ಬಹುಸಂಸ್ಕೃತಿ ಗೌರವಿಸುವ ಮನೋಭಾವ ಬೆಳೆಯಬೇಕು: ಡಿಸಿ

ಶಿವಮೊಗ್ಗ : ನಾವೆಲ್ಲರೂ ಕನ್ನಡ ವನ್ನು ನಮ್ಮ ನಿತ್ಯದ ಬದುಕಿನಲ್ಲಿ ಅಳವಡಿಸುವುದರೊಂದಿಗೆ, ಇತರ ಭಾಷಿಗರನ್ನು ಹಾಗೂ ಅವರ ಸಂಸ್ಕೃತಿ ಯನ್ನು ಗೌರವಿಸುವ ಮನೋಭಾವ ಬೆಳೆಸಿಕೊಳ್ಳಬೇಕು ಎಂದು ಜಿಲ್ಲಾಧಿಕಾರಿ ಡಾ.ಎಂ.ಲೋಕೇಶ್ ಹೇಳಿದರು.
ಇಂದು ಜಿಲ್ಲಾ ಪೊಲೀಸ್ ಪರೇಡ್ ಮೈದಾನದಲ್ಲಿ ಜಿಲ್ಲಾ ಉಸ್ತುವಾರಿ ಸಚಿವ ಕಾಗೋಡು ತಿಮ್ಮಪ್ಪ ಅವರ ಅನುಪಸ್ಥಿತಿಯಲ್ಲಿ ಕನ್ನಡ ರಾಜ್ಯೋತ್ಸವ ಅಂಗವಾಗಿ ರಾಷ್ಟ್ರ ಧ್ವಜಾರೋಹಣ ನೆರವೇರಿಸಿ ಭಾಷಣ ಮಾಡಿದರು.
ನಮ್ಮ ಕನ್ನಡ ಪ್ರೇಮ ಕೇವಲ ನವೆಂಬರ್ ತಿಂಗಳಿಗೆ ಮಾತ್ರ ಸೀಮಿತ ವಾಗಬಾರದು. ದಿನನಿತ್ಯದ ಬದುಕಿನಲ್ಲಿ ಕನ್ನಡವನ್ನು ಹೆಚ್ಚಾಗಿ ಬಳಸಬೇಕು. ಕನ್ನಡದ ಈ ನೆಲ, ಭಾಷೆ, ಸಂಸ್ಕೃತಿಯಲ್ಲಿ ಅನನ್ಯತೆಯಿದೆ. ಎಲ್ಲಾ ಧರ್ಮೀಯರನ್ನು ಪ್ರೀತಿಸುವ, ಎಲ್ಲಾ ಭಾಷಿಗರನ್ನು ಗೌರವಿಸುವ, ಬಹುಸಂಸ್ಕೃತಿಯನ್ನು ಅಪ್ಪಿಕೊಳ್ಳುವ ಹೃದಯ ವೈಶಾಲ್ಯತೆ ನಮ್ಮದು. ಇಂತಹ ಕನ್ನಡತನವನ್ನು ಉಳಿಸಿ, ಬೆಳೆಸಲು ಹಾಗೂ ಆ ಮೂಲಕ ಸಾಮಾಜಿಕ ಸಾಮರಸ್ಯ ಮತ್ತು ದೇಶದ ಅಭಿವೃದ್ಧಿಗೆ ಎಲ್ಲರೂ ಕೈ ಜೋಡಿಸಬೇಕಾಗಿದೆ ಎಂದು ಕರೆ ನೀಡಿದರು.
ಭಾಷೆ ಎಂದರೆ ಕೇವಲ ಶಬ್ದಗಳ ಭಂಡಾರವಲ್ಲ. ಅದು ಸಂಸ್ಕೃತಿ, ಜೀವನ ಪ್ರೀತಿ, ಸಹೋದರತೆ ಭಾವವನ್ನು ಒಳಗೊಂಡ ಅನುಭೂತಿ. ಕೊಡು ಕೊಳ್ಳುವ ಮೂಲಕ ಪ್ರತಿಯೊಂದು ಭಾಷೆ ಶ್ರೀಮಂತವಾಗುತ್ತದೆ. ಭಾಷೆಯಲ್ಲಿ ಮಡಿವಂತಿಕೆ ತೋರಿದರೆ ಯಾವುದೇ ಭಾಷೆ ಬೆಳೆಯಲು ಸಾಧ್ಯವಿಲ್ಲ ಎಂದು ಅವರು ಹೇಳಿದರು.
ಶಾಸಕ ಕೆ.ಬಿ.ಪ್ರಸನ್ನ ಕುಮಾರ್, ವಿಧಾನ ಪರಿಷತ್ ಸದಸ್ಯ ಆರ್.ಪ್ರಸನ್ನಕುಮಾರ್, ಶಿವಮೊಗ್ಗ ನಗರಾಭಿವೃದ್ಧಿ ಪ್ರಾಧಿಕಾರದ ಅಧ್ಯಕ್ಷ ಇಸ್ಮಾಯಿಲ್ ಖಾನ್, ಪೊಲೀಸ್ ವರಿಷ್ಟಾಧಿಕಾರಿ ಅಭಿನವ ಖರೆ, ಜಿಲ್ಲಾ ಪಂಚಾ ಯತ್ ಮುಖ್ಯ ಕಾರ್ಯನಿರ್ವಹಣಾಧಿಕಾರಿ ರಾಕೇಶ್ ಕುಮಾರ್, ಅಪರ ಜಿಲ್ಲಾಧಿಕಾರಿ ಕೆ.ಚನ್ನಬಸಪ್ಪ ಸೇರಿದಂತೆ ಹಲವು ಗಣ್ಯರು, ಶಾಲಾ ಕಾಲೇಜು ವಿದ್ಯಾರ್ಥಿಗಳು, ಸಾರ್ವಜನಿಕರು ಹೆಚ್ಚಿನ ಸಂಖ್ಯೆಯಲ್ಲಿ ಭಾಗವಹಿಸಿದ್ದರು.