ಶಿವಮೊಗ್ಗ : ಜಿಲ್ಲೆಯಲ್ಲಿ ಕಳೆದ ಏಪ್ರಿಲ್ ಮಾಹೆಯಿಂದೀಚೆಗೆ ಪಡಿತರ ಚೀಟಿಗಾಗಿ ಸುಮಾರು ೪೭,೯೬೧ಅರ್ಜಿಗಳು ಆನ್‌ಲೈನ್ ಮೂಲಕ ಸ್ವೀಕೃತಗೊಂಡಿದ್ದು, ಬಹುಸಂಖ್ಯೆಯ ಅರ್ಜಿದಾರರ ಅರ್ಜಿಗಳು ಸಕಾಲದಲ್ಲಿ ವಿಲೇಯಾಗದೆ ಹಾಗೆಯೇ ಉಳಿದಿದ್ದು, ಆಗಸ್ಟ್ ೨೭ರೊಳಗಾಗಿ ಪೂರ್ಣಗೊಳಿಸುವಂತೆ ಜಿಲ್ಲಾಧಿಕಾರಿಗಳು ಜಿಲ್ಲೆಯ ಎಲ್ಲಾ ತಹಶೀಲ್ದಾರರಿಗೆ ತಾಕೀತು ಮಾಡಿದರು.
ಈ ಸಂಬಂಧ ತಮ್ಮ ಕಚೇರಿಯ ನ್ಯಾಯಾಲಯ ಸಭಾಂಗಣದಲ್ಲಿ ಏರ್ಪಡಿಸಲಾಗಿದ್ದ ಪಡಿತರ ಚೀಟಿಗಳ ವಿಲೇವಾರಿ ಕುರಿತ ಪ್ರಗತಿ ಪರಿಶೀಲನಾ ಸಭೆಯ ಅಧ್ಯಕ್ಷತೆ ವಹಿಸಿ ಮಾತನಾಡಿದರು.
ಪಡಿತರ ಚೀಟಿಗಾಗಿ ಮೊದಲ ಹಂತದಲ್ಲಿ ೩೧,೭೧೪ ಮತ್ತು ಎರಡನೇ ಹಂತದಲ್ಲಿ ೧೬,೨೪೭ ಅರ್ಜಿಗಳು ಸೇರಿದಂತೆ ಒಟ್ಟು ೪೭,೯೬೧ಅರ್ಜಿಗಳು ಸ್ವೀಕೃತಗೊಂಡಿವೆ. ಈ ಅರ್ಜಿಗಳನ್ನು ವಿಲೇವಾರಿ ಮಾಡುವ ಮುನ್ನ ಗ್ರಾಮ ಲೆಕ್ಕಿಗರು, ಸ್ಥಳ ಪರಿಶೀಲಿಸಿ, ಡಾಟಾ ಎಂಟ್ರಿ ಆಪರೇಟರ್‌ಗಳು ಅಧಿಕೃತ ಮಾಹಿತಿಯನ್ನು ಗಣಕಯಂತ್ರದಲ್ಲಿ ದಾಖಲಿಸಿದ ನಂತರ ಸಂಬಂಧಿಸಿದ ತಾಲೂಕಿನ ತಹಶೀಲ್ದಾರರು ಆ ಮಾಹಿತಿಯನ್ನು ಗಣಕಯಂತ್ರದಲ್ಲಿ ದೃಢೀಕರಿಸಿ ಮಾಹಿತಿಯನ್ನು ಅಟಲ್ ಜೀ ಜನಸ್ನೇಹಿ ಕೇಂದ್ರಗಳ ಮೂಲಕ ಆಹಾರ ಇಲಾಖೆಗೆ ಸಲ್ಲಿಸುವಂತೆ ಸೂಚಿಸಿದರು.
ಜಿಲ್ಲಾಧಿಕಾರಿಗಳೇ ಖುದ್ದಾಗಿ ಅನಿರೀಕ್ಷಿತ ಭೇಟಿ ನೀಡಿ ನ್ಯಾಯಬೆಲೆ ಅಂಗಡಿಗಳನ್ನು ಪರಿಶೀಲಿಸಿ ದಾಗ ನ್ಯಾಯಬೆಲೆ ಅಂಗಡಿಗಳಿಗೆ ನಾಮಫಲಕ, ದರ, ಪಡಿತರ ವಿವರ, ವಿತರಣೆ ದಿನಾಂಕ ಸೇರಿದಂತೆ ಸಂಪೂರ್ಣವಾದ ವಿವರಗಳನ್ನು ಸಾರ್ವಜನಿಕರಿಗೆ ಅನುಕೂಲವಾಗುವಂತೆ ಪ್ರದರ್ಶಿ ಸಲು ಸೂಚಿಸಲಾಗಿತ್ತು. ಆದರೆ, ಅನೇಕ ದಿನಗಳು ಕಳೆದರೂ ಈವರೆಗೆ ಯಾವುದೇ ನ್ಯಾಯಬೆಲೆ ಅಂಗಡಿಗಳಲ್ಲಿ ನಾಮಫಲಕವನ್ನು ಹಾಕಿರುವು ದಿಲ್ಲ. ಸರ್ಕಾರದ ಆದೇಶದ ನಂತರವೂ ನಾಮ ಫಲಕ ಹಾಕದಿರುವ ನ್ಯಾಯಬೆಲೆ ಅಂಗಡಿಗಳ ನಿರ್ವಾಹಕರು ಕೂಡಲೆ ನಾಮಫಲಕ ಹಾಕಬೇಕು. ಈ ಬಗ್ಗೆ ಆಹಾರ ನಿರೀಕ್ಷಕರು ಕೂಡಲೇ ಸೂಚನೆ ನೀಡಬೇಕು. ತಪ್ಪಿದಲ್ಲಿ ಆಹಾರ ನಿರೀಕ್ಷಕರ ವಿರುದ್ದ ಕ್ರಮ ಕೈಗೊಳ್ಳಲಾಗುವುದು ಎಂದರು.
ಸಭೆಯಲ್ಲಿ ಅಪರ ಜಿಲ್ಲಾಧಿಕಾರಿ ಚನ್ನಬಸಪ್ಪ, ಉಪವಿಭಾಗಾಧಿಕಾರಿ ಹೆಚ್.ಕೆ.ಕೃಷ್ಣಮೂರ್ತಿ, ಕೆ.ಲಕ್ಷ್ಮೀ ನಾರಾಯಣರೆಡ್ಡಿ, ಜಿಲ್ಲೆಯ ಎಲ್ಲಾ ತಾಲೂಕುಗಳ ತಹಶೀಲ್ದಾರರು, ಉಪಸ್ಥಿತರಿದ್ದರು.