಬಂದು ಬಿಡಿ’ ಎಂದು ಗೋಗರೆಯುತ್ತಿ ದ್ದಳು. ಈ ನಡುವೆ ಅವಳು ಗರ್ಭಿಣಿಯಾಗಿದ್ದಳು. ಮದುವೆಯಾಗಿ ವರುಷ ತುಂಬುದ ಮೊದಲು ಹೆಣ್ಣು ಮಗುವಿಗೆ ಜನ್ಮ ನೀಡಿದ್ದಳು. ‘ಎಲ್ಲ ಪಾಪು ನಿಮ್ಮ ಹಾಗೆ ಯೇ ಇದೆ ಎಂದು ಪತ್ರದಲ್ಲಿ ವರ್ಣಿಸುತ್ತಿದ್ದಳು.
ರಜೆ ದೊರೆತ ತಕ್ಷಣ ಉಮೇಶ ಓಡೋಡಿ ಬಂದ. ಮಗಳನ್ನು ನೋಡುವ ಉತ್ಕಟ ಕಾತುರತೆ ಅವನಲ್ಲಿ ಮನೆ ಮಾಡಿತ್ತು.. ಮಗಳಿಗೆ ರಶ್ಮಿ ಎಂದು ನಾಮಕರಣ ಮಾಡಿದರು. ತಿಂಗಳು ಕಳೆದಿದ್ದು, ಗೊತ್ತಾಗಲೇ ಇಲ್ಲ. ಉಮೇಶ ಹೊರಟು ನಿಂತಾಗ ಹೇಮಾ ಕಣ್ಣೀರ ಕೋಡಿ ಹರಿಸುತ್ತಿದ್ದಳು.
ಹೀಗೆಯೆ ೧೦ ವರ್ಷಗಳು ಕಳೆದಿದ್ದವು. ಮಗಳು ರಶ್ಮಿ ತುಂಬಾ ಚೂಟಿಯಾಗಿದ್ದಳು. ಅಪ್ಪನಂತೆಯೇ ಎತ್ತರವಾಗಿ ದಷ್ಟಪುಷ್ಟವಾಗಿ ಬೆಳೆದಿದ್ದಳು.
ರಶ್ಮಿ ಆಗಲೇ ೫ನೇ ತರಗತಿ ಪಾಸಾಗಿದ್ದಳು. “ಈ ಬಾರಿ ನಿಮ್ಮ ಅಪ್ಪ ರಜೆಗೆ ಬಂದಾಗ ಎರಡರಲ್ಲಿ ಒಂದು ತೀರ್ಮಾನ ಆಗಲೇಬೇಕು. ಒಂದು ಅವರು ಕೆಲಸ ಬಿಟ್ಟು ಬರಬೇಕು. ಇಲ್ಲ ನನ್ನ ಹೆಣ ನೋಡಬೇಕು” ಎಂದು ಮಗಳೊಂದಿಗೆ ಹೇಳಿಕೊಂಡಳು. ಅದೇ ರೀತಿ ಗಂಡನಿಗೆ ಪತ್ರ ಬರೆದಿದ್ದಳು.
ಅವನು ಪರಿಪರಿಯಾಗಿ ಕೇಳಿಕೊಂಡರೂ ಹೇಮಾ ಕೇಳುವ ಪರಿಸ್ಥಿತಿಯಲ್ಲಿ ಇರಲಿಲ್ಲ. ಯಾರು ಎಷ್ಟೇ ಹೇಳಿದರೂ ಅವಳು ಪಟ್ಟು ಸಡಿಲಿಸಲಿಲ್ಲ.
ಒಲ್ಲದ ಮನಸ್ಸಿನಿಂದಲೇ ತನ್ನ ಪ್ರೀತಿಯ ಕೆಲಸ ಬಿಟ್ಟು ಬಂದಿದ್ದ. ಊರಿಗೆ ಬಂದ ಎರಡು ವರ್ಷಗಳಲ್ಲೇ “ಇಲ್ಲಿರುವುದು ಬೇಡ. ನಿಮಗೇನು ಮಿಲಿಟರಿಯವರು ಎಲ್ಲಿದ್ದರೂ ಕೆಲಸ ಸಿಗುತ್ತದೆ” ಎಂದು ಒತ್ತಾಯಿಸಿ, ಬೆಂಗಳೂರಿಗೆ ಕರೆದು ಕೊಂಡು ಬಂದಿದ್ದಳು.
ಉಮೇಶನಿಗೆ ಒಳ್ಳೆಯ ಕೆಲಸ ಕೂಡಾ ಸಿಕ್ಕಿತು. ಆದರೆ ಖರ್ಚಿನಲ್ಲಿ ಹೇಮಾಳ ಕೈ ಹಿಡಿತವಿ ರಲಿಲ್ಲ. ಅಣ್ಣಂದಿರು ಮೋಜು, ಮಸ್ತಿ ಯಲ್ಲಿ ತೊಡಗಿ ಇದ್ದ ಬದ್ದ ಆಸ್ತಿಯನ್ನೆಲ್ಲ ಕಳೆದಿ ದ್ದರು. ಸಹಾಯಕ್ಕಾಗಿ ತಂಗಿಯ ಬಳಿ ಬರುತ್ತಿದ್ದರು.
ಉಮೇಶ ಕಷ್ಟ ಪಟ್ಟು ದುಡಿದು ಇಟ್ಟಿದ್ದ ಹಣ ವನ್ನೆ ಲ್ಲ ಅಣ್ಣಂ ದಿರಿಗೆ ಕೊಟ್ಟು ಕಳುಹಿಸು ತ್ತಿದ್ದಳು. ಹೀಗಾಗಿ ಉಮೇಶ ಆರ್ಥಿಕ ಸಂಕಷ್ಟಕ್ಕೆ ಸಿಲು ಕಿದ್ದ. ಹಗಲು- ರಾತ್ರಿ ದುಡಿಯ ಲಾರಂಭಿಸಿದ. ಪ್ರೀತಿ ಯ ಮಗಳು ರಶ್ಮಿಯನ್ನು ಕೂಡಾ ಭೇಟಿ ಮಾಡಲಾರದಷ್ಟು ಬಿಜಿಯಾಗಿಬಿಟ್ಟ.
ಆದರೂ ಜಾಣೆಯಾದ ಮಗಳನ್ನು ಡಾಕ್ಟರ್ ಮಾಡಲೇ ಬೇಕೆಂಬ ಕನಸು ಹೊತ್ತಿದ್ದ, ರಶ್ಮಿ ಕೂಡಾ ಅಪ್ಪನ ಕನಸಿ ನಂತೆಯೇ ಬೆಳೆಯುತ್ತಿದ್ದಳು.
ಉಮೇಶ ಸದಾ ದುಡಿಮೆಯ ದಾಸನಾಗಿಬಿಟ್ಟ. ಇತ್ತ ಹೇಮಾಳ ಮೋಜು ಮಸ್ತಿ ಮೀತಿಮೀರಿತ್ತು. ಎದುರು ಮನೆ ಪ್ರಕಾಶನೊಂದಿಗೆ ಆರಂಭವಾದ ಸ್ನೇಹ ಎಲ್ಲೆ ಮೀರಿತ್ತು. ಮಗಳನ್ನು ಟ್ಯೂಷನ್‌ಗೆ ಕಳುಹಿಸಿ, ಅವನೊಂದಿಗೆ ಬೈಕಿನಲ್ಲಿ ಹೊರಟರೆ ಯಾವಾಗಲೋ ಮನೆ ಸೇರುತ್ತಿದ್ದಳು.
ಉಮೇಶ ಇಲ್ಲದ ಸಮಯ ನೋಡಿ, ಪ್ರಕಾಶ ಮನೆಗೆ ಬಂದು ಠಿಕಾಣಿ ಹೂಡುತ್ತಿದ್ದ. ಹೇಮಾ ಅವನೊಂದಿಗೆ ಲಜ್ಜೆ ಇಲ್ಲದೆ ಬೆರೆಯುತ್ತಿದ್ದಳು. ಅಕ್ಕ ಪಕ್ಕದವರಿಗೆಲ್ಲ ವಿಷಯ ಗೊತ್ತಾಗಿತ್ತು.
ಉಮೇಶ ಈ ಬಗ್ಗೆ ಕನಸಿನಲ್ಲಿಯೂ ಯೋಚಿಸಿರಲಿಲ್ಲ. ಒಂದು ದಿನ ಉಮೇಶನ ಮನೆಯ ಮಹಡಿ ಮೇಲೆ ವಾಸಿಸುವ ಜಯರಾಮಭಟ್ಟರು “ಏನು ಮಹಾರಾಯ ನೀವು ಎಷ್ಟು ಒಳ್ಳೆಯವರು ನಿಮ್ಮ ಹೆಂಡತಿ ಹೀಗೆ ” ಎಂದು ಇರುವ ಸಂಗತಿಯನ್ನೆಲ್ಲ ವಿವರಿಸಿದರು. ಉಮೇಶನ ತಲೆ ಮೇಲೆ ಆಕಾಶವೇ ಕಳಚಿಬಿದ್ದಂತಾಗಿತ್ತು. ರಾತ್ರಿ ಪಾಳಿಗೆ ಹೋಗು ವುದಾಗಿ ಮನೆಯಿಂದ ತೆರಳಿದವನು ಮಧ್ಯರಾತ್ರಿ ೧೨ಕ್ಕೆಲ್ಲ ಮನೆಗೆ ವಾಪಾಸ್ ಬಂದಿದ್ದ. ಮನೆಯ ಗೇಟು ತೆರೆದಿತ್ತು. ಬಾಗಿಲ ಬಳಿ ಪುರುಷನ ಚಪ್ಪಲಿ ಇದ್ದವು. ಬಾಗಿಲು ಬಡಿ ಯಲು ಮುಂದಾಗಿದ್ದ ಕೈಗಳನ್ನು ಹಿಂದಕ್ಕೆ ತೆಗೆದ.
ನಿಧಾನವಾಗಿ ಗೋಡೆಯ ಪಕ್ಕದಿಂದ ಮಲಗುವ ಕೋಣೆಯ ಕಿಟಕಿಯತ್ತ ಬಂದ. ಕಿಟಕಿಯ ಕಿಂಡಿಯಿಂದ ಇಣುಕಿ ನೋಡಿ ಹೌಹಾರಿದ. ಭಟ್ಟರು ಹೇಳಿದ್ದ ಮಾತು ನಿಜವಾಗಿತ್ತು.
ಒಮ್ಮೆಲೆ ಸಿಟ್ಟು ನೆತ್ತಿಗೇರಿತ್ತು. ಜೋರಾಗಿ ಬಾಗಿಲಿಗೆ ನಾಲ್ಕಾರು ಬಾರಿ ಕಾಲಿನಿಂದ ಒದ್ದ. ಬಾಗಿಲು ತೆರೆಯಿತು. ಒಳ ನುಗ್ಗಿದ ಅದೇ ವೇಳೆಗೆ ಬಟ್ಟೆ ಕೂಡ ಹಾಕಿಕೊಳ್ಳದೆ ಪ್ರಕಾಶ ಹೊರಗೆ ಓಡಿ ಬಂದ.
ಆದರೆ ಉಮೇಶ ಅವನನ್ನು ತಡೆದು ತನ್ನ ಬಲಿಷ್ಠವಾದ ಮುಷ್ಠಿಯಿಂದ ಅವನ ಮುಖಕ್ಕೆ ಎರಡು ಬಾರಿ ಗುದ್ದಿದ್ದ. ಹೊಡೆತದ ರಭಸಕ್ಕೆ ಪ್ರಕಾಶ ಮಕಾಡೆಬಿದ್ದ.
ಉಮೇಶ ಶರವೇಗದಲ್ಲಿ ಮಲಗುವ ಕೋಣೆಗೆ ನುಗ್ಗಿದ. ಹೇಮಾ ವಿವಸ್ತ್ರಳಾಗಿದ್ದಳು. “ಛೀ ನೀತಿಗೆಟ್ಟ ಹೆಂಗಸೆ, ನಾನು ನಿನಗೇನು ಕಡಿಮೆ ಮಾಡಿದ್ದೆ ’ ಎಂದು ಮಚ್ಚಿಗಾಗಿ ತಡಕಾಡಿದ. ಗಲಾಟೆ ಕೇಳಿ ಮಲಗಿದ್ದ ರಶ್ಮಿ ಓಡಿ ಬಂದು ಅಪ್ಪನ ಕಾಲು ಹಿಡಿದಳು. ಪ್ರೀತಿಯ ಮಗಳಿಗಾಗಿ ಉಮೇಶ ಕರಗಿ ಹೋದ. ಆದರೆ ಏನೋ ನಿರ್ಧರಿಸಿದಂತೆ ಮನೆಬಿಟ್ಟು ಹೊರಟಿದ್ದ. ಅಲ್ಲಿಗೆ ಅವನು ಮನೆ ಬಿಟ್ಟು ಒಂದು ತಿಂಗಳಾಗಿತ್ತು. ಅವನು ನೆನಪಿನ ಆಳದಿಂದ ಹೊರಬರುವ ವೇಳೆಗೆ ರೈಲು ವಾರಾಣಾಸಿ ತಲುಪಿತ್ತು.
ಕಾಶಿಗೆ ಬಂದು ಗಂಗೆಯಲ್ಲಿ ಮೂರು ಬಾರಿ ಮುಳುಗೆದ್ದು ಒಂದು ತಿಂಗಳ ಕಾಲ ಮನೆಯಿಂದ ಹೊರಗಿದ್ದವನಿಗೆ ಮಗಳ ನೆನಪಾಯಿತು. ಮಗಳೇನು? ತಪ್ಪು ಮಾಡಿದ್ದಳು. ಒಂದು ವೇಳೆ ನಾನು ಸತ್ತರೆ ನನ್ನ ಮಗಳ ಭವಿಷ್ಯ ಹಾಳಾಗಿ ಬಿಡುತ್ತದೆಂದು ಯೋಚಿಸಿದ. ಏನೋ ನಿರ್ಧಾರ ಕೈಗೊಂಡವನಂತೆ ಮಗಳೇ ‘ನಿನಗಾಗಿ ವಾಪಸ್ ಬರುತ್ತಿದೇನೆ’ ಎಂದು ಬೆಂಗಳೂರಿಗೆ ಹೊರಡುವ ರೈಲು ಹತ್ತಿ ಕುಳಿತ.