ಶಿವಮೊಗ್ಗ: ಜಿಲ್ಲಾ ಸಹಕಾರ ಕೇಂದ್ರ ಬ್ಯಾಂಕ್ ರೈತರ ಸಮಸ್ಯೆಗಳಿಗೆ ಸ್ಪಂದಿಸುವ ನಿಟ್ಟಿನಲ್ಲಿ ಮಾರ್ಚ್ ತಿಂಗಳೊಳಗೆ ೨೦೦ ಕೋಟಿರೂ. ಬೆಳೆ ಸಾಲ ನೀಡಲು ನಿರ್ಧ ರಿಸಿದೆ ಎಂದು ಡಿಸಿಸಿ ಬ್ಯಾಂಕ್ ಅಧ್ಯಕ್ಷ ಡಾ. ಆರ್.ಎಂ.ಮಂಜುನಾಥಗೌಡ ಹೇಳಿದರು.
ಇಂದು ಸುದ್ದಿಗೋಷ್ಠಿಯಲ್ಲಿ ಮಾಹಿತಿ ನೀಡಿದ ಅವರು, ಜಿಲ್ಲೆಯ ೨೫ ಸಾವಿರ ಹೊಸ ರೈತರಿಗೆ ೧.೫ ಲಕ್ಷರೂ.ವರೆಗೆ ಸಾಲ ನೀಡಲು ಆಡಳಿತ ಮಂಡಳಿ ತೀರ್ಮಾನಿಸಿರುವುದಾಗಿ ಹೇಳಿದರು.
ಜಿಲ್ಲೆ ೧೬೨ ಪ್ರಾಥಮಿಕ ಸೇವಾ ಸಹಕಾರ ಸಂಘಗಳಿಗೆ ಈ ಬಗ್ಗೆ ಸೂಚನೆ ನೀಡಿದ್ದು, ರಾಷ್ಟ್ರೀಯ ಬ್ಯಾಂಕ್‌ಗಳಲ್ಲಿ ಸಾಲ ಮನ್ನಾ ಆದ ರೈತರಿಗೂ ಹೊಸ ಸಾಲ ನೀಡಲಾಗುವುದು ಎಂದ ಅವರು, ಈವರೆಗೆ ಡಿಸಿಸಿ ಬ್ಯಾಂಕ್ ೭೬ ಸಾವಿರ ರೈತರಿಗೆ ಸಾಲ ನೀಡಿದ್ದು, ಈಗ ೨೫ ಸಾವಿರ ಹೊಸ ರೈತರು ಸೇರಿದರೆ ೧ ಲಕ್ಷಕ್ಕೂ ಹೆಚ್ಚು ರೈತರಿಗೆ ಸಾಲ ನೀಡಿದಂತೆ ಆಗುತ್ತದೆ ಎಂದು ಹೇಳಿದರು.
ಇದಲ್ಲದೆ ೨೫ ಕೋಟಿರೂ. ಅಲ್ಪಾವಧಿ ಸಾಲವನ್ನು ವಿವಿಧ ಕೃಷಿ ಉಪಕರಣಗಳ ಖರೀದಿಗೆ ನೀಡಲಾಗುವುದು ಎಂದ ಅವರು, ರಾಜ್ಯದಲ್ಲಿ ಶಿವಮೊಗ್ಗ ಜಿಲ್ಲೆ ಸಾಲ ವಿತರಣೆಯಲ್ಲಿ ಮೊದಲ ಸ್ಥಾನ ಪಡೆದಿದೆ. ಅಲ್ಲದೇ ಈಗ ಹೊಸ ಸಾಲ ವಿತರಣೆಗೆ ತೆಗೆದುಕೊಂಡಿರುವ ನಿರ್ಧಾರ ಕೂಡ ಐತಿಹಾಸಿಕವಾಗಿದೆ ಎಂದು ತಿಳಿಸಿದರು.
ಸಿದ್ದರಾಮಯ್ಯ ಮುಖ್ಯಮಂತ್ರಿ ಯಾಗಿದ್ದ ಸಂದರ್ಭದಲ್ಲಿ ೫೦ ಸಾವಿರ ರೂ. ಒಳಗೆ ಸಾಲಮನ್ನಾ ಯೋಜನೆ ಅಡಿಯಲ್ಲಿ ರೈತರ ಅಸಲು ಬಾಬ್ತು ೨೭೦ ಕೋಟಿ ರೂ.ಗಳು ಸಕಾಲದಲ್ಲಿ ಪಾವತಿಯಾಗಿದೆ. ರೈತರ ಹಣವನ್ನು ಸಮ್ಮಿಶ್ರ ಸರ್ಕಾರ ಯಾವುದೇ ಬಾಕಿ ಉಳಿಸಿಕೊಂಡಿಲ್ಲ ಎಂದರು.
ಸಮ್ಮಿಶ್ರ ಸರ್ಕಾರ ಜಾರಿಗೆ ತಂದಿರುವ ಬಡವರ ಬಂಧು ಯೋಜನೆಯಡಿ ೨೧೯ ಜನ ಬೀದಿ ವ್ಯಾಪಾರಿಗಳಿಗೆ ೧೦.೧೬ ಲಕ್ಷ ರೂ.ಗಳ ಸಾಲ ವಿತರಣೆ ಮಾಡಲಾಗಿದೆ. ಈ ಯೋಜನೆಯಡಿ ೩ಸಾವಿರ ಜನರಿಗೆ ಸಾಲ ನೀಡುವ ಗುರಿ ಹೊಂದಲಾಗಿದೆ ಎಂದರು.
ಕಾಯಕ ಯೋಜನೆಯಡಿ ಸ್ವ-ಸಹಾಯ ಗುಂಪುಗಳಿಗೆ ಒಟ್ಟು ೭೬.೭೫ ಲಕ್ಷ ರೂ.ಗಳ ಸಾಲ ವಿತರಣೆ ಮಾಡಲಾಗಿದ್ದು, ಸಣ್ಣ ಉದ್ಯಮಗಳನ್ನು ಉತ್ತೇಜಿಸಲಾಗುತ್ತಿದೆ. ಈಗ ೧೫೦ ಗುಂಪುಗಳಿಗೆ ಸಾಲ ನೀಡುವ ಗುರಿ ಹೊಂದಲಾಗಿದೆ ಎಂದು ತಿಳಿಸಿದರು.
ಈ ಬಾರಿ ಬಜೆಟ್‌ನಲ್ಲಿ ಮಧ್ಯಮಾವಧಿ ಮತ್ತು ದೀರ್ಘಾವಧಿ ಸಾಲದ ಮೇಲಿನ ಬಡ್ಡಿ ಮನ್ನಾ ಮಾಡಲು ಮುಖ್ಯಮಂತ್ರಿಗಳಲ್ಲಿ ಮನವಿ ಮಾಡಿಕೊಳ್ಳಲಾಗಿದ್ದು, ಬಜೆಟ್‌ನಲ್ಲಿ ಘೋಷಣೆಯಾಗುವ ನಿರೀಕ್ಷೆ ಹೊಂದಲಾಗಿದೆ ಎಂದರು.
ಸುದ್ಧಿಗೋಷ್ಠಿಯಲ್ಲಿ ಡಿಸಿಸಿ ಬ್ಯಾಂಕ್ ನಿರ್ದೇಶಕ ಹಾಗೂ ಎಪಿಎಂಸಿ ಅಧ್ಯಕ್ಷ ದುಗ್ಗಪ್ಪಗೌಡ, ಪರಮೇಶ್ವರ್, ವೆಂಕಟೇಶ್, ರಘುಪತಿ, ಬ್ಯಾಂಕ್ ವ್ಯವಸ್ಥಾಪಕ ನಿರ್ದೇಶಕ ರಾಜಣ್ಣರೆಡ್ಡಿ ಉಪಸ್ಥಿತರಿದ್ದರು.