ಬೆಂಗಳೂರು: ಲೈಂಗಿಕ ದೌರ್ಜನ್ಯದ ಆರೋಪಿ ಪ್ರಜ್ವಲ್ ರೇವಣ್ಣ, ಕೊಲೆ ಆರೋಪಿ ದರ್ಶನ್, ಪೋಕ್ಸೋ ಪ್ರಕರಣದ ಆರೋಪಿ ಬಿ.ಎಸ್.ಯಡಿಯೂರಪ್ಪ ಮತ್ತು ಯುವಕನಿಗೆ ಲೈಂಗಿಕ ಹಿಂಸೆ ನೀಡಿದ ಸೂರಜ್ ರೇವಣ್ಣ ಅವರುಗಳನ್ನು ಟ್ಯಾಗ್ ಮಾಡಿ ಸಾಮಾಜಿಕ ಜಾಲತಾಣ ಎಕ್ಸ್ ನಲ್ಲಿ ನಟಿ ರಮ್ಯಾ ಪೋಸ್ಟ್ ಒಂದನ್ನು ಹಾಕಿದ್ದಾರೆ.
ಕಾನೂನು ಉಲ್ಲಂಘಿಸಿ ಸುದ್ದಿಯಲ್ಲಿರುವವರು ಶ್ರೀಮಂತರು ಮತ್ತು ಶಕ್ತಿಶಾಲಿಗಳು. ಅವರ ಹಿಂಸಾತ್ಮಕ ಕ್ರಿಯೆಯಿಂದಾಗಿ ಬಡವರು, ಮಹಿಳೆಯರು ಮತ್ತು ಮಕ್ಕಳ ಬದುಕು ನಾಶವಾಗಿದೆ ಎಂದು ಎಕ್ಸ್‌ನಲ್ಲಿ ಪೋಸ್ಟ್‌ನಲ್ಲಿ ಕಿಡಿಕಾರಿದ್ದಾರೆ.
ಮಹಿಳೆಯರ ಮೇಲಿನ ಲೈಂಗಿಕ ದೌರ್ಜನ್ಯ ಪ್ರಕರಣದಲ್ಲಿ ಈಗಾಗಲೇ ಪ್ರಜ್ವಲ್ ರೇವಣ್ಣ ನ್ಯಾಯಾಂಗ ಬಂಧನದಲ್ಲಿದ್ದಾರೆ. ಚಿತ್ರದುರ್ಗದ ರೇಣುಕಾಸ್ವಾಮಿ ಹತ್ಯೆ ಪ್ರಕರಣದಲ್ಲಿ ನಟ ದರ್ಶನ್ ಪೊಲೀಸ್ ಕಸ್ಟಡಿಯಲ್ಲಿದ್ದಾರೆ. ಬಾಲಕಿಗೆ ಲೈಂಗಿಕ ದೌರ್ಜನ್ಯ ನೀಡಿದ ಆರೋಪದಲ್ಲಿ ಮಾಜಿ ಸಿಎಂ ಯಡಿಯೂರಪ್ಪ ವಿರುದ್ಧ ಪೋಕ್ಸೊ ಕೇಸ್ ದಾಖಲಾಗಿದೆ. ಹೆಚ್.ಡಿ.ರೇವಣ್ಣ ಪುತ್ರ ಸೂರಜ್ ರೇವಣ್ಣ ಮೇಲೆ ಅಸಹಜ ಲೈಂಗಿಕ ದೌರ್ಜನ್ಯ ಆರೋಪ ಕೇಳಿಬಂದಿದೆ.
ಈಗ ಸುದ್ದಿಯಲ್ಲಿರುವ, ಸಿರಿವಂತರು ನಡೆಸುವ ಹಿಂಸೆಯಲ್ಲಿ ಬಳಲುತ್ತಿರುವವರು ನಾಡಿನ ಬಡವರು, ಮಹಿಳೆಯರು ಮತ್ತು ಮಕ್ಕಳು. ಈ ಅಪರಾಧಗಳನ್ನು ಹೊರತಂದ ಪೊಲೀಸರಿಗೆ ಮತ್ತು ಮಾಧ್ಯಮದವರಿಗೆ ಹ್ಯಾಟ್ಸಾಫ್ ಎಂದು ರಮ್ಯಾ ಬರೆದಿದ್ದಾರೆ.
ಈ ನಾಲ್ಕೂ ಪ್ರಕರಣಗಳಿಗೆ ಸಂಬಂಧಿಸಿದಂತೆ ಚಿತ್ರನಟಿ ರಮ್ಯಾ ಪೋಸ್ಟ್ ಹಾಕಿದ್ದು, ನೊಂದವರಿಗೆ ನ್ಯಾಯ ಸಿಗಬೇಕೆಂಬ ಆಶಯ ವ್ಯಕ್ತಪಡಿಸಿದ್ದಾರೆ.