ಬೆಂಗಳೂರು: ಇಲ್ಲಿನ ಮಡಿವಾಳ ಪೊಲೀಸ್ ಕಾನ್ಸ್‌ಟೇಬಲ್ ಆತ್ಮಹತ್ಯೆ ಪ್ರಕರಣದಲ್ಲಿ ಜಾಡು ಹಿಡಿದು ಹೊರಟ ಬೆಂಗಳೂರು ಪೊಲೀಸರಿಗೆ ಸಿಸಿಟಿವಿ ದೃಶ್ಯಗಳ ಪರಿಶೀಲನೆಯೇ ಒಂದು ದೊಡ್ಡ ತಲೆನೋವಾಗಿ ಪರಿಣಮಿಸಿತ್ತು ಎಂಬುದು ತಿಳಿದುಬಂದಿದೆ.
ಶಿವರಾಜ್ ಮೃತದೇಹ ಪತ್ತೆ ಮಾಡೋಕೆ ಬರೋಬ್ಬರಿ 250 ಸಿಸಿಟಿವಿಯನ್ನು ಮಡಿವಾಳ ಪೊಲೀಸರು ಪರಿಶೀಲನೆ ಮಾಡಿದ್ದಾರೆ. ಸುಬ್ರಮಣ್ಯಪುರ ಪೊಲೀಸರು ಹಾಗೂ ಮಡಿವಾಳ ಪೊಲೀಸರಿಂದ ಶಿವರಾಜ್ಗಾಗಿ ಹುಡುಕಾಟ ನಡೆದಿತ್ತು. ಆದರೆ, ಮಡಿವಾಳ ಪೊಲೀಸ್ ಸಿಬ್ಬಂದಿಯಾಗಿದ್ದ ಕಾರಣ ಅಲ್ಲಿನ ಪೊಲೀಸರೇ ಹುಡುಕಾಟ ಶುರು ಮಾಡಿದ್ದರು.
ಶಿವರಾಜ್ ನಾಪತ್ತೆಯಾಗಿ ಐದು ದಿನಗಳಿಂದ ನಿರಂತರವಾಗಿ ಅವರಿಗಾಗಿ ಮಡಿವಾಳ ಪೊಲೀಸರು ಹುಡುಕಾಟ ನಡೆಸಿದ್ದರು. ನಿರಂತರವಾಗಿ ಸಿಸಿಟಿವಿ ಪರಿಶೀಲನೆ ನಡೆಸಿದ್ದ ಪೊಲೀಸರಿಗೆ, ಕೊನೆಯಲ್ಲಿ ಶಿವರಾಜ್ ಜ್ಞಾನಭಾರತಿ ಮೆಟ್ರೋ ಸ್ಟೇಷನ್ಗೆ ಬಂದು ಪಾರ್ಕಿಂಗ್ ಜಾಗದಲ್ಲಿ ಬೈಕ್ ನಿಲ್ಲಿಸಿದ್ದು ಕಾಣಿಸಿತ್ತು. ನಂತರ ನೀರಿನ ಬಾಟಲಿ ಹಿಡಿದು ಬೆಂಗಳೂರು ವಿವಿ ಆವರಣದ ಒಳಗೆ ನಡೆದುಕೊಂಡು ತೆರಳಿದ್ದು ಕಾಣಿಸಿತ್ತು.
ಶಿವರಾಜ್ ಬೆಂಗಳೂರು ವಿವಿ ಒಳಗೆ ನಡೆದು ಬಂದ ದೃಶ್ಯ ಸಿಸಿಟಿವಿಯಲ್ಲಿ ಸೆರೆಯಾಗಿತ್ತು. ಹೀಗಾಗಿ ಬೆಂಗಳೂರು ವಿವಿ ಆವರಣದೊಳಗೆ ಹುಡುಕಾಡಿದ್ದ ಸಂದರ್ಭ ಆವರಣದ ಪಾಳು ಬಿದ್ದ ಬಾವಿಯಲ್ಲಿ ಶಿವರಾಜ್ ಮೃತದೇಹ ತೇಲುತ್ತಿರುವುದು ಪತ್ತೆಯಾಗಿದೆ. ಕೂಡಲೇ ಜ್ಞಾನಭಾರತಿ ಪೊಲೀಸರಿಗೆ ಮಾಹಿತಿ ನೀಡಿದ್ದ ಪೊಲೀಸರು ಸ್ಥಳಕ್ಕೆ ಬಂದು ಮೃತದೇಹ ಹೊರತೆಗೆಸಿ ಮರಣೋತ್ತರ ಪರೀಕ್ಷೆಗೆ ರವಾನಿಸಿದರು.
ಶಿವರಾಜ್ ಅವರದು ಕೊಲೆಯಲ್ಲ ಆತ್ಮಹತ್ಯೆ ಎಂಬ ನಿರ್ಧಾರಕ್ಕೆ ಪೊಲೀಸರು ಬಂದಿದ್ದು, ಮೃತದೇಹ ಹೊರತೆಗೆದಾಗ ಮೃತದೇಹಕ್ಕೆ ಕಲ್ಲು ಕಟ್ಟಿರೋದು ಬೆಳಕಿಗೆ ಬಂದಿದೆ. ಸಿಸಿಟಿವಿಯಲ್ಲಿ ಒಬ್ಬನೇ ಬಂದಿರುವುದರಿಂದ ಇದೊಂದು ಆತ್ಮಹತ್ಯೆ ಎಂಬ ನಿರ್ಧಾರಕ್ಕೆ ಪೊಲೀಸರು ಬಂದಿದ್ದಾರೆ.